ಮಂಡ್ಯ: ನಾನು ಮತ್ತು ಅಂಬರೀಶ್ ಹಲವು ವರ್ಷಗಳ ಸ್ನೇಹಿತರು. ಸಂಸದೆ ಸುಮಲತಾ ಅವರು ಕೂಡ ನನಗೆ ಊಟ ಬಡಿಸಿದ್ದಾರೆ. ನಾವು ಶಾಶ್ವತ ಶತ್ರುಗಳಲ್ಲ. ಅವರು ನನಗೆ ಆಶೀರ್ವಾದ ಮಾಡುವ ವಿಶ್ವಾಸವಿದೆ. ಅವರು ಸೂಕ್ತ ನಿರ್ಧಾರವೊಂದನ್ನು ಘೋಷಿಸಲಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಸಮನ್ವಯ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಕೆಲಸ ಮಾಡಿದ್ದೇವೆ, ಅದರ ಕೂಲಿ ಕೇಳುತ್ತಿದ್ದೇವೆ ಎನ್ನುತ್ತಿದ್ದಾರೆ. ಹಾಗಾದರೆ ನಾವೇನೂ ದರೋಡೆ ಮಾಡಿದ್ದೇವಾ ಎಂದು ಪ್ರಶ್ನಿಸಿದರು.
ಮಂಡ್ಯ ಚುನಾವಣೆ ಧರ್ಮಯುದ್ಧ: ಕುಮಾರಸ್ವಾಮಿ
ಮಂಡ್ಯ: ಕಾಂಗ್ರೆಸ್ ಅಭ್ಯರ್ಥಿಗೆ ದುಡ್ಡಿಗೆ ಸಮಸ್ಯೆ ಇಲ್ಲ. ಈಗಾಗಲೇ ಅವರು ದುಡ್ಡು ಹಂಚಿರಬಹುದು. ಆದರೆ ಮಂಡ್ಯದ ಜನರು ದುಡ್ಡಿಗೆ ಬೆಲೆ ಕೊಡುವುದಿಲ್ಲ. ಮಂಡ್ಯದ ಈ ಚುನಾವಣೆ ಧರ್ಮಯುದ್ಧವಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಜೆಡಿಎಸ್-ಬಿಜೆಪಿ ಸಮನ್ವಯ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 10 ತಿಂಗಳ ಕಾಂಗ್ರೆಸ್ ಅಧಿಕಾರ ನೋಡಿದ್ದೀರಿ. ಚುನಾವಣೆ ನಡೆಸಲು ವ್ಹೀಲ್‌ಚೇರ್‌ನಲ್ಲಿ ಬರುತ್ತೀರಾ ಎಂದು ಕಾಂಗ್ರೆಸ್ ನಾಯಕರು ನನ್ನನ್ನು ಟೀಕಿಸಿದ್ದಾರೆ. ಆದರೆ ನನಗೆ ಆ ದುರ್ಗತಿ ಬಂದಿಲ್ಲ. ನಾಟಕ ಆಡಿಕೊಂಡು ನಾನು ಬರುವುದಿಲ್ಲ. ಯಾರಿಗೂ ಅಪನಂಬಿಕೆ ಬೇಡ. ನಿಮಗೆ ಗೌರವ ತರುವ ಕೆಲಸ ಮಾಡುತ್ತೇನೆಂದು ಭರವಸೆ ನೀಡಿದರು.
ನನ್ನ ದೃಷ್ಟಿ ಇದ್ದಾಗ ಮಳೆ-ಬೆಳೆ ಚೆನ್ನಾಗಿತ್ತು:
ಮಂಡ್ಯ ಮೇಲೆ ಕೆಟ್ಟ ದೃಷ್ಟಿ ಬೇಡ ಎಂದು ಹಳೆ ಸ್ನೇಹಿತ ಹೇಳಿದ್ದಾನೆ. ನಮ್ಮ ದೃಷ್ಟಿ ಇದ್ದಾಗ ಮಳೆ ಬೆಳೆ ಚೆನ್ನಾಗಿ ಆಗುತ್ತಿತ್ತು. ನಿಮ್ಮ ದೃಷ್ಟಿ ಬಿದ್ದ ಮೇಲೆ ಬರಗಾಲ ಬಂದಿದೆ. ಭತ್ತ ನಾಟಿ ಮಾಡಬೇಡಿ ಎಂದು ಹೇಳಿದ ಏಕೈಕ ಸಚಿವ ನನ್ನ ಹಳೆ ಸ್ನೇಹಿತ ಎಂದು ಪರೋಕ್ಷವಾಗಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು.