Advertisement

ಬೇಸಿಗೆ ಸಂಕಷ್ಟ ಎದುರಿಸಲು ಸಜ್ಜು

01:15 PM Mar 01, 2017 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಎದುರಾಗಲಿರುವ ಕುಡಿಯುವ ನೀರಿನ ಸಮಸ್ಯೆ ಸಮರ್ಪಕವಾಗಿ ನಿಭಾಯಿಸಲು ಜಿಲ್ಲಾಡಳಿತ ಸಜ್ಜಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಹೇಳಿದ್ದಾರೆ. ಮಂಗಳವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕಳೆದ 2-3 ವರ್ಷಗಳಿಂದ ಮಳೆ ಬಾರದೇ ಬರ ಪರಿಸ್ಥಿತಿ ಎದುರಾಗಿದೆ.

Advertisement

ಈ ಬಾರಿ ಮಾರ್ಚ್‌, ಏಪ್ರಿಲ್‌ ಹಾಗೂ ಮೇ ತಿಂಗಳು ಕುಡಿಯುವ ನೀರು ಸಂಬಂಧ ನಮಗೆ ತೀವ್ರ ಸಂಕಷ್ಟವಿದೆ. ಹಾಗಾಗಿ ಎಲ್ಲಿಯೂ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಉಂಟಾಗದಂತೆ ಕ್ರಮ ವಹಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು. ಸತತ ಬರಗಾಲದಿಂದ ತತ್ತರಿಸಿದ್ದ ಜನರಿಗೆ ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದತಿ ಮತ್ತಷ್ಟು ಕಂಗೆಡುವಂತೆ ಮಾಡಿದೆ.

ಮುಂಗಾರು ಆರಂಭವಾಗುವ ತನಕ ಮುಂದಿನ ಮೂರು ತಿಂಗಳು ಈ ಬಾರಿ ತೀವ್ರ ಬಿಕ್ಕಟ್ಟಿನ ಸ್ಥಿತಿ ಇದೆ. ಎಷ್ಟೇ ಹಣ ಖರ್ಚಾಗಲಿ ಮೊದಲು ಕುಡಿಯುವ ನೀರು ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು. ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಬರದ ಪಟ್ಟಿಗೆ ಸೇರ್ಪಡೆ ಆಗಿವೆ. ಕೇಂದ್ರ ಸರ್ಕಾರ ಬರ ಪರಿಹಾರ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡದಿದ್ದರೂ ಸಹ ರಾಜ್ಯ ಸರ್ಕಾರ ಬರ ಪರಿಹಾರಕ್ಕೆ ಅಗತ್ಯ ನೆರವು ನೀಡಿದೆ. 

ಜಿಲ್ಲೆಯ 6 ತಾಲ್ಲೂಕುಗಳ 40 ಗ್ರಾಮಗಳಲ್ಲಿ ಕುಡಿವ ನೀರು ಒದಗಿಸಲು ಖಾಸಗಿ ಕೊಳವೆಬಾವಿಗಳನ್ನು ಪ್ರತಿ ತಿಂಗಳಿಗೆ 18-20 ಸಾವಿರ ರೂ. ಬಾಡಿಗೆ ಆಧಾರದ ಮೇಲೆ ಬಳಸಿಕೊಳ್ಳಲಾಗುತ್ತಿದೆ ಎಂದರು. ಇನ್ನು 20 ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ಕುಡಿವ ನೀರು ಒದಗಿಸಲಾಗುತ್ತಿದೆ. ಬಳಸಿಕೊಳ್ಳಲಾಗುತ್ತಿದೆ. ಪ್ರತಿ ಟ್ಯಾಂಕರ್‌ ಗೆ 800 ರೂ. ನೀಡಲಾಗುತ್ತಿದೆ. 

ದಾವಣಗೆರೆ ನಗರದಲ್ಲೂ ಸಹ 1.35 ಕೋಟಿ ರೂ. ವೆಚ್ಚದಲ್ಲಿ ಅಗತ್ಯವಿರುವ ಕಡೆ ಕೊಳವೆಬಾವಿ ಕೊರೆಸಿ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು. ಜಾನುವಾರುಗಳಿಗೆ ಮೇವು ಒದಗಿಸುವ ಸಲುವಾಗಿ ದಾವಣಗೆರೆ ಜಿಲ್ಲಾ ಕೇಂದ್ರ ಸೇರಿದಂತೆ ಹರಪನಹಳ್ಳಿ, ಹರಿಹರದ ಎಪಿಎಂಸಿ ಮತ್ತು ಜಗಳೂರು ತಾಲ್ಲೂಕಿನ ಮಡ್ರಳ್ಳಿಯಲ್ಲಿ ಮೇವು ಬ್ಯಾಂಕ್‌ ಸ್ಥಾಪಿಸಲಾಗಿದ್ದು, ಇದುವರೆಗೂ 80 ಟನ್‌ ಮೇವು ಸಂಗ್ರಹಿಸಲಾಗಿದೆ. 

Advertisement

ಮೇವು ಬೆಳೆಯಲು ಈಗಾಗಲೇ 3500 ಮೇವಿನ ಬೀಜದ ಪಾಕೆಟ್‌ ವಿತರಿಸಲಾಗಿದೆ ಎಂದರು. ದಾವಣಗೆರೆ ನಗರಕ್ಕೆ 24+7 ನೀರು ಒದಗಿಸುವ ಮಹತ್ವಾಕಾಂಕ್ಷೆ ಜಲಸಿರಿ ಯೋಜನೆಗೆ 480 ಕೋಟಿ ರೂ. ಮಂಜೂರಾಗಿದೆ. ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದೆ. ತುಂಗಭದ್ರಾ ನದಿಯಿಂದ ಈಗಾಗಲೇ ಬಾತಿ ಗುಡ್ಡದ ಹತ್ತಿರವಿರುವ ನೀರು ಶುದ್ಧೀಕರಣ ಘಟಕಕ್ಕೆ ನೀರು ಸರಬರಾಜು ಮಾಡಲು ಯೋಜನೆ ಸಿದ್ದಪಡಿಸಲಾಗಿದೆ.

ದಾವಣಗೆರೆಯಲ್ಲಿ ನಿರಂತರವಾಗಿ ನೀರು ಸರಬರಾಜು ಮಾಡಲು ವಿವಿಧ ಬಡಾವಣೆಯ 19 ಸ್ಥಳಗಳಲ್ಲಿ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಿಸಿ, ಪೈಪ್‌ಲೈನ್‌ ಅಳವಡಿಸಲು ಅಂದಾಜುಪಟ್ಟಿ ತಯಾರಿಸಿ ಶೀಘ್ರ ಟೆಂಡರ್‌ ಕರೆಯಲು ಸೂಚನೆ ನೀಡಲಾಗಿದೆ ಎಂದರು.

ಸ್ಮಾರ್ಟ್‌ಸಿಟಿ ಯೋಜನೆಯಡಿ ಮೊದಲ ಹಂತವಾಗಿ 25.06 ಕೋಟಿ ರೂ ವೆಚ್ಚದಲ್ಲಿ ದಾವಣಗೆರೆ ನಗರದ ಪ್ರಮುಖ ವಾಣಿಜ್ಯ ಪ್ರದೇಶವಾದ ಮಂಡಿಪೇಟೆ, ಎಂ.ಜಿ.ರಸ್ತೆ, ಚೌಕಿಪೇಟೆ, ಚಾಮರಾಜಪೇಟೆಯಲ್ಲಿ ಒಳಚರಂಡಿ, ಕುಡಿಯುವ ನೀರು ಸರಬರಾಜು ವ್ಯವಸ್ಥೆ, ಅಂಡರ್‌ ಗ್ರೌಂಡ್‌ ಕೇಬಲ್‌, ಕಾಂಕ್ರಿಟ್‌ ರಸ್ತೆ ಕಾಮಗಾರಿಗಳಿಗೆ ಟೆಂಡರ್‌ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದರು. ದೂಡಾ ಅಧ್ಯಕ್ಷ ಜಿ.ಎಚ್‌.ರಾಮಚಂದ್ರ, ಕೆಎಸ್‌ಐಸಿ ಮಾಜಿ ಅಧ್ಯಕ್ಷ ಡಿ.ಬಸವರಾಜ್‌ ಇತರರು ಸುದ್ದಿಗೋಷ್ಟಿಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next