Advertisement

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

12:14 AM May 27, 2022 | Team Udayavani |

ಸುಳ್ಯ : ಸುಳ್ಯದ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಮೀನುಗಾರಿಕೆ ಸಚಿವ ಎಸ್‌. ಅಂಗಾರ, ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಕುಮಾರ್‌ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಭೆ ನಡೆಸಿದರು.

Advertisement

ನಗರ ಪಂಚಾಯತ್‌ ಸದಸ್ಯ ವೆಂಕಪ್ಪ ಗೌಡ ಮಾತನಾಡಿ, ಶಾಂತಿನಗರದಲ್ಲಿ ನಡೆಯುತ್ತಿರುವ ಕ್ರೀಡಾಂಗಣ ಕಾಮಗಾರಿ ಕೆಲಸದಲ್ಲಿ ತಂದು ಹಾಕಿರುವ ಮಣ್ಣು ಬಿರುಕು ಬಿಟ್ಟಿದ್ದು, ಕುಸಿದು ಕೆಳ ಭಾಗದ ಮನೆಯವರಿಗೆ ಅಪಾಯ ಸಂಭವಿಸುವ ಭೀತಿಯಿಂದ ಸ್ಥಳೀಯರು ಆತಂಕದಲ್ಲಿದ್ದಾರೆ ಎಂದರು.

ಉತ್ತರಿಸಿ ಜಿಲ್ಲಾಧಿಕಾರಿಗಳು, ಈ ಬಗ್ಗೆ ಸ್ಥಳೀಯರು ನೀಡಿದ ಮನವಿಯಂತೆ ಮೊನ್ನೆ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದರು. ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು. ನೀರು ಹರಿದು ಹೋಗಲು ವ್ಯವಸ್ಥೆ ಮಾಡಿ, ಬಿರುಕು ಸರಿ ಪಡಿಸುವಂತೆ ಹೇಳಿದರು.

ಮ್ಯಾನ್‌ಹೋಲ್‌ ಅವ್ಯವಸ್ಥೆ
ಹೆದ್ದಾರಿಯ ಮ್ಯಾನ್‌ಹೋಲ್‌ ಬಗ್ಗೆ ದೂರು ವ್ಯಕ್ತವಾಯಿತು. ಉತ್ತರಿಸಿದ ಡಿಸಿ, ಹೆದ್ದಾರಿಯ ಮ್ಯಾನ್‌ಹೋಲ್‌ ಹೆಚ್ಚಿನ ಕಡೆ ನಿರ್ದಿಷ್ಟವಾಗಿ ಸರಿಯಾಗಿಲ್ಲವೆಂಬ ಮಾಹಿತಿ ಲಭ್ಯವಾಗಿದೆ. ಈ ಭಾಗದಲ್ಲಿ ಹೆಚ್ಚಿನ ಮಳೆಯೂ ಕಾರಣವಾಗಿರಬಹುದು. ಇದಕ್ಕೆ ಸೂಕ್ತ ರೀತಿಯಲ್ಲಿ ತಂತ್ರಜ್ಞಾನ ಬಳಸಿ ಸಮಸ್ಯೆ ಆಗದಂತೆ ಕಾಮಗಾರಿ ನಿರ್ವಹಿಸಲು ಅರ್ಬನ್‌ ವಾಟರ್‌ ಸಪ್ಲೆ„ ಅವರಿಗೆ ಸೂಚಿಸಲಾಗಿದೆ ಎಂದರು.

110 ಕೆವಿ ವಿದ್ಯುತ್‌ ಸ್ಟೇಶನ್‌ಗೆ ಸಂಬಂಧಿಸಿದಂತೆ ಈಗಾಗಲೇ ಎರಡು ಸಭೆ ನಡೆಸಲಾಗಿದೆ. ಅರಣ್ಯ ಇಲಾಖೆಗೆ ಜಾಗ ಸೂಚಿಸಲಾಗಿದೆ. ಗೇರು ನಿಗಮಕ್ಕೆ ಕೆಪಿಟಿಸಿಎಲ್‌ನಿಂದ ಪರಿಹಾರ ನೀಡುವ ಬಗ್ಗೆ ತೀರ್ಮಾನಿಸಲಾಗಿದೆ. ಮುಂದಿನ ಹಂತದ ಅನುಮತಿ ಸಿಕ್ಕದ ಕೂಡಲೇ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

Advertisement

ಮಿಲಿಟರಿ ಗ್ರೌಂಡ್‌: ವಾರದಲ್ಲಿ ವರದಿ
ಜಯನಗರ ಮಿಲಿಟರಿ ಗ್ರೌಂಡ್‌ ವಿಚಾರದ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಅಲ್ಲಿನ ಜಾಗ ಮಿಲಿಟರಿಯದ್ದು ಎಂಬುದಕ್ಕೆ ದಾಖಲೆ ಇಲ್ಲದಿರುವುದರಿಂದ ವಿಶೇಷ ಪ್ರಕರಣದಡಿ ಅಲ್ಲಿನ ನಿವಾಸಿಗಳಿಗೆ ಮಂಜೂರಾತಿ ನೀಡಲು ಸರಕಾರದ ಕ್ಯಾಬಿನೆಟ್‌ನಲ್ಲಿ ಮಂಜೂರಾತಿ ನೀಡಲು ಸಚಿವರ ಮುಖಾಂತರ ಈ ವಾರದಲ್ಲಿ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪಾರ್ಕಿಂಗ್‌ : ಕಟ್ಟಡ ಮಾಲಕರೇ ಹೊಣೆ
ಸುಳ್ಯದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಸರಿಯಾಗಿಲ್ಲ ಎಂಬ ದೂರು ವ್ಯಕ್ತವಾಗಿ, ಬೈಪಾಸ್‌ ರಸ್ತೆ ನಿರ್ಮಿಸುವಂತೆ ಸಲಹೆ ಕೇಳಿಬಂತು. ಕೆಲವೆಡೆ ಬೈಪಾಸ್‌ ನಿರ್ಮಿಸದೆಯೇ ಪಾರ್ಕಿಂಗ್‌ ಸಮಸ್ಯೆ ಸರಿಪಡಿಸಲಾಗಿದೆ. ಆದಷ್ಟು ಮಳಿಗೆ, ಕಟ್ಟಡದವರು ತಮ್ಮ ಸಮುಚ್ಚಯದಲ್ಲೇ ಪಾರ್ಕಿಂಗ್‌ಗೆ ಸ್ಥಳ ಕಲ್ಪಿಸಬೇಕು ಎಂದು ಡಿಸಿ ಸಲಹೆ ನೀಡಿದರು.

ಅಡಿಕೆ ಕೊಳೆರೋಗಕ್ಕೆ ಸೂಕ್ತ ಪರಿಹಾರ ನೀಡುವಂತೆ, ಅರಣ್ಯ ಸಮಸ್ಯೆ ಪರಿಹರಿಸುವಂತೆ, ಪೇರಡ್ಕದಲ್ಲಿ ಅಪಘಾತ ವಲಯದಲ್ಲಿ ಚರಂಡಿ ದುರಸ್ತಿ ಪಡಿಸುವಂತೆ, ಮಂಡೆಕೋಲು ಗ್ರಾಮದ 62 ಎಕ್ರೆ ಕಂದಾಯ ಇಲಾಖೆಗೆ ವಹಿಸುವಂತೆ, ಮರ್ಕಂಜ ಕಲ್ಲಿನ ಕೋರೆಗೆ ತಡೆ ನೀಡಿ ಹಾನಿ ತಪ್ಪಿಸುವಂತೆ ಸೇರಿದಂತೆ ವಿವಿಧ ಸಮಸ್ಯೆ, ವಿಚಾರಗಳ ಬಗ್ಗೆ ಸಾರ್ವಜನಿಕರು ಸಚಿವರು, ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ನ.ಪಂ. ಅಧ್ಯಕ್ಷ ವಿನಯ ಕುಮಾರ್‌ ಕಂದಡ್ಕ, ತಹಶೀಲ್ದಾರ್‌ ಅನಿತಾಲಕ್ಷ್ಮೀ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬಂದಿ, ಸಾರ್ವಜನಿಕರು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next