Advertisement

ಅವರ ಸಮಾಧಿ ಮೇಲೆ ತಮ್ಮ ಮಗನ ರಾಜಕೀಯ ಬುನಾದಿ ನಿರ್ಮಿಸಲು ಹೊರಟಿದ್ದಾರೆ

09:42 AM Apr 17, 2019 | Hari Prasad |

ಮಂಡ್ಯ: ಬಹಿರಂಗ ಪ್ರಚಾರದ ಅಂತಿಮ ದಿನವಾದ ಇಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರು ನಗರದ ಸಿಲ್ವರ್‌ ಜ್ಯುಬಲಿ ಪಾರ್ಕ್‌ನಲ್ಲಿ ಬಹಿರಂಗ ಪ್ರಚಾರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಅವರು ತಮ್ಮ ಭಾಷಣದಲ್ಲಿ ಹೇಳಿದ್ದಿಷ್ಟು…

Advertisement

ಸ್ವಾಭಿಮಾನದ ಸಮ್ಮಿಲನದ ದಿನ ಸ್ವಾಭಿಮಾನದ ಪ್ರತೀಕವಾಗಬೇಕು. ನಾಲ್ಕುವಾರದ ಹಿಂದೆ ಇದೇ ವೇದಿಕೆಯಲ್ಲಿ ನಿಂತು ನಿಮ್ಮನ್ನು ಮಾತನಾಡಿಸಿದ್ದೆ. ಈ ನಾಲ್ಕುವಾರಗಳಲ್ಲಿ ನಾನು ನೋಡಿದ್ದನ್ನು ಇವತ್ತು ನಿಮ್ಮ ಜೊತೆ ಹಂಚಿಕೊಳ್ತೇನೆ. ಈ ಸಮಯದಲ್ಲಿ ನಾನು ಮಂಡ್ಯದ ಜನರಲ್ಲಿ ದೇವರನ್ನು ನೋಡಿದೆ. ನನ್ನ ಅಂಬರೀಷ್‌ ಎಲ್ಲೂ ಹೋಗಿಲ್ಲ ನೀವೆ ಉಳಿಸಿಕೊಂಡಿದ್ದೀರಾ ಎಂದು ಅನ್ನಿಸುತ್ತಿದೆ.

ಈ ನಾಲ್ಕು ವಾರಗಳಲ್ಲಿ ರಾಜಕಾರಣಿಗಳಲ್ಲಿ ರಾಕ್ಷಸತ್ವವನ್ನು ನೋಡಿದೆ. ನಿಜವಾಗಲೂ ಬೇಜಾರಾಗುತ್ತೆ. ಒಂದೇ ದಿನದಲ್ಲಿ ತೆಗೆದುಕೊಂಡಿರುವ ತೀರ್ಮಾನ ಇದಲ್ಲ. ಬಹಳಷ್ಟು ಯೋಚನೆ ಮಾಡಿ ಈ ನಿರ್ಧಾರಕ್ಕೆ ಬಂದೆ. ಒಂದಷ್ಟು ಸ್ನೇಹ ಸಂಬಂಧಗಳು ಹಾಳಾಗಬಹುದು ಎಂದು ಗೊತ್ತಿತ್ತು. ನಾನು ಮೊದಲನೇ ಹೆಜ್ಜೆ ಹಾಕಿದಾಗ ಅದು ಒಂಟಿ ಹೋರಾಟ, ಆದರೆ ಇವತ್ತು ನಾನು ಒಂಟಿಯಲ್ಲ. ಇವತ್ತು ನನ್ನ ಜೊತೆ ನಿಂತಿರುವ ಕಾಂಗ್ರೆಸ್‌ ಕಾರ್ಯಕರ್ತರಿಗೆ ನಾನು ಆಭಾರಿಯಾಗಿದ್ದೇನೆ. ಪಕ್ಷದಿಂದ ಉಚ್ಛಾಟನೆಗೊಂಡರೂ ಸ್ವಾಭಿಮಾನಕ್ಕಾಗಿ ನನ್ನ ಜೊತೆ ಅವರೆಲ್ಲಾ ನಿಂತಿದ್ದಾರೆ. ಅವರ ಜೊತೆ ನಾನು ಯಾವತ್ತೂ ಇರ್ತೇನೆ.

ಪ್ರಚಾರ ಸಂದರ್ಭದಲ್ಲಿ ರೈತರ ಸಂಕಷ್ಟವನ್ನು ನೋಡಿದೆ. ಸುಳ್ಳು ಭರವಸೆ ಕೊಟ್ಟು ಓಟು ಪಡೆದುಕೊಂಡು ಹೋದವರು ಜನರ ಕಷ್ಟಗಳಿಗೆ ಸ್ಪಂದಿಸಿಲ್ಲ. ಅಧ್ವಾನಗೊಂಡಿರುವ ರಸ್ತೆಗಳನ್ನು ನೋಡಿದೆ, ಬತ್ತಿ ಹೋಗಿರುವ ಕೆರೆಗಳನ್ನು ನೋಡಿದೆ. ದ್ವೇಷದ ರಾಜಕಾರಣ ಇಲ್ಲಿ ನಡೆಯುತ್ತಿದೆ. ಕಾಂಗ್ರೆಸ್‌ ಪಕ್ಷಕ್ಕೆ ಲೀಡ್‌ ಬಂದಿದೆ ಎಂಬ ಕಾರಣಕ್ಕೆ ಆ ಹಳ್ಳಿಗಳಲ್ಲಿ ಸರಕಾರಿ ಕೆಲಸಗಳೇ ನಡೆಯುತ್ತಿಲ್ಲ.

ಈ ದೇಶದಲ್ಲಿ ಚುನಾವಣೆಗೆ ಸ್ಪರ್ಧಿಸುವುದೇ ತಪ್ಪಾ? ಕಾನೂನುಬದ್ಧವಾಗಿ ನನಗಿರುವ ಹಕ್ಕು ಇದು ನಾನು ಮಂಡ್ಯದ ಸೊಸೆ, ಹಾಗಾಗಿ ನಾನು ಮಂಡ್ಯದಿಂದಲೇ ಸ್ಪರ್ಧಿಸುತ್ತಿದ್ದೇನೆ. ನಾನು ಈ ಮಣ್ಣಿನ ಸೊಸೆ ಅದಕ್ಕೆ ನಿಮ್ಮ ಪ್ರಮಾಣಪತ್ರ ಅಗತ್ಯವಿಲ್ಲ, ಜನ ನಮ್ಮನ್ನು ಸ್ವೀಕರಿಸಿದ್ದಾರೆ ಅಷ್ಟು ಸಾಕು.

Advertisement

ನಿಮಗೆ ಮಹಿಳೆಯರ ಬಗ್ಗೆ ಗೌರವವಿಲ್ಲ, ನಿಮಗೆ ದೇಶದ ಗಡಿ ಕಾಯುವ ಯೋಧರ ಬಗ್ಗೆ ಗೌರವವಿಲ್ಲ. ಎದುರಾಳಿಗೆ ಗೌರವವನ್ನು ಕೊಡುವುದನ್ನು ನೀವು ಕಲಿಯಬೇಕು. ದರ್ಶನ್‌ ಆಗ್ಲಿ ಯಶ್‌ ಆಗ್ಲಿ ಇಲ್ಲಿ ನಟರಾಗಿ ಪ್ರಚಾರಕ್ಕೆ ಬಂದಿಲ್ಲ ನನ್ನ ಮಕ್ಕಳಾಗಿ ನನ್ನ ಜೊತೆ ಇದ್ದಾರೆ.

ನಾಮಪತ್ರ ಸಲ್ಲಿಸುವ ದಿನವೂ ವಿದ್ಯುತ್‌ ಮತ್ತು ಕೇಬಲ್‌ ತೆಗೆಸಿದ್ರು ಇವತ್ತೂ ಅದನ್ನೇ ಮಾಡಿದ್ದಾರೆ. ಹಾಗಾದ್ರೆ ನನ್ನ ಬಗ್ಗೆ ಅಷ್ಟೂ ಭಯನಾ? ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಬರುತ್ತಾರೆ, ಆಂಧ್ರದಿಂದ ಚಂದ್ರಬಾಬು ನಾಯ್ಡು ಬರುತ್ತಾರೆ, ಕಾಂಗ್ರೆಸ್‌ ರಾಜ್ಯ ನಾಯಕರು ಬರುತ್ತಾರೆ. ಇವೆಲ್ಲಾ ಕೇವಲ ಸುಮಲತಾ ಅಂಬರೀಷ್‌ ಅವರನ್ನು ಎದುರಿಸಲು ಅನ್ನೋದೆ ವಿಪರ್ಯಾಸ.

– ಎಲ್ಲ ರಂಗದಲ್ಲೂ ಒಳ್ಳೆಯವರು ಕೆಟ್ಟವರು ಇರ್ತಾರೆ. ಆದರೆ ಬೆರಳು ತೋರಿಸುವ ಕೆಲಸ ಮಾಡಬೇಡಿ.
– ಸಿನೇಮಾದವರ ಬಗ್ಗೆ ಕೇವಲವಾಗಿ ಮಾತನಾಡಬೇಡಿ. ಎದುರಾಳಿ ಅಭ್ಯರ್ಥಿಯೂ ಸಿನೇಮಾ ರಂಗಕ್ಕೆ ಸೇರಿದವರು ಎಂಬುದನ್ನು ಮರೆಯಬಾರದು.
– ದರ್ಶನ್‌, ಯಶ್‌ ನನಗಾಗಿ ಧೂಳು, ಬಿಸಿಲಿನಲ್ಲಿ ಪ್ರಚಾರ ಮಾಡಿದ್ದಾರೆ. ಯಾವುದೇ ಸಬೂಬುಗಳನ್ನು ಅವರು ಹೇಳಿಲ್ಲ.
– ಅಸಾಂವಿಧಾನಿಕ ಪದ ಬಳಕೆ ಮಾಡಿ ಚುನಾವಣೆ ಮಾಡಬೇಕೆಂದು ಏನೂ ಇಲ್ಲ. ಸಭ್ಯತೆ, ಸಂಸ್ಕೃತಿ ನನಗೆ ಮೊದಲಿನಿಂದಲೂ ಬಂದಿದೆ, ಅದು ನನ್ನ ಗುಣ.
– ಅಂತ್ಯಕ್ರಿಯೆಯ ರಾಜಕಾರಣ. ಅಂಬೀಷ್‌ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ನಾನೇ ಕಾರಣ ಅಂತ ಹೇಳುತ್ತಿದ್ದಾರೆ. ಅಂಬರೀಷ್‌ ಅವರೇನು ‘ಝೀರೋ’ನಾ. ಅವರಿಗೇನು ಅರ್ಹತೆ ಇರಲಿಲ್ವಾ? ರಾಜ್ಯ ಸರಕಾರ ನೀಡಿದ ಗೌರವಕ್ಕೆ ನಾನು ಋಣಿಯಾಗಿದ್ದೇನೆ. ಆದರೆ ನಾನಿವನ್ನೆಲ್ಲಾ ಹೇಳಲೇಬಾರದು ಎಂದುಕೊಂಡಿದ್ದೆ ಅದರೆ ಅವರೇ ಅದನ್ನೆಲ್ಲಾ ಕೆದಕುತ್ತಿದ್ದಾರೆ. ಪದೇಪದೇ ಈ ವಿಷಯವನ್ನು ಪ್ರಸ್ತಾವಿಸುವ ಮೂಲಕ ನನ್ನ ನೋವನ್ನು ಅವರೇ ಜಾಸ್ತಿ ಮಾಡುತ್ತಿದ್ದಾರೆ.
– ಅಂದು ನಾನು ಹಾಕಿದ ಕಣ್ಣೀರಿನಲ್ಲಿ ನೋವಿತ್ತು ಆದರೆ ಇವತ್ತು ನನ್ನ ಕಣ್ಣಿನಲ್ಲಿ ಬರುವ ನೀರಿನಲ್ಲಿ ಧೈರ್ಯ ಇದೆ.
– ಅಂದು ಶ್ರದ್ಧಾಂಜಲಿ ಸಭೆಗೆ ಬಂದಿದ್ದ ಮುಖ್ಯಮಂತ್ರಿಯವರು ನನಗೆ ಸಮಾಧಾನ ಮಾಡುತ್ತ ‘ನಾನು ನಿಮ್ಮ ಸಹೋದರ ಇದ್ದಂತೆ’ ಎಂದು ಹೇಳಿದವರು ಈಗ ಇವರು ಮಾಡುತ್ತಿರುವುದೇನು?
ಅಂಬರೀಷ್‌ ಅವರ ಸಮಾಧಿಯ ಮೆಲೆ ನಿಮ್ಮ ಮಗನ ರಾಜಕೀಯ ಭವಿಷ್ಯದ ಬುನಾದಿ ನಿರ್ಮಿಸಲು ಹೊರಟಿದ್ದೀರಾ?
– ಪತಿಯನ್ನು ಕಳೆದುಕೊಂಡ ಪತ್ನಿ ಕಣ್ಣೀರು ಹಾಕಿದರೆ ಅದು ಡ್ರಾಮಾ ಅಂತೆ, ಆದರೆ ಚುನಾವಣಾ ಪ್ರಚಾರಕ್ಕೆ ಬಂದು ಅಲ್ಲಿ ಕಣ್ಣೀರು ಹಾಕಿದರೆ ಅದಕ್ಕೆ ಏನು ಹೇಳ್ಬೇಕು?
– ನೀವು ನನಗೆ ಇಂದು ಭಿಕ್ಷೆ ಕೊಡಿ. ದುಡ್ಡಿನ ಆಸೆಗಾಗಿ ಮೋಸ ಹೋಗ್ಬೇಡಿ. ಅಂಬರೀಷ್‌ ಅವರ ಹೆಂಡ್ತಿಯಾದ ನನಗೆ ಒಂದು ಅವಕಾಶ ಕೊಡಿ. ಅಂಬರೀಷ್‌ ಅವರು ಎಂದೂ ಮೋಸದ ರಾಜಕಾರಣ ಮಾಡಿಲ್ಲ, ಜಾತಿ ರಾಜಕಾರಣ ಮಾಡಿಲ್ಲ.
– ಹಣದ ರಾಜಕಾರಣ ಬೇಡ. ಮಂಡ್ಯದ ಜನ ಪ್ರಾಣ ಬಿಟ್ರೂ ಸ್ವಾಭಿಮಾನ ಬಿಡಬಾರದು. ಈ ಜಿಲ್ಲೆಯ ಸ್ವಾಭಿಮಾನದ ಭಿಕ್ಷೆ ನನಗೆ ವಾಪಸು ಕೊಡಿ.
– ರಾಜ್ಯ ರೈತ ಸಂಘದವರು, ಭಾರತೀಯ ಜನತಾ ಪಕ್ಷ, ಮುಸ್ಲಿಂ ಸಮುದಾಯದ ಮುಖಂಡರು, ದಲಿತ ಸಂಘದವರು ಇಷ್ಟು ದಿವಸ ನನ್ನ ಬೆನ್ನೆಲುಬಾಗಿ ನಿಂತಿದ್ರು ಅವರಿಗೆಲ್ಲಾ ನಾನು ಈ ಸಂದರ್ಭದಲ್ಲಿ ಧನ್ಯವಾದಗಳನ್ನು ತಿಳಿಸ್ತಾ ಇದ್ದೇನೆ.

Advertisement

Udayavani is now on Telegram. Click here to join our channel and stay updated with the latest news.

Next