Advertisement

ಸುಮಲತಾ ಸ್ಪರ್ಧೆ: ಬದಲಾಗುವುದೇ ಜೆಡಿಎಸ್‌ ನಡೆ

07:28 AM Feb 13, 2019 | Team Udayavani |

ಮಂಡ್ಯ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರು ರಾಜಕೀಯಕ್ಕೆ ಬರುವುದಾದರೆ ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿರುವುದು ಸಹಜವಾಗಿ ಜೆಡಿಎಸ್‌ನಲ್ಲಿ ಆತಂಕ ಸೃಷ್ಟಿಸಿದ್ದು, ಇದು ಜೆಡಿಎಸ್‌ನ ಚುನಾವಣಾ ನಿಲುವನ್ನು ಬದಲಿಸುವುದೇ ಎನ್ನುವುದು ಪ್ರಶ್ನೆಯಾಗಿದೆ.

Advertisement

ಸುಮಲತಾ ತಮ್ಮ ರಾಜಕೀಯ ಅಧ್ಯಾಯ ಆರಂಭಿಸುವ ಮುನ್ನ ಆದಿ ಚುಂಚನಗಿರಿಯ ಶ್ರೀ ಕಾಲಭೈರವೇಶ್ವರ ಸ್ವಾಮಿ ದರ್ಶನ ಪಡೆಯಲು ಭೇಟಿ ನೀಡಿದ್ದ ವೇಳೆ ನಾನು ಚುನಾವಣೆಗೆ ಸ್ಪರ್ಧಿಸುವುದಾದರೆ ಅದು ಮಂಡ್ಯ ಕ್ಷೇತ್ರದಿಂದ ಮಾತ್ರ. ಅಲ್ಲದೆ, ಕಾಂಗ್ರೆಸ್‌ ಪಕ್ಷದಿಂದಲೇ ಅಖಾಡ ಪ್ರವೇಶಿಸುವುದಾಗಿ ಹೇಳಿರುವುದು ಜೆಡಿಎಸ್‌ ವರಿಷ್ಠರಿಗೆ ಆತಂಕ ಮತ್ತು ಆಘಾತ ಉಂಟು ಮಾಡಿದೆ.

ತೀವ್ರ ಸ್ವರೂಪದಲ್ಲಿ ಮುನ್ನೆಲೆಗೆ: ಅಂಬರೀಶ್‌ ಸಾವಿನ ನಂತರ ಸುಮಲತಾ ಅಂಬರೀಶ್‌ ರಾಜಕೀಯ ಪ್ರವೇಶ ಅಥವಾ ಚುನಾವಣೆ ಸ್ಪರ್ಧೆ ವಿಚಾರ ಇಷ್ಟೊಂದು ತೀವ್ರ ಸ್ವರೂಪದಲ್ಲಿ ಮುನ್ನೆಲೆಗೆ ಬರುತ್ತದೆ ಎಂದು ಯಾರೂ ಸಹ ಊಹಿಸಿರಲಿಲ್ಲ. ಅವರನ್ನು ಮಂಡ್ಯ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್‌ನವರೂ ಸಹ ಚಿಂತಿಸಿರಲಿಲ್ಲ ಹಾಗೂ ಸುಮಲತಾ ಅವರೊಂದಿಗೆ ಯಾವುದೇ ರಾಜಕೀಯ ಚರ್ಚೆಯನ್ನೂ ನಡೆಸಿರಲಿಲ್ಲ.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯೊಂದಿಗೆ ಲೋಕಸಭಾ ಚುನಾವಣೆ ಎದುರಿಸುವುದಕ್ಕೆ ಮೈತ್ರಿ ಪಕ್ಷಗಳು ಸಜ್ಜಾಗಿದ್ದ ಕಾರಣ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಯಾರೊಬ್ಬರೂ ಸ್ಪರ್ಧಿಸುವ ಧೈರ್ಯ ಮಾಡಿರಲಿಲ್ಲ. ಅಲ್ಲದೆ, ಮಂಡ್ಯ ಕ್ಷೇತ್ರ ಜೆಡಿಎಸ್‌ ಪಾಲಾಗುವುದು ನಿಶ್ಚಿತ ಎಂಬ ವಾತಾವರಣ ಸೃಷ್ಠಿಯಾಗಿತ್ತು. ಜಿಲ್ಲೆಯಲ್ಲಿ ಕಾಂಗ್ರೆಸ್‌ನ ದುರ್ಬಲ  ಪರಿಸ್ಥಿತಿಯನ್ನು ಪಕ್ಷಕ್ಕೆ ಅನುಕೂಲವಾಗುವಂತೆ ಬಳಸಿಕೊಳ್ಳಲು ಹಾಗೂ ಗೌಡರ ಕುಟುಂಬದ ಮತ್ತೂಂದು ಕುಡಿಗೆ ರಾಜಕೀಯ ಭವಿಷ್ಯ ಕಲ್ಪಿಸುವ ನೆಲೆಯಾಗಿ ಪರಿವರ್ತಿಸಿಕೊಳ್ಳುವುದಕ್ಕೆ ಜೆಡಿಎಸ್‌ ತಂತ್ರಗಾರಿಕೆ ರೂಪಿಸಿತ್ತು.

ನಿಖೀಲ್‌ ಪೂರ್ವ ಸಿದ್ಧತೆಗೆ ಅಡ್ಡಿ: ಜೆಡಿಎಸ್‌ ಭದ್ರಕೋಟೆಯಾಗಿರುವ ಹಾಗೂ ಚುನಾವಣೆಯಲ್ಲಿ ಗೆಲ್ಲಲು ಅತ್ಯಂತ ಸುರಕ್ಷಿತ ಕ್ಷೇತ್ರ ಎನಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖೀಲ್‌ ಕುಮಾರಸ್ವಾಮಿ ಹೆಸರನ್ನು ಮುಂಚೂಣಿಗೆ ತರುವ ಪ್ರಯತ್ನ ನಡೆಸಿತು. ಅಲ್ಲದೆ, ಚುನಾವಣೆಗೆ ಪೂರ್ವ ಸಿದ್ಧತೆಗೆ ಚಾಲನೆಯನ್ನೂ ನೀಡಲಾಗಿತ್ತು.

Advertisement

ಜೆಡಿಎಸ್‌ನ ರಾಜಕೀಯ ಅಸ್ತ್ರಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಸುಮಲತಾ ಹೆಸರನ್ನು ಚಲಾವಣೆಗೆ ತರುವುದರೊಂದಿಗೆ ಜೆಡಿಎಸ್‌ ವಿರುದ್ಧ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಿತು. ಅಂಬರೀಶ್‌ ಸಾವಿನ ಅನುಕಂಪವನ್ನೇ ಮುಂದಿಟ್ಟುಕೊಂಡು ಜನರ ಮನಸ್ಸನ್ನು ಗೆಲ್ಲುವುದರೊಂದಿಗೆ ಮತ್ತೆ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಅಸ್ತಿತ್ವ ಉಳಿಸಿಕೊಳ್ಳುವುದು ಈ ತಂತ್ರಗಾರಿಕೆಯ ಒಂದು ಭಾಗವಾದರೆ, ದೇವೇಗೌಡರ ಕುಟುಂಬದ ಮೂರನೇ ತಲೆಮಾರು ಜಿಲ್ಲೆಯೊಳಗೆ ಬೇರು ಬಿಡದಂತೆ ಮಾಡುವುದು ಇದರ ಮತ್ತೂಂದು ಭಾಗವೂ ಆಗಿದೆ. 

ಜೆಡಿಎಸ್‌ಗೆ ತಲೆನೋವು: ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು ತಾವು ಪ್ರತಿನಿಧಿಸುತ್ತಿದ್ದ ಹಾಸನ ಲೋಕಸಭಾ ಕ್ಷೇತ್ರವನ್ನು ಹೆಚ್‌.ಡಿ.ರೇವಣ್ಣ ಪುತ್ರ ಪ್ರಜ್ವಲ್‌ ರೇವಣ್ಣ ಅವರಿಗೆ ಬಿಟ್ಟುಕೊಟ್ಟು ಬೆಂಗಳೂರು ಉತ್ತರ ಕ್ಷೇತ್ರದತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದೀಗ ಪಕ್ಷ ಗೆಲ್ಲುವುದಕ್ಕೆ ಅವಕಾಶವಿರುವ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖೀಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವುದಕ್ಕೆ ದೇವೇಗೌಡರ ಕುಟುಂಬ ಆಲೋಚನೆ ನಡೆಸಿತ್ತು. ಇದೇ ಸಮಯಕ್ಕೆ ಕಾಂಗ್ರೆಸ್‌ ಪಕ್ಷದಿಂದ ಸುಮಲತಾ ಅಂಬರೀಶ್‌ ಸ್ಪರ್ಧಿಸುವ ವದಂತಿ ಕ್ಷಿಪ್ರಗತಿಯಲ್ಲಿ ಹರಡುತ್ತಿರುವುದು ಜೆಡಿಎಸ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 

ಸುಮಲತಾ ಹೆಸರು ಅತಿ ವೇಗವಾಗಿ ಪ್ರಚಾರಕ್ಕೆ ಬರುತ್ತಿರುವುದನ್ನು ಸಹಿಸಲಾಗದೆ ಜೆಡಿಎಸ್‌ ನಾಯಕರು ಹಾಗೂ ಶಾಸಕರು ಅಂಬಿ ಕುಟುಂಬವನ್ನು ರಾಜಕೀಯದಿಂದ ದೂರ ಇಡುವ ಉದ್ದೇಶದಿಂದ ಆಡಿದ ಆವೇಶದ ಮಾತುಗಳೂ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ. ಜಿಲ್ಲೆಯ ಜನಮಾನಸದೊಳಗೆ ಜೆಡಿಎಸ್‌ ವಿರುದ್ಧ ಅಸಮಾಧಾನಕ್ಕೂ ಕಾರಣವಾಗಿದೆ. 

ಜೆಡಿಎಸ್‌ ನಾಯಕರ ಮೌನ: ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಸುಮಲತಾ ಸ್ಪರ್ಧಿಸುವ ವಿಚಾರಕ್ಕೆ ಸಿಗುತ್ತಿರುವಷ್ಟು ಪ್ರಾಧಾನ್ಯತೆ, ಜನಮನ್ನಣೆ ನಿಖೀಲ್‌ ಕುಮಾರಸ್ವಾಮಿ ಸ್ಪರ್ಧೆಗೆ ಸಿಗದಂತಾಗಿದೆ. ಅಲ್ಲದೆ, ಸ್ಥಳೀಯ ಜೆಡಿಎಸ್‌ ನಾಯಕರೂ ಸಹ ಮೈತ್ರಿ ಪಕ್ಷಗಳ ಸೀಟು ಹಂಚಿಕೆಯಲ್ಲಿ ಮಂಡ್ಯ ಕ್ಷೇತ್ರ ಜೆಡಿಎಸ್‌ ವಶವಾಗಲಿದೆ ಎನ್ನುತ್ತಿದ್ದಾರೆಯೇ ವಿನಃ ನಿಖೀಲ್‌ ಕುಮಾರಸ್ವಾಮಿ ಹೆಸರನ್ನು ಮುನ್ನೆಲೆಗೆ ತರುವ ಪ್ರಯತ್ನವನ್ನೇ ಕೈಬಿಟ್ಟಿದ್ದಾರೆ.

ಅವರ್ಯಾರೂ ಸಹ ನಿಖೀಲ್‌ ಕುಮಾರಸ್ವಾಮಿಯೇ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಧೈರ್ಯದಿಂದ ಹೇಳುವ ಮನಸ್ಸು ಮಾಡದೇ ಮೌನ ವಹಿಸಿದ್ದಾರೆ. ಇದು ನಿಖೀಲ್‌ ಕುಮಾರಸ್ವಾಮಿ ಆಗಮನದ ಹಿಂದೆ ಜೆಡಿಎಸ್‌ ನಾಯಕರೊಳಗಿರುವ ಆಂತರಿಕ ಅತೃಪ್ತಿಗೆ ಸಾಕ್ಷಿ ಎಂಬಂತೆ ಕಂಡುಬರುತ್ತಿದೆ.

ಸುಮಲತಾ ಅಂಬರೀಶ್‌ ಮಂಡ್ಯ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬಂದ ನಂತರವೂ ಜೆಡಿಎಸ್‌ನೊಳಗೆ ನಿಖೀಲ್‌ ಕುಮಾರಸ್ವಾಮಿ ಹೆಸರಿಗೆ ಮತ್ತಷ್ಟು ಶಕ್ತಿ ತುಂಬುವ, ಅಭ್ಯರ್ಥಿಯಾಗಿ ಜನಮಾನಸದಲ್ಲಿ ಬಿಂಬಿಸುವ ಪ್ರಯತ್ನಕ್ಕೂ ಯಾರೂ ಸಹ ಮುಂದಾಗುತ್ತಿಲ್ಲ. ಪ್ರಸ್ತುತ ರಾಜಕೀಯ ಪ್ರತಿಕೂಲ ಸ್ಥಿತಿಯಲ್ಲಿ ನಿಖೀಲ್‌ ಕುಮಾರಸ್ವಾಮಿ ಅವರನ್ನು ಪಕ್ಷದಿಂದ ಕಣಕ್ಕಿಳಿಸಬೇಕೋ, ಬೇಡವೋ ಎಂಬ ಬಗ್ಗೆ ವರಿಷ್ಠರೇ ಚಿಂತೆಗೀಡಾಗಿದ್ದಾರೆ. 

ದೂರವಾಗುತ್ತಿದ್ದಾರೆಯೇ ನಿಖೀಲ್‌: ಮಂಡ್ಯ ಜಿಲ್ಲೆಯೊಳಗೆ ಆಗಾಗ ಕಾಣಿಸಿಕೊಳ್ಳುತ್ತಾ ಮುಂದಿನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಾನೇ ಎಂಬುದನ್ನು ಬಿಂಬಿಸಿಕೊಳ್ಳುತ್ತಿದ್ದ ನಿಖೀಲ್‌ಕುಮಾರಸ್ವಾಮಿ ಕೂಡ ಸುಮಲತಾ ಹೆಸರು ಕ್ಷಿಪ್ರಗತಿಯಲ್ಲಿ ಜನಮಾನಸದಲ್ಲಿ ಹರಡಿದ ಬೆನ್ನಲ್ಲೇ ಜಿಲ್ಲೆಯಿಂದ ದೂರ ಉಳಿದಿದ್ದಾರೆ. ಇದೂ ಸಹ ಅವರ ಸ್ಪರ್ಧೆ ಬಗ್ಗೆ ಜನರಲ್ಲಿ ಅನುಮಾನಗಳನ್ನು ಹೆಚ್ಚುವಂತೆ ಮಾಡಿದೆ. 

ಅಂಬರೀಶ್‌ ಬದುಕಿದ್ದ ಸಮಯದಲ್ಲಿ ಅವರು ಕಾಂಗ್ರೆಸ್‌ ಪಕ್ಷದೊಳಗಿದ್ದರೂ ಜೆಡಿಎಸ್‌ ವರಿಷ್ಠರು ಹಾಗೂ ಸ್ಥಳೀಯ ನಾಯಕರೊಂದಿಗೆ ಆತ್ಮೀಯ ಒಡನಾಟವನ್ನಿಟ್ಟುಕೊಂಡಿದ್ದರು. ಅಂಬರೀಶ್‌ ಮೂಲಕವೇ ಜಿಲ್ಲೆಯಲ್ಲಿ ಕಾಂಗ್ರೆಸ್‌ನ್ನು ನಿಯಂತ್ರಣದಲ್ಲಿಡುವಲ್ಲಿ ಜೆಡಿಎಸ್‌ ವರಿಷ್ಠರು ಯಶಸ್ವಿಯಾಗಿದ್ದು ರಹಸ್ಯವಾಗೇನೂ ಉಳಿದಿಲ್ಲ. 

ಅಂಬರೀಶ್‌ ನಿಧನದ ಬಳಿಕ ಅಂಬಿ ಕುಟುಂಬವನ್ನು ರಾಜಕಾರಣದಿಂದ ದೂರವಿಡುವ ಪ್ರಯತ್ನಕ್ಕಿಳಿದು ಮಂಡ್ಯ ಕ್ಷೇತ್ರಕ್ಕೆ ಸುಮಲತಾ ಕೊಡುಗೆ ಏನು ಎಂದು ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದು, ವಿಧಾನಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡರು ಸುಮಲತಾ ಮಂಡ್ಯ ಗೌಡ್ತಿ ಅಲ್ಲ, ಆಂಧ್ರ ಗೌಡ್ತಿ ಎಂಬ ವಿವಾದಾತ್ಮಕ ಹೇಳಿಕೆಗಳು ಜೆಡಿಎಸ್‌ನೊಳಗೆ ರಾಜಕೀಯ ತಲ್ಲಣ ಸೃಷ್ಟಿಸಿವೆ. ಇದು ನಿಖೀಲ್‌ ಸ್ಪರ್ಧೆಯ ಪ್ರಯತ್ನದ ಮೇಲೆ ಪರಿಣಾಮ ಬೀರಿದೆ.

* ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next