ಸುಮನ್ ರಂಗನಾಥ್ ಇಲ್ಲಿವರೆಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಷ್ಟು ವರ್ಷದ ಅವರ ಕೆರಿಯರ್‌ನಲ್ಲಿ ಅವರು ನಾನಾ ಬಗೆಯ ಪಾತ್ರ ಪೋಷಣೆ ಮಾಡಿದ್ದಾರೆ. ಆದರೆ, ಯಾವತ್ತೂ ಔಟ್ ಅಂಡ್ ಔಟ್ ಕಾಮಿಡಿ ಪಾತ್ರವನ್ನು ಯಾವತ್ತೂ ಮಾಡಿರಲಿಲ್ಲ. ಈಗ ಅದೂ ಹಾಗೋಗಿದೆ. ಈ ವಾರ ತೆರೆಕಾಣುತ್ತಿರುವ “ಡಬಲ್ ಇಂಜಿನ್’ ಚಿತ್ರದಲ್ಲಿ ಸುಮನ್ ರಂಗನಾಥ್ ಪ್ರಮುಖ ಪಾತ್ರ ಮಾಡಿದ್ದು, ಕಾಮಿಡಿ ಪಾತ್ರದಲ್ಲಿ ಅವರು ಮಿಂಚಿದ್ದಾರೆ.
ಈ ಪಾತ್ರವನ್ನು ಜನ ಹೇಗೆ ಸ್ವೀಕರಿಸುತ್ತಾರೆಂಬ ಕುತೂಹಲದಲ್ಲಿ ಎದುರು ನೋಡುತ್ತಿದ್ದಾರೆ ಸುಮನ್. “ಈ ಹಿಂದೆ ನಾನು ಕೆಲವು ಸಿನಿಮಾಗಳಲ್ಲಿ ಕಾಮಿಡಿ ಪಾತ್ರ ಮಾಡಿದ್ದೆ. ಆದರೆ, ಅದು ಕೆಲವೇ ಕೆಲವು ದೃಶ್ಯಗಳಲ್ಲಿ. ಈ ಬಾರಿ “ಡಬಲ್ ಇಂಜಿನ್’ನಲ್ಲಿ ನನ್ನ ಪಾತ್ರ ಕಾಮಿಡಿ ಹಿನ್ನೆಲೆಯಲ್ಲಿ ಮೂಡಿಬಂದಿದೆ. ಇದೊಂದು ಹಾಸ್ಯಪ್ರಧಾನ ಚಿತ್ರವಾದ್ದರಿಂದ ನನ್ನ ಪಾತ್ರಕ್ಕೂ ಕಾಮಿಡಿ ಮಾಡುವ ಅವಕಾಶ ಸಿಕ್ಕಿದೆ.
ನಾನಂತೂ ಈ ಸಿನಿಮಾ ಬಗ್ಗೆ ಖುಷಿಯಾಗಿದ್ದೇನೆ. ಜನ ಹೇಗೆ ಸ್ವೀಕರಿಸುತ್ತಾರೆಂಬ ಕುತೂಹಲವಿದೆ’ ಎನ್ನುತ್ತಾರೆ ಸುಮನ್. ಈ ಚಿತ್ರದಲ್ಲಿ ಸುಮನ್ ಹಳ್ಳಿಯ ಹೆಣ್ಣುಮಗಳಾಗಿ ಕಾಣಿಸಿಕೊಂಡಿದ್ದಾರೆ. ಹಳ್ಳಿಯಲ್ಲಿದ್ದರೂ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಪಾತ್ರವಂತೆ. ಈ ನಡುವೆ ಕಾಸಿನ ಆಸೆಗೆ ಬಿದ್ದು, ತಂಡವೊಂದರ ಜೊತೆ ಸೇರುವ, ಈ ನಡುವೆ ಆಗುವ ಎಡವಟ್ಟುಗಳ ಮೂಲಕ ಸಿನಿಮಾ ಸಾಗಿ ಬಂದಿದೆ’ ಎನ್ನುತ್ತಾರೆ.
“ನಿರ್ದೇಶಕ ಚಂದ್ರಮೋಹನ್ ಕರೆ ಮಾಡಿ, “ಡಬಲ್ ಇಂಜಿನ್’ನಲ್ಲಿ ಹೀಗೊಂದು ಪಾತ್ರವಿದೆ, ನೀವು ಮಾಡಬೇಕು ಎಂದಾಗ ಕಥೆ ಕೇಳಿದೆ. ಪಾತ್ರ ಇಷ್ಟವಾಗಿ ಒಪ್ಪಿಕೊಂಡೆ’ ಎನ್ನುತ್ತಾರೆ ಅವರು. ಸದ್ಯ ಸುಮನ್ ರಂಗನಾಥ್ “ಕವಲು ದಾರಿ’ ಹಾಗೂ “ದಂಡುಪಾಳ್ಯ-4′ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು, “ಕವಲುದಾರಿ’ಯಲ್ಲಿ ಅವರದು ಗೆಸ್ಟ್ ಅಪಿಯರೆನ್ಸ್ ಆದರೂ ಪಾತ್ರ ತುಂಬಾ ಚೆನ್ನಾಗಿದೆಯಂತೆ.
“ದಂಡುಪಾಳ್ಯ-4’ನಲ್ಲಿ ಅವರು ಗ್ಯಾಂಗ್ ಲೀಡರ್. ಬಹುತೇಕ ಪಾತ್ರಗಳಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಸುಮನ್ ರಂಗನಾಥ್, “ದಂಡುಪಾಳ್ಯ-4’ನಲ್ಲಿ ಡಿಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರಂತೆ.”ಸಾಕಷ್ಟು ಸಿನಿಮಾಗಳು ಹುಡುಕಿಕೊಂಡು ಬರುತ್ತಿವೆ. ಒಂದು ಸಿನಿಮಾಕ್ಕಿಂತ ಇನ್ನೊಂದು ಸಿನಿಮಾದ ಪಾತ್ರ ಭಿನ್ನವಾಗಿರುತ್ತದೆ ಎಂಬ ಖುಷಿ ಇದೆ. ಆದಷ್ಟು ಪಾತ್ರಗಳು ರಿಪೀಟ್ ಆಗದಂತೆ ನೋಡಿಕೊಳ್ಳುತ್ತೇನೆ.
ಪೊಲೀಸ್, ಟೀಚರ್, ಲೇಡಿ ಬಾಸ್ … ಹೀಗೆ ವಿಭಿನ್ನ ಪಾತ್ರಗಳೊಂದಿಗೆ ನಿರ್ದೇಶಕರು ಬರುತ್ತಾರೆ. ನನಗೆ ತುಂಬಾ ಇಷ್ಟವಾದ ಕಥೆಯನ್ನು ಒಪ್ಪಿಕೊಳ್ಳುತ್ತೇನೆ’ ಎನ್ನುತ್ತಾರೆ. ಸುಮನ್ ರಂಗನಾಥ್ ಅವರನ್ನು ನೋಡಿದವರು ಕೇಳುವ ಒಂದು ಸಾಮಾನ್ಯ ಪ್ರಶ್ನೆ ಎಂದರೆ, ಅಂದಿನಿಂದ ಇಂದಿನವರೆಗೂ ಹಾಗೆ ಇದ್ದೀರಿ, ನಿಮ್ಮ ಸೌಂದರ್ಯದ ಗುಟ್ಟೇನು ಎಂಬುದು. ಇದಕ್ಕೆ ಸುಮನ್ ರಂಗನಾಥ್ ಉತ್ತರಿಸುತ್ತಾರೆ. “ನಮ್ಮ ದೇಹ ಪ್ರಕೃತಿಯಲ್ಲಿ ನಾವು ಬೆಳೆದು ಬಂದ ಹಾದಿ, ನಮ್ಮ ವಂಶಾವಳಿ, ನಮ್ಮ ಲೈಫ್ಸ್ಟೈಲ್ ಎಲ್ಲವೂ ಮುಖ್ಯವಾಗುತ್ತದೆ.
ನಾವು ಎಷ್ಟು ಸಿಂಪಲ್ ಆಗಿ, ಖುಷಿಯಾಗಿ, ಪಾಸಿಟಿವ್ ಆಗಿರುತ್ತೇನೆ ಅಷ್ಟು ನಮಗೆ ಒಳ್ಳೆಯದು. ನಾನು ಅದನ್ನು ಪಾಲಿಸುತ್ತೇನೆ. ಜೀವನ ಶೈಲಿಯಲ್ಲಿ ಯೋಗ ಮಾಡುವುದನ್ನು ರೂಢಿಸಿಕೊಂಡರೆ ಅದು ನಿಮ್ಮನ್ನು ಇನ್ನಷ್ಟು ಖುಷಿಯಾಗಿಡುತ್ತದೆ. ನನಗೆ ಯಾವುದೇ ಬ್ಯಾಡ್ ಹ್ಯಾಬಿಟ್ಸ್ ಇಲ್ಲ. ಸರಿಯಾದ ಸಮಯಕ್ಕೆ ಊಟ, ನಿದ್ದೆ ಮಾಡುತ್ತೇನೆ. ಮಾಡುವ ಕೆಲಸವನ್ನು ಪ್ರೀತಿಯಿಂದ, ಶ್ರದ್ಧೆಯಿಂದ ಮಾಡುತ್ತೇನೆ’ ಎನ್ನುವುದು ಸುಮನ್ ಮಾತು.