Advertisement

ಸರ್ಕಾರಿ ಶಾಲೆ ಮಕ್ಕಳಿಗೆ ಬೇಸಿಗೆ ಸಂಭ್ರಮ

04:19 PM Mar 31, 2019 | Naveen |

ಬಾಗಲಕೋಟೆ: ಬೇಸಿಗೆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಕಚೇರಿಗಳಿಗೆ ನೀಡುವ ಕೆಲಸದ ಅವಧಿ ವಿನಾಯ್ತಿಯನ್ನು ಸರ್ಕಾರಿ ಶಾಲೆಗಳಿಗೂ ನೀಡಲಾಗಿದೆ. ಅಲ್ಲದೇ ಈ ವರ್ಷ ಜಿಲ್ಲೆಯ ಸರ್ಕಾರಿ ಶಾಲೆಗಳ ಮಕ್ಕಳಿಗೆ ಆಡ್ತಾಡ್ತಾ ಅರಿವು ಮೂಡಿಸುವ ಬೇಸಿಗೆ ಸಂಭ್ರಮ ಕಾರ್ಯಕ್ರಮ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ.

Advertisement

ಬಿರು ಬೇಸಿಗೆ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಿಗೆ ಏ.1ರಿಂದ ಬೆಳಗ್ಗೆ 8ರಿಂದ ಮಧ್ಯಾಹ್ನ 1.30ರ ವರೆಗೆ ಕೆಲಸದ ಅವಧಿ ನಿಗದಿ ಮಾಡಲಾಗಿದೆ. ಅದೇ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಶಾಲೆಗಳಿಗೂ ಈ ಆದೇಶ ಅನ್ವಯಿಸಲಾಗಿದೆ. ಸರ್ಕಾರಿ, ಅನುದಾನಿತ ಶಾಲೆಗಳು, ನಿತ್ಯ ಬೆಳಗ್ಗೆ 8ಕ್ಕೆ ಆರಂಭಗೊಂಡು, ಮಧ್ಯಾಹ್ನ 1.30ಕ್ಕೆ ತರಗತಿ ಕೊನೆಗೊಳ್ಳಲಿವೆ.

ಆಡ್ತಾಡ್ತಾ ಅರಿವು: ಕಳೆದ ಎರಡು ವರ್ಷಗಳ ಹಿಂದೆ ಚಾಲ್ತಿಯಲ್ಲಿದ್ದ ಬೇಸಿಗೆ ಸಂಭ್ರಮ ಕಾರ್ಯಕ್ರಮ ಈ ವರ್ಷವೂ ನಡೆಸಲು ಇಲಾಖೆ ಮುಂದಾಗಿದೆ. ಪ್ರತಿದಿನ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬೇಸಿಗೆ ಸಂಭ್ರಮ ಹೆಸರಿನಲ್ಲಿ ಹಲವಾರು ಚಟುವಟಿಕೆ ನಡೆಸಲು ತಯಾರಿ ಮಾಡಿಕೊಳ್ಳಲಾಗಿದೆ. ನೃತ್ಯ, ಸಂಗೀತ, ಸ್ವಚ್ಛತೆ, ಆರೋಗ್ಯ ಅರಿವು, ಸಾಧಕರ ಪರಿಚಯ ಹೀಗೆ ಹಲವು ಕಾರ್ಯಕ್ರಮಗಳನ್ನು ಮಕ್ಕಳಿಗೆ ಆಟ ಆಡಿಸುತ್ತಲೇ ತಿಳಿಸಲು ಶಿಕ್ಷಕರಿಗೆ ಜವಾಬ್ದಾರಿ ವಹಿಸಲಾಗಿದೆ.

ನಿತ್ಯ ಬಿಸಿಯೂಟ: ಬರ ಹಿನ್ನೆಲೆಯಲ್ಲಿ ಈ ವರ್ಷವೂ ಜಿಲ್ಲೆಯ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 461 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿದ್ದು, ಇಲ್ಲಿ 17,981 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅಲ್ಲದೇ 841 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಇಲ್ಲಿ 1,56,278 ಮಕ್ಕಳು ವಿದ್ಯಾರ್ಜನೆ ಮಾಡುತ್ತಾರೆ. ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯ 1,74,259 ಮಕ್ಕಳು ಮಧ್ಯಾಹ್ನ ಬಿಸಿಯೂಟ ಯೋಜನೆ ಲಾಭ ಪಡೆಯಲಿದ್ದಾರೆ.

ಅಲ್ಲದೇ 9 ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಗಳಿದ್ದು, ಇಲ್ಲಿ 848 ಮಕ್ಕಳು, 104 ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಇಲ್ಲಿ 31,381 ವಿದ್ಯಾರ್ಥಿಗಳಿದ್ದಾರೆ. ಅವರಿಗೂ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ.

Advertisement

ಇನ್ನು ಜಿಲ್ಲೆಯಲ್ಲಿ 183 ಸರ್ಕಾರಿ ಪ್ರೌಢ ಶಾಲೆಗಳಿದ್ದು, ಇಲ್ಲಿ 30,784 ಮಕ್ಕಳಿದ್ದಾರೆ. 124 ಅನುದಾನಿತ ಪ್ರೌಢ ಶಾಲೆಗಳಿದ್ದು, ಇಲ್ಲಿ 28,155 ಮಕ್ಕಳು ವ್ಯಾಸಂಗ ಮಾಡುತ್ತಾರೆ. ಇದರಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು, ಪರೀಕ್ಷೆ ಬರೆದು ತೆರಳಿದ್ದು, ಅವರನ್ನು ಹೊರತುಪಡಿಸಿದ ಉಳಿದ ಮಕ್ಕಳಿಗೆ ಬಿಸಿ ಊಟ ಹಾಗೂ ಬೇಸಿಗೆ ಸಂಭ್ರಮ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಡಿಡಿಪಿಐ ಬಿ.ಎಚ್‌. ಗೋನಾಳ ತಿಳಿಸಿದರು.

ಏ.10ರ ವರೆಗೆ ಶಾಲೆಗಳಲ್ಲಿ ಎಂದಿನಂತೆ ಪಠ್ಯಕ್ರಮ ನಡೆಯಲಿವೆ. ಏ.11ರಿಂದ ಮೇ 28ರ ವರೆಗೆ ಒಟ್ಟು 48 ದಿನಗಳ ಕಾಲ ಶಾಲೆಗಳಿಗೆ ಸರ್ಕಾರಿ ರಜೆ ಇದ್ದು, ಆ ದಿನಗಳಲ್ಲಿ ಬೇಸಿಗೆ ಸಂಭ್ರಮ ಕಾರ್ಯಕ್ರಮ, ಬಿಸಿ ಊಟ ನೀಡಲಾಗುವುದು. ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಜನಪ್ರತಿನಿಧಿಗಳನ್ನೂ ಬೇಸಿಗೆ ಸಂಭ್ರಮ ಕಾರ್ಯಕ್ರಮದಲ್ಲಿ ಒಗ್ಗೂಡಿಸಿಕೊಳ್ಳಲಾಗುವುದು. ಈ ಕುರಿತು ಜಿಪಂ ಸಿಇಒ ಗಂಗೂಬಾಯಿ ಮಾನಕರ ವಿಶೇಷ ನಿರ್ದೇಶನ ನೀಡಿದ್ದು, ಬೇಸಿಗೆ ಸಂಭ್ರಮ ವೇಳೆ ಬಿಸಿಯೂಟ ನೀಡುವಾಗ ಮಕ್ಕಳಿಗೆ ಇಡ್ಲಿ, ಸಿಹಿ ತಿನಿಸು ಸಹಿತ ವಿಶೇಷ ತಿನಿಸು ಕೊಡಲು ಸೂಚಿಸಿದ್ದಾರೆ. ಇದಕ್ಕಾಗಿ ದಾನಿಗಳ ಸಹಕಾರವೂ ಪಡೆಯಲಾಗುವುದು ಎಂದು ಡಿಡಿಪಿಐ ಗೋನಾಳ ಉದಯವಾಣಿಗೆ ವಿವರಿಸಿದರು.

ಸರ್ಕಾರಿ ಕಚೇರಿಗಳಂತೆ ಶಾಲೆಗಳೂ ನಿತ್ಯ ಬೆಳಗ್ಗೆ 8ರಿಂದ ಮಧ್ಯಾಹ್ನ 1.30ರ ವರೆಗೆ ಕಾರ್ಯ ನಿರ್ವಹಿಸಲಿವೆ. ಈ ಬಾರಿ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗಾಗಿ ಬೇಸಿಗೆ ಸಂಭ್ರಮ ನಡೆಸಲಾಗುತ್ತಿದೆ. ನಿತ್ಯ ಆಟವಾಡುತ್ತಲೇ ಹಲವು ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುವುದು.
. ಬಿ.ಎಚ್‌. ಗೋನಾಳ, ಡಿಡಿಪಿಐ

ಸರ್ಕಾರಿ ಕಚೇರಿ ವೇಳೆಯಂತೆ ಶಾಲೆಗಳನ್ನೂ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಸಲು ಆದೇಶಿಸಿರುವುದು ಒಳ್ಳೆಯ ಕೆಲಸ. ಈ ಆದೇಶ ಮಾಡಿದ ಸರ್ಕಾರವನ್ನು, ಶಿಕ್ಷಕರ ಸಂಘದಿಂದ ಅಭಿನಂದಿಸುತ್ತೇವೆ.
. ಚಂದ್ರಶೇಖರ ನುಗ್ಲಿ,
ರಾಜ್ಯ ಪ್ರಧಾನ ಕಾರ್ಯದರ್ಶಿ,
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next