ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬೆಂಬಲ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಲು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಶನಿವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಗೆ ಭೇಟಿ ನೀಡಿ, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರೊಂದಿಗೆ ಚರ್ಚಿಸಿದರು.
ಬಿಜೆಪಿ ಕಚೇರಿಗೆ ಆಗಮಿಸಿದ ಸುಮಲತಾ ಅವರನ್ನು ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾರತಿ ಶೆಟ್ಟಿ, ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಪುಷ್ಪಗುತ್ಛ ನೀಡಿ ಸ್ವಾಗತಿಸಿದರು. ಕಚೇರಿಯಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಸುಮಲತಾ ಅವರು ನಂತರ ಬಿಜೆಪಿ ರಾಷ್ಟ್ರೀಯ ಸಹ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‌ಕುಮಾರ್ ಅವರ ಜತೆಗೆ ಕೆಲಕಾಲ ಮಾತುಕತೆ ನಡೆಸಿದ್ದು, ಕುತೂಹಲ ಮೂಡಿಸಿದೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ತುಂಬಾ ಸಹಾಯ ಮಾಡಿದ್ದಾರೆ. ಗೆದ್ದ ಮೇಲೆ ಕೃತಜ್ಞತೆ ಹೇಳುವ ಕಾರಣದಿಂದ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದೇನೆ. ಗೆಲುವಿಗಾಗಿ ಯಾರ್ಯಾರು ಸಹಕರಿಸಿದ್ದಾರೋ ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದೇನೆ. ಬಿಜೆಪಿಯವರು ನನ್ನ ಬೆಂಬಲ ಕೇಳಿಲ್ಲ. ಧನ್ಯವಾದ ಹೇಳುವ ಕರ್ತವ್ಯ ನನ್ನದಾಗಿತ್ತು. ಅದಕ್ಕೆ ಬಂದಿದ್ದೇನೆ ಎಂದು ಹೇಳಿದರು.
ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಹಕಾರದ ಅಗತ್ಯವಿದೆ. ಹೀಗಾಗಿ, ಕೇಂದ್ರದ ಸಹಕಾರಕ್ಕಾಗಿ ಪ್ರಮುಖರ ಜತೆ ಚರ್ಚೆ ಮಾಡಿದ್ದೇನೆ. ಬಿಜೆಪಿಯವರಿಗೆ ನನ್ನ ಬೆಂಬಲ ಕೇಳುವ ಪರಿಸ್ಥಿತಿ ಇಲ್ಲ, ಅವರೇ 303 ಸಂಸದರಿದ್ದಾರೆ. ಬಿಜೆಪಿ ಸೇರ್ಪಡೆ ಸನ್ನಿವೇಶ ಇಲ್ಲ. ಅಂತಹ ಪರಿಸ್ಥಿತಿ ಬಂದರೆ ಕ್ಷೇತ್ರದ ಜನರ ಅಭಿಪ್ರಾಯ ಕೇಳುತ್ತೇನೆ ಎಂದು ತಿಳಿಸಿದರು.
ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಬೆಂಗಳೂರು ನಗರ ಬಿಜೆಪಿ ಅಧ್ಯಕ್ಷ ಪಿ.ಎನ್.ಸದಾಶಿವ, ಯುವಮೋರ್ಚಾದ ತಮ್ಮೇಶ ಗೌಡ ಮೊದಲಾದವರು ಉಪಸ್ಥಿತರಿದ್ದರು.