Advertisement

ಮೊತ್ತ ಮೊದಲ ಸಂ-ಭಾವನೆಯ ಸಂಭ್ರಮ

05:57 PM Jun 13, 2019 | Team Udayavani |

ಹಾ! ನನ್ನ ಮೊದಲ ಸಂಭಾವನೆ. ಎಲ್ಲರಿಗೂ ಅವರ ಜೀವನದ ಮೊದಲ ಸಂಭಾವನೆ ಅಂದರೆ ಏನೋ ಒಂದು ಆತ್ಮೀಯ ಭಾವ. ಅದು ಮೊತ್ತದ ಮೇಲೆ ಬಿಂಬಿತವಾಗುವುದಿಲ್ಲ. ಎಷ್ಟೇ ಆಗಿರಲಿ, ಅದು ತನ್ನ ಮೊದಲ ಸಂಭಾವನೆ ಅಷ್ಟೇ. ಅದು ಬಿಟ್ಟು ಮತಾöವ ಚಿಂತನೆಯಿಲ್ಲ. ತಾನು ದುಡಿದ ಅಥವಾ ತನಗೆ ದೊರೆತ ಸಂಭಾವನೆಯ ಮುಂದೆ ಬೇರೆ ಯಾವ ಕಾಸೂ ಗಣನೆಗೆ ಬರಲ್ಲ. ಅದಕ್ಕಿರುವ ಗೌರವವೇ ಬೇರೆ ! ಈಗ ನಾನು ಮಾತಾಡಹೊರಟಿರುವುದು ಇದರ ಬಗ್ಗೆಯೇ. ಇದು ನನ್ನ ಮೊದಲ ಬರಹದ ಸಂಭಾವನೆ ದೊರೆತ ಘಟನೆ.

Advertisement

ಅಂದು ಪ್ರಾಯೋಗಿಕ ತರಗತಿ ಮುಗಿದ ನಂತರದ ಉಪನ್ಯಾಸವಿತ್ತು. ಹೊಟ್ಟೆ ಬೇರೆ ಚುರ್ರೆನ್ನಿಸುತ್ತಿತ್ತು. ಲ್ಯಾಬ್‌ನ ನಂತರ ತರಗತಿಗೆ ಹೊಂದಿಕೊಳ್ಳಲು ಕೊಂಚ ಸಮಯಾವಕಾಶವಿತ್ತು. ನಂತರ ಪಾಠ ಶುರು. ಆಗ ಒಮ್ಮೆಲೇ ಉಪನ್ಯಾಸಕರು ನನ್ನ ಹೆಸರು ಕರೆದರು. ನನ್ನ ಎದೆ ಝಲ್ಲೆನಿಸಿತು. ಮನದಲ್ಲೇ ನನ್ನ ಹೆಸರು ಯಾಕಪ್ಪ ಕರೆದ್ರು ಅಂತ ಯೋಚಿಸುವಾಗಲೇ “ಕೆಳಗೆ ರಿಸೆಪ್ಶನ್‌ಗೆ ಹೋಗು’ ಎನ್ನುವ ಮಾತು ಹೊರಬಂತು. ಮೊದಲೇ ಝಲ್ಲೆಂದಿದ್ದ ಎದೆಗೆ ಸಾವರಿಸಲು ಇನ್ನಷ್ಟು ಸಮಯ ತಗಲಿತು. ತಲೆಯಲ್ಲಿ ನೂರಾರು ತುಮುಲ-ಗೊಂದಲಗಳು. ನಾನೇನು ತಪ್ಪು ಮಾಡಿದ್ದೇನೆಯೆ ಅಥವಾ ನನಗೆ ಯಾವುದಾದರೂ ವಿದ್ಯಾರ್ಥಿವೇತನ ಬಂದಿದೆಯೆ? ಬರಬೇಕಾದದ್ದೆಲ್ಲ ಬಂದಾಗಿದೆ, ಮತ್ತಿನ್ನೇನು ಇರಬಹುದು ಎಂದು ಎರಡನೇ ಮಹಡಿಯಿಂದ ಮೆಟ್ಟಿಲಿಳಿದು ಕೆಳ ಮಹಡಿಗೆ ಬರುವ ತನಕ ಎದೆ ಜೋರಾಗಿ ಢವಢವ ಅಂತ ಬಡಿದುಕೊಳ್ಳುತ್ತಾ ಇತ್ತು. ಅಲ್ಲಿ ಹೋದ ಮೇಲೆ, “ನೀನಾ ಪ್ರೇಕ್ಷಾ” ಅಂತ ಕೇಳಿದರು.

“ಹಾ” ಅಂತ ತಲೆ ಅಲ್ಲಾಡಿಸಿದೆ. “ನಿನಗೊಂದು ಪತ್ರ ಬಂದಿದೆ’ ಅಂತ ಕೈಗಿತ್ತರು. ತೆರೆದು ನೋಡಿದೆ. ಉದಯವಾಣಿಯವರ ಪತ್ರ. ಕುಣಿದಾಡುವಷ್ಟು ಅತೀವ ಖುಷಿಯಾಯಿತು. ಎಷ್ಟಿದರೂ ಅದು ನನ್ನ ಮೊದಲ ಲೇಖನಕ್ಕೆ ಸಂದ ಸಂಭಾವನೆ ಅಲ್ಲವೆ! ಮೆಟ್ಟಿಲು ಹತ್ತಿ ಕ್ಲಾಸ್‌ ರೂಮ್‌ಗೆ ಬಂದು ಗೆಳತಿಯ ಬಳಿ ಹೇಳಿಕೊಂಡು ಸಂಭ್ರಮಿಸಿದೆ. ನನ್ನ ಮೊದಲ ಸಂಭಾವನೆ ನನ್ನನ್ನು ಮುಂದೆಯೂ ಹೀಗೆಯೇ ಬರವಣಿಗೆಯಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹ ನೀಡಿದೆ!

– ಪ್ರೇಕ್ಷಾ
ದ್ವಿತೀಯ ಬಿಇ ಶ್ರೀ ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ, ಬಂಟಕಲ್‌, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next