Advertisement
ಸುಳ್ಯ ಎನ್‌ಎಂಸಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿಎಸ್‌ಸಿ ವಿದ್ಯಾರ್ಥಿನಿ, ಕಾಸರಗೋಡು ತಾಲೂಕಿನ ಮುಳ್ಳೇರಿಯ ಶಾಂತಿನಗರದ ಕರಣಿ ನಿವಾಸಿ ಅಕ್ಷತಾ.ಕೆ (20) ಮೃತ ವಿದ್ಯಾರ್ಥಿನಿ. ಅದೇ ತರಗತಿಯ ವಿದ್ಯಾರ್ಥಿ, ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆ ಸುಳ್ಳಿ ಚಂದ್ರಶೇಖರ್ ನಾಯಕ್ ಅವರ ಪುತ್ರ ಕಾರ್ತಿಕ್ (22) ಕೊಲೆ ಮಾಡಿದ ಆರೋಪಿ.
ಪ್ರತಿದಿನಕ್ಕಿಂತ ತುಸು ಬೇಗನೆ ಮನೆಗೆ ತೆರಳಲೆಂದು ಅಕ್ಷತಾ ಮೂವರು ಸ್ನೇಹಿತೆಯರೊಂದಿಗೆ ಬಸ್ ನಿಲ್ದಾಣಕ್ಕೆ ಬರುತ್ತಿದ್ದ ವೇಳೆ ಚೆನ್ನಕೇಶವ ದೇವಾಲಯದಿಂದ ಸ್ವಲ್ಪವೇ ದೂರದಲ್ಲಿರುವ ಶ್ರೀರಾಮ ಮೊಬೈಲ್ ಅಂಗಡಿ ಮುಂಭಾಗದಲ್ಲಿ ಈ ಘಟನೆ ಸಂಭವಿಸಿದೆ. ಕಾರ್ತಿಕ್ ಈಕೆ ಕಾಲೇಜಿನಿಂದ ಹೊರಟಿದ್ದನ್ನು ದೃಢಪಡಿಸಿಕೊಂಡು ಆಕೆಗಿಂತ ಮೊದಲೇ ಬೈಕಿನಲ್ಲಿ ಬಂದು ಕಾದು ಕುಳಿತಿದ್ದ ಎನ್ನಲಾಗಿದೆ. ಚೆನ್ನಕೇಶವ ದೇವಾಲಯದ ಬಳಿ ಬೈಕ್ ನಿಲ್ಲಿಸಿ, ಈಕೆಯ ಜತೆ ನಡೆದುಕೊಂಡು ಮಾತನಾಡುತ್ತಾ ಬಂದಿದ್ದ. ಶ್ರೀರಾಮ ಮೊಬೈಲ್ ಅಂಗಡಿ ಬಳಿ ಬರುತ್ತಿದ್ದಂತೆ ಚೂರಿಯಿಂದ ಮನಬಂದಂತೆ ಇರಿದಿದ್ದಾನೆ. ಆಕೆ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ತತ್‌ಕ್ಷಣ ಕೆವಿಜಿ ಆಸ್ಪತ್ರೆಗೆ ಕೊಂಡು ಹೋಗಲಾಗಿದೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕೊಂಡೊಯ್ಯುವ ವೇಳೆ ಜಾಲ್ಸೂರು ಬಳಿ ಈಕೆ ಮೃತಪಟ್ಟಿದ್ದರು.
Related Articles
ಆರೋಪಿ ಕಾರ್ತಿಕ್ ಈಕೆಯನ್ನು ಏಕಮುಖವಾಗಿ ಪ್ರೀತಿಸುತ್ತಿದ್ದು, ಅಕ್ಷತಾ ಈತನ ಪ್ರೀತಿಗೆ ಒಪ್ಪದಿರುವುದೇ ಈ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ. ಹಲವು ಸಮಯಗಳಿಂದ ಆಕೆಯ ಬಳಿ ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಆದರೆ ಈಕೆ ಅದನ್ನು ನಿರಾಕರಿಸಿದ್ದಳು. ತನ್ನ ತಂಟೆಗೆ ಬಂದರೆ ಮನೆ ಮಂದಿಗೆ ಮಾಹಿತಿ ನೀಡುವುದಾಗಿ ಎಚ್ಚರಿಕೆ ನೀಡಿದ್ದಳು ಎನ್ನಲಾಗಿದೆ. ಇದರಿಂದ ಭ್ರಮ ನಿರಸನಾಗಿದ್ದ ಕಾರ್ತಿಕ್ ಈ ಕೃತ್ಯ ನಡೆಸಿದ್ದಾನೆ. ಈತನ ಪ್ರಯತ್ನ ಫಲ ಕೊಡದ ಕಾರಣಕ್ಕೆ, ಈಕೆಯನ್ನು ಕೊಲೆ ಮಾಡಿದ್ದಾನೆ.
Advertisement
ಮನಬಂದಂತೆ ಇರಿದ!ದಿನವು ಜನದಟ್ಟಣೆಯಿಂದ ಕೂಡಿರುವ ರಸ್ತೆಯಲ್ಲಿಯೇ ಈ ಘಟನೆ ನಡೆದಿದೆ. ಸ್ಥಳೀಯರು, ಶಾಲಾ ವಿದ್ಯಾರ್ಥಿಗಳು ನೋಡು-ನೋಡುತ್ತಿದ್ದಂತೆ ಕಾರ್ತಿಕ್ ಈಕೆಗೆ ಹೊಡೆದು, ಅನಂತರ ಚೂರಿಯಿಂದ ಈಕೆಯ ಎದೆ, ಕುತ್ತಿಗೆ ಭಾಗಕ್ಕೆ 6ಕ್ಕಿಂತ ಅಧಿಕ ಬಾರಿ ಇರಿದಿದ್ದಾನೆ. ಆಕೆ ನೆಲಕ್ಕೆ ಬಿದ್ದ ಮೇಲೂ ಬಿಡದ ಈತ ಮತ್ತೆ-ಮತ್ತೆ ಇರಿದಿದ್ದಾನೆ. ಸ್ಥಳೀಯರು ಈತನನ್ನು ಹಿಡಿದ ವೇಳೆ, ನನ್ನದೇನೂ ತಪ್ಪಿಲ್ಲ, ಎಲ್ಲ ಆಕೆಯೇ ಮಾಡಿದ್ದು, ನನ್ನ ಸ್ನೇಹಿತರ ಜತೆಗೆ ಕೇಳಿ ಅನ್ನುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬೇಗ ತೆರಳಿದ್ದಳು!
ಕೇರಳದಲ್ಲಿ ಬಂದ್ ಇರುವ ಹಿನ್ನೆಲೆಯಲ್ಲಿ ಅಕ್ಷತಾ ತನ್ನ ಸಹಪಾಠಿಗಳ ಜತೆಗೆ ಮನೆಗೆ ತುಸು ಬೇಗನೇ ತೆರಳಿದ್ದಳು. ತರಗತಿ ಟೀಚರ್‌ಗೆ ಈ ಬಗ್ಗೆ ಲಿಖೀತ ದಾಖಲೆ ಕೊಟ್ಟು ಕೊನೆ ಅವಧಿಯ ತರಗತಿಗಿಂತ ಮುಂಚಿತವಾಗಿ ಬಂದಿದ್ದಳು. ಇದನ್ನು ಗಮನಿಸಿದ್ದ ಕಾರ್ತಿಕ್ ಕೂಡ ಆಕೆಯನ್ನು ಹಿಂಬಾಲಿಸಿರಬಹುದು ಎನ್ನಲಾಗಿದೆ. ಸೈಲೆಂಟ್ ಆಗಿರುತ್ತಿದ್ದ!
ಆರೋಪಿ ಕಾರ್ತಿಕ್ ಬಗ್ಗೆ ಸ್ಥಳೀಯ ಪರಿಸರದಲ್ಲಿ ಆತನನ್ನು ಬಲ್ಲವರು ಹೇಳುವಂತೆ, ಇಬ್ಬರು ಮಕ್ಕಳ ಪೈಕಿ ದೊಡ್ಡವನಾದ ಈತ ತನ್ನ ಪಾಡಿಗೆ ತಾನು ಇರುತ್ತಿದ್ದ. ಊರಿನಲ್ಲಿಯು ಯಾವುದೇ ಸಂಘಟನೆ ಗಳ ಜತೆಗೆ ಗುರುತಿಸಿ ಕೊಂಡಿರಲಿಲ್ಲ. ಜನರ ಜತೆ ಹೆಚ್ಚು ಮಾತನಾಡು ತ್ತಿರಲಿಲ್ಲ. ಆದರೆ ಈತಗ ಕೊಲೆ ಮಾಡುವಷ್ಟರ ಮಟ್ಟಿಗೆ ಕ್ರೂರಿತನ ತೋರಿರುವುದು ಅಚ್ಚರಿ ಮೂಡಿಸಿದೆ ಅನ್ನುತ್ತಾರೆ ಹಲವರು. ಆದರೆ ಚೂರಿ ಸಹಿತ ಈತ ಬಂದಿರುವುದನ್ನು ಗಮನಿಸಿದರೆ, ಕೊಲೆಗೆ ಈ ಮೊದಲೇ ಸ್ಕೆಚ್ ಮಾಡಿರುವ ಅನುಮಾನ ಮೂಡಿಸಿದೆ. ಓದಿನಲ್ಲಿ ಜಾಣೆಯಾಗಿದ್ದಳು
ಮೃತ ಅಕ್ಷತಾ ಓದಿನಲ್ಲಿಯು ಮುಂದಿದ್ದಳು. ಉತ್ತಮ ಅಂಕ ಗಳಿಸುತ್ತಿದ್ದಳು. ಆದರೆ ಕಾರ್ತಿಕ್ ಪ್ರೀತಿಸುವಂತೆ ತೊಂದರೆ ಕೊಡುತ್ತಿದ್ದ ವಿಷಯವನ್ನು ಈಕೆ ಉಪನ್ಯಾಸಕರ ಬಳಿ ಹೇಳಿಕೊಂಡಿರಲಿಲ್ಲ. ಈತ ಕೊಲೆ ಮಾಡುವಷ್ಟು ಕ್ರೂರಿ ಆಗಬಹುದು ಎನ್ನುವ ಊಹೆಯು ಆಕೆಗೆ ಇದ್ದಿರಲಿಕ್ಕಿಲ್ಲ. ಆದರೆ ಕಾರ್ತಿಕ್‌ನ ಸೈಕೋ ಮನಸ್ಸು ಅಮಾಯಕಿ ಅಕ್ಷತಾಳನ್ನು ಕೊಲೆಯೇ ಮಾಡಿಬಿಟ್ಟಿತ್ತು ಎಂದು ಕೆಲ ಸಹಪಾಠಿಗಳು ಅಳಲು ತೋಡಿಕೊಂಡಿದ್ದಾರೆ. ಪಶ್ಚಾತಾಪದ ಭಾವನೆ ಇರಲಿಲ್ಲ..!
ಅಕ್ಷತಾಳಿಗೆ ಇರಿದ ಅನಂತರ ಆರೋಪಿ ಕಾರ್ತಿಕ್ ಕೊಂಚವೂ ಗಲಿಬಿಲಿಗೊಳ್ಳದೇ ನಿಂತಿದ್ದ. ಆತನ ಮುಖದಲ್ಲಿ ಪಶ್ಚಾತಾಪದ ಭಾವನೆ ಎಳ್ಳಷ್ಟು ಇರಲಿಲ್ಲ. ಸ್ಥಳೀಯರು ಪ್ರಶ್ನಿಸಿದ ಸಂದರ್ಭದಲ್ಲಿಯೂ ನನ್ನದೇನೂ ತಪ್ಪಿಲ್ಲ ಎನ್ನುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆರೋಪಿ ಕಾರ್ತಿಕ್ ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ತೆರಳಿ ಅಲ್ಲಿಂದ ಅರ್ಧದಲ್ಲೇ ಬಂದು ಬಿಎಸ್‌ಸಿಗೆ ಸೇರಿದ್ದ. ಓದಿನಲ್ಲಿ ಹೇಳಿಕೊಳ್ಳುವಂತಹ ಬುದ್ಧಿವಂತನಾಗಿರಲಿಲ್ಲ ಎಂದು ಕಾಲೇಜಿನ ಉಪನ್ಯಾಸಕರ ಮೂಲಗಳು ತಿಳಿಸಿದೆ.
ಪೊಲೀಸ್ ವಶಕ್ಕೆ ಆರೋಪಿ ಕಾರ್ತಿಕ್‌ನನ್ನು ಬಂಧಿಸಿದ ಸುಳ್ಯ ಪೊಲೀಸರು ಆತನಿಗೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಅನಂತರ ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ಅನಂತರ ಘಟನೆಯ ಪೂರ್ಣ ಸತ್ಯ ಹೊರಬರಲಿದೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನ ಸ್ಥಳಕ್ಕೆ ವೃತ್ತ ನಿರೀಕ್ಷಕ ಸತೀಶ್ ಕುಮಾರ್, ಎಸ್‌ಐ ಮಂಜುನಾಥ ಭೇಟಿ ನೀಡಿದ್ದರು. ತನ್ನ ಕೈ ಕೊಯ್ದುಕೊಂಡ!
ಆಕೆ ನೆಲಕ್ಕೆ ಬಿದ್ದು ಒದಾಡ್ಡುತ್ತಿದ್ದ ವೇಳೆ ಕಾರ್ತಿಕ್ ತನ್ನ ಎಡಗೈ ಅನ್ನು ಚೂರಿಯಿಂದ ಕೊಯ್ದುಕೊಂಡಿದ್ದಾನೆ. ಪೊಲೀಸರ ಪ್ರಕಾರ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾ ಗಿದ್ದರೂ, ಮೇಲ್ನೋಟಕ್ಕೆ ಇದೊಂದು ತಪ್ಪಿಸಿಕೊಳ್ಳುವ ತಂತ್ರವಾಗಿರಬಹುದು ಎಂದು ಶಂಕಿಸಲಾಗಿದೆ. ಗಾಯಗೊಂಡ ಕೈಯನ್ನು ಹಿಡಿದುಕೊಂಡು ಆರೋಪಿ ಅಲ್ಲಿಂದ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗಿಐದ್ದಾನೆ. ತತ್‌ಕ್ಷಣ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇಬ್ಬರು ಮಕ್ಕಳು!
ಮುಳ್ಳೇರಿಯಾ ಸಮೀಪದ ಕಾರಡ್ಕ ಗ್ರಾ.ಪಂ. ವ್ಯಾಪ್ತಿಯ ಕರಣಿ ನಿವಾಸಿ ರಾಧಾಕೃಷ್ಣ ಭಟ್ ಮತ್ತು ದೇವಕಿ ದಂಪತಿಯ ದ್ವಿತೀಯ ಪುತ್ರಿ ಅಕ್ಷತಾ. ಇನ್ನೋರ್ವ ಸಹೋದರಿ ಅನುಶಾ ಅವರಿಗೆ 4 ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ರಾಧಾಕೃಷ್ಣ ಭಟ್ ವ್ಯಾಪಾರಿ ಆಗಿದ್ದಾರೆ. ಸ್ವಲ್ಪ ಕೃಷಿ ಹೊಂದಿರುವ ಮಧ್ಯಮ ವರ್ಗದ ಕುಟುಂಬವಾಗಿತ್ತು. ತಾಯಿ, ತಂದೆಯೊಂದಿಗೆ ಅಕ್ಷತಾ ವಾಸವಾಗಿದ್ದರು.