Advertisement

ಸುಳ್ಯ: ಡಂಪಿಂಗ್‌ ಯಾರ್ಡ್‌ ಆಗಿ ಬದಲಾದ ನ.ಪಂ. ಆವರಣ

12:10 AM Jun 08, 2019 | mahesh |

ಸುಳ್ಯ : ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಬೇಕಿರುವ ನಗರ ಪಂಚಾಯತ್‌ ಆವರಣಕ್ಕೆ ಹೊಕ್ಕಾಗ ಡಂಪಿಂಗ್‌ ಯಾರ್ಡ್‌ ಅನುಭವ ಉಂಟಾಗುತ್ತದೆ. 20 ವಾರ್ಡ್‌ನಲ್ಲಿ ದಿನಂಪ್ರತಿ ಸಂಗ್ರಹ ವಾಗುವ ಕಸ, ತಾಜ್ಯದ ಬೇರ್ಪಡಿಸುವಿಕೆ ನಗರ ಪಂಚಾಯತ್‌ ಆವರಣದ ಶೆಡ್‌ನೊಳಗೆ ನಡೆಯುತ್ತಿರುವುದು ಈ ಪರಿಸ್ಥಿತಿಗೆ ಕಾರಣ. ಹೀಗಾಗಿ ಕಚೇರಿ ಕೆಲಸಕ್ಕೆಂದು ಬರುವ ಪ್ರತಿಯೋರ್ವರಿಗೆ ಆವರಣ ಗೇಟು ದಾಟಿದ ತತ್‌ಕ್ಷಣ ದುರ್ವಾಸನೆ ಮೂಗಿಗೆ ಬಡಿಯು ತ್ತಿದೆ. ಆದರೆ ಅಧಿಕಾರಿಗಳಾಗಲಿ, ಜನ ಪ್ರತಿನಿಧಿಗಳಿಗೆೆ ಈ ವಾಸನೆ ಬಿಸಿ ತಟ್ಟದಿರುವುದು ಅಚ್ಚರಿ ಸಂಗತಿ.

Advertisement

ರೋಗಕ್ಕೆ ಹೇತು?
ಕಲ್ಚರ್ಪೆ ಡಂಪಿಂಗ್‌ ಯಾರ್ಡ್‌ನಲ್ಲಿ ಕಸ, ತ್ಯಾಜ್ಯ ತುಂಬಿದ ಪರಿಣಾಮ ಅಲ್ಲಿಗೆ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಎಂಟು ತಿಂಗಳಿನಿಂದ ಹಸಿ, ಒಣ ಕಸ ನಗರ ಆವರಣಕ್ಕೆ ಪೂರೈಕೆಯಾಗಿ ಅಲ್ಲಿ ಬೇರ್ಪಡುವಿಕೆ ಮಾಡಿ ಹಸಿ ಕಸವನ್ನು ಗೊಬ್ಬರಕ್ಕೆಂದು, ಒಣ ಕಸವನ್ನು ಇಲ್ಲೇ ದಾಸ್ತಾನಿರಿಸುವ ಪ್ರಕ್ರಿಯೆ ನಡೆಯಿತು. ಆದರೆ ನಿರೀಕ್ಷೆಗೆ ಮೀರಿ ಕಸ ಸಂಗ್ರಹಗೊಂಡ ಕಾರಣ ಶೆಡ್‌ ಭರ್ತಿಯಾಗಿ ತುಂಬಿ ತುಳುಕಿತ್ತು. ಒಂದೆಡೆ ಸೊಳ್ಳೆ ಕಾಟ, ಇನ್ನೊಂದೆಡೆ ದುರ್ವಾಸನೆ. ಇನ್ನೂ ಮಳೆ ಆರಂಭದ ಹೊತ್ತಾಗಿರುವ ಕಾರಣ ತ್ಯಾಜ್ಯ ನೀರು ಪರಿಸರವಿಡಿ ಸಾಂಕ್ರಾಮಿಕ ರೋಗ ಉತ್ಪಾದನೆ ತಾಣವಾಗಿ ಬದಲಾಗುವ ಸಾಧ್ಯತೆ ಇದೆ.

ಸ್ವಚ್ಛ ಸುಳ್ಯದ ಕನಸು
ಮೂರು ವರ್ಷದ ಹಿಂದೆ ಸುಳ್ಯ ನ.ಪಂ. ಸ್ವಚ್ಛ ಸುಳ್ಯ ಎಂಬ ಘೋಷಣೆ ಮೂಲಕ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು. ವಾರ್ಡ್‌ ಗಳಲ್ಲಿ ಪೈಪ್‌ ಕಾಂಪೋಸ್ಟಿಂಗ್‌ ಅನುಷ್ಠಾನಿಸುವ ಪ್ರಸ್ತಾವ ಇರಿಸಿ ಕಾರ್ಯೋನ್ಮುಖವಾಗಿತ್ತು. ಆದರೆ ಅದು ಯಶಸ್ಸು ಕಾಣಲಿಲ್ಲ. ಕೇವಲ ಅಭಿಯಾನಕ್ಕಷ್ಟೇ ಸೀಮಿತವಾಯಿತು. ನಗರದಿಂದ ಆರು ಕಿ.ಮೀ. ದೂರದಲ್ಲಿರುವ ಕಲ್ಚರ್ಪೆ ಡಂಪಿಂಗ್‌ ಯಾರ್ಡ್‌ ತ್ಯಾಜ್ಯ ತುಂಬಿ, ಬೆಂಕಿಗಾಹುತಿಯಾದ ಮೇಲೆ ನಗರದ ಕಸ ವಿಲೇವಾರಿಗೆ ಪರ್ಯಾಯ ವ್ಯವಸ್ಥೆ ಇಲ್ಲದೆ ಟನ್‌ಗಟ್ಟಲೇ ಕಸದ ರಾಶಿ ನ.ಪಂ. ಆವರಣದಲ್ಲಿ ಸಂಗ್ರಹಿಸಲಾಗಿತ್ತು.

ಸಚಿವರ ಆದೇಶಕ್ಕಿಲ್ಲ ಕಿಮ್ಮತ್ತು
ಕೆಲ ಸಮಯಗಳ ಹಿಂದೆ ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಎಸ್‌. ಅಂಗಾರ ಸಹಿತ ವಿವಿಧ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ ಕಸ ವಿಲೇವಾರಿ ಕುರಿತು ಚರ್ಚೆ ನಡೆಸಲಾಗಿತ್ತು. ಆದರೆ ಅಲ್ಲಿ ಪ್ರಸ್ತಾವಗೊಂಡ ಯಾವುದೇ ಯೋಜನೆಗಳು ಅನುಷ್ಠಾನಗೊಂಡಿಲ್ಲ. ಕೆಲ ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌, ಶಾಸಕ ಅಂಗಾರ ಅವರು ಸ್ಥಳಕ್ಕೆ ಖುದ್ದು ಭೇಟಿ ನೀಡಿ ನ.ಪಂ. ಆವರಣದಿಂದ ಕಸ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ವಾರ ಕಳೆದರೂ, ಅದು ಪಾಲನೆ ಆಗಿಲ್ಲ.

ಸ್ಥಳದ ಸಮಸ್ಯೆ!
ಕಲ್ಚರ್ಪೆ ಘಟಕ ತ್ಯಾಜ್ಯ ಸಂಗ್ರಹಕ್ಕೆ ಸೂಕ್ತವಲ್ಲದ ಕಾರಣ ನಗರ ಅಥವಾ ಹೊರಭಾಗದಲ್ಲಿ ಹೊಸ ಸ್ಥಳ ಗುರುತಿಸುವ ಬಗ್ಗೆ ನ.ಪಂ. ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಸ್ಥಳ ಗುರುತಿಸುವ ಪ್ರಕ್ರಿಯೆಗೆ ಆಕ್ಷೇಪ ವ್ಯಕ್ತವಾಗಿರುವ ಕಾರಣ ಹೊಸ ಸ್ಥಳ ಅಂತಿಮಗೊಳಿಸುವಿಕೆ ದೊಡ್ಡ ಸವಲಾಗಿದೆ.

Advertisement

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next