Advertisement

ಸಮಸ್ಯೆಗಳ ಸಮಗ್ರ ಅಧ್ಯಯನ ಅಗತ್ಯ: ಸುಮಲತಾ ಅಂಬರೀಶ್‌

12:23 PM Apr 14, 2019 | Team Udayavani |

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕುರುಕ್ಷೇತ್ರದೊಳಗೆ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ನಿಖೀಲ್‌ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಕದನ ಕಲಿಗಳಂತೆ ಗೆಲುವಿಗೆ ಹೋರಾಟ ನಡೆಸುತ್ತಿದ್ದಾರೆ. ಅವರ ರಾಜಕೀಯ ಪ್ರವೇಶದ ಉದ್ದೇಶ, ಗುರಿ, ಪ್ರಚಾರದ ಅನುಭವಗಳನ್ನು ಉದಯವಾಣಿಯೊಂದಿಗೆ ಹಂಚಿಕೊಂಡಿದ್ದಾರೆ.

Advertisement

*ಜಿಲ್ಲೆಯ ಸಮಸ್ಯೆಗಳ ಬಗ್ಗೆ ನಿಮಗೆ ಅರಿವಿದೆಯೇ?
ಸುಮಲತಾ: ಜಿಲ್ಲೆಯ ಅಭಿವೃದ್ಧಿ ದೊಡ್ಡ ಮಾತು. ಒಳ್ಳೆಯ ಉದ್ದೇಶ ಇಟ್ಟುಕೊಂಡು ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ ಜನಾಭಿಪ್ರಾಯ ಸಂಗ್ರಹಿಸಬೇಕು. ಅದಕ್ಕೆ ಬೆಲೆ ಕೊಡಬೇಕು. ಫ್ಲೈಓವರ್‌, ಸ್ಟೀಲ್‌ ಬ್ರಿಡ್ಜ್ ಮಾಡುವುದು ನಮ್ಮ ಉದ್ದೇಶವಾಗಿರಬಹುದು. ಆದರೆ, ತಳಮಟ್ಟಕ್ಕೆ ಹೋಗಿ ನೋಡಿದಾಗ ಸಮಸ್ಯೆಗಳೇ ಬೇರೆಯಾಗಿರುತ್ತದೆ. ಕುಡಿಯುವ ನೀರು, ಕೃಷಿಗೆ ನೀರು, ರೈತರ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಇವೆಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡು ಅಧ್ಯಯನ ಮಾಡಬೇಕು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜನಾಭಿಪ್ರಾಯ ತಿಳಿದುಕೊಂಡು ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಈಗ ಕಾಡುತ್ತಿರುವ ಸಮಸ್ಯೆಗಳೇನು. ಅದಕ್ಕೆ ಯಾವ ರೀತಿ ಪರಿಹಾರ ನಿರೀಕ್ಷಿಸುತ್ತಾರೆ. ಅದನ್ನು ತಿಳಿದು ಮುಂದಿನ ಹೆಜ್ಜೆ ಇಡುತ್ತೇನೆ.

* ಪ್ರವಾಸ ಕಾಲದಲ್ಲಿ ಕಂಡುಬಂದ ಸಮಸ್ಯೆಗಳೇನು?
ಸುಮಲತಾ: ಚುನಾವಣೆ ಸಮಯದಲ್ಲಿ ಉದ್ವೇಗ ಇರುತ್ತದೆ. ಈ ಸಮಯದಲ್ಲಿ ಅವರ ಸಮಸ್ಯೆಗಳ ಸಮಗ್ರ ಚಿತ್ರಣ ಸಿಗುವುದಿಲ್ಲ. ಕಬ್ಬಿನ ಸಮಸ್ಯೆ, ಮಹಿಳೆಯರು, ರಸ್ತೆಯ ಅಧ್ವಾನ ಸ್ಥಿತಿ. ಇದನ್ನೆಲ್ಲಾ ಗಣನೆಗೆ ತೆಗೆದು ಕೊಳ್ಳಬೇಕಾಗುತ್ತದೆ. ಸಂಸದರಾಗಿ ನಮಗಿರುವ ನಿರ್ದಿಷ್ಟ ಚೌಕಟ್ಟಿನಲ್ಲಿ ಸಂಸತ್‌ನಲ್ಲಿ ಹೋರಾಟ ನಡೆಸಬೇಕು, ಜನರ ಧ್ವನಿಯಾಗುವ ಆಶಯ ನನ್ನದು. ಅದಕ್ಕೆ ನಾನು ಸಿದ್ಧಳಿದ್ದೇನೆ.

* ಚುನಾವಣೆಯಲ್ಲಿ ಹಣದ ಹೊಳೆ ಸಾಮಾನ್ಯ? ಇದನ್ನು ಹೇಗೆ ಎದುರಿಸುತ್ತೀರಿ?
ಸುಮಲತಾ: ಈ ಚುನಾವಣೆಯಲ್ಲಿ ಜನರಿಗೆ ಒಂದು ಸಂದೇಶ ರವಾನಿಸಲು ಪ್ರಯತ್ನಿಸುತ್ತಿದ್ದೇವೆ. ಚುನಾವಣೆಯಲ್ಲಿ ಸಿಗುವ ಹಣ ತಾತ್ಕಾಲಿಕ. ಅದು ಒಂದು ವಾರ ಅಥವಾ ಒಂದು ತಿಂಗಳೊಳಗೆ ಖರ್ಚಾಗುವಂತಹದ್ದು. ಅದರಿಂದ ಯಾವುದೇ ಲಾಭವಾಗುವುದಿಲ್ಲ. ಹಣದ ಹರಿವಿನಿಂದ ಭ್ರಷ್ಟಾಚಾರ ಹೆಚ್ಚಾಗುತ್ತದೆ. ಅಭಿವೃದ್ಧಿ ಕೆಲಸಗಳು ಆಗುವುದಿಲ್ಲ. ಈ ಸಂದೇಶವನ್ನು ಜನರಿಗೆ ಮುಟ್ಟಿಸಬೇಕಿದೆ. ಮಂಡ್ಯಕ್ಕೆ ಸಂಬಂಧಿಸಿದಂತೆ ಈ ಬಾರಿ ಬೇರೆಯದ್ದೇ ಆದಂತಹ ಚುನಾವಣೆಯನ್ನು ನೋಡಬಹುದು. ಹಣಕ್ಕೆ ಆಗುವ ಚುನಾವಣೆಯಲ್ಲ ಅನ್ನೋದರಲ್ಲಿ ನನಗೆ ಪೂರ್ಣ ವಿಶ್ವಾಸವಿದೆ.

* ಜಿದ್ದಾಜಿದ್ದಿನ ಚುನಾವಣೆಯಲ್ಲಿ ಜೆಡಿಎಸ್‌ ವೋಟುಗಳು ನಿಮಗೆ ಬರಲಿವೆಯೇ?
ಸುಮಲತಾ: ಖಂಡಿತಾ ಬರಲಿದೆ. ಬೇಕಾದಷ್ಟು ಕಡೆ ಜೆಡಿಎಸ್‌ ಬೆಂಬಲಿಗರೇ ನನ್ನ ಬಳಿ ಬಂದು ಹೇಳುತ್ತಿದ್ದಾರೆ. ಈ ಬಾರಿ ನಿಮ್ಮ ಪರವಾಗಿ ಚುನಾವಣೆ ನಡೆಸುತ್ತೇವೆ. ಅಂಬರೀಶಣ್ಣನ ಮೇಲೆ ಅಭಿಮಾನವಿದೆ. ನಿಮ್ಮ ಪರವಾಗಿ ಚುನಾವಣೆ ಮಾಡುತ್ತೇವೆ. ಉಳಿದಂತೆ ಕಾಂಗ್ರೆಸ್‌ ಕಾರ್ಯಕರ್ತರು ಬಹಿರಂಗವಾಗಿ ನನ್ನ ಬೆಂಬಲಕ್ಕೆ ನಿಂತಿದೆ. ಬಿಜೆಪಿ, ರೈತಸಂಘದ ಬೆಂಬಲವೂ ಸಿಕ್ಕಿದೆ. ಇದನ್ನು ನೋಡಿದಾಗ ಎಲ್ಲಾ ಪಕ್ಷದವರೂ ನನ್ನ ಪರವಾಗಿದ್ದಾರೆ ಅನ್ನೋ ನಂಬಿಕೆ ಇದೆ.

Advertisement

* ಬಿಜೆಪಿ ಬೆಂಬಲದಿಂದ ಅಲ್ಪಸಂಖ್ಯಾತ ಮತಗಳು ಕೈತಪ್ಪಿ ಹೋಗುವ ಭಯವಿದೆಯೇ?
ಸುಮಲತಾ: ಖಂಡಿತಾ ಇಲ್ಲ, ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದೇನೆ. ಇದೊಂದು ಕಠಿಣವಾದ ಚಾಲೆಂಜ್‌. ಅದನ್ನು ನಾನು ಎದುರಿಸುತ್ತಿದ್ದೇನೆ. ಇದು ಅಲ್ಪಸಂಖ್ಯಾತರು ಅರ್ಥಮಾಡಿ ಕೊಂಡಿದ್ದಾರೆ ಎಂದು ತಿಳಿದಿದ್ದೇನೆ. ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವ ಉದ್ದೇಶದಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದೇನೆ.

Advertisement

Udayavani is now on Telegram. Click here to join our channel and stay updated with the latest news.

Next