ಸುಳ್ಯ : ಪರೀಕ್ಷೆ ಭಯ ಹೋಗಲಾಡಿಸಿ, ಒತ್ತಡ ಸಂದರ್ಭವನ್ನು ನಿರ್ವಹಿಸುವ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 6 ನೇ ತರಗತಿಯಿಂದ ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮವನ್ನು ಪುತ್ತೂರು ಮತ್ತು ಸುಳ್ಯ ತಾಲೂಕಿನ ಶಾಲೆಗಳಲ್ಲಿ ವೀಕ್ಷಿಸಲಾಯಿತು. ವಿಡಿಯೋ ಕಾನ್ಪರೆನ್ಸ್ ನಡೆದ ಸಂವಾದವನ್ನು ರೇಡಿಯೋ, ಟಿ.ವಿ, ಇಂಟರ್‌ನೆಟ್‌ಗೆ ಕನೆಕ್ಟ್ ಮಾಡಿದ್ದು, ಅದನ್ನು ಆಯಾ ಶಾಲೆಗಳಲ್ಲಿ ಪ್ರಾಜೆಕ್ಟ್ರ್ ಸಹಾಯದಿಂದ ವೀಕ್ಷಿಸಲಾಗಿದೆ.
ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ನಮ್ಮೊಳಗಿನ ವಿದ್ಯಾರ್ಥಿತನವನ್ನು ಉಳಿಸಿಕೊಂಡು, ವಿದ್ಯಾರ್ಥಿಗಳಾಗಿ ಕಲಿಯಲು ಉತ್ಸಾಹ ಹೊಂದಿರಬೇಕು. ವಿವೇಕಾನಂದರ ನುಡಿಯಂತೆ ಅಹಂ ಬ್ರಹ್ಮಾಸ್ಮಿ ಅಂದರೆ, ತನ್ನನ್ನು ತಾನೇ ಬ್ರಹ್ಮನಂತೆ ಅಂದುಕೊಳ್ಳಬೇಕು. ನಾನೇ ನನ್ನ ಭವಿಷ್ಯವನ್ನು ರೂಪಿಸುವವನು ಎಂಬ ಭಾವನೆಯಿಂದ ಪರೀಕ್ಷೆ ಬರೆಯಬೇಕು. ಆಗ ನಾವು ಯಶಸ್ವಿಯಾಗಲು ಸಾಧ್ಯವಿದೆ ಎಂಬುವುದಾಗಿ ನುಡಿದರು.
ಪುತ್ತೂರು, ಸುಳ್ಯ ತಾಲೂಕಿನ ವಿವಿಧ ಶಾಲೆಗಳಲ್ಲಿ ಬೆಳಗ್ಗೆ 11 ರಿಂದ 12ರ ತನಕ ವಿಡಿಯೋ ಕಾನ್ಫೆರೆನ್ಸ್ ಅನ್ನು ವೀಕ್ಷಿಸಲಾಯಿತು. ಟಿ.ವಿ ಸೌಲಭ್ಯ ಇಲ್ಲದ ಶಾಲೆಗಳಲ್ಲಿ ರೇಡಿಯೋ ಮೂಲಕ ಪ್ರಧಾನಿ ಅವರ ಮಾತುಗಳನ್ನು ಆಲಿಸಲಾಯಿತು. ಉಭಯ ತಾಲೂಕಿನ 100ಕ್ಕೂ ಅಧಿಕ ಶಾಲೆಗಳಲ್ಲಿ ಪರೀಕ್ಷಾ ಒತ್ತಡ ನಿರ್ವಹಿಸುವ ಹಿನ್ನೆಲೆಯಲ್ಲಿ ಬಿತ್ತರವಾದ ಪ್ರದಾನಿ ಅವರ ಸಂವಾದವನ್ನು ದೃಶ್ಯ ರೂಪದಲ್ಲಿ ಹಾಗೂ ರೇಡಿಯೋ ರೂಪದಲ್ಲಿ ಕೇಳಲಾಯಿತು.
ಯಶಸ್ವಿ ಕಾರ್ಯಕ್ರಮ
ಪ್ರಧಾನಿ ಅವರು ಪರೀಕ್ಷಾ ಒತ್ತಡಗಳನ್ನು ನಿರ್ವಹಿಸಲು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮವನ್ನು ತಾಲೂಕಿನ ಎಲ್ಲ ಶಾಲೆಗಳಲ್ಲಿ ವೀಕ್ಷಿಸಲಾಗಿದ್ದಯ, ಕಾರ್ಯಕ್ರಮ ಯಶಸ್ವಿಯಾಗಿದೆ.
-ಸುಕನ್ಯಾ
ಶಿಕ್ಷಣಾಧಿಕಾರಿ, ಪುತ್ತೂರು