Advertisement

ಮನೆ ನಿರ್ಮಾಣಕ್ಕೆ ಆರ್ಥಿಕ ಸಂಕಷ್ಟ: ಗುಡಿಸಲು ವಾಸದಲ್ಲಿರುವ ವೃದ್ಧ ದಂಪತಿ

03:08 PM Jul 17, 2022 | Team Udayavani |

ಸುಳ್ಯ: ಗುಡಿಸಲಿನಲ್ಲಿ ವಾಸಿ ಸುತ್ತಿರುವ ಅನಾರೋಗ್ಯ ಪೀಡಿತ ಮಕ್ಕಳಿಲ್ಲದ ವೃದ್ಧ ದಂಪತಿಗೆ ವಸತಿ ಯೋಜನೆಯಲ್ಲಿ ಮನೆ ಮಂಜೂರಾಗಿ ಕೆಲಸ ಆರಂಭಿಸಲು ಆದೇಶ ಪತ್ರ ನೀಡಲಾಗಿದ್ದರೂ ದಂಪತಿಗೆ ಕೆಲಸ ಆರಂಭಿಸಲು ಆರ್ಥಿಕ ಸಂಕಷ್ಟ ಎದುರಾಗಿ ನೆರವಿನ ನಿರೀಕ್ಷೆಯಲ್ಲಿದ್ದಾರೆ.

Advertisement

ಅಮರಮಟ್ನೂರು ಗ್ರಾ.ಪಂ. ವ್ಯಾಪ್ತಿಯ ಅಮರಪಟ್ನೂರಿನ ಕಲ್ಲುಮನೆಯ 9 ಸೆಂಟ್ಸ್‌ ಜಾಗದಲ್ಲಿ ವಾಸಿಸುತ್ತಿರುವ 80 ವರ್ಷದ ನಾರಾಯಣ ಮುಗೇರ (80) ಹಾಗೂ 61 ವರ್ಷದ ಗಂಗು ಅವರ ಕುಟುಂಬವೇ ಸಂಕಷ್ಟದಲ್ಲಿ ಇರುವುದು.

ಮನೆ ಮಂಜೂರಾತಿ ಪತ್ರ ದೊರೆತ ಬಳಿಕ ದಂಪತಿ ತಮ್ಮ ಹಳೆ ಮನೆಯನ್ನು ಕೆಡವಿದ್ದಾರೆ. ವಾಸ್ತವ್ಯಕ್ಕಾಗಿ ಮೇಲ್ಛಾವಣಿಗೆ ಟರ್ಪಾಲು ಹಾಕಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇಲ್ಲಿ ಮಳೆ ನೀರು ಸೋರುತ್ತಿದೆ.

ಜಾಗ ಸಮತಟ್ಟು

ಮನೆ ಕೆಲಸ ಆರಂಭಿಸಲು ಗ್ರಾ.ಪಂ. ನವರು ಸೂಚನೆ ನೀಡಿರುವ ಹಿನ್ನಲೆಯಲ್ಲಿ ವೃದ್ಧ ದಂಪತಿ ತಮ್ಮಲ್ಲಿದ್ದ ಹಣದಿಂದ ಹಳೆ ಮನೆಯನ್ನು ಭಾಗಶಃ ಕೆಡವಿ, ನೂತನ ಮನೆ ನಿರ್ಮಿಸಲು ಜೇಸಿಬಿ ಮೂಲಕ ಜಾಗ ಸಮತಟ್ಟು ಮಾಡಿದ್ದಾರೆ. ಅಲ್ಲಿಗೆ ಅವರ ಬಳಿ ಇದ್ದ ಹಣ ಖರ್ಚಾಗಿದೆ. ಸರಕಾರದ ಪಿಂಚಣಿ, ಧರ್ಮಸ್ಥಳ ಯೋಜನೆಯ ಪಿಂಚಣಿ, ಸರಕಾರದ ಪಡಿತರ ಪಡೆದು ಬದುಕು ಸಾಗಿಸುತ್ತಿರುವ ಇವರಿಗೆ ಈಗ ದಿಕ್ಕೇ ತೋಚದಂತಾಗಿದೆ.

Advertisement

ನೆರವಿನ ನಿರೀಕ್ಷೆಯಲ್ಲಿ

ಮನೆಯ ಪಂಚಾಗದ ಕೆಲಸಕ್ಕೆ ಕಲ್ಲು, ಸಿಮೆಂಟ್‌ ಇತರ ಸಾಮಾಗ್ರಿ ಸೇರಿದಂತೆ ಇತರ ಕೆಲಸ ನಿರ್ವಹಿಸಲು ಹಣದ ಆವಶ್ಯಕತೆ ಇದ್ದು ಅದಕ್ಕಾಗಿ ನೆರವನ್ನು ಅವರು ಯಾಚಿಸಿದ್ದಾರೆ. ಪಂಚಾಂಗ ಕೆಲಸ ಪೂರ್ಣಗೊಂಡಲ್ಲಿ ಮನೆ ನಿರ್ಮಾಣದ ಮುಂದಿನ ಕೆಲಸಕ್ಕೆ ಸರಕಾರದಿಂದ ಹಂತ ಹಂತವಾಗಿ ಬಿಡುಗಡೆಯಾಗುವ ಹಣವನ್ನು ಬಳಸಿ ಮನೆ ಪೂರ್ತಿಗೊಳಿಸಲು ಯತ್ನಿ ಸುತ್ತೇವೆ ಎಂದು ದಂಪತಿ ಹೇಳುತ್ತಿದ್ದಾರೆ.

ಸಹಕಾರದ ನಿರೀಕ್ಷೆ: ನಾವಿಬ್ಬರು ಅನಾರೋಗ್ಯ ಪೀಡಿತರಾಗಿದ್ದು, ಕೂಲಿ ಕೆಲಸಕ್ಕೆ ತೆರಳಲು ಅಶಕ್ತರಾಗಿದ್ದೇವೆ. ಮನೆ ನಿರ್ಮಿಸಲು ಜಾಗ ಸಮತಟ್ಟು ಮಾಡಿ ಇದ್ದ ಹಣವನ್ನು ಅದಕ್ಕೆ ಖರ್ಚು ಮಾಡಿದ್ದೇವೆ. ಮುಂದಿನ ಕೆಲಸಕ್ಕೆ ಹಣ ನಮ್ಮಲ್ಲಿ ಇಲ್ಲ. ಆದ್ದರಿಂದ ದಾನಿಗಳ ಸಹಕಾರ ಬಯಸುತ್ತಿದ್ದೇವೆ. –ನಾರಾಯಣ ಮುಗೇರ ಮತ್ತು ಗಂಗು

Advertisement

Udayavani is now on Telegram. Click here to join our channel and stay updated with the latest news.

Next