Advertisement

Summer Holidays: ರಜಾದಿನ ಹೀಗಿರಲಿ

03:01 PM May 04, 2024 | Team Udayavani |

ಶಾಲೆಯ ಮಕ್ಕಳಿಗೆ ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಆರಂಭವಾಗಿದೆ. ಈ ರಜಾ ದಿನಗಳು ಮಕ್ಕಳಿಗೆ ಸೆರೆಮನೆಯ ಸಜಾ ಆಗದೆ ಮಕ್ಕಳಲ್ಲಿ ಚೈತನ್ಯತೆ, ಮನೋಲ್ಲಾಸ, ಹೆಚ್ಚಿಸುವ ದಿನಗಳಾಗಲಿ. ಮಕ್ಕಳು ಮಾನಸಿಕ, ದೈಹಿಕವಾಗಿ ಉಲ್ಲಾಸದಿಂದಿರುವಂತೆ ರಚನಾತ್ಮಕವಾಗಿರುವ ದಿನಗಳಾಗಲಿ.

Advertisement

ಪರೀಕ್ಷೆ ಕಳೆದು ರಜೆ ಬಂತೆಂದರೆ ಮಕ್ಕಳಿಗೆ ಎಲ್ಲಿಲ್ಲದ ಉಲ್ಲಾಸ ಉತ್ಸಾಹ. ಕೆಲವು ಮಕ್ಕಳು ರಜೆಯಲ್ಲಿ ತಮ್ಮ ಅಜ್ಜಿಯ ಮನೆಗೆ, ಅತ್ತೆ, ಮಾವ, ಚಿಕ್ಕಪ್ಪ, ಚಿಕ್ಕಮ್ಮನ ಮನೆಗಳಿಗೆ ತೆರಳುತ್ತಾರೆ. ಅಲ್ಲಿ ಸಿಗುವ ಆನಂದವೇ ಬೇರೆಯ ರೀತಿಯದಾಗಿರುತ್ತದೆ. ಎಲ್ಲರೂ ಕೂಡಿ ಆಡುವುದು, ನಲಿಯುವುದು, ತಿನ್ನುವುದು ಹೀಗೆ ಒಟ್ಟಾರೆಯಾಗಿ ಸಂಭ್ರಮ ಸಂತೋಷ ಮನೆಮಾಡಿರುತ್ತದೆ. ಇದಕ್ಕೆಲ್ಲಾ ಪೋಷಕರಾದವರು ಅವಕಾಶ ಮಾಡಿಕೊಡಬೇಕು.

ಕೆಲವು ಪೋಷಕರು ಇಬ್ಬರೂ ಕೆಲಸಕ್ಕೆ ಹೋಗಬೇಕಾದ ಕಾರಣ ಮಕ್ಕಳನ್ನು ತಮ್ಮ ಮನೆಯಲ್ಲಿಯೇ ಬಿಟ್ಟು ಅವರ ಬಗ್ಗೆ ತಾವು ಕೆಲಸ ಮಾಡುವ ಜಾಗದಿಂದಲೇ ವಿಚಾರಿಸಿಕೊಳ್ಳಲೆಂದು ಮಕ್ಕಳ ಕೈಗೆ ಮೊಬೈಲ್‌ ಫೋನ್‌ ಕೊಟ್ಟು ತೆರಳುತ್ತಾರೆ. ಆದರೆ ಮಕ್ಕಳು ತಾನೆ ಏನು ಮಾಡಿಯಾರು?

ಫೋನಿನಲ್ಲಿ ಗೇಮ್‌ ಆಡುತ್ತಾ ಟಿ.ವಿ. ನೋಡುತ್ತಾ, ಇಷ್ಟ ಬಂದಾಗ ತಿನ್ನುತ್ತಾ ತಮ್ಮ ಸಮಯವನ್ನು ಕಳೆದುಬಿಡುತ್ತಾರೆ. ಆದರೆ ನಿಜವಾಗಿಯೂ ಪೋಷಕರಾದವರು ಈ ಬೇಸಿಗೆ ರಜಾ ದಿನಗಳಲ್ಲಿ ತಮ್ಮ ಹೆಚ್ಚಿನ ಸಮಯವನ್ನು ಮಕ್ಕಳಿಗಾಗಿ ನೀಡಬೇಕಿದೆ.

ಆಡಲು ಬೇಕಾದಷ್ಟು ಹಳ್ಳಿ ಸೊಗಡಿನ ಹಾಗೂ ಮನೆಯ ಒಳಗೇ ಆಡುವ ಒಳಾಂಗಣ ಆಟಗಳಿವೆ. ಅಳ್ಳಿಗುಳ್ಳಿ ಮನೆ, ಚೌಕಾಬಾರ, ಹಾವು ಏಣಿ ಆಟ, ಕೇರಂ, ಸೆಟ್‌ ಆಟ, ಪಾಸಿಂಗ್‌ ದ ಬಾಲ್‌ ಇತ್ಯಾದಿ ಇವುಗಳನ್ನು ಮಕ್ಕಳೊಂದಿಗೆ ಆಡುತ್ತಾ ಬಿಸಿಲ ತಾಪದ ಸಮಯವನ್ನು ಕಳೆಯಬಹುದು.

Advertisement

ಹಾಗೆಯೇ ಸಂಜೆಯ ಸಮಯದಲ್ಲಿ ವಾಕಿಂಗ್‌ಗೆ ಅಕ್ಕಪಕ್ಕದಲ್ಲಿರುವ ಪಾರ್ಕ್‌ಗಳಿಗೆ ಹೋಗುವುದು. ಚೆಂಡು, ಕ್ರಿಕೆಟ್‌, ಜೂಟಾಟ, ಶೆಟಲ್‌ ಕಾಕ್‌, ಥ್ರೋ ಬಾಲ್‌ ಹೀಗೆ ವಿವಿಧ ರೀತಿಯ ಆಟಗಳನ್ನು ಆಡಿಸುತ್ತಾ ಸಮಯ ಕಳೆಯಬಹುದು.

ರಜಾದಿನಗಳು ಮಕ್ಕಳಲ್ಲಿ ಮೌಲ್ಯ ಹೆಚ್ಚಿಸಲು, ಜೀವನದ ಪಾಠಗಳನ್ನು ಕಲಿಸಲು ಸೂಕ್ತ ಸಮಯವಾಗಿದೆ. ಆಟದ ಜತೆ ಜತೆಗೆ ಮಕ್ಕಳಲ್ಲಿ ಓದುವ ಬರೆಯುವ ಅಭ್ಯಾಸಗಳನ್ನೂ ಮಾಡಿಸಬೇಕಿದೆ. ಮಕ್ಕಳಿಗೆ ವಯಸ್ಸಿಗನುಗುಣವಾಗಿ ನೀತಿಕಥೆಗಳ ಪುಸ್ತಕಗಳನ್ನು ಕೊಟ್ಟು ಓದುವಂತೆ ಮಾರ್ಗದರ್ಶನ ನೀಡುವುದು.

ಆ ಕತೆಯಿಂದ ತಿಳಿದುಕೊಂಡ ನೀತಿ ಮೌಲ್ಯವನ್ನು ಹೇಳುವಂತೆ ಪ್ರೋತ್ಸಾಹಿಸುವುದು. ಮಕ್ಕಳಿಗೆ ಇಷ್ಟವಿರುವ ಚಟುವಟಿಕೆಗಳಿಗೆ ಸಮಯವಿರಿಸಿ ಅವುಗಳಲ್ಲಿ ಹೆಚ್ಚು ಲವಲವಿಕೆಯಿಂದ ಭಾಗವಹಿಸುವಂತೆ ಮಾಡುವುದು. ಉದಾಹರಣೆಗೆ ಚಿತ್ರಕಲೆ, ಬಣ್ಣ ಹಚ್ಚುವುದು, ಕರಕುಶಲ ಕಲೆ, ಸಂಗೀತ ಹೀಗೆ. ಹಾಗೆಯೇ ಲೋಕಜ್ಞಾನ ಅರಿಯಲು, ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಲು ಟಿ.ವಿ. ಯಲ್ಲಿ ವಾರ್ತೆ ವೀಕ್ಷಿಸುವಂತೆ ಅಭ್ಯಾಸ ಮಾಡಿಸುವುದು ಕೂಡ ಮಾಡಬಹುದು.

ಈ ರಜೆಗಳು ಮಕ್ಕಳಿಗೆ ಮನೆ ಕೆಲಸಗಳನ್ನು ಕಲಿಸಲು ಸೂಕ್ತ ಸಮಯವಾಗಿದೆ. ಹೆಣ್ಣಾಗಲಿ ಗಂಡಾಗಲಿ ಎಲ್ಲರೂ ಮನೆಕೆಲಸಗಳಲ್ಲಿ ಭಾಗಿಯಾಗುವಂತೆ ಮಾಡಬೇಕು.ಪಾತ್ರೆ ತೊಳೆಯು ವುದು, ಕಸ ಗುಡಿಸುವುದು, ತರಕಾರಿ ಕತ್ತರಿಸುವುದು, ಸ್ವಲ್ಪ ದೊಡ್ಡ ಮಕ್ಕಳಾದರೆ ಸಣÒ ಪುಟ್ಟ ಅಡಿಗೆ ಮಾಡಲು ಕಲಿಸುವುದು, ಗಿಡಗಳಿದ್ದರೆ ಅವುಗಳಿಗೆ ನೀರು ಹಾಕುವುದು ಹೀಗೆ ಮನೆಯಲ್ಲಿ ಅಮ್ಮನ ಜತೆಯಾಗಿ ಕೆಲಸಗಳನ್ನು ಮಾಡಲು ಕಲಿಸಬೇಕು.

ಹೀಗೆ ಮಕ್ಕಳಿಗೆ ಆಡಲು, ಬರೆಯಲು, ಕಲಿಯಲು, ಮಾಡಲು ಬೇಕಾದಷ್ಟು ಕೆಲಸಗಳಿವೆ. ಅವುಗಳಲ್ಲಿ ಅವರನ್ನು ಮಗ್ನರಾಗುವಂತೆ ಮಾಡಬೇಕು. ಅವರ ಜತೆಗೆ ನಾವೂ ಆಡುತ್ತಾ, ಕಲಿಸುತ್ತಾ  ಜೀವನ ಮೌಲ್ಯಗಳನ್ನು ಪೋಷಕರಾದ ನಾವು ಕಲಿಸಬೇಕಿದೆ.

ರಜಾದಿನಗಳು ವ್ಯರ್ಥವಾಗದಂತೆ ಮಕ್ಕಳಲ್ಲಿ ಹೊಸತನವನ್ನು ನಾವು ತುಂಬುತ್ತಾ ಅವರಲ್ಲಿ ನಾವು ಅವರಂತಾಗಿ ರಜಾದಿನಗಳನ್ನು ಕಳೆಯೋಣ. ಹಾಗೆಯೇ ರಜಾದಿನಗಳಲ್ಲಿ ಮಕ್ಕಳಿಗೆ ಎಲ್ಲ ವಿಷಯಗಳಲ್ಲೂ ಆಸೆಗಳು ಹೆಚ್ಚಾಗುತ್ತವೆ ಅಂದರೆ ಟ್ರಿಪ್‌ಗೆ ಹೋಗಬೇಕು ಎಂದು ಅಥವಾ ದುಬಾರಿ ಬೆಲೆಯ ತಿಂಡಿಗಳನ್ನು ತಿನ್ನಬೇಕೆಂದು ಇತ್ಯಾದಿ.

ಎಲ್ಲರ ಮನೆ ಪರಿಸ್ಥಿತಿಗಳು ಒಂದೇ ತರನಾಗಿ ಇರುವುದಿಲ್ಲ. ಹಾಗೆಂದು ಮಕ್ಕಳನ್ನು ಬೈಯುವುದರಿಂದ ಹೊಡೆಯುವುದರಿಂದ ಪ್ರಯೋಜನವಾಗದು. ನಮ್ಮ ಮನೆಯ ಸ್ಥಿತಿಗತಿಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಬೇಕು.ನಮ್ಮ ಮನೆಯ ಪರಿಸ್ಥಿತಿಗೆ ತಕ್ಕಂತೆಯೇ ಇರುವುದರಲ್ಲಿಯೇ ಹೆಚ್ಚಿನ ಸಂತೋಷವನ್ನು ಅನುಭವಿಸುವಂತೆ ಮಾಡಬೇಕಿದೆ. ಸಣ್ಣಪುಟ್ಟ ವಿಷಯಗಳಿಗೂ ಮಕ್ಕಳ ಮೇಲೆ ಕೋಪ ಮಾಡಿಕೊಳ್ಳದೆ, ರೇಗದೆ ಸಾವಧಾನದಿಂದ ಅವರನ್ನು ತಿದ್ದಬೇಕಿದೆ.

ಇನ್ನು ಹಳ್ಳಿಗಳಲ್ಲಿ ಕೆಲವು ಮಧ್ಯಮ ಕುಟುಂಬದ ಗಂಡು ಮಕ್ಕಳಿಗೆ ಜವಾಬ್ದಾರಿ ಬರಲೆಂದು ಹಾಗೂ ಮನೆಗೆ ಸಹಾಯವಾಗಲೆಂದು ಪೋಷಕರು ತಮ್ಮ ಮಕ್ಕಳನ್ನು ಅಂಗಡಿಗಳಿಗೆ, ಸೈಕಲ್‌ ಶಾಪ್‌ಗಳಿಗೆ, ಗಾರೆ ಕೆಲಸಕ್ಕೆ ಕಳುಹಿಸುತ್ತಾರೆ.

ಇದರಿಂದ ಮಕ್ಕಳಿಗೆ ಮನೆಯ ಆರ್ಥಿಕ ಪರಿಸ್ಥಿತಿ ಅರ್ಥವಾಗುವುದರ ಜತೆಗೆ ಜವಾಬ್ದಾರಿ ಹೆಚ್ಚಾಗುತ್ತದೆ. ಇಂತಹ ಮಕ್ಕಳು ಶಾಲಾದಿನಗಳಲ್ಲಿ ಓದುವುದರ ಜತೆಗೆ ರಜಾದಿನಗಳಲ್ಲಿ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಹಾಯ ಮಾಡುತ್ತಾರೆ.

ಆಡಿ ನಲಿವ ಮಕ್ಕಳು ಒಂದು ಕಡೆಯಾದರೆ ಜೀವನ ನಿರ್ವಹ ಣೆಗೆ ದುಡಿಯುವ ಮಕ್ಕಳು ಒಂದುಕಡೆ. ಒಟ್ಟಾರೆಯಾಗಿ ಅವರವರ ಮನೆಯ ಪರಿಸ್ಥಿತಿಗಳಿಗೆ ತಕ್ಕಂತೆ ಮಕ್ಕಳಿಗೆ ಜೀವನದ ಮೌಲ್ಯ ಕಲಿಸುವ ಜವಾಬ್ದಾರಿ ಪೋಷಕರದಾಗಿದೆ. ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಅರ್ಥಮಾಡಿಕೊಂಡು ಕಾರ್ಯನಿರ್ವಹಿಸಿದರೆ ಎಲ್ಲಿಯೂ ಅನರ್ಥವೆಂಬುದು ಸಂಭವಿಸದು.

-ಭಾಗ್ಯ ಜೆ.

 ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next