ಲಂಡನ್ : ಇತ್ತೀಚಿನ ಕೋವಿಡ್ ಮಹಾ ಮಾರಿಯ ಸಂಕಷ್ಟದ ನಡುವೆಯೂ ದೂರದ ದೇಶದಲ್ಲಿ ನೆಲೆಸಿರುವ ಎನ್.ಆರ್.ಐ ಕನ್ನಡಿಗರಾದ ಕೌನ್ಸಿಲರ್ ರಾಜೀವ ಮೇತ್ರಿ (ಲಂಡನ್) ಹಾಗೂ ಈಶ್ವರ್ ಶೆಗುಣಸಿ(ಐರ್ಲೆಂಡ್ ) ಇವರು ಸ್ಥಾಪಿಸಿರುವ “ಅನಿವಾಸಿ ಭಾರತೀಯ ಕನ್ನಡ ಸಂಘ”ದ ಮುಖಾಂತರ ಅಂತರ್ ಜಾಲದ ಝೋಮ್ ವೇದಿಕೆಯ ಮುಖಾಂತರ ಪ್ರತಿವಾರ ಕನ್ನಡದ ಹಲವಾರು ಆನ್ ಲೈನ್ ಸಂವಾದ ಕಾರ್ಯಕ್ರಮ ಆಯೋಜಿಸಿ ನಡೆಸಿಕೊಡುತ್ತಿದ್ದರೆ ಈ ವಾರದ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ಅಭಿನೇತ್ರಿ ಹಾಗೂ ಸಂಸದೆ ಶ್ರೀಮತಿ ಸುಮಲತಾ ಅಂಬರೀಷ್ ರವರು ಭಾಗವಹಿಸಿ ಸುಮಾರು 90 ನಿಮಿಷಗಳ ಕಾಲ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಸುಮಾರು 25 ದೇಶಗಳ ಕನ್ನಡಿಗರನ್ನ ಉದ್ದೇಶಿಸಿ ಕನ್ನಡ ಚಿತ್ರರಂಗದ ಅನೇಕ ನೆನಪುಗಳನ್ನು ಮೆಲಕು ಹಾಕಿ ಅವರು ಚಿತ್ರ ರಂಗದಲ್ಲಿ ನಡೆದುಬಂದ ದಾರಿ, ಹೋರಾಟ ಹಾಗೂ ಅಂಬರೀಷ್ ಕುರಿತು ಮಾತನಾಡಿದರು. ಅವರ ರಾಜಕೀಯ ಕ್ಷೇತ್ರದ ಅಡೆತಡೆಗಳು, ಎದುರಿಸಿದ ಸಂಕಷ್ಟಗಳು, ಈ ಸಂದರ್ಭದಲ್ಲಿ ಕರ್ನಾಟಕ ಸೇರಿದಂತೆ ಹೊರನಾಡಿನ ಕನ್ನಡಿಗರು ತಮಗೆ ಸ್ಪಂದಿಸಿ ಹೆಗಲು ಕೊಟ್ಟು ಸಹಕರಿಸಿದ ರೀತಿ ನೆನೆದು ಕನ್ನಡದ ನೆಲ ಹಾಗೂ ಎಲ್ಲಾ ಕನ್ನಡಿಗರಿಗೂ ಋಣಿಯಾಗಿ ಯಾವತ್ತು ಹೋರಾಡುತ್ತೇನೆ ಎಂದರು.
ಇದನ್ನೂ ಓದಿ :ಟ್ರಂಪ್ ಡಿಸ್ಚಾರ್ಜ್; ಶ್ವೇತ ಭವನದಲ್ಲಿ ಮಾಸ್ಕ್ ತೆಗೆದು ಹಾಕಿ need not fear ಎಂದರು
ಇತ್ತೀಚಿಗೆ ಸಂಸತ್ತಿನಲ್ಲಿ ಕನ್ನಡದ ಬಗ್ಗೆ ಧ್ವನಿ ಎತ್ತಿ ಸಮರ್ಥವಾಗಿ ಮಾತನಾಡಿದ್ದಕ್ಕಾಗಿ ಎನ್.ಆರ್.ಐ ಕನ್ನಡ ಸಂಘದ ಸದಸ್ಯರು ಸುಮಲತಾ ಅಂಬರೀಷ್ ಅವರನ್ನು ಅಭಿನಂದಿಸಿ ಕನ್ನಡದ ವಿಷಯವಾಗಿ ತಮ್ಮ ಜೊತೆ ಯಾವತ್ತೂ ಇರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಪುತ್ರ ಅಭಿಷೇಕ್ ಅಂಬರೀಷ್ ಇವರಿಗೆ ಅನೇಕ ದೇಶಗಳ ಎನ್.ಆರ್.ಐ ಕನ್ನಡ ಬಳಗದ ಸದಸ್ಯರು ಹುಟ್ಟುಹಬ್ಬದ ಶುಭ ಕೋರಿದರು,
ಇಂಗ್ಲೆಂಡ್, ಅಮೇರಿಕ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ದುಬೈ, ಕತಾರ್, ಸೌದಿ ಅರೇಬಿಯಾ, ಓಮನ್, ಕುವೈತ್, ಆಫ್ರಿಕಾ, ಐರ್ಲೆಂಡ್ ಕೆನಡಾ,ಯುರೋಪ್ ಸೇರಿದಂತೆ ಸುಮಾರು 25 ದೇಶಗಳ ಕನ್ನಡ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರತಿ ಶನಿವಾರ ಹಾಗೂ ಭಾನುವಾರ ಇಂತಹ ಕಾರ್ಯಕ್ರಮ ನಡೆಯುತ್ತಿದ್ದು ಕನ್ನಡದ ಹೆಸರಾಂತ ಕವಿಗಳು, ನಗೆ ಹರಟೆಗಾರರು, ಶರಣರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂವಾದ ನಡೆಸಿ ಕನ್ನಡದ ಕಂಪನ್ನ ಸೋಸಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಗಣ್ಯರು ಹಾಗೂ ಸಾಧಕರಾದ ಮುಖ್ಯಮಂತ್ರಿ ಚಂದ್ರು, ಸಾಯಿಕುಮಾರ್, ದೇವರಾಜ್, ವಿಜಯ್ ರಾಘವೇಂದ್ರ, ಪ್ರಜ್ವಲ್ ದೇವರಾಜ್, ರಾಜು ತಾಳಿಕೋಟೆ, ಮುಂತಾದವರು ಭಾಗವಹಿಸಿ ಚಿತ್ರರಂಗದ ತಮ್ಮ ಭಾವನೆಗಳನ್ನ ಹಂಚಿಕೊಂಡಿದ್ದಾರೆ, ಮುಂಬರುವ ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಉಮೇಶ್ ಬಣಕಾರ್ ಹಾಗೂ ಕನ್ನಡ ಚಿತ್ರರಂಗದ ಅನೇಕ ತಾರೆಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ, ಐ ಪಿ ಎಲ್ ಪಂದ್ಯಗಳ ನಂತರ ಟೆನ್ನಿಸ್, ಬ್ಯಾಡ್ಮಿಂಟನ್ ಹಾಗೂ ಕ್ರಿಕೆಟ್ ತಾರೆಗಳು ಹಾಗೂ ಕ್ರೀಡಾ ಕ್ಷೇತ್ರದ ಸಾಧಕರ ಜೊತೆ ಸಂವಾದ ಕಾರ್ಯಕ್ರಮ ಪ್ರಪಂಚದ ಕನ್ನಡಿಗರ ಕಿವಿಗೆ ತಲುಪಲಿದೆ. ಎಂದು ಎನ್.ಆರ್.ಐ ಕನ್ನಡ ಬಳಗದ ಸಂಸ್ಥಾಪಕರಾದ ರಾಜೀವ್ ಮೇತ್ರಿ(ಇಂಗ್ಲೆಂಡ್ ), ಹಾಗೂ ಸಂಸ್ಥಾಪಕ ಈಶ್ವರ್ ಶೆಗುಣಸಿ(ಐರ್ಲೆಂಡ್ ) ತಿಳಿಸಿದರು.