ಬೀದರ್: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮತದಾನ ಮುಕ್ತಾಯಗೊಂಡಿದ್ದರೂ ಸೋಲು, ಗೆಲುವಿನ ಲೆಕ್ಕಾಚಾರ, ಚರ್ಚೆಗಳಿಗೇನೂ ಬರವಿಲ್ಲ. ದೇಶದಲ್ಲಿ ಐದನೇ ಹಂತದ ಮತದಾನ ಆಗುತ್ತಿದೆ. ಒಟ್ಟಾರೆ ಫಲಿತಾಂಶ ಪ್ರಕಟವಾಗಲು ಇನ್ನೂ 17 ದಿನಗಳು ಬಾಕಿ ಇವೆ.
ಈ ನಡುವೆ ರಾಜ್ಯದಲ್ಲಿ ಪ್ರಮುಖ ಅಭ್ಯರ್ಥಿಗಳ ಸೋಲು ಗೆಲುವುಗಳ ಕುರಿತಾದ ಲೆಕ್ಕಾಚಾರ ದಿನಕ್ಕೊಂದು ಚರ್ಚೆಯ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ನಮ್ಮಲ್ಲಿ ಈ ಬಾರಿ ಗಮನ ಸೆಳೆದಿದ್ದು ಮಂಡ್ಯ ಲೋಕಸಭಾ ಕ್ಷೇತ್ರದ ಸ್ಪರ್ಧೆ. ಒಂದೆಡೆ ಸ್ವತಃ ಮುಖ್ಯಮಂತ್ರಿಯವರ ಪುತ್ರನೇ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೆ ಅವರ ಎದುರಾಳಿಯಾಗಿ ಸುಮಲತಾ ಅಂಬರೀಷ್ ಅವರು ಸ್ಪರ್ಧಿಸಿದ್ದರು.
ಇದೀಗ ಇಲ್ಲಿ ಗೆಲುವು ಯಾರ ಪಾಲಿಗೆ ಒದಗಬಹುದು ಎಂಬ ಬಿಸಿ ಬಿಸಿ ಚರ್ಚೆ ರಾಜ್ಯಾದ್ಯಾಂತ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ
ಇಲ್ಲೊಬ್ಬರು ಸ್ವಾಮೀಜಿ ಮಂಡ್ಯ ಅಭ್ಯರ್ಥಿ ಗೆಲುವಿನ ಕುರಿತಾಗಿ ಭವಿಷ್ಯ ನುಡಿದಿದ್ದಾರೆ. ಅವರ ಪ್ರಕಾರ ಈ ಬಾರಿ ಸುಮಲತಾ ಅವರು ಗೆಲ್ಲಲಿದ್ದಾರಂತೆ. ಮಾತ್ರವಲ್ಲದೇ ಗೆದ್ದು ದೆಹಲಿಗೆ ಹೋಗುವ ಸುಮಲತಾ ಅಲ್ಲಿ ಕೇಂದ್ರ ಮಂತ್ರಿಯೂ ಆಗಲಿದ್ದಾರಂತೆ.
ಈ ರೀತಿಯ ಭವಿಷ್ಯವನ್ನು ನುಡಿದಿರುವವರು
ಬೀದರದ ಬಸವಕಲ್ಯಾಣದ ಬಸವಧರ್ಮ ಪ್ರಚಾರಕ ಬಸವಾನಂದ ಸ್ವಾಮಿ ವಿಭೂತಿಮಠ ಅವರು. ಸುಮಲತಾ ಅವರದ್ದು ಮಾತೃ ಹೃದಯವಾಗಿದ್ದು, ಈಗಾಗಲೇ ಸುಮಲತಾ ಅವರು ತಮ್ಮ ನಡೆ-ನುಡಿಗಳಿಂದ ಮಂಡ್ಯ ಜನರ ಮನಸ್ಸನ್ನು ಗೆದ್ದಿದ್ದಾರೆ, ಮಾತ್ರವಲ್ಲದೇ ಈ ಬಾರಿಯ ಚುನಾವಣೆಯಲ್ಲೂ ಗೆಲುವು ಅವರದ್ದೇ ಆಗಲಿದೆ ಎಂದು ಬಸವಾನಂದ ಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಇನ್ನೊಂದು ಅಚ್ಚರಿಯ ಹೇಳಿಕೆಯಲ್ಲಿ ಬಸವಾನಂದ ಸ್ವಾಮಿ ಅವರು
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮತ್ತೂಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದೂ ಭವಿಷ್ಯ ನುಡಿದಿದ್ದಾರೆ. ಅಂದ ಹಾಗೆ ಸುಮಲತಾ ಅವರು ಕೇಂದ್ರ ಸಚಿವೆ ಆಗಲಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ಅಂತೆ!