Advertisement

ಸುಳ್ಯ ಪದವು: ಈ ಶಾಲೆಯಲ್ಲಿ ಗೌರವ ಶಿಕ್ಷಕರೇ ಖಾಯಂ ಶಿಕ್ಷಕರು!

02:39 PM Jul 09, 2024 | Team Udayavani |

ಸುಳ್ಯ ಪದವು: ಅನುದಾನಿತ ಶಾಲೆಗಳಲ್ಲಿ ತೆರವಾದ ಶಿಕ್ಷಕರ ಹುದ್ದೆಗಳಿಗೆ ಸರಕಾರ ಶಿಕ್ಷಕರ ನೇಮಕಾತಿ ಮಾಡದೆ ಇರುವುದರಿಂದ ಸುಳ್ಯಪದವಿನ ಶ್ರೀ ಬಾಲಸುಬ್ರಹ್ಮಣ್ಯ ಅನುದಾನಿತ ಹಿರಿಯ ಶಾಲೆಯಲ್ಲಿ ಗೌರವ ಶಿಕ್ಷಕರೇ ಪಾಠ ಪ್ರವಚನಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

ಆಂಗ್ಲ ಮಾಧ್ಯಮ ಶಾಲೆಗಳ ಪೈಪೋಟಿ ನಡುವೆಯೂ ಈ ಕನ್ನಡ ಶಾಲೆಯಲ್ಲಿ 1ರಿಂದ 7ರ ವರೆಗೆ 180ರಷ್ಟು ವಿದ್ಯಾರ್ಥಿಗಳು
ವ್ಯಾಸಂಗ ಮಾಡುತ್ತಿದ್ದಾರೆ. 2021ರಲ್ಲಿ ಹಿ. ಪ್ರಾಥಮಿಕ ಶಾಲೆ ಪ್ರಾರಂಭಿಕ ಶಿಕ್ಷಕರು ನಿವೃತ್ತರಾಗಿ ಶೂನ್ಯ ಅಧ್ಯಾಪಕ ಶಾಲೆಯಾಗಿತ್ತು. ಅನಂತರ ತಾತ್ಕಾಲಿಕವಾಗಿ ಓರ್ವ ಶಿಕ್ಷಕರನ್ನು ಇಲಾಖೆ ನಿಯೋಜಿಸಿತ್ತು. ಇದೀಗ ಅವರು ವರ್ಗಾವಣೆಗೊಂಡಿರುವುದರಿಂದ ಈ ಶಾಲೆ ಮತ್ತೆ ಶೂನ್ಯ ಶಿಕ್ಷಕರ ಶಾಲೆಯಾಗಿದೆ.

ಶ್ರೀ ಬಾಲಸುಬ್ರಹ್ಮಣ್ಯ ಅನುದಾನಿತ ಹಿ. ಪ್ರಾಥಮಿಕ ಶಾಲೆ 1955ರಲ್ಲಿ ಸ್ಥಾಪನೆ ಯಾಗಿ 69 ವರ್ಷಗಳು ಸಂದಿದೆ. ನೂರಾರು
ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಹೆಗ್ಗಳಿಕೆಯಿದೆ. ಮಕ್ಕಳ ವಿದ್ಯಾರ್ಜನೆಗೆ ಬೇಕಾದ ಶಾಲಾ ಕೊಠಡಿಗಳು, ಶೌಚಾಲಯಗಳು, ಪೀಠೊಪಕರಣಗಳು, ಆಟದ ಮೈದಾನ, ಆಟೋಟಗಳ ಸಲಕರಣೆ  ಮುಂತಾದ ಸೌಲಭ್ಯಗಳನ್ನು ಒದಗಿಸಿಕೊಂಡು ವಿದ್ಯಾಸಂಸ್ಥೆ ಬಂದಿದೆ.

ಕಳೆದ 27 ವರ್ಷಗಳಿಂದ ಹೊಸ ಶಿಕ್ಷಕರ ನೇಮಕಾತಿಗಳಿಗೆ ಇಲಾಖೆ ಅನುಮತಿ ದೊರಕದ ಕಾರಣ ಗೌರವ ಶಿಕ್ಷಕರ ವೇತನ ಪಾವತಿ ಮತ್ತು ನಿರ್ವಹಣ ವೆಚ್ಚ ಆಡಳಿತ ಮಂಡಳಿ ಭರಿಸುತ್ತಿದೆ. ಪ್ರಸ್ತುತ ಶಾಲೆಗೆ ಕೇರಳ ಕರ್ನಾಟಕ ಗಡಿ ಭಾಗವಾದ ಸುಳ್ಯಪದವು, ಕನ್ನಡ್ಕ, ಮೈಕುಳಿ, ಕಾಯರ್‌ಪದವು, ಶಬರಿ ನಗರ, ಅಜಡ್ಕ, ಕುಳದಪಾರೆ, ಪದಡ್ಕ ಮುಂತಾದ ಪ್ರದೇಶದ ವಿದ್ಯಾರ್ಥಿಗಳು
ವ್ಯಾಸಂಗಕ್ಕಾಗಿ ಬರುತ್ತಿದ್ದಾರೆ. ವಿದ್ಯಾರ್ಥಿಗಳು ಶಾಲೆಗಳಿಗೆ ಬರಲು ಅನುಕೂಲವಾಗುವಂತೆ ವಾಹನದ ವ್ಯವಸ್ಥೆಯೂ ಇದೆ.

ಮಕ್ಕಳ ಹಕ್ಕು ಕಾಯ್ದೆ ಪ್ರಕಾರ ಪ್ರತೀ ವಿದ್ಯಾರ್ಥಿಗೂ ಶಿಕ್ಷಣ ನೀಡುವುದು ಸರಕಾರದ ಕರ್ತವ್ಯವಾಗಿದೆ. ಆದರೆ ಇಲ್ಲಿ ಸರಕಾರಿ ಶಿಕ್ಷಕರು ಇಲ್ಲದೆ ಇರುವುದು ವಿಪರ್ಯಾಸ. ಖಾಯಂ ಶಿಕ್ಷಕರನ್ನು ನೇಮಿಸಿ ಸುವಂತೆ ಪೋಷಕರು ಆಗ್ರಹಿಸಿದ್ದಾರೆ.

Advertisement

ಎಲ್‌  ಕೆ.ಜಿ., ಯು ಕೆ.ಜಿ. ಆರಂಭಿಸಲು ಆಗ್ರಹ
ಪ್ರಸ್ತುತ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಏಳು ಮಂದಿ ಅರ್ಹ ಗೌರವ ಶಿಕ್ಷಕರನ್ನು ಆಡಳಿತ ಮಂಡಳಿ ನೇಮಿಸಿ ಪಾಠ ಪ್ರವಚನಗಳಲ್ಲಿ ತೊಡಗಿಸಿದೆ. ಮಕ್ಕಳ ಪೋಷಕರು ಮತ್ತು ವಿದ್ಯಾಭಿಮಾನಿಳ ಒತ್ತಾಯದ ಮೇರೆಗೆ ಎಲ್‌ ಕೆ ಜಿ ಪ್ರಾರಂಭಿಸಲು
ಚಿಂತನೆ ನಡೆದಿದೆ.

ಅನುದಾನಿತ ಶಾಲೆಗಳಿಗೂ ಶಿಕ್ಷಕರ ನೇಮಕ ಮಾಡಿ
ಕೇರಳ ಕರ್ನಾಟಕದ ಗಡಿ ಭಾಗದಲ್ಲಿ ರುವ ಈ ಶಾಲೆಯಲ್ಲಿ 184 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಗೌರವ ಶಿಕ್ಷಕರನ್ನು ನೇಮಕ ಮಾಡಿ ವೇತನ ಪಾವತಿಸಲಾಗುತ್ತಿದೆ. ಸರಕಾರ ಅನುದಾನಿತ ಶಾಲೆಗಳಿಗೂ ಶಿಕ್ಷಕರ ನೇಮಕಾತಿ ಮಾಡಿ ಸಂಬಳ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು.
*ಎಚ್‌.ಡಿ. ಶಿವರಾಂ,
ಅಧ್ಯಕ್ಷರು ಸರ್ವೋದಯವಿದ್ಯಾಸಂಸ್ಥೆಗಳು, ಸುಳ್ಯ ಪದವು

*ಮಾಧವ ನಾಯಕ್‌ ಕೆ.

Advertisement

Udayavani is now on Telegram. Click here to join our channel and stay updated with the latest news.

Next