ಸುಳ್ಯ: ಆಧುನಿಕ ಜಗತ್ತಿನ ಬಹುಮಹಡಿ ಕಾಂಕ್ರೀಟ್ ಕಟ್ಟಡಗಳ ಮಧ್ಯೆ ಹಂಚು, ಮುಳಿ ಹುಲ್ಲಿನ ಗ್ರಾಮಗಳು ಕಾಣ ಸಿಗಲಾರದು. ಆದರೆ ಸುಳ್ಯದಲ್ಲಿ ಪಾರಂಪರಿಕ ಗ್ರಾಮವೊಂದು ನಿರ್ಮಾಣಗೊಂಡು ಜನತೆಯನ್ನು ಆಕರ್ಷಿಸುತ್ತಿದೆ. ಕಾಂತಾರ ಚಿತ್ರದಲ್ಲಿ ಹಿಂದಿನ ಕಾಲದ ಮನೆ, ಪರಿಸರವನ್ನು ನಿರ್ಮಿಸಿ ಕೈಚಳಕ ತೋರಿಸಿದ್ದ ತಂಡ ಸುಳ್ಯದಲ್ಲಿ ಪಾರಂಪರಿಕ ಗ್ರಾಮವನ್ನು ನಿರ್ಮಿಸಿದೆ.
ಸುಳ್ಯದಲ್ಲಿ ನಡೆಯುತ್ತಿರುವ ಬೃಹತ್ ಪಯಸ್ವಿ ಕೃಷಿ ಮೇಳದಲ್ಲಿ ಆಕರ್ಷಕ ಕೇಂದ್ರ ಬಿಂದುವಾಗಿ ಪಾರಂಪರಿಕ ಗ್ರಾಮ ಕಣ್ಮನ ಸೆಳೆಯುತ್ತಿದೆ. ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿಯ ಪ್ರಭು ಮೈದಾನದ ಸಮೀಪ ಪಾರಂಪರಿಕ ಗ್ರಾಮ ನಿರ್ಮಾಣಗೊಂಡಿದೆ.
ನೂರಾರು ವರ್ಷಗಳ ಹಿಂದೆ ಒಂದು ಊರು ಹೇಗಿತ್ತು ಎಂಬ ಕಲ್ಪನೆಯೊಂದಿಗೆ ಪಾರಂಪರಿಕ ಗ್ರಾಮ ನಿರ್ಮಾಣಗೊಂಡಿದೆ. ಅದರಲ್ಲೂ ಗ್ರಾಮ ತುಳುನಾಡಿದ ಸಂಪ್ರದಾಯದಂತೆ ನಿರ್ಮಾಣಗೊಂಡಿದೆ. ಪಾರಂಪರಿಕ ಗ್ರಾಮದಲ್ಲಿ ನಾವು ಗುತ್ತಿನ ಮನೆ, ಕಂಬಳದ ಕೆರೆಯಲ್ಲಿ ಕೋಣ, ಊರಿನ ಕೋಳಿ ಸಾಕಾಣಿಕೆ, ದೈವದ ಛಾವಡಿ, ಕುಲ ಕಸುಬುದಾರಿಂದ ಕೆಲಸ ನಿರ್ವಹಣೆ, ಮಡಿಕೆ ತಯಾರಿ, ಹಳ್ಳಿ ಜನರಿಂದ ನಿತ್ಯ ಚಟುವಟಿಕೆಗಳು, ಮರದ ಮೇಲಿನ ಮನೆ, ಬಿಡಾರಗಳು, ಮುಳಿ ಹುಲ್ಲಿನಿಂದ ನಿರ್ಮಾಣಗೊಂಡ ಮನೆಗಳು, ಜೋಪಡಿಗಳು, ಕಲಾಕೇಂದ್ರಗಳು ಸೇರಿದಂತೆ ತುಳುನಾಡಿನ ಪಾರಂಪರಿಕ ಗ್ರಾಮ ನಿರ್ಮಾಣಗೊಂಡಿದೆ.
ಕಾಂತಾರ ಚಲನಚಿತ್ರದಲ್ಲಿ ಕಾಣಬಹುದಾದ ಹಿಂದಿನ ಕಾಲದ ಮನೆಗಳ ಸೆಟ್ ಹಾಕಿದ ತಂಡ ಇಲ್ಲಿಯೂ ಕೆಲಸ ಮಾಡಿದೆ. ತಂಡದಲ್ಲಿ 10ಕ್ಕೂ ಅಧಿಕ ಜನ ಕೆಲಸ ನಿರ್ವಹಿಸಿದ್ದಾರೆ. ಅಲ್ಲದೇ ಉಡುಪಿ ಜಿಲ್ಲೆಯ ಕಾರ್ಕಳದ ತಂಡ ಕುಲಕಸುಬು ನಿರ್ವಹಣೆ ಕೆಲಸದಲ್ಲಿ ತೊಡಗಿದೆ. ಪಾರಂಪರಿಕ ಗ್ರಾಮಕ್ಕೆ ಶಾಲಾ ಮಕ್ಕಳು ಸೇರಿದಂತೆ ಸಾವಿರಾರು ಜನರು ಭೇಟಿ ನೀಡಿ ಹಿಂದಿನ ಕಾಲದ ಪರಂಪರೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಸುಳ್ಯದ ಕೃಷಿ ಮೇಳದ ಪಾರಂಪರಿಕ ಗ್ರಾಮ ಜನತೆಯನ್ನು ನೂರಾರು ವರ್ಷಗಳ ಹಿಂದಿನ ಕಾಲದಲ್ಲಿದ್ದ ಚಿತ್ರಣವನ್ನು ಕಣ್ಣ ಮುಂದೆ ತಂದಿದೆ ಎನ್ನುವುದು ಸಂದರ್ಶಕರ ಮಾತು.
*ದಯಾನಂದ ಸುಬ್ರಹ್ಮಣ್ಯ