Advertisement

Sulthan Bathery: ನಿರ್ವಹಣೆಯಿಲ್ಲದೆ ತುಕ್ಕು ಹಿಡಿದಿದೆ ಸುಲ್ತಾನ್‌ ಬತ್ತೇರಿ ತಡೆಬೇಲಿ

04:17 PM Oct 05, 2023 | Team Udayavani |

ಮಹಾನಗರ: ಮಂಗಳೂರು ನಗರದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ವಿಪುಲ ಅವಕಾಶ ಇದ್ದರೂ ಕೆಲವೊಂದು ಯೋಜನೆಗಳು ನನೆಗುದಿಗೆ ಬಿದ್ದಿವೆ. ಪ್ರವಾಸಿಗರನ್ನು ಆಕರ್ಷಿಸಬೇಕಾದ ಕೆಲವೊಂದು ತಾಣಗಳು ಮೂಲ ಸೌಕರ್ಯಗಳಿಂದ ವಂಚಿತಗೊಂಡಿದ್ದು, ಆ ಸಾಲಿಗೆ ಪುರಾತನ ಕೋಟೆಯಾದ ಸುಲ್ತಾನ್‌ ಬತ್ತೇರಿ ಸೇರಿಕೊಂಡಿದೆ.

Advertisement

ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಡುವ ಬ್ರಿಟಿಷರ ಕಾಲದ ಸುಲ್ತಾನ್‌ ಬತ್ತೇರಿ ಕೋಟೆಗೆ ಇನ್ನೂ ಕಾಯಕಲ್ಪ ದೊರಕಿಲ್ಲ. ಪರಿಣಾಮ, ಪಾಳು ಬಿದ್ದ ಸ್ಥಿತಿಯಲ್ಲಿದ್ದು, ಇದ್ದು, ಕೋಟೆಯ ಅಭಿವೃದ್ಧಿಗೆ ಸಂಬಂಧಪಟ್ಟ ಇಲಾಖೆ ಇನ್ನೂ ಗಮನಹರಿಸಿದಂತಿಲ್ಲ. ಸುಲ್ತಾನ್‌ ಬತ್ತೇರಿ-ತಣ್ಣೀರುಬಾವಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಇತ್ತೀಚಿನ ದಿನಗಳಲ್ಲಿ ಏರಿಕೆಯಾಗುತ್ತಿದೆ. ಪ್ರವಾಸಿಗರಿಗೆ ಆಕರ್ಷಣೀಯವಾಗಬೇಕಿದ್ದ ಪುರಾತನ ಕೋಟೆ ಮತ್ತಷ್ಟು ಅಭಿವೃದ್ಧಿಯ ಹಾದಿ
ಹಿಡಿಯಬೇಕಾಗಿದೆ.

ಕೋಟೆಯನ್ನು ಸಂರಕ್ಷಿಸುವ ಉದ್ದೇಶಕ್ಕೆ ಕೋಟೆಯ ಸುತ್ತಲೂ ತಡೆ ಬೇಲಿ ಹಾಕಲಾಗಿದೆ. ಆದರೆ ಸದ್ಯ ಆ ತಡೆಬೇಲಿ ತುಕ್ಕು ಹಿಡಿದಿದ್ದು, ಅಪಾಯ ಸೂಚಿಸುತ್ತಿದೆ. ಇಲ್ಲಿಗೆ ಸಮೀಪದಲ್ಲೇ ಸಮುದ್ರ ಇರುವುದರಿಂದ ಉಪ್ಪು ಮಿಶ್ರಿತ ಗಾಳಿ ಬೀಸುವುದರಿಂದ ಶೀಘ್ರ ಕಬ್ಬಿಣಕ್ಕೆ ತುಕ್ಕು ಹಿಡಿಯುತ್ತದೆ. ಆಗಾಗ ಪೈಂಟ್‌ ಬಳಿಯುವುದರಿಂದ ತುಕ್ಕು ಹಿಡಿಯುವುದನ್ನು ತಪ್ಪಿಸಬಹುದು.

ಆದರೆ ಈ ಗೋಜಿಗೆ ಪುರಾತತ್ವ ಇಲಾಖೆ ಹೋದಂತಿಲ್ಲ. ಇನ್ನು, ಸುಲ್ತಾನ್‌ ಬತ್ತೇರಿಯ ಪ್ರವೇಶದಲ್ಲಿ ಪಕ್ಕದಲ್ಲಿ ಈ ಹಿಂದೆ ಸಣ್ಣದಾದ ಹೂದೋಟ ನಿರ್ಮಿಸಲಾಗಿತ್ತು. ಅಲ್ಲಿ ಕೆಲವೊಂದು ಅಲಂಕಾರಿಕ ಗಿಡಗಳನ್ನು ನೆಡಲಾಗಿತ್ತು. ಆದರೆ ನಿರ್ವಹಣೆಯ
ಇಲ್ಲದ ಕಾರಣದಿಂದಾಗಿ ಆ ಗಾರ್ಡನ್‌ ಸೊರಗಿ, ಅಲ್ಲೇ, ಗಿಡ ಗಂಟಿಗಳು ಬೆಳೆದು ನಿಂತಿದೆ.

ಹೊರಗಡೆ ತ್ಯಾಜ್ಯ ರಾಶಿ
ಸುಲ್ತಾನ್‌ ಬತ್ತೇರಿ ಹೊರಗಡೆ ತ್ಯಾಜ್ಯ, ಗಿಡ-ಗಂಟಿಗಳಿಂದ ಕೂಡಿದ್ದು, ಈ ಪುರಾತನ ಕೋಟೆಯ ಸುತ್ತಲಿನ ಸೌಂದರ್ಯವೇ ಹಾಳಾಗಿದೆ. ಕೆಲವೊಂದು ಪೈಪ್‌ಗ್ಳ ರಾಶಿ, ಪ್ಲಾಸ್ಟಿಕ್‌, ತ್ಯಾಜ್ಯ ಸಹಿತ ನಿರುಪಯುಕ್ತ ವಸ್ತುಗಳನ್ನು ಅಲ್ಲಿ ರಾಶಿ ಹಾಕಲಾಗಿದೆ. ಇನ್ನು, ಇಲ್ಲಿನ ಗಿಡ-ಗಂಟಿ ಕಟಾವು ಮಾಡದೆ ಹಲವು ತಿಂಗಳಿಗಳೇ ಕಳೆದಿವೆ. ಸುತ್ತಲಿನ ಪ್ರದೇಶವು ಕಾಡಿನಂತೆ ಆವೃತವಾಗಿದ್ದು, ಸೂಕ್ತ ನಿರ್ವಹಣೆ ಮಾಡಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಉರ್ವ ಮಾರುಕಟ್ಟೆಯಿಂದ ಸುಲ್ತಾನ್‌ಬತ್ತೇರಿ
ಸಂಪರ್ಕ ಇರುವ ರಸ್ತೆ ಕಾಂಕ್ರೀಟ್‌ ಆಗಿದೆ. ಕೆಲವೊಂದಿಷ್ಟು ಭಾಗ ಮಾತ್ರ ಡಾಮರು ಇದ್ದು, ಅದು ಹೊಂಡ-ಗುಂಡಿಯಿಂದ
ಆವೃತವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next