Advertisement

ಬೇಸಗೆ ಬಿಝಿನೆಸ್‌

09:51 AM Apr 05, 2019 | Sriram |

ಬೇಸಗೆ ಶಿಬಿರ ಎನ್ನುವುದು ಮಕ್ಕಳ ಮನೋವಿಕಾಸಕ್ಕೆ, ಅವರ ಆಸಕ್ತಿಗಳನ್ನು ಹೊರತರುವ ಕಾರ್ಯಕ್ರಮ ಎನ್ನುವುದು ನಿಜ. ಆದರ ಜೊತೆಗೆ ಬೇಸಗೆ ಶಿಬಿರ ಒಂದು ಉದ್ದಿಮೆಯಾಗಿಯೂ ಆಕರ್ಷಿಸುತ್ತಿದೆ. ಬಹಳಷ್ಟು ಮಂದಿ ವರ್ಷದಲ್ಲಿ ಒಮ್ಮೆ ಬರುವ ಬೇಸಗೆ ಶಿಬಿರವನ್ನು ಆದಾಯದ ಮೂಲವನ್ನಾಗಿ ಮಾಡಿಕೊಂಡಿದ್ದಾರೆ. ಸಂಪನ್ಮೂಲ ವ್ಯಕ್ತಿಗಳು ಮಾತ್ರವಲ್ಲದೆ ವಿದ್ಯಾರ್ಥಿಗಳು, ಗೃಹಿಣಿಯರು ಕೂಡಾ ಈ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

Advertisement

ಪರೀಕ್ಷೆಗಳು ಮುಗಿದು ರಜೆ ಪ್ರಾರಂಭವಾಗುತ್ತಲೇ ಪಾಲಕರಿಗೆ ಚಡಪಡಿಕೆ ಶುರುವಾಗುತ್ತದೆ. ಇಂದಿನ ನ್ಯೂಕ್ಲಿಯರ್‌ ಕುಟುಂಬಗಳಲ್ಲಿ ತಂದೆ ತಾಯಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರೆ, ಎಲ್ಲರ ಮನೆಗಳಲ್ಲೂ ಇದೇ ಕಥೆ. ನೋಡಿಕೊಳ್ಳುವವರು ಇಲ್ಲದೇ ಇರುವುದರಿಂದ ಮಕ್ಕಳನ್ನು ಮನೆಯಲ್ಲಿ ಅವರಷ್ಟಕ್ಕೇ ಬಿಟ್ಟುಹೋಗುವ ಹಾಗಿಲ್ಲ. ಒಂದೋ, ಮಕ್ಕಳನ್ನು ಊರಿಗೆ ಕಳಿಸಬೇಕು ಅಥವಾ ಬೇಸಗೆ ಶಿಬಿರಕ್ಕೆ ಕಳಿಸಬೇಕು. ಈ ಪರಿಸ್ಥಿತಿಯೂ ಬೇಸಗೆ ಶಿಬಿರಗಳಿಗೆ ಬೇಡಿಕೆ ಹೆಚ್ಚಾಗುವುದಕ್ಕೆ ಕಾಣೆR ಸಲ್ಲಿಸಿದೆ. ಈ ಕಾರಣಕ್ಕೇ ಬೆಳಗ್ಗೆ ಮನೆಯಿಂದಲೇ ಮಕ್ಕಳನ್ನು ಪಿಕಪ್‌ ಮಾಡುವ ವ್ಯವಸ್ಥೆ ಕಲ್ಪಿಸುವ ಶಿಬಿರಗಳನ್ನು ಪಾಲಕರು ಆರಿಸುತ್ತಿದ್ದಾರೆ. ಶಿಬಿರಗಳ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆಯಲ್ಲದೆ ಕಡಿಮೆಯಂತೂ ಆಗುತ್ತಿಲ್ಲ.

ಜಾಗ ಎಲ್ಲಿದೆ?
ಬೇಸಗೆ ಶಿಬಿರಕ್ಕೆ ಅಗತ್ಯವಾಗಿ ಬೇಕಾಗಿರುವುದು ವಿಶಾಲವಾದ ಜಾಗ. ಅನೇಕ ವರ್ಷಗಳಿಂದ ಬೇಸಗೆ ಶಿಬಿರ ನಡೆಸಿಕೊಂಡು ಬರುತ್ತಿರುವ ಸಂಸ್ಥೆಗಳಲ್ಲಿ ಕೆಲವು ಈಗ ಸ್ವಂತ ಕಟ್ಟಡವನ್ನು ಹೊಂದಿವೆ. ಅವನ್ನು ಹೊರತುಪಡಿಸಿದರೆ ಹೆಚ್ಚಿನ ಬಾರಿ ರಜಾಕಾಲವಾದ್ದರಿಂದ ಶಾಲಾ ಕಾಲೇಜುಗಳನ್ನೇ ಬಾಡಿಗೆಗೆ ಪಡೆದು ಅಲ್ಲಿ ಬೇಸಗೆ ಶಿಬಿರವನ್ನು ನಡೆಸಲಾಗುತ್ತದೆ. ಇನ್ನು ಕ್ರಿಕೆಟ್‌, ಫ‌ುಟ್‌ಬಾಲ್‌ನಂಥ ಹೊರಾಂಗಣ ಕ್ರೀಡೆಗಳಿಗೆ ಮೈದಾನಗಳೇ ಆಗಬೇಕು. ಈಜು, ಟೆನ್ನಿಸ್‌ ಶಿಬಿರವಾದರೆ ಅವುಗಳದ್ದೇ ಆದ ಪ್ರತ್ಯೇಕ ಸ್ಟೇಡಿಯಂನ ಅಗತ್ಯವಿರುತ್ತದೆ. ಅದರ ನಿರ್ವಹಣಾ ವೆಚ್ಚವೇ ಹೆಚ್ಚಿರುವುದರಿಂದ ಅವುಗಳಿಗೆ ದಿನದ ಲೆಕ್ಕದಲ್ಲಿ ದುಬಾರಿ ಬಾಡಿಗೆ ತೆರಬೇಕಾಗುತ್ತದೆ. ಹೀಗಾಗಿ ಅವುಗಳಿಗೆ ಪ್ರವೇಶ ಶುಲ್ಕವೂ ಹೆಚ್ಚು. ಬ್ಯಾಡ್ಮಿಂಟನ್‌ ತರಬೇತಿಗಾಗಿ ಒಳಾಂಗಣ ಕ್ರೀಡಾಂಗ ದಲ್ಲಿ ದುಬಾರಿ ಬೆಲೆ ತೆತ್ತು ನಡೆಸುವುದಕ್ಕೆ ಬದಲಾಗಿ, ಪುಟ್ಟ ಮೈದಾನದಲ್ಲೇ ಕೋರ್ಟ್‌ ರೂಪಿಸಿ ನಡೆಸುವುದು ಸಾಧ್ಯ. ಸುರಕ್ಷತೆಯನ್ನು ಗಮನದಲ್ಲಿರಿಸಿಕೊಳ್ಳಬೇಕಾದ್ದು ಮಾತ್ರ ಕಡ್ಡಾಯ.

ಶುಲ್ಕದ ಕತೆ
ಇಂದು 300ರು. ನಿಂದ ಮೊದಲುಗೊಂಡು 20,000ರು ಗಳ ತನಕ ಶುಲ್ಕ ವಿಧಿಸುವ ಬೇಸಗೆ ಶಿಬಿರಗಳನ್ನು ಕಾಣಬಹುದು. ಮಕ್ಕಳಿಗೆ ಏನನ್ನು ಕಲಿಸಬೇಕು ಎನ್ನುವುದರಿಂದ ಮೊದಲುಗೊಂಡು ಯಾವ ಯಾವ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಬೇಕು, ಅವರ ಸಂಭಾವನೆಯ ಲೆಕ್ಕಾಚಾರ… ಪರಿಕರಗಳ ವೆಚ್ಚ, ಊಟದ ಸೌಲಭ್ಯವಿದ್ದರೆ ಅದರ ಲೆಕ್ಕಾಚಾರ ಹೀಗೆ ಪ್ರತಿಯೊಂದನ್ನೂ ಅಳೆದು ತೂಗಿ ಶುಲ್ಕವನ್ನು ನಿಗದಿ ಪಡಿಸಲಾಗುತ್ತದೆ. ದಶಕಗಳಿಂದ ಬೇಸಗೆ ಶಿಬಿರ ನಡೆಸುತ್ತಿರುವ ಬೆಂಗಳೂರಿನ “ಬಿಂಬ’ದಂಥ ಪ್ರತಿಷ್ಠಿತ ಸಂಸ್ಥೆಗಳು ಒಂದೊಳ್ಳೆಯ ಆಶಯವನ್ನಿಟ್ಟುಕೊಂಡು ಕೆಲಸ ಮಾಡುವುದರಿಂದ ಲಾಭದ ಮುಖ ನೋಡದು. ಲಾಭ ಬಂದರೂ ಅದು ಮತ್ತೆ ಶಿಬಿರಕ್ಕೇ ವಿನಿಯೋಗವಾಗುತ್ತದೆ. ಇದೊಂದು ಲಾಭದಾಯಕ ಉದ್ದಿಮೆಯಾಗಿರುವುದರಿಂದ ದುಡಿಮೆಯ ಮಾರ್ಗವಾಗಿ ಅದನ್ನು ಆರಿಸಿಕೊಂಡರೆ ತಪ್ಪಿಲ್ಲ ಎನ್ನುವ ಧೋರಣೆಯೂ ಇದೆ. “ಕೆಲ ಆಯೋಜಕರು ಆಗುವ ಖರ್ಚಿಗಿಂತ ಎರಡು ಮೂರು ಪಟ್ಟು ಶುಲ್ಕ ವಿಧಿಸುತ್ತಿದ್ದಾರೆ. ಈ ಕ್ಷೇತ್ರ ಇನ್ನೂ ಅಸಂಘಟಿತ ವಲಯವಾಗಿರುವುದರಿಂದ ಹೀಗಾಗುತ್ತಿದೆ’ ಎನ್ನುತ್ತಾರೆ ಸಾಫ್ಟ್ವೇರ್‌ ಎಂಜಿನಿಯರ್‌ ಗುರುರಾಜ ಕುಲಕರ್ಣಿ. ಅದೇನೇ ಇದ್ದರೂ ಇದರಿಂದ ಗಳಿಕೆಯ ಮಾರ್ಗವಾಗಿ ಬೇಸಗೆ ಶಿಬಿರ ಬಳಕೆಯಾಗುತ್ತಿದೆ ಎನ್ನುವುದಂತೂ ಸ್ಪಷ್ಟವಾಗುತ್ತದೆ.

ಖರ್ಚು- ವೆಚ್ಚ
ಬೇಸಗೆ ಶಿಬಿರವೊಂದನ್ನು ನಡೆಸುವುದೆಂದರೆ ಅದು ಸುಲಭ ಸಂಗತಿಯೇನಲ್ಲ. ಅದರ ಹಿಂದೆ ತಿಂಗಳಾನುಗಟ್ಟಲೆಯ ಪರಿಶ್ರಮವಿರುತ್ತದೆ. ಪ್ರಚಾರ ಸಾಮಗ್ರಿ, ಓಡಾಟ, ಪರಿಕರಗಳ ಖರ್ಚು, ಕಾಸ್ಟೂéಮ್‌ ಮತ್ತೂಂದೆಂದು ಬಂಡವಾಳ ಹಾಕಬೇಕಾಗುತ್ತದೆ. ಅಲ್ಲದೆ ಈಗಿನ ಹೊಸ ಟ್ರೆಂಡ್‌ ಎಂದರೆ ಬೇಸಗೆ ಶಿಬಿರದ ಕೊನೆಯ ದಿನ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವುದು. ಕಲಾಮಂದಿರ, ಆಡಿಟೋರಿಯಂನಲ್ಲಿ ಕಾರ್ಯಕ್ರಮ ಏರ್ಪಡಿಸಿ ಮಕ್ಕಳಿಂದ ನಾಟಕ ಪ್ರದರ್ಶನ, ನೃತ್ಯ, ಸಂಗೀತ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಹೀಗಾಗಿ ಲೈಟಿಂಗ್‌, ಮೇಕಪ್‌ ಮುಂತಾದ ತಂತಜ್ಞರ ಅಗತ್ಯ ಬೀಳುವುದರಿಂದ ಅವರ ಸಂಭಾವನೆಯನ್ನೂ ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ. ಅದೇನೇ ಇದ್ದರೂ ಉಳಿತಾಯ ಮಾಡುವ ದಾರಿಯಂತೂ ಇದ್ದೇ ಇದೆ.

Advertisement

ಉಪಾಯದಿಂದ ಉಳಿತಾಯ
ಹಣ ಉಳಿಸುವುದೆಂದರೆ ಸೌಲಭ್ಯವನ್ನು ಕಡಿತಗೊಳಿಸುವುದು ಎಂದಲ್ಲ. ನೀಡಬೇಕಾದ ಸೌಲಭ್ಯಗಳ ಜೊತೆ ಯಾವುದೇ ರಾಜಿ ಮಾಡಿಕೊಳ್ಳದೆ ಬುದ್ಧಿವಂತಿಕೆಯಿಂದ ಉಪಾಯ ಮಾಡಿಯೂ ಹಣ ಉಳಿಸುತ್ತಿರುವುದನ್ನು ಕಾಣಬಹುದಾಗಿದೆ. ಆನ್‌ಲೈನ್‌ ಜಮಾನಾ ಆಗಿರುವುದರಿಂದ ಪ್ರಚಾರಕ್ಕೆ ಫೇಸ್‌ಬುಕ್‌, ಟ್ವಿಟ್ಟರ್‌ನಂಥ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಜೊತೆಗೆ ರಂಗಶಾಲೆಗಳಲ್ಲಿ ಕಲಿತ ನುರಿತ ವಿದ್ಯಾರ್ಥಿಗಳನ್ನು ಮತ್ತು ಯುವ ಕ್ರೀಡಾಳುಗಳನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಕರೆಸುವುದರಿಂದ ಅವರಿಗೆ ಎಕ್ಸ್‌ಪೋಷರ್‌ ದೊರೆಯುವುದು ಮಾತ್ರವಲ್ಲದೆ ಹೆಚ್ಚಿನ ಗೌರವ ಧನ ನೀಡಬೇಕಾಗಿಯೂ ಬರುವುದಿಲ್ಲ. ಹೀಗಾಗಿ ತಂತ್ರಜ್ಞಾನ ಮತ್ತು ಸದುದ್ದೇಶ ಮಾತ್ರದಿಂದಲೇ ಶಿಬಿರಗಳ ಆಯೋಜಕರು ಉಳಿತಾಯ ಮಾಡುತ್ತಿದ್ದಾರೆ.

ಇದಲ್ಲದೆ ಹಣ ಗಳಿಕೆಗೆ ಕಂಡುಕೊಂಡಿರುವ ಇನ್ನೊಂದು ಮಾರ್ಗವೆಂದರೆ ತಾವೇ ಪರಿಕರಗಳನ್ನು ಒದಗಿಸುವುದು. ಸ್ವಿಮ್ಮಿಂಗ್‌ ಶಿಬಿರವಾದರೆ ಅಲ್ಲಿ ಮಕ್ಕಳಿಗೆ ಸ್ವಿಮ್‌ ಸೂಟ್‌, ಕ್ಯಾಪ್‌, ಕಣ್ಣಿಗೆ ಗಾಗಲ್ಸ್‌ನ ಅಗತ್ಯವಿರುತ್ತದೆ. ಕ್ರಾಫ್ಟ್ ತರಗತಿಯಲ್ಲಿ ಕತ್ತರಿ, ಗೋಂದು, ಬಣ್ಣದ ಕಾಗದದ ಅಗತ್ಯವಿರುತ್ತದೆ. ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಬೇರೆ ಬೇರೆ ರೀತಿಯ ಪರಿಕರಗಳ ಅಗತ್ಯವಿರುತ್ತದೆ. ಇವುಗಳು ಮಾರುಕಟ್ಟೆಯಲ್ಲಿ ಸಿಗುತ್ತವಾದರೂ ಶಿಬಿರದ ಆಯೋಜಕರೇ ಒದಗಿಸುವ ಮೂಲಕ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

– ಹವನ

Advertisement

Udayavani is now on Telegram. Click here to join our channel and stay updated with the latest news.

Next