ಸುಳ್ಯ: ಯುವಕನೋರ್ವ ಸಾರ್ವಜನಿಕ ಸ್ಥಳದಲ್ಲಿ ತಲ್ವಾರ್ ಹಿಡಿದು ಓಡಾಡಿದ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಯುವಕನನ್ನು ವಶಕ್ಕೆ ಪಡೆದ ಘಟನೆ ಸುಳ್ಯದ ಕನಕಮಜಲು ಗ್ರಾಮದ ಸುಣ್ಣಮೂಲೆ ಎಂಬಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಸಂದೀಪ್ ಎಂಬಾತ ಸಾರ್ವಜನಿಕ ಸ್ಥಳದಲ್ಲಿ ತಲ್ವಾರ್ ಹಿಡಿದು ನಡೆದಾಡಿದ ವ್ಯಕ್ತಿ ಎಂದು ತಿಳಿದುಬಂದಿದೆ.
ಘಟನೆ ವಿವರ: ಮಂಗಳವಾರ ಸಂಜೆ ಘಟನೆ ನಡೆದಿದ್ದು, ಪ್ಲಾಸ್ಟಿಕ್ ಬ್ಯಾನರ್ ಹಾಕಲು ಅನುಮತಿ ನೀಡದೆ ಇರುವುದರಿಂದ ಯುವಕ ಕೋಪಗೊಂಡು ಈ ರೀತಿ ವರ್ತಿಸಿದ್ದಾನೆ ಎಂದು ಸಂದೇಶ ಹರಿದಾಡಿದೆ. ಯುವಕ ತಲ್ವಾರ್ ಹಿಡಿದು ರಸ್ತೆ ಬದಿ ನಡೆದಾಡಿದ ವಿಡಿಯೋ ವೈರಲ್ ಆಗಿ ಕ್ರಮಕ್ಕೆ ಆಗ್ರಹ ಕೇಳಿಬಂದಿತ್ತು. ಬುಧವಾರ ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಪಡೆದ ಪೊಲೀಸರು ಯುವಕ ಮತ್ತು ತಲ್ವಾರ್ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:ಕಾಶ್ಮೀರಿ ಪಂಡಿತ ರಾಹುಲ್ ರನ್ನು ಹತ್ಯೆಗೈದಿದ್ದ ಮೋಸ್ಟ್ ವಾಂಟೆಡ್ ಉಗ್ರರಿಬ್ಬರ ಎನ್‌ಕೌಂಟರ್
ಯುವಕನ ವಿರುದ್ಧ ಸುಮೊಟೋ ಪ್ರಕರಣ ದಾಖಲಿಸಲಾಗಿದೆ. ಸಂದೀಪ್ ವಿಪರೀತ ಮದ್ಯ ಸೇವನೆಯ ಚಟ ಹೊಂದಿದ್ದು, ಕಳೆದ 8 ತಿಂಗಳಿನಿಂದ ಮದ್ಯಸೇವನೆ ನಿಲ್ಲಿಸಿದ್ದು ಪುನಃ ಮದ್ಯಪಾನ ಆರಂಭಿಸಿದ ಹಿನ್ನೆಲೆಯಲ್ಲಿ ಮಾನಸಿಕ ಸ್ಥಿರತೆ ಕಳೆದುಕೊಂಡು ಈ ರೀತಿ ವರ್ತಿಸಿದ್ದಾನೆ ಎಂದು ತಿಳಿದುಬಂದಿದೆ.