Advertisement

ಸುಳ್ಯ: ಖರೀದಿಗೆ ಸಮಯ ಮಿತಿ; ನಗರದಲ್ಲಿ ಜನದಟ್ಟಣೆ

11:11 PM Mar 27, 2020 | Sriram |

ಸುಳ್ಯ: ಆವಶ್ಯಕ ಸಾಮಗ್ರಿಗಳ ಖರೀದಿಗೆ ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಮಾತ್ರ ಅವಕಾಶ ಕಲ್ಪಿಸಿರುವುದರಿಂದ ಆ ಅವಧಿಯಲ್ಲಿ ಜನರು ಅಂಗಡಿಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುತ್ತಿದ್ದು, ನಗರದಲ್ಲಿ ಜನದಟ್ಟಣೆಗೆ ಕಾರಣವಾಗಿದೆ.ಕೋವಿಡ್‌ 19 ಸೋಂಕನ್ನು ತಪ್ಪಿಸಲು ಇರುವ ಏಕೈಕ ವಿಧಾನವಾದ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಜನರು ವಿಫ‌ಲರಾಗುತ್ತಿದ್ದಾರೆ.

Advertisement

ಇದೇ ವೇಳೆ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೆಟ್ರೋಲ್‌ ಬಂಕ್‌ಗಳನ್ನು ತಾತ್ಕಾಲಿಕವಾಗಿ ಬಂದ್‌ ಮಾಡ ಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶಗಳ ಎಲ್ಲ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಿಳಿ ಬಣ್ಣದಲ್ಲಿ ಚೌಕಾಕಾರದ ಗುರುತು ಮಾಡಲಾಗಿದ್ದು, ಜನರು ಅದರ ಮೇಲೆಯೇ ಸರದಿಯಲ್ಲಿ ನಿಂತು ವಸ್ತುಗಳನ್ನು ಖರೀದಿಸುತ್ತಿರುವ ದೃಶ್ಯ ಕಂಡುಬಂತು. ಸರಕು ಸಾಗಾಟದ ವಾಹನಗಳ ಅಲಭ್ಯತೆಯಿಂದಾಗಿ ಗ್ರಾಮೀಣ ಪ್ರದೇಶಗಳ ದಿನಸಿ ಅಂಗಡಿಗಳಲ್ಲಿ ಸಾಮಗ್ರಿಗಳ ಕೊರತೆಎಂದು ಸಾರ್ವಜನಿಕರು ತಿಳಿಸಿದ್ದಾರೆ.

ತುರ್ತು ಸೇವೆ
ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಎಸ್‌ಎಸ್‌ಎಫ್‌ ಮತ್ತು ಎಸ್‌ವೈಎಸ್‌ ತಂಡಗಳು ತುರ್ತುಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿವೆ. ಬಡ ನಿರ್ಗತಿಕರಿಗೆ ಆಹಾರ ತಲುಪಿಸುವುದು, ಅನಾರೋಗ್ಯ ಪೀಡಿತರಿಗೆ ಔಷಧಗಳನ್ನು ತಲುಪಿಸಿ, ಅತ್ಯಗತ್ಯ ಸಂದರ್ಭಗಳಲ್ಲಿ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಿ ಆಸ್ಪತ್ರೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡುವುದು, ರಕ್ತದಾನ, ಅರ್ಧದಾರಿಯಲ್ಲಿ ಸಿಲುಕಿದವರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸುವುದು, ಕೋವಿಡ್‌ 19 ಮಾರಕ ವೈರಸಿನ ಬಗ್ಗೆ ವಿವಿಧೆಡೆಗಳಲ್ಲಿ ಜಾಗೃತಿ ಮೂಡಿಸುವುದು ಸಹಿತ ಹತ್ತು ಹಲವು ತುರ್ತು ಸೇವೆಗಳಲ್ಲಿ ತೊಡಗಿಸಿಕೊಂಡಿದೆ.

ಮನೆಗಳಲ್ಲಿ ನಮಾಜ್‌ಗೆ ಮನವಿ
ತಾಲೂಕಿನ ಎಲ್ಲ ಜಮಾಅತ್‌ಗಳು ಸಂಬಂಧಪಟ್ಟ ಖಾಝಿಗಳ, ಸರಕಾರದ ಆದೇಶವನ್ನು ತಪ್ಪದೇ ಪಾಲಿಸಬೇಕಾಗಿರುವುದರಿಂದ ಶುಕ್ರವಾರದ ಜುಮಾ ಹಾಗೂ 5 ಹೊತ್ತಿನ ನಮಾಜನ್ನು ಮಸೀದಿಗಳಲ್ಲಿ ಸಾಮೂಹಿಕವಾಗಿ ನಿರ್ವಹಿಸದೇ ಸರಕಾರದ ಮುಂದಿನ ಆದೇಶದವರೆಗೆ ಮನೆಯಲ್ಲಿಯೇ ನಿರ್ವಹಿಸುವಂತೆ ಕರ್ನಾಟಕ ಮುಸ್ಲಿಂ ಜಮಾಅತ್‌ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಮಹಮ್ಮದ್‌ ಕುಂಞ ಗೂನಡ್ಕ ಮನವಿ ಮಾಡಿದ್ದಾರೆ.

Advertisement

ಸವಿತಾ ಸಮಾಜದ ಮನವಿ
ಕ್ಷೌರಿಕ ವೃತ್ತಿಯನ್ನು ಆವಶ್ಯಕ ಸೇವೆಯ ಪಟ್ಟಿಗೆ ಸೇರಿಸಿ ಕಾರ್ಯನಿರ್ವಹಿಸಲು ಅನುವು ಮಾಡಿ ಕೊಡಬೇಕು. ಕ್ಷೌರಿಕರಿಗೆ ಮಾಸ್ಕ್ ಮತ್ತು ಗ್ಲೌಸ್‌ ಉಚಿತ ಅಥವಾ ರಿಯಾಯಿತಿ ದರದಲ್ಲಿ ಒದಗಿಸಬೇಕು ಎಂದು ಸುಳ್ಯ ತಾಲೂಕು ಸವಿತಾ ಸಮಾಜ, ಸುಳ್ಯ ತಾಲೂಕು ಬಾರ್ಬರ್ಸ್‌ ಅಸೋಸಿಯೇಶನ್‌ ಸರಕಾರಕ್ಕೆ ಮನವಿ ಸಲ್ಲಿಸಿದೆ.

ಸವಿತಾ ಸಮಾಜದ ಅಧ್ಯಕ್ಷ ಗುರುರಾಜ ಅಜ್ಜಾವರ, ಬಾರ್ಬರ್ಸ್‌ ಅಸೋಸಿ ಯೇಶನ್‌ ಅಧ್ಯಕ್ಷ ಪದ್ಮನಾಭ ಭಂಡಾರಿ, ಪದಾಧಿಕಾರಿಗಳಾದ ಅವಿನಾಶ್‌ ಕೇರ್ಪಳ, ಧನು ಮೂರ್ನಾಡು, ಗೌರವ ಸಲಹೆಗಾರರಾಗಿರುವ ಹರೀಶ್‌ ಬಂಟ್ವಾಳ ತಹಶೀಲ್ದಾರ್‌ ಅನಂತ ಶಂಕರ ಅವರಿಗೆ ಮನವಿ ಅರ್ಪಿಸಿದರು.

ಪಡಿತರ ಅಂಗಡಿಗಳಲ್ಲಿ ಮಾರ್ಚ್‌ನ ಪಡಿತರ ಸಾಮಗ್ರಿ ವಿತರಿಸಲು ಆರಂಭಿಸಿದ್ದು, ಇಲ್ಲೂ ಅಂತರ ಸೂಚಿ ಅಳವಡಿಸಲಾಗಿದೆ.

ಬಾಡಿಗೆ ಕಟ್ಟುವ ಚಿಂತೆ
ನಗರಗಳಲ್ಲಿ ಬಾಡಿಗೆ ಕಟ್ಟಡಗಳಲ್ಲಿ ವಾಣಿಜ್ಯ ವ್ಯವಹಾರ ನಡೆಸುವ ಅಂಗಡಿ ಮಾಲಕರಿಗೆ ತಿಂಗಳ ಬಾಡಿಗೆ ಮೊತ್ತ ಪಾವತಿಸುವ ಬಗ್ಗೆ ಚಿಂತೆ ಆರಂಭಗೊಂಡಿದೆ.ಅಂಗಡಿ ಮುಂಗಟ್ಟು ಬಂದ್‌ ಆದ ಕಾರಣ ಆದಾಯ ಇಲ್ಲದೆ ಸಮಸ್ಯೆ ತಲೆದೋರಿದೆ. ಇದರ ಜತೆಗೆ ಈ ವ್ಯವಹಾರ ನಂಬಿ ಜೀವನ ಸಾಗಿಸುವ ಕುಟುಂಬಕ್ಕೂ ಈಗ ಆರ್ಥಿಕ ಸಂಕಷ್ಟದ ಭೀತಿ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next