Advertisement

ಲೇಡಿ ಕಫ್ತಾನ್‌!: ಬೇಸಿಗೆ ಮೇಲೊಂದು ವಸ್ತ್ರ ಪ್ರಯೋಗ

01:04 PM Apr 18, 2019 | Hari Prasad |

ಸುಡು ಬಿಸಿಲಿನ ಈ ಬೇಸಿಗೆಯಲಿ ಉಟ್ಟ ಬಟ್ಟೆ ಮೈಗಂಟಿದರೆ ಅದಕ್ಕಿಂತ ದೊಡ್ಡ ಕಿರಿಕಿರಿ ಬೇರಿಲ್ಲ. ಆದ್ದರಿಂದ, ದೇಹಕ್ಕೆ ತಂಪು, ಕಣ್ಣಿಗೂ ತಂಪು ನೀಡುವ ಉಡುಗೆ ತೊಡಲು ಮಹಿಳೆಯರು ಮುಂದಾಗುತ್ತಾರೆ. ಇಂಥ ಸಮ್ಮರ್‌ ಫ್ರೆಂಡ್ಲಿ ಉಡುಗೆಗಳಲ್ಲಿ ಒಂದು, ಎಲ್ಲರ ನೆಚ್ಚಿನ “ಕಫ್ತಾನ್‌’…

Advertisement

ಕಫ್ತಾನ್‌ ಎಂಬ ಉಡುಗೆಯ ಮೂಲ ಹುಡುಕುತ್ತಾ ಹೋದರೆ ರಷ್ಯನ್ನರು ಕಣ್ಣಿಗೆ ಬೀಳುತ್ತಾರೆ. ಅಲ್ಲಿನ ಪುರುಷರು ತೊಡುತ್ತಿದ್ದ ಬಿಗಿಯಾದ ತೋಳುಗಳಿರುವ ಉದ್ದನೆಯ ಸೂಟ್‌ಗೆ ಕಫ‌¤ನ್‌ ಎನ್ನಲಾಗುತ್ತಿತ್ತು. ಪ್ರಾಚೀನ ಮೆಸಪೊಟಾಮಿಯಾ ಮೂಲದ ಈ ಉಡುಗೆಯನ್ನು ಬಹಳಷ್ಟು ಮಧ್ಯಪೂರ್ವ ಜನಾಂಗೀಯ ಗುಂಪುಗಳು ತೊಡುತ್ತಿದ್ದವು. ಇದನ್ನು ಉಣ್ಣೆ, ರೇಷ್ಮೆ ಅಥವಾ ಹತ್ತಿಯ ಬಟ್ಟೆಯಿಂದ ಮಾಡಲಾಗುತ್ತಿತ್ತು. ಈಗ ಇದನ್ನು ಚಿಫಾನ್‌, ಸ್ಯಾಟಿನ್‌, ಮಖ್ಮಲ್, ಸಿಂಥೆಟಿಕ್‌ ಫ್ಯಾಬ್ರಿಕ್‌, ಪಾಲಿಯೆಸ್ಟರ್‌, ನೈಲಾನ್‌ ಮುಂತಾದ ಬಟ್ಟೆಗಳಿಂದಲೂ ಮಾಡಲಾಗುತ್ತಿದೆ.

ಸರ್ವಾಂತರ್ಯಾಮಿ ದಿರಿಸು
ಮಹಿಳೆಯರೂ ಈ ಉಡುಗೆಯನ್ನು ತೊಡಲು ಮುಂದಾಗಿದ್ದೇ ತಡ, ಫ್ಯಾಷನ್‌ಲೋಕದಲ್ಲಿ ಹೊಸ ಅಲೆಯನ್ನು ತಂದಿತು ಈ ಕಫ್ತಾನ್‌. ಸಡಿಲವಾದ, ಹಗುರವಾದ, ತೆಳ್ಳಗಿನ ಬಟ್ಟೆಯಿಂದ ಮಾಡಲಾದ ಕಫ‌¤ನ್‌ಗಳು ಬಹುತೇಕ ಎಲ್ಲಾ ಮಹಿಳೆಯರ ಅಚ್ಚುಮೆಚ್ಚಿನ ಉಡುಗೆ ಎಂದರೆ ತಪ್ಪಾಗಲಾರದು. ಅದರಲ್ಲೂ, ಬೇಸಿಗೆಯಲ್ಲಿ ತೊಡುವುದಕ್ಕೆ ಕಫ್ತಾನ್‌ ಅತಿ ಸೂಕ್ತವಾದ ದಿರಿಸು.

ಮಹಿಳೆಯರು ಒನ್‌ ಪೀಸ್‌ ಕಫ್ತಾನ್‌ ಮೇಲೆ ಬೆಲ್ಟ್ (ಸೊಂಟ ಪಟ್ಟಿ) ಕೂಡ ಧರಿಸುತ್ತಿದ್ದರು. ಹಾಗಾಗಿ ಈ ಕೋಟಿನಂಥ ಮೇಲುಡುಗೆ, ಡ್ರೆಸ್‌ ಕೂಡಾ ಆಯಿತು. ಇದು ಸಮ್ಮರ್‌ ವೇರ್‌ ಮಾತ್ರವಲ್ಲ, ಬೀಚ್‌ ವೇರ್‌, ನೈಟಿ, ಪಾರ್ಟಿವೇರ್‌ ಹಾಗು ಏರ್‌ ಪೋರ್ಟ್‌ ಫ್ಯಾಷನ್‌ ಕೂಡ ಹೌದು. ಚಿತ್ರನಟಿಯರು ವಿಮಾನ ನಿಲ್ದಾಣಕ್ಕೆ ಬರುವಾಗ ಅಥವಾ ಅಲ್ಲಿಂದ ತೆರಳುವಾಗ ತೊಡುತ್ತಿರುವುದೇ ಕಫ್ತಾನ್‌, ಏರ್‌ಪೋರ್ಟ್‌ ಫ್ಯಾಷನ್‌ ಆಗಲು ಕಾರಣವಾಯಿತು.

ಇದನ್ನು ಮ್ಯಾಕ್ಸಿಯಂತೆ ತೊಡಬಹುದು, ಬುರ್ಕಾದಂತೆ ತೊಡಬಹುದು, ಪ್ಯಾಂಟ್‌ ಮೇಲೆ ತೊಡಬಹುದು, ಈಜುಡುಗೆ ಮೇಲೆ ತೊಡಬಹುದು, ಶಾರ್ಟ್ಸ್ ಮೇಲೂ ತೊಡಬಹುದು ಈ ಕಫ್ತಾನ್‌ ಅನ್ನು. ಪಲಾಝೋ, ಧೋತಿ, ಲೆಗಿಂಗ್ಸ್, ಜೆಗಿಂಗ್ಸ್, ಡೆನಿಮ್‌, ಥ್ರೀ ಫೋರ್ತ್‌, ಲಂಗ, ಜೀನ್ಸ್‌ ಪ್ಯಾಂಟ್‌ ಜೊತೆಯೂ ತೊಡಬಹುದು.

Advertisement

ರಂಗೋ ರಂಗು
ಆಫ್ರಿಕನ್‌ ಕಫ್ತಾನ್‌ ಮೇಲೆ ನೀಲಿ, ಹಳದಿ, ಹಸಿರು, ಕೆಂಪು, ಕೇಸರಿ, ಗುಲಾಬಿಯಂಥ ಬಣ್ಣಗಳಿಂದ ಚಿತ್ತಾರ ಮೂಡಿಸಲಾಗುತ್ತದೆ. ಈ ಉಡುಗೆಯಲ್ಲಿ ಕಣ್ಣಿಗೆ ಎದ್ದು ಕಾಣುವಂಥ ಬಣ್ಣಗಳನ್ನು ಬಳಸಲಾಗುತ್ತದೆ. ಅದೇ ಅರಬಿಕ್‌ ಕಫ್ತಾನ್‌ ಗಳಲ್ಲಿ ಒಂದೋ ಬರೀ ತಿಳಿ ಬಣ್ಣಗಳು ಅಥವಾ ಬರೀ ಗಾಢವಾದ ಬಣ್ಣಗಳನ್ನು ಬಳಸಲಾಗುತ್ತದೆ. ಜಪಾನೀಸ್‌ ಕಿಮೋನೋ (ನಿಲುವಂಗಿ)ಯಿಂದ ಪ್ರೇರಣೆ ಪಡೆದೂ ವಸ್ತ್ರವಿನ್ಯಾಸಕರು ಕಫ್ತಾನ್‌ ಗಳ ಜೊತೆ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ನಿಮ್ಮ ದುಪಟ್ಟಾ ಅಥವಾ ಶಾಲಿನಿಂದಲೂ ಕಫ್ತಾನ್‌ಗಳನ್ನು ತಯಾರಿಸಬಹುದು!

ಸುಲ್ತಾನರು ತೊಡುತ್ತಿದ್ದರು!
ಕೆಲವರು ಕೋಟಿನಂತೆ ಇದನ್ನು ತೊಟ್ಟರೆ, ಇನ್ನೂ ಕೆಲವು ಕಡೆ ಇದು ರಾಜಮನೆತನದ ಪ್ರತೀಕವಾಗಿದೆ. ಸೆಕೆ ಇರುವ ಸ್ಥಳಗಳಲ್ಲಿ ಇದು ಬಹಳ ಸಡಿಲ ಹಾಗು ಹಗುರವಾಗಿರುತ್ತದೆ. ಇನ್ನೂ ಕೆಲವು ಕಡೆ ಕಾಲ್ಗಂಟಿನ ತನಕ ಬರುವಷ್ಟು ಉದ್ದದ ತೋಳುಗಳಿರುತ್ತವೆ ಈ ಉಡುಗೆಗೆ. ಒಟ್ಟೊಮನ್‌ ಸಾಮ್ರಾಜ್ಯದ ಸುಲ್ತಾನ್‌ ತೊಡುತ್ತಿದ್ದ ಕಫ್ತಾನ್‌ ಗೆ “ಒಟ್ಟೊಮನ್‌ ಕಫ್ತಾನ್‌’ ಎನ್ನಲಾಗುತ್ತದೆ. ಮೊರಾಕನ್‌, ವೆಸ್ಟ್ ಆಫ್ರಿಕನ್‌, ಪರ್ಷಿಯನ್‌, ಯಹೂದಿ, ಸೌತ್‌ ಈಸ್ಟ್ ಏಶಿಯನ್‌, ಹೀಗೆ ನಾನಾ ಪ್ರಕಾರದ ಕಫ್ತಾನ್‌ಗಳಿವೆ.

— ಅದಿತಿ ಮಾನಸ. ಟಿ. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next