Advertisement

ಸಿಎಂ ಪುತ್ರನ ಗೆಲುವಿಗೆ ಶ್ರಮಿಸ್ತಿದ್ದಾರಾ?

05:09 PM Apr 01, 2019 | Team Udayavani |

ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಭಾನುವಾರ ಪತ್ರಿಕಾಗೋಷ್ಠಿ ನಡೆಸಿ, ಮಂಡ್ಯ ಜಿಲ್ಲಾಧಿಕಾರಿ ಹಾಗೂ ಸಿಎಂ ವಿರುದ್ಧ ಹರಿಹಾಯ್ದರು. ಮಂಡ್ಯ ಜಿಲ್ಲೆಯ ಚುನಾವಣಾಧಿಕಾರಿಯವರು ಸಿಎಂ ನಿರ್ದೇಶನದಂತೆ ಕೆಲಸ ಮಾಡುತ್ತಿರುವಂತೆ ಕಂಡು ಬಂದಿದ್ದು, ನೈತಿಕ ಹೊಣೆ ಹೊತ್ತು ಅವರು ತಮ್ಮ ಹುದ್ದೆಯಿಂದ ನಿರ್ಗಮಿಸಲಿ ಎಂದು ಆಗ್ರಹಿಸಿದರು. ಜಿಲ್ಲಾ ಚುನಾವಣಾಧಿಕಾರಿ ಹಾಗೂ ಸಿಎಂ ವಿರುದ್ಧ ಅವರು ಹರಿಹಾಯ್ದ ಪರಿಯಿದು.

Advertisement

ಜಿಲ್ಲಾಧಿಕಾರಿ ವಿರುದ್ಧ ವಾಗ್ಧಾಳಿ
ಸಿಎಂ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿರುವಂತೆ ಕಂಡು ಬಂದಿರುವ ಜಿಲ್ಲಾ ಚುನಾವಣಾಧಿಕಾರಿಯವರು ನೈತಿಕ ಹೊಣೆ ಹೊತ್ತು ತಮ್ಮ ಹುದ್ದೆಯಿಂದ ನಿರ್ಗಮಿಸಲಿ.

ನಾ ಮಪತ್ರ ಸಲ್ಲಿಕೆ ಆರಂಭದಿಂದ ಹಿಡಿದು ಇಲ್ಲಿವರೆಗೂ ನನಗೆ ಅನ್ಯಾಯವಾಗಿದ್ದು, ರಕ್ಷಣೆ ಇಲ್ಲದಂತಾಗಿದೆ. ಮುಂದೆಯೂ ಅವರಿಂದ ನನಗೆ ನ್ಯಾಯ ಹಾಗೂ ರಕ್ಷಣೆ ಸಿಗಬಹುದೆಂಬ ನಂಬಿಕೆ ಇಲ್ಲ.

ನಿಖೀಲ್‌ ನಾಮಪತ್ರದಲ್ಲಿನ ನ್ಯೂನ್ಯತೆಯನ್ನು ಗುರುತಿಸಿ, ನನ್ನ ಚುನಾವಣಾ ಏಜೆಂಟ್‌ ಸಲ್ಲಿಸಿದ ಆಕ್ಷೇಪಣೆಯನ್ನು ಪರಿಗಣಿಸಿಲ್ಲ. ನಿಖೀಲ್‌ ನಾಮಪತ್ರವನ್ನು ನಿಯಮಬಾಹೀರವಾಗಿ ಸಿಂಧು ಎಂದು ಘೋಷಿಸಿದ್ದಾರೆ.

ನಾಮಪತ್ರ ಪರಿಶೀಲನೆ ಪ್ರಕ್ರಿಯೆಯ ಸಂಪೂರ್ಣ ವಿಡಿಯೋ ನೀಡುವಂತೆ ಮನವಿ ಸಲ್ಲಿಸಿದರೂ ಅದಕ್ಕೆ ಸ್ಪಂದಿಸಿಲ್ಲ. ಅರ್ಧ ವಿಡಿಯೋ ಮಾತ್ರ ನೀಡಿದ್ದಾರೆ.

Advertisement

ಚುನಾವಣಾ ನಾಮಪತ್ರ ಪರಿಶೀಲನಾ ಪ್ರಕ್ರಿಯೆಯ ವೀಡಿಯೋವನ್ನು ಮದುವೆ ಸಮಾರಂಭಕ್ಕೆ ತೆಗೆದುಕೊಂಡು ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ. ವಿಡಿಯೋಗ್ರಾಫ‌ರ್‌ ಸಂಪೂರ್ಣ ಚಿತ್ರೀಕರಣ ಮಾಡಿಲ್ಲವೆಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.

ನಾಮಪತ್ರ ಸಲ್ಲಿಸುವಾಗ ನಿಖೀಲ್‌ ಸಲ್ಲಿಸಿದ್ದ ಫಾರಂ ನಂ.26 ನಿಯಮಬದ್ಧವಾಗಿರಲಿಲ್ಲ. ಅದರ ಪರಿಷ್ಕೃತ ಅಫೀ ಡೆವಿಟ್‌ನ್ನು ಮಾ.27ರಂದು ಬೆಳಗ್ಗೆ 10 ಗಂಟೆಗೆ ಸಲ್ಲಿಸಿದ್ದಾರೆ ಎಂದು ರಿಟರ್ನಿಂಗ್‌ ಆಫೀಸರ್‌ ಹೇಳಿದ್ದಾರೆ. ಹೊಸ ಅಫೀ ಡೆವಿಟ್‌ನಲ್ಲಿ ಮಾ.27ರ ದಿನಾಂಕ ನಮೂದಿಸದೆ ಮಾ.21ರ ದಿನಾಂಕವನ್ನೇ ಉಲ್ಲೇಖೀಸಲಾಗಿದೆ. ಅಂದು ನಿಖೀಲ್‌ ಕ್ಷೇತ್ರದಲ್ಲಿ ಇಲ್ಲದಿದ್ದರೂ ಅಭ್ಯರ್ಥಿಯ ಸಹಿ ಮಾತ್ರ ಅದರಲ್ಲಿದೆ. ಇದು ಹೇಗೆ ಸಾಧ್ಯ?.

ನಾವು ನ್ಯಾಯಬದಟಛಿವಾದ ದಾಖಲೆಗಳನ್ನು ಕೇಳಿದರೆ, ನಮಗೆ ಕೆಲಸ ಮಾಡಲು ಬಿಡುತ್ತಿಲ್ಲ. ಒತ್ತಡಕ್ಕೆ ಸಿಲುಕಿಸುತ್ತಿದ್ದೀರಿ ಎಂಬ ಉತ್ತರ ಕೊಡುತ್ತಾರೆ.

ಚುನಾವಣಾಧಿಕಾರಿಯಾಗಿ ನಾಮಪತ್ರದ ಪರಿಶೀಲನೆಯ ವಿಡಿಯೋ ತುಣುಕುಗಳಿಗೆ ರಕ್ಷಣೆ ನೀಡದವರು, ಜಿಲ್ಲೆಯ 2 ಸಾವಿರ ಬೂತ್‌ಗಳಿಗೆ ರಕ್ಷಣೆ ಹೇಗೆ ಕೊಡಲು ಸಾಧ್ಯ?

ಮಂಡ್ಯ ಚುನಾವಣಾಧಿಕಾರಿ ಎನ್‌.ಮಂಜುಶ್ರೀ ಚುನಾವಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರಾ? ಅಥವಾ ಮುಖ್ಯಮಂತ್ರಿ ಪುತ್ರನನ್ನು ಗೆಲ್ಲಿಸಲು ಕೆಲಸ ಮಾಡುತ್ತಿದ್ದಾರಾ?

ಸಿಎಂ ವಿರುದ್ಧ ವಾಗ್ಧಾಳಿ
ಸಿ ಎಂ ಅವರು ಡಿಸಿ ಅವರನ್ನು ಕರೆಸಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ನಾನು ಯಾವ ಹೋಟೆಲ್‌ನಲ್ಲಿ ಉಳಿದು ಕೊಂಡಿದ್ದೇನೆ. ಯಾರಿಂದ ದುಡ್ಡು ಬರುತ್ತಿದೆ, ಯಾರಿಗೆ ಹಂಚುತ್ತಿದ್ದೇನೆ ಎಂಬ ಮಾಹಿತಿ ಅವರಿಗೆ ಮಾಹಿತಿ ಇರುವಾಗ, ನನಗೂ ಅದೇ ರೀತಿಯ ಮಾಹಿತಿ ಬಂದಿದೆ.

ಚುನಾವಣೆಯನ್ನು ನೇರವಾಗಿ ಎದುರಿಸುವುದನ್ನು ಬಿಟ್ಟು ಹೀಗೆ ಅಡ್ಡದಾರಿ ಹಿಡಿಯುತ್ತಿದ್ದಾರೆ. ಅದಕ್ಕಾಗಿ ಜಿಲ್ಲಾಡಳಿತವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ನಾನು ನಾಮಪತ್ರ ಸಲ್ಲಿಸಿ ಸಮಾವೇಶ ನಡೆಸಿದ ದಿನ ಪವರ್‌ ಕಟ್‌ ಮಾಡಲಾಗುತ್ತೆ. ನಿಖೀಲ್‌ ನಾಮಪತ್ರ ಸಲ್ಲಿಸುವ ದಿನ ಜಿಲ್ಲಾ ಪೊಲೀಸ್‌ ಅಧೀಕ್ಷಕರೇ ಅನಿಯಮಿತ ವಿದ್ಯುತ್‌ ಸರಬರಾಜು ಮಾಡುವಂತೆ ಸೆಸ್ಕಾಂ ಎಂಜಿನಿಯರ್‌ಗೆ ಪತ್ರ ಬರೆಯುತ್ತಾರೆ. ಇದು ಆಡಳಿತಯಂತ್ರದ ದುರುಪಯೋಗವಲ್ಲದೆ ಮತ್ತೇನು?.

ಈ ವಿಷಯವನ್ನು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್‌ಕುಮಾರ್‌ ಬಳಿ ಚರ್ಚೆ ಮಾಡಿದಾಗ ಇದು ಶಾಕಿಂಗ್‌ ಎಂದು ಹೇಳಿದ್ದರು.

ಪ್ರಚಾರಕ್ಕೆ, ನಾಮಪತ್ರ ಸಲ್ಲಿಸಲು ಸಿಎಂ ಬಂದರೂ ರಾಜಕಾರಣಿಯಾಗಿಯೇ ಪರಿಗಣಿಸಬೇಕು. ವಿದ್ಯುತ್‌ ಸರಬರಾಜು ಮಾಡುವಂತೆ ಎಸ್ಪಿ ಪತ್ರ ಬರೆದಿರುವುದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಅವರೇ ಹೇಳಿದ್ದಾರೆ.

ನಾಮಪತ್ರ ಪರಿಶೀಲನೆಯ ವಿಡಿಯೋವನ್ನು ಜಿಲ್ಲಾ ಚುನಾವಣಾಧಿಕಾರಿಯವರು ಮದುವೆ ಸಮಾರಂಭಕ್ಕೆ ಕಳುಹಿಸಿರುವ ಬಗ್ಗೆ ನನಗೇನೂ ಗೊತ್ತಿಲ್ಲ. ವಿಡಿಯೋ ಟ್ಯಾಂಪರಿಂಗ್‌ ಆಗಿರುವ ವಿಚಾರದ ಬಗ್ಗೆಯೂ ಮಾಹಿತಿ ಇಲ್ಲ. ವಿಡಿಯೋವನ್ನು ಮದುವೆ ಸಮಾರಂಭಕ್ಕೆ ಕಳುಹಿಸಿದ್ದರೆ ಅದು ತಪ್ಪು.
● ಡಿ.ರಮೇಶ್‌, ಜೆಡಿಎಸ್‌ ಜಿಲ್ಲಾಧ್ಯಕ್ಷ.

ಜಿಲ್ಲೆಯ ಜನ ಸ್ವಾಭಿಮಾನಿಗಳಾಗಿದ್ದು, ಪಕ್ಷಾತೀತವಾಗಿ ಸುಮಲತಾಗೆ ಬೆಂಬಲ ನೀಡುವ ಮೂಲಕ ಅವರ ಗೆಲುವಿಗೆ ಕಾರಣರಾಗಬೇಕು.
● ಅಭಿಷೇಕ್‌ ಅಂಬರೀಶ್‌, ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾತನಾಡಿದ್ದು,

ಕ್ರಮಸಂಖ್ಯೆ ಹಂಚಿಕೆ: ಸಿಎಂ ಕೈವಾಡ?
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ರುವ ನಿಖಿಲ್‌ಗೆ 1ನೇ ಕ್ರಮ ಸಂಖ್ಯೆ ನೀಡಿರುವುದರಲ್ಲಿ ಸಿಎಂ ಕುಮಾರಸ್ವಾಮಿ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ನಿಖಿಲ್‌ಗೆ 1ನೇ ಕ್ರಮಸಂಖ್ಯೆ ಪಡೆಯುವುದಕ್ಕೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿರುವ ಬಗ್ಗೆ ಅನುಮಾನಗಳು ಮೂಡಿದ್ದು, ಸಿಎಂ ಒತ್ತಡದಿಂದಲೇ ನಿಖಿಲ್‌ಗೆ 1ನೇ ಕ್ರಮ ಸಂಖ್ಯೆ ಸಿಕ್ಕಿತೇ ಎಂಬ ಸಂಶಯ ಮೂಡಿದೆ. ನಾಮಪತ್ರ ಸಲ್ಲಿಕೆ ದಿನದಂದೇ ನಿಖಿಲ್‌ ಕ್ರಮ ಸಂಖ್ಯೆ 1 ಆಗಿರುತ್ತದೆ ಎಂದು ಸಿಎಂ ಹೇಳಿದ್ದು, ನಾಮಪತ್ರ ಪರಿಶೀಲನೆಗೆ ಮುನ್ನವೇ ಕ್ರಮಸಂಖ್ಯೆ ಸಿಎಂಗೆ ಗೊತ್ತಾಗಿದ್ದು ಹೇಗೆ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಸಮಾವೇಶದಲ್ಲಿನ ಸಿಎಂ ಹೇಳಿಕೆಯ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗಿದೆ.

ಬಿಎಸ್ಪಿ ಅಭ್ಯರ್ಥಿಯಿಂದ ದೂರು
ಈ ಮಧ್ಯೆ, ಕ್ರಮಸಂಖ್ಯೆ ಹಂಚಿಕೆಯಲ್ಲಿ ಆಗಿರುವ ಅನ್ಯಾಯದ ವಿರುದ್ಧ ಬಿಎಸ್ಪಿ ಅಭ್ಯರ್ಥಿ ನಂಜುಂಡಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದಾರೆ.

ಸುಮಲತಾ ಬಳಿ ಸಾಕ್ಷಿ ಇದೆಯೇ?: ನಿಖಿಲ್‌
ಮದ್ದೂರು: ಮದ್ದೂರು ತಾಲೂಕಿನ ವಿವಿಧೆಡೆ ಪ್ರಚಾರ ನಡೆಸಿದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ನಿಖಿಲ್‌, ಸುಮಲತಾ ಟೀಕೆಗೆ ಪ್ರತಿಕ್ರಿಯಿಸಿದ್ದು, ಅವರ ಪ್ರತಿಕ್ರಿಯೆ ಹೀಗಿದೆ.

ಸಿ ಎಂ ಅವರು ಜಿಲ್ಲಾಧಿಕಾರಿ ಕಚೇರಿಯನ್ನು ನಡೆಸುತ್ತಿದ್ದಾರೆ ಎನ್ನುವುದಕ್ಕೆ ಸುಮಲತಾ ಬಳಿ ಏನು ಸಾಕ್ಷಿ ಇದೆ. ಆಧಾರವಿದ್ದರೆ ಅದನ್ನು ಸಾಬೀತುಪಡಿಸಲಿ.

ಸಿಎಂ ಬಗ್ಗೆ ಕೇವಲವಾಗಿ ಮಾತನಾಡುವುದು ಸರಿಯಲ್ಲ. ಜಿಲ್ಲಾಧಿಕಾರಿ ಅತ್ಯಂತ ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಕೆಲಸ ಮಾಡುತ್ತಿರುವ ಅಧಿಕಾರಿ. ಪಕ್ಷೇತರ ಅಭ್ಯರ್ಥಿಯೂ ಹೆಣ್ಣು ಮಗಳಾಗಿದ್ದು, ಹೆಣ್ಣಿಗೆ ಅಗೌರವ ತರುವ ರೀತಿಯಲ್ಲಿ ನಡೆದುಕೊಳ್ಳಬಾರದು.

ಒಬ್ಬ ಅಧಿಕಾರಿ ಮೇಲೆ ಆರೋಪ ಮಾಡುವಾಗ ಅದಕ್ಕೆ ಪೂರಕವಾದ ಸಾಕ್ಷಿ, ಆಧಾರಗಳು ಇರಬೇಕು.

ಮಂಡ್ಯದ ಜನ ದುಡ್ಡಿಗೆ ಮಾರಾಟವಾಗುವವರಲ್ಲ, ಸ್ವಾಭಿಮಾನದ ಪರ
ನಿಂತಿರುವವರು.

ನಾವ್ಯಾರೂ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿಲ್ಲ. ನೇರವಾಗಿ ಮತದಾರರ ಬಳಿ ಹೋಗಿ ಮತ ಪ್ರಚಾರ ಮಾಡುತ್ತಿದ್ದೇನೆ.

ಋಣ ಎಲ್ಲಿದೆ?: ಸಚಿವ ತಮ್ಮಣ್ಣ
ಋಣ ಇದೆ ಅಂತಾರೆ. ಅಧಿಕಾರದಲ್ಲಿದ್ದಾಗ ಅಂಬರೀಶ್‌ ಏನು ಋಣ ತೀರಿಸಿದ್ದಾರೆ. ಜಿಲ್ಲೆಯ ಋಣ ತೀರಿಸೋಕೆ ಎಷ್ಟು ಜನ ಬಂದಿದ್ದಾರೆ. ಬಂದವರೆಲ್ಲಾ ಋಣ ತೀರಿಸಿದ್ದರೆ ಜಿಲ್ಲೆ ಹೀಗಿರುತ್ತಿತ್ತಾ?.

Advertisement

Udayavani is now on Telegram. Click here to join our channel and stay updated with the latest news.

Next