ಲಂಡನ್: ವಿಶ್ವ ಸುಂದರಿ ಕಿರೀಟಕ್ಕಾಗಿ ಭಾರತದಿಂದ ಸ್ಪರ್ಧಿಸಿದ್ದ ಸುಮನ್ ರಾವ್ ಮಿಸ್ ವರ್ಲ್ಡ್ ಏಷಿಯಾ ಕಿರೀಟ ಗೆದ್ದಿದ್ದಾರೆ. 21ರ ಹರೆಯದ ಭಾರತದ ಚೆಲುವೆ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದಾರೆ.
ರಾಜಸ್ಥಾನ ಮೂಲದ ಸುಮನ್ ರಾವ್ ಹುಟ್ಟೂರು ಉದಯಪುರ ಸಮೀಪದ ಐದಾನ ಗ್ರಾಮ. ತಂದೆ ಚಿನ್ನದ ವ್ಯಾಪಾರಿಯಾಗಿದ್ದರೆ ತಾಯಿ ಗೃಹಣಿ. ಸುಮನ್ ಒಂದು ವರ್ಷವಿದ್ದಾಗಲೇ ಕುಟುಂಬ ರಾಜಸ್ಥಾನದಿಂದ ಮುಂಬೈಗೆ ಬಂದು ನೆಲೆಸಿತ್ತು.
ಕಥಕ್ ಡ್ಯಾನ್ಸರ್ ಆಗಿರುವ ಸುಮನ್ 2018ರಲ್ಲಿ ಮಿಸ್ ನವಿ ಮುಂಬೈ ಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿ ಪಡೆದಿದ್ದರು. ನಂತರ 2019ರಲ್ಲಿ ಮಿಸ್ ರಾಜಸ್ಥಾನ ಸ್ಪರ್ಧೆಯಲ್ಲಿ ಭಾಗವಹಿಸಿ ಅಲ್ಲಿ ಮೊದಲ ಸ್ಥಾನ ಪಡೆದ ಸುಮನ್ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತರಾಗಿ ಮಿಸ್ ವರ್ಲ್ಡ್ ಗೆ ಅವಕಾಶ ಪಡೆದ ಅವರು ಅಂತಿಮ ಸುತ್ತಿನವರೆಗೆ ಸ್ಪರ್ಧೆಯಲ್ಲಿದ್ದು ವಿಶ್ವ ಸುಂದರಿ ಎರಡನೇ ರನ್ನರ್ ಅಪ್ ಮತ್ತು ಮಿಸ್ ವರ್ಲ್ಡ್ ಏಷಿಯಾ ಕಿರೀಟ ಅಲಂಕರಿಸಿದ್ದಾರೆ.