Advertisement

ಬೀದಿ ದೀಪಗಳು ಉರಿಯುತ್ತಿಲ್ಲ: ಸದಸ್ಯರ ಅಳಲು

12:19 PM Oct 05, 2018 | Team Udayavani |

ಸುಳ್ಯ : ನ.ಪಂ.ಗೆ ಯಾವುದೇ ಮಾಹಿತಿ ನೀಡದೆ ನಗರದಲ್ಲಿ ವಿದ್ಯುತ್‌ ಸಂಬಂಧಿ ಕಾಮಗಾರಿ ನಡೆಸಿದ ಕಾರಣ ಅರ್ಧಕ್ಕರ್ಧ ಬೀದಿ ದೀಪಗಳು ಉರಿಯುತ್ತಿಲ್ಲ ಎಂದು ನ.ಪಂ. ಸದಸ್ಯರು ಅಳಲು ತೋಡಿಕೊಂಡರು.

Advertisement

ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರ ಉಪಸ್ಥಿತಿಯಲ್ಲಿ ಗುರುವಾರ ನ.ಪಂ.ನಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾವಗೊಂಡು ಚರ್ಚಾ ವಸ್ತುವಾಯಿತು. ಸದಸ್ಯರಾದ ಗೋಪಾಲ ನಡುಬೈಲು, ಪ್ರೇಮಾ ಟೀಚರ್‌, ಮೋಹಿನಿ, ಮೀನಾಕ್ಷಿ ಮೊದಲಾದವರು ಬೀದಿ ದೀಪದ ಸಮಸ್ಯೆಯ ಕುರಿತು ಗಮನ ಸೆಳೆದರು.

ಎಂಜಿನಿಯರ್‌ ಶಿವಕುಮಾರ್‌ ಮಾಹಿತಿ ನೀಡಿ, ನಗರದಲ್ಲಿ 3,849 ಬೀದಿ ದೀಪಗಳು ಇವೆ. ತಿಂಗಳಿಗೆ 1.24 ಲಕ್ಷ ರೂ. ವೆಚ್ಚದಲ್ಲಿ ನಿರ್ವಹಣೆಗೆ ಗುತ್ತಿಗೆ ನೀಡಲಾಗಿದೆ. ಆದರೆ ಕೆಲ ದಿನಗಳಿಂದ ನಗರದಲ್ಲಿ ವಿದ್ಯುತ್‌ ಕಂಬ, ತಂತಿ ಬದಲಾವಣೆ ಮಾಡಲಾಗುತ್ತಿದೆ. ಇದರಿಂದ ಹಾನಿಯಾಗಿದೆ. ಈ ಕಾಮಗಾರಿ ಯಾರು ನಡೆಸುತ್ತಿದ್ದಾರೆ ಎಂಬ ಬಗ್ಗೆ ನ.ಪಂ. ಗೆ ಮಾಹಿತಿ ಇಲ್ಲ ಎಂದು ಹೇಳಿದರು.

ಕೋಟ ಶ್ರೀನಿವಾಸ ಪೂಜಾರಿ ಮೆಸ್ಕಾಂ ಅಧಿಕಾರಿಯನ್ನು ಸಭೆಗೆ ಕರೆಯಿಸಿದರು. ಉತ್ತರ ನೀಡಿದ ಅಧಿಕಾರಿ, ಇದು ಕೇಂದ್ರ ಸರಕಾರದ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ. ನಗರದ ವೋಲ್ಟೇಜ್‌ ವ್ಯವಸ್ಥೆ ಸುಧಾರಣೆಗೆ ಹಳೆ ತಂತಿ, ವಿದ್ಯುತ್‌ ಕಂಬ ಬದಲಾವಣೆ, ಟಿ.ಸಿ. ಅಳವಡಿಕೆ ನಡೆಯುತ್ತಿದೆ. ಏಜೆನ್ಸಿ ಸಮೀಕ್ಷೆ ಪ್ರಕಾರ ಎಂಟು ಬೀದಿ ದೀಪಕ್ಕೆ ಹಾನಿ ಉಂಟಾಗಿದೆ. ಹೊಸ ಬೀದಿ ದೀಪ ನಿರ್ವಹಣೆಯನ್ನು ಏಜೆನ್ಸಿಗೆ ವಹಿಸಬೇಕು ಎಂಬ ಪ್ರಸ್ತಾವನೆಗೆ ಒಪ್ಪಿಗೆ ದೊರೆತಿದ್ದು, ಬೀದಿದೀಪಗಳನ್ನು ನ.ಪಂ.ಗೆ ಹಸ್ತಾಂತರಿ ಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಮಾಹಿತಿ ನೀಡಬೇಕು
ಇಲ್ಲಿ ಎಂಟಕ್ಕಿಂತ ಅಧಿಕ ಬೀದಿ ದೀಪಗಳಿಗೆ ಹಾನಿ ಉಂಟಾಗಿದೆ ಎಂದು ಸದಸ್ಯರು ಆರೋಪಿಸಿದ್ದಾರೆ. ನಗರದಲ್ಲಿ ಕಾಮಗಾರಿ ನಡೆಸುವಾಗ ಸ್ಥಳೀಯಾಡಳಿತದ ಗಮನಕ್ಕೆ ತರಬೇಕು. ಇದನ್ನು ಏಜೆನ್ಸಿ ಸಂಸ್ಥೆಗೆ ತಿಳಿಸಬೇಕು. ತತ್‌ ಕ್ಷಣ ಹೊಸ ಬೀದಿ ದೀಪ ಅಳವಡಿಸಬೇಕು ಕೋಟ ಶ್ರೀನಿವಾಸ ಪೂಜಾರಿ ಮೆಸ್ಕಾಂ ಅಧಿಕಾರಿಗೆ ಸೂಚಿಸಿದರು.

Advertisement

ಮಂಜೂರಾತಿ ಸಿಗುತ್ತಿಲ್ಲ
ಕಸಾಪ ಸಮ್ಮೇಳನ, ದಸರಾಕ್ಕೆ ಸ್ವಂತ ನಿಧಿಯಿಂದ ಪ್ರತಿ ವರ್ಷವೂ ನ.ಪಂ. ಅನುದಾನ ನೀಡುತ್ತದೆ. ಆದರೆ ಕಳೆದ ವರ್ಷದಿಂದ ಬೇಡಿಕೆ ಇಟ್ಟಿರುವ ಹಣ ಒದಗಿಸಲು ಜಿಲ್ಲಾಡಳಿತ ಮಂಜೂರಾತಿ ಕೊಟ್ಟಿಲ್ಲ ಎಂದು ಸದಸ್ಯ ಗೋಕುಲ್‌ದಾಸ್‌ ಗಮನಕ್ಕೆ ತಂದರು.

ಶಾಶ್ವತ ಕುಡಿಯುವ ನೀರಿನ ಯೋಜನೆ 
ನಗರದ ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿ ಇರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಪ್ರಸ್ತಾವಿಸಿದರು. ಶಾಶ್ವತ ಕುಡಿಯುವ ನೀರಿನ ಪೂರೈಕೆಗಾಗಿ 66 ಕೋಟಿ ರೂ. ಪ್ರಸ್ತಾವನೆ ಸರಕಾರದ ಹಂತದಲ್ಲಿ ಬಾಕಿ ಇರುವ ಬಗ್ಗೆ ಮಾಹಿತಿ ಪಡೆದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರ ಮೂಲಕ ಸರಕಾರದ ಹಂತದಲ್ಲಿ ಚರ್ಚಿಸುವ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next