Advertisement

ಸುಳ್ಯಪದವು: ಕೊಳವೆಬಾವಿಯಲ್ಲಿಯೂ ಬತ್ತಿದೆ ನೀರು

05:25 AM Mar 10, 2019 | |

ಸುಳ್ಯಪದವು : ಸುಳ್ಯಪದವು ಪ್ರದೇಶದಲ್ಲಿ ಬಡಗನ್ನೂರು ಗ್ರಾ.ಪಂ. ವ್ಯಾಪ್ತಿಯ ಕುಡಿಯುವ ನೀರು ಯೋಜನೆಯ ಮೂಲಕ ನೀರು ಬಾರದೇ ಇರುವುದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಪಂಚಾಯತ್‌ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

ಬಡಗನ್ನೂರು ಗ್ರಾ.ಪಂ .ವ್ಯಾಪ್ತಿಯ ಪಡುವನ್ನೂರು ಗ್ರಾಮದ ಸುಳ್ಯಪದವುನಲ್ಲಿ ವಿಶ್ವ ಬ್ಯಾಂಕ್‌ ಅನುದಾನದಿಂದ ನಿರ್ಮಿಸಿದ ಲಕ್ಷ ಲೀ. ಸಾಮರ್ಥ್ಯದ ಟ್ಯಾಂಕ್‌ ಇದೆ. ಕಳೆದ ಒಂದು ತಿಂಗಳಿನಿಂದ ಇದರಲ್ಲಿ ನೀರು ತುಂಬಿಲ್ಲ. ಕಾರಣ ಕೊಳವೆ ಬಾವಿಯಲ್ಲಿ ನೀರು ಇಂಗಿರುವುದು. ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಪಂಚಾಯತ್‌ ಸಕಾಲಕ್ಕೆ ಸ್ಪಂದನೆ ನೀಡಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಮಾತಿನ ಚಕಮಕಿ
ಕುಡಿಯುವ ನೀರಿಗೆ ಸಂಬಂಧಿಸಿ ನೀರು ನಿರ್ವಾಹಕ ಮತ್ತು ಸ್ಥಳೀಯ ನಿವಾಸಿಯೋರ್ವರು ಮಾತಿನ ಚಕಮಕಿ ನಡೆಸಿದ್ದಾರೆ. ಪೊಲೀಸ್‌ ಸಿಬಂದಿ ಸಕಾಲದಲ್ಲಿ ಮಧ್ಯೆ ಪ್ರವೇಶಿಸಿರುವುದರಿಂದ ವಿಕೋಪಕ್ಕೆ ಹೋಗುವುದು ತಪ್ಪಿತ್ತು.

ಶಾಸಕರಿಗೆ ದೂರು
ಕಳೆದ ತಿಂಗಳಿನಿಂದ ಸಂಯಮದಿಂದ ಇದ್ದ ಸುಳ್ಯಪದವು ನಿವಾಸಿಗಳು ಸ್ಥಳೀಯ ಪಂಚಾಯತ್‌ನಿಂದ ಸಮಸ್ಯೆ ಬಗೆಹರಿಸುವ ಲಕ್ಷಣ ಕಾಣದೇ ಇರುವುದರಿಂದ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರಿಗೆ ದೂರು ನೀಡಿದ್ದಾರೆ. ಈಗಾಗಲೇ ಬಡಗನ್ನೂರು ಗ್ರಾ.ಪಂ.ಗೆ ಟಾಸ್ಕ್  ಫೋರ್ಸ್ ನಿಂದ ಕೊಳವೆಬಾವಿ ಕೊರೆಸಲು ಅನುಮತಿ ನೀಡಿರುವ ಬಗ್ಗೆ ಸುಳ್ಯಪದವು ನಿವಾಸಿಗಳಿಗೆ ಶಾಸಕ ಸಂಜೀವ ಮಠಂದೂರು ಅವರು ಮಾಹಿತಿ ನೀಡಿದರು.

ಸಮಸ್ಯೆ ಬಗೆಹರಿಸಿ
ತಾಲೂಕು ಪಂಚಾಯತ್‌ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ ಮತ್ತು ಪಂಚಾಯತ್‌ ಅಧ್ಯಕ್ಷ ಕೇಶವ ಗೌಡ ಅವರ ಮುತುವರ್ಜಿಯಲ್ಲಿ ಕೊಳವೆ ಬಾವಿಗೆ ಪಾಯಿಂಟ್‌ ಗುರುತಿಸುವ ಕಾರ್ಯ ನಡೆದಿದೆ. ಕೊಳವೆಬಾವಿ ಕೊರೆಯುವ ಕೆಲಸ ಆಗಿಲ್ಲ. ಕೂಡಲೇ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

ಖಾಸಗಿ ಜಲಮೂಲವೇ ಆಧಾರ
ಕುಡಿಯವ ನೀರಿಗಾಗಿ ಸ್ಥಳೀಯರು ಖಾಸಗಿ ವ್ಯಕ್ತಿಗಳ ಬಾವಿ, ಕೆರೆಯನ್ನು ಅವಲಂಬಿಸಿದ್ದಾರೆ. ಒಂದು ಕಿ.ಮೀ. ದೂರದಿಂದ ನೀರನ್ನು ತರಬೇಕಾಗಿದೆ. ಶಾಲಾ ಮಕ್ಕಳಿಗೆ ಅಕ್ಷರ ದಾಸೋಹಕ್ಕೆ ಮತ್ತು ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು ನಡೆಯುತ್ತಿದ್ದು, ಅವರಿಗೂ ಸಹ ನೀರಿನ ಅಭಾವ ಕಾಡಿದೆ. ಕುಡಿಯುವ ನೀರಿನ ಸಮಸ್ಯೆಗೆ ಶೀಘ್ರ ಸ್ಪಂದಿಸಿ ಬಗೆಹರಿಸುವ ಬಗ್ಗೆ ಜಿಲ್ಲಾಧಿಕಾರಿಗಳ ಅನುಮತಿ ಇದ್ದರೂ, ಸಮಸ್ಯೆ ಬಗೆಹರಿದಿಲ್ಲ.

ಪಾಯಿಂಟ್‌ ಗುರುತಿಸಿದ್ದೇವೆ
ಕೊಳವೆಬಾವಿ ಕೊರೆಯಲು 3 ಪಾಯಿಂಟ್‌ಗಳನ್ನು ಸರಕಾರಿ ಜಲತಜ್ಞರು ಗುರುತಿಸಿ ಆಗಿದೆ. ವರದಿ ಬಂದ ಮೇಲೆ ಕೊಳವೆಬಾವಿಯನ್ನು ಕೊರೆಯಲಾಗುವುದು. ನೀರು ಸಿಕ್ಕಿದ ತತ್‌ಕ್ಷಣ ಪಂಪ್‌ ಅಳವಡಿಸಿ ಕುಡಿಯುವ ನೀರಿಗೆ ವ್ಯವಸ್ಥೆ ಮಾಡುತ್ತೇವೆ.
– ಕೇಶವ ಗೌಡ ಕನ್ನಯ 
ಬಡಗನ್ನೂರು ಗ್ರಾ.ಪಂ. ಅಧ್ಯಕ್ಷರು

ಶೀಘ್ರ ಸ್ಪಂದಿಸಿ
ಕಳೆದ ಕೆಲ ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ಸ್ಥಳೀಯ ಖಾಸಗಿ ವ್ಯಕ್ತಿಗಳ ಬಾವಿಯಿಂದ ದಿನಾಲೂ ನೀರನ್ನು ತರುತ್ತೇವೆ. 10ಕ್ಕಿಂತಲೂ ಹೆಚ್ಚು ಮನೆಯವರು ಈ ನೀರನ್ನು ಅವಲಂಬಿಸಿದ್ದಾರೆ. ಇದರಲ್ಲಿ ನೀರಿನ ಪ್ರಮಾಣ ಅಲ್ಲೂ ಕಡಿಮೆಯಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸಬೇಕು.
– ಗುರುಕಿರಣ್‌ ಎನ್‌.ಜಿ.
ಸ್ಥಳೀಯರು

ಮಾಧವ ನಾಯಕ್‌ ಕೆ.

Advertisement

Udayavani is now on Telegram. Click here to join our channel and stay updated with the latest news.

Next