Advertisement

ಈವೆಂಟ್‌ಗೆ ಸಮ್‌ ಹಿಂಟ್ಸ್‌

07:25 AM Jan 16, 2019 | Team Udayavani |

ಸಭೆ, ಸಮಾರಂಭಗಳ ಆಯೋಜನೆ ಬಲು ದೊಡ್ಡ ಸವಾಲು. ಆ ಸವಾಲನ್ನು ಯಶಸ್ವಿಯಾಗಿ ನಿಭಾಯಿಸುವುದು ಕೂಡ ಒಂದು ಕಲೆ. ಮಾತಿನ ಚಾಕಚಾಕ್ಯತೆ, ವಿಭಿನ್ನ ಐಡಿಯಾಗಳು ನಿಮ್ಮ ಕಲ್ಪನೆಗೊಂದು ಜೀವ ನೀಡಬಹುದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದನ್ನು ಉದ್ಯಮನ್ನಾಗಿಸಿಕೊಳ್ಳಲೂಬಹುದು. ಜೀವನ ನಿರ್ವಹಣೆಗೆಂದು ಇದನ್ನು ಆಯೋಜಿಸುವವರು ಕೆಲವರಾದರೆ ಇದನ್ನೇ ಫ್ಯಾಷನ್‌ ಆಗಿ ಇದರಲ್ಲೂ ವಿಭಿನ್ನತೆ ಕಂಡುಕೊಳ್ಳುವವರು ಹಲವರು.

Advertisement

ಒಂದೊಳ್ಳೆ ಥೀಂ ಇದೆ. ಆ ಥೀಂ ಅನ್ನು ನೂರಾರು ಜನಕ್ಕೆ ತಲುಪಿಸಬೇಕು. ಸೇರಿದ ಅಷ್ಟೂ ಜನ ಒಳ್ಳೇ ಕಾರ್ಯಕ್ರಮ ಎಂದು ಹೊಗಳಬೇಕು. ಜತೆಗೆ ಒಂದಷ್ಟು ಆಫರ್‌ಗಳನ್ನು ಸೃಷ್ಟಿಸಬೇಕು. ಆದರೆ ಅವಕಾಶ ಸುಮ್ಮನೇ ಬಂದೀತೆ?

ಖಂಡಿತಾ ಇಲ್ಲ. ಯಾವುದೇ ಒಂದು ಪರಿಕಲ್ಪನೆಯನ್ನು ಜನಮನ ಮುಟ್ಟಿಸಲು ಹೊರಟಾಗ ಅದನ್ನು ಆಸ್ವಾದಿಸುವ ನೂರಾರು, ಸಾವಿರಾರು ವೀಕ್ಷಕರ ಮನ ತಟ್ಟಬೇಕು. ಅಷ್ಟೇ ಅಲ್ಲ. ಮುಂದೆಯೂ ಆ ಕಾರ್ಯಕ್ರಮಕ್ಕೆ ವೀಕ್ಷಕರ ಸಂಖ್ಯೆ ದ್ವಿಗುಣಗೊಳ್ಳಬೇಕು. ಹೀಗಾಗಬೇಕಾದರೆ ಕಾರ್ಯಕ್ರಮ ನಿರೂಪಕರ, ಮುಖ್ಯ ಭಾಷಣಕಾರರ ಪಾತ್ರ ಎಷ್ಟಿದೆಯೋ ಅದಕ್ಕಿಂತ ಮೂರು ಪಟ್ಟು ಶ್ರಮ ಆ ಕಾರ್ಯಕ್ರಮದ ಆಯೋಜಕರದ್ದಾಗಬೇಕು.

ಯಶಸ್ವಿ ಆಯೋಜಕರಾಗುವುದೂ ಒಂದು ಕೌಶಲ. ಇದಕ್ಕೆಂದೇ ಪ್ರತ್ಯೇಕ ಕಲಿಕಾ ವ್ಯವಸ್ಥೆ ಇರದಿದ್ದರೂ, ಸ್ವಯಂ ಕಲಿಕೆ ಮತ್ತು ಸ್ವಯಂ ಅನುಭವದಿಂದ ಉತ್ತಮ ಕಾರ್ಯಕ್ರಮ ಆಯೋಜಕರಾಗಿ ಗುರುತಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಮುಖ್ಯವಾಗಿ ಬೇಕಾದುದು ಸಂಘಟನ ಮನೋಭಾವ, ಇಚ್ಛಾಶಕ್ತಿ ಮತ್ತು ಮಾತುಗಾರಿಕೆ.

ಕಾಲೇಜು ಅನುಭವ
ಯಾವುದೇ ಒಂದು ಚಾತುರ್ಯ ಅಥವಾ ಯಶಸ್ಸಿಯ ಮೈಲಿಗಲ್ಲಿಗೆ ಮೊದಲ ಅಡಿಪಾಯ ಶಾಲಾ-ಕಾಲೇಜು. ಇಲ್ಲಿ ಸಿಗುವ ಅವಕಾಶಗಳು ವ್ಯಕ್ತಿಯನ್ನು ಬದುಕಿನಲ್ಲಿ ಉತ್ತಮತೆಯ ಕಡೆಗೆ ಕೊಂಡೊಯ್ಯುವುದು ಹಲವರ ಅನುಭವಗಳಿಂದ ಬಂದ ಅನುಭಾವಗಳು. ಕಾಲೇಜು ಹಂತದಲ್ಲಿ ಹಲವಾರು ರೀತಿಯ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಕಾಲೇಜು ಡೇ, ವಿವಿಧ ಫೆಸ್ಟ್‌ಗಳು, ಅಂತರ್‌ ಕಾಲೇಜು ಉತ್ಸವಗಳೆಲ್ಲ ವಿದ್ಯಾರ್ಥಿಗಳು ಮುಂದೆ ಅತ್ಯುತ್ತಮ ಕಾರ್ಯಕ್ರಮ ಸಂಘಟಕರಾಗಿ ಬೆಳೆಯುವ ನಿಟ್ಟಿನಲ್ಲಿ ಇರುವ ಮೆಟ್ಟಿಲುಗಳು. ಈ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡರೆ ಮುಂದೆ ಅದೇ ದೊಡ್ಡ ಮಟ್ಟದ ಕಾರ್ಯಕ್ರಮಗಳ ಆಯೋಜನೆಗೆ ಮೈಲಿಗಲ್ಲಾಗುತ್ತವೆ.

Advertisement

ಸಂಘಟನಾ ಚಾತುರ್ಯ
ಯಾವುದೇ ಒಂದು ಕಾರ್ಯಕ್ರಮವನ್ನು ಆಯೋಜಿಸಬೇಕಾದರೆ ಆಯೋಜಕರಲ್ಲಿ ಸಂಘಟನಾ ಚಾತುರ್ಯ ಇರಬೇಕು. ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಜನರ ಭಾಗವಹಿಸುವಿಕೆಯೂ ಮುಖ್ಯ. ಆದರೆ ಜನರನ್ನು ಸೇರಿಸುವುದು ಹೇಗೆ? ಪ್ರಮುಖವಾಗಿ ಕಾರ್ಯಕ್ರಮ ನಡೆಯುವ ತಿಂಗಳ ಹಿಂದಯೇ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕು. ಆಮಂತ್ರಣ ಪತ್ರಿಕೆ ವಿತರಣೆ ಹೇಗೂ ಇದ್ದಿದ್ದೆ. ಅದರ ಜತೆಗೆ ಈಗಿನ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು.

ಫೇಸ್‌ಬುಕ್‌, ಟ್ವಿಟರ್‌, ವಾಟ್ಸಾಪ್‌ ಕಾರ್ಯಕ್ರಮ ಆಯೋಜನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದರಲ್ಲಿಯೇ ಜನರನ್ನು ಆಹ್ವಾನಿಸುವುದರೊಂದಿಗೆ, ಸಹಾಯಧನಕ್ಕಾಗಿಯೂ ಮನವಿಗಳನ್ನು ಸಲ್ಲಿಸಬಹುದು. ದಾನಿಗಳ ನೆರವಿನಿಂದ ಕಾರ್ಯಕ್ರಮಗಳನ್ನು ಆಯೋಜಿಸುವುದಿದ್ದರೆ, ಎಲ್ಲ ಲೆಕ್ಕಾಚಾರಗಳನ್ನು ಸೂಕ್ತವಾ ಗಿಯೇ ಬರೆದಿಟ್ಟುಕೊಳ್ಳಬೇಕು. ಇಲ್ಲವಾದರೆ ಆಯೋಜ ಕರಿಗೂ ತಲೆನೋವಾಗಿ ಪರಿಣಮಿಸಬಹುದು.

ಇಚ್ಛಾಶಕ್ತಿ
ಕೇವಲ ಸಂಘಟನ ಚಾತುರ್ಯವಿದ್ದರೆ ಸಾಲದು. ಆ ಕಾರ್ಯಕ್ರಮದ ತಯಾರಿಯಿಂದ ಹಿಡಿದು ಮುಗಿಯುವವರೆಗೆ ಏಕ ರೀತಿಯ ಇಚ್ಛಾಶಕ್ತಿಯನ್ನು ಮೈಗೂಡಿಸಿಕೊಂಡು ಮುಂದುವರಿಯಬೇಕು. ಉದಾಹರಣೆಗೆ ರಾಜ್ಯ, ಜಿಲ್ಲಾ ಮಟ್ಟದ ಸಮ್ಮೇಳನಗಳನ್ನು ಆಯೋಜಿಸಲು ಹೊರಟರೆ ಹೇಗೂ ದಿನವಿದೆಯಲ್ಲ; ನಾಳೆ ಮಾಡಿದರಾಯಿತು ಎಂದು ಮುಂದಕ್ಕೆ ಹಾಕಿದರೆ ಕಾರ್ಯಕ್ರಮ ಯಶಸ್ವಿಯಾಗದರು. ಪ್ರತಿದಿನವೂ ಹೊಸ ಹುರುಪಿನೊಂದಿಗೆ ತೊಡಗಿಸಿಕೊಳ್ಳುವುದು ಇಲ್ಲಿ ಬಹು ಅಗತ್ಯವೂ ಆಗಿದೆ.

ಸಮಯ ಹೊಂದಾಣಿಕೆ
ಕೆಲವು ಕಾರ್ಯಕ್ರಮಗಳಲ್ಲಿ ಸಮಯಕ್ಕೆ ಬೆಲೆಯೇ ಇರುವುದಿಲ್ಲ. ಬೆಳಗ್ಗೆ 10 ಗಂಟೆಗೆ ಆರಂಭವಾಗಬೇಕಿರುವ ಕಾರ್ಯಕ್ರಮಗಳು ಆರಂಭವಾಗುವುದು ಮಧ್ಯಾಹ್ನ 12 ಗಂಟೆಗೆ. ಇಂತಹ ಕಡೆಗಳಲ್ಲಿ ಆ ಕಾರ್ಯಕ್ರಮದ ಆಯೋಜಕರ ವೈಫಲ್ಯ ಎದ್ದು ಕಾಣುತ್ತದೆ. ಇದು ಮುಂದಿನ ಬಾರಿ ಆತನ ಸೋಲಿಗೆ ಕಾರಣವಾಗಲೂಬಹುದು. ಸಮಯವನ್ನು ಚಾಚೂ ತಪ್ಪದೆ ಪಾಲಿಸುವುದನ್ನು ಕಲಿತರೆ ನಿಗದಿತ ಸಮಯದಲ್ಲೇ ಆರಂಭವಾಗಿ, ನಿಗದಿತ ಸಮಯದಲ್ಲೇ ಮುಕ್ತಾಯಗೊಳ್ಳಲು ಕಾರಣವಾಗುತ್ತದೆ. ಸಮ್ಮೇಳನಗಳಾದರೆ ಗೋಷ್ಠಿಗಳಿಗೆ ಸಮಯದ ಮಿತಿ ಹೇರಿ, ಅಂತೆಯೇ ಮುಕ್ತಾಯಗೊಳಿಸಿದರೆ, ಅನಗತ್ಯ ಮಾತು, ಅನಗತ್ಯ ಸಮಯದ ಅಭಾವವನ್ನು ತಡೆಯಬಹುದು. ಒಟ್ಟಿನಲ್ಲಿ ಈ ಎಲ್ಲ ಕೌಶಲಗಳನ್ನು ಕಾರ್ಯಕ್ರಮ ಆಯೋಜಕ ರೂಢಿಸಿಕೊಂಡರೆ ಆತನ ಯಶಸ್ಸಿನ ಕೀಲಿಕೈ ಆ ಕಾರ್ಯಕ್ರಮದಲ್ಲಿಯೇ ಭದ್ರವಾಗಿರುತ್ತದೆ ಎಂದರೆ ತಪ್ಪಾಗದು.

ಜ್ಞಾನ ಸಂಗ್ರಹ
ಕಾರ್ಯಕ್ರಮ ಆಯೋಜನೆ ದೊಡ್ಡ ಸಮಸ್ಯೆಯಲ್ಲ. ಆದರೆ ಆ ಕಾರ್ಯಕ್ರಮ ಆಯೋಜಿಸುವ ಉದ್ದೇಶ, ಅದರ ಹಿನ್ನೆಲೆಯ ಬಗ್ಗೆ ಆಯೋಜಕರಿಗೆ ಸ್ಪಷ್ಟ ಅರಿವಿರಬೇಕಾದುದು ಅಗತ್ಯ. ಪ್ರಚಾರಕ್ಕೋಸ್ಕರ, ಹೆಸರಿನ ಹಂಬಲಕ್ಕಾಗಿ ಯಾವುದಾದರೂ ಕಾರ್ಯಕ್ರಮ ಆಯೋಜಿಸಿದರೆ ಅದು ವಿಫಲವಾಗುವುದೇ ಹೆಚ್ಚು. ದಿನದ ಮಹತ್ವವನ್ನೂ ಭಾಷಣಕಾರರು ಹೇಗೆ ಅರಿತಿರುತ್ತಾರೋ, ಹಾಗೆಯೇ ಆಯೋಜಕರೂ ಅರಿತುಕೊಳ್ಳಬೇಕು. ಇದಕ್ಕಾಗಿ ಜ್ಞಾನ ಸಂಗ್ರಹ ಅಗತ್ಯ. ಪುಸ್ತಕಗಳಿಂದಲೋ, ಅಂತರ್ಜಾಲ ಮಾಧ್ಯಮಗಳಿಂದಲೋ ಮಹತ್ವದ ಕುರಿತಂತೆ ಪ್ರಾಥಮಿಕ ಜ್ಞಾನ ಹೊಂದುವುದು ತೀರಾ ಅಗತ್ಯ.

•••ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next