ಇಪೋ (ಮಲೇಶ್ಯ): ಈಗಾಗಲೇ “ಸುಲ್ತಾನ್ ಅಜ್ಲಾನ್ ಶಾ’ ಹಾಕಿ ಕೂಟದ ಫೈನಲ್ ಪ್ರವೇಶಿಸಿರುವ ಭಾರತ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಪೋಲೆಂಡ್ ವಿರುದ್ಧ ಅಮೋಘ ಜಯ ಸಾಧಿಸಿ ಫೈನಲ್ ಪಂದ್ಯಕ್ಕೆ ಭರ್ಜರಿ ತಾಲೀಮು ನಡೆಸಿದೆ.
ಶುಕ್ರವಾರದ ಪಂದ್ಯದಲ್ಲಿ ಭಾರತ 10-0 ಗೋಲುಗಳ ಅಂತರದಿಂದ ಪೋಲೆಂಡ್ ವಿರುದ್ಧ ಗೆಲುವು ದಾಖಲಿಸಿ ಫೈನಲ್ ಎದುರಾಳಿ ದಕ್ಷಿಣ ಕೊರಿಯಾಗೆ ಎಚ್ಚರಿಕೆ ರವಾನಿಸಿದೆ. ಪ್ರಶಸ್ತಿ ಸಮರ ಶನಿವಾರ ನಡೆಯಲಿದೆ.
ಪಂದ್ಯದ ಮೊದಲ ನಿಮಿಷದಲ್ಲೇ ವಿವೇಕ್ ಪ್ರಸಾದ್ ಗೋಲು ಬಾರಿಸಿ ಭಾರತದ ಖಾತೆ ತೆರೆದರು. ಇದರೊಂದಿಗೆ ಮನ್‌ದೀಪ್ ಸಿಂಗ್ (50, 51ನೇ ನಿಮಿಷ), ವರುಣ್ ಕುಮಾರ್ (18ನೇ, 25ನೇ ನಿಮಿಷ), ಸುಮೀತ್ ಕುಮಾರ್ (7ನೇ ನಿಮಿಷ), ಸುರೇಂದರ್ ಕುಮಾರ್ (19ನೇ ನಿಮಿಷ), ಸಿಮ್ರನ್‌ಜಿàತ್ ಸಿಂಗ್ (29ನೇ ನಿಮಿಷ), ನೀಲಕಂಠ ಶರ್ಮ (36ನೇ ನಿಮಿಷ) ಮತ್ತು ಅಮೀತ್ ರೋಹಿದಾಸ್ (55ನೇ ನಿಮಿಷ) ಗೋಲಿನ ಮಳೆಗೈದು ಪೋಲೆಂಡ್ ತಂಡದ ದಿಕ್ಕು ತಪ್ಪಿಸಿದರು. ಇದರೊಂದಿಗೆ ಪೋಲೆಂಡ್ ಆಡಿದ ಎಲ್ಲ ಪಂದ್ಯಗಳಲ್ಲೂ ಸೋಲನುಭವಿಸಿತು.
ದ್ವಿತೀಯ ಕ್ವಾರ್ಟರ್‌ನಲ್ಲಿ 4 ಗೋಲು
ಮೊದಲ ಕ್ವಾರ್ಟರ್‌ನಲ್ಲಿ 2-0 ಮುನ್ನಡೆಯಲ್ಲಿದ್ದ ಭಾರತ ದ್ವಿತೀಯ ಕ್ವಾರ್ಟರ್ 4 ಗೋಲು ಬಾರಿಸಿ ಮೆರೆದಾಡಿತು. ಇದರಿಂದ ಭಾರತ ಮೊದಲರ್ಧದ ವೇಳೆ 6-0 ಅಂತರದ ಮುನ್ನಡೆ ಸಾಧಿಸಿತ್ತು. ಅನಂತರದ 30 ನಿಮಿಷಗಳ ಆಟದಲ್ಲಿ ಮತ್ತೆ 4 ಗೋಲು ಸಿಡಿಯಿತು. 10 ಗೋಲುಗಳಲ್ಲಿ 4 ಗೋಲು ಪೆನಾಲ್ಟಿ ಕಾರ್ನರ್ ಮೂಲಕ ದಾಖಲಾದವು (18, 19, 25 ಮತ್ತು 55ನೇ ನಿಮಿಷ). ಈ ಏಕಪಕ್ಷೀಯ ಪಂದ್ಯದಲ್ಲಿ ಭಾರತದ ರಕ್ಷಣಾ ಪಡೆ ಅತ್ಯುತ್ತಮ ಪ್ರದರ್ಶನ ನೀಡಿ ಪೋಲೆಂಡ್ ತಂಡವನ್ನು ಗೋಲಿನ ಹತ್ತಿರ ಸುಳಿಯದಂತೆ ಮಾಡಿತು.
5 ಪಂದ್ಯಗಳ ಲೀಗ್‌ನಲ್ಲಿ 4 ಜಯ ಮತ್ತು ಒಂದು ಡ್ರಾದೊಂದಿಗೆ ಭಾರತ 13 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಪಡೆಯಿತು. ದಕ್ಷಿಣ ಕೊರಿಯಾ ಕೂಡ 13 ಅಂಕ ಗಳಿಸಿದೆ. ಆದರೆ ಗೋಲು ವ್ಯತ್ಯಾಸದಲ್ಲಿ ದ್ವಿತೀಯ ಸ್ಥಾನಕ್ಕೆ ಇಳಿದಿದೆ. ಭಾರತ-ದಕ್ಷಿಣ ಕೊರಿಯಾ ನಡುವಿನ ಲೀಗ್ ಪಂದ್ಯ ಡ್ರಾಗೊಂಡಿತ್ತು.
ಸ್ಟ್ರೈಕರ್ ಮನ್‌ದೀಪ್ ಸಿಂಗ್ ಈ ಕೂಟದಲ್ಲಿ ಅತ್ಯಧಿಕ 7 ಗೋಲು ಬಾರಿಸಿದ್ದಾರೆ. ದಕ್ಷಿಣ ಕೊರಿಯದ ಜಾಂಗ್ ಜೊಂಗ್-ಹ್ಯುನ್, ಲೀ ನಮ್-ಯಾಂಗ್ ತಲಾ 6 ಗೋಲು ಹೊಡೆದು ದ್ವಿತೀಯ ಸ್ಥಾನದಲ್ಲಿದ್ದಾರೆ.