Advertisement

ಇಂದಿನಿಂದ ಸುಲ್ತಾನ್‌ ಅಜ್ಲಾನ್‌ ಶಾ ಹಾಕಿ: ಭಾರತ-ಜಪಾನ್‌ ಮುಖಾಮುಖಿ

12:30 AM Mar 23, 2019 | |

ಇಪೊ (ಮಲೇಶ್ಯ): ಭಾರತ ಹಾಕಿ ತಂಡ ಶನಿವಾರದಿಂದ ಮಲೇಶ್ಯದಲ್ಲಿ ಶುರುವಾಗಲಿರುವ “ಸುಲ್ತಾನ್‌ ಅಜ್ಲಾನ್‌ ಶಾ’ ಹಾಕಿ ಕೂಟದ ಮೊದಲ ಪಂದ್ಯದಲ್ಲಿ ಜಪಾನ್‌ ವಿರುದ್ಧ ಆಡಲಿದೆ. ಮೇಲ್ನೋಟಕ್ಕೆ ಈ ಬಾರಿ ಭಾರತವೇ ಬಲಿಷ್ಠ ತಂಡ. ಹಿಂದಿನ ವರ್ಷ ಸ್ಪರ್ಧಿಸಿದ್ದ ಆಸ್ಟ್ರೇಲಿಯ, ಇಂಗ್ಲೆಂಡ್‌, ಆರ್ಜೆಂಟೀನಾ ತಂಡಗಳು ಬೇರೆ ಕೂಟದ ಕಾರಣ ಇಲ್ಲಿ ಭಾಗವಹಿಸುತ್ತಿಲ್ಲ. ಹೀಗಾಗಿ ಇಲ್ಲಿ ಗೆಲ್ಲುವುದು ಅಂತಹ ಮಹತ್ವದ ಸಂಗತಿಯಾಗೇನೂ ಕಾಣಿಸದು. ಒಂದು ವೇಳೆ ಇಲ್ಲಿಯೂ ಸೋತರೆ ಭಾರತೀಯ ಹಾಕಿ ಸಾಮರ್ಥ್ಯದ ಬಗ್ಗೆ ನಿಜವಾಗಿ ಅನುಮಾನಗಳು ಶುರುವಾಗುತ್ತವೆ.

Advertisement

ಈ ಕೂಟದಲ್ಲಿ ಭಾರತ, ಕೆನಡಾ, ಜಪಾನ್‌, ಆತಿಥೇಯ ಮಲೇಶ್ಯ, ಪೋಲೆಂಡ್‌, ದಕ್ಷಿಣ ಕೊರಿಯ ತಂಡಗಳು ಭಾಗವಹಿಸುತ್ತಿವೆ. ಈ ಪೈಕಿ ಏಶ್ಯಾಡ್‌ ಚಿನ್ನ ವಿಜೇತ ಜಪಾನ್‌, ಮಲೇಶ್ಯ, ದಕ್ಷಿಣ ಕೊರಿಯ ಬಲಿಷ್ಠ ತಂಡಗಳಾಗಿ ಬದಲಾಗಿವೆ. ಆದರೆ ಭಾರತದ ಅನುಭವ ಮತ್ತು ಇತಿಹಾಸಕ್ಕೆ ಹೋಲಿಸಿದರೆ ಈ ಮೂರೂ ಸಾಮಾನ್ಯ ತಂಡಗಳು. ರೌಂಡ್‌ ರಾಬಿನ್‌ ಮಾದರಿಯ ಈ ಕೂಟದಲ್ಲಿ ಭಾರತ ಮಾ. 24ರಂದು ದಕ್ಷಿಣ ಕೊರಿಯಾ ವಿರುದ್ಧ, ಮಾ. 26ರಂದು ಮಲೇಶ್ಯ ವಿರುದ್ಧ, ಮಾ. 27ರಂದು ಕೆನಡಾ ವಿರುದ್ಧ ಹಾಗೂ ಮಾ. 29ರಂದು ಪೋಲೆಂಡ್‌ ವಿರುದ್ಧ ಆಡಲಿದೆ.

ತಂಡದಲ್ಲಿ ಸ್ಥಿರತೆಯ ಕೊರತೆ
ಭಾರತ ತಂಡದ ಪ್ರಮುಖ ಸಮಸ್ಯೆಯೆಂದರೆ ಅಸ್ಥಿರ ಪ್ರದರ್ಶನ. ಪ್ರತೀ ಬಾರಿ ಗೆಲ್ಲುವ ಹಂತಕ್ಕೆ ಹೋಗಿ ಸೋಲುವುದು ಭಾರತಕ್ಕೆ ಚಾಳಿಯಾಗಿದೆ. ಇನ್ನೇನು ಗೆದ್ದೇ ಬಿಟ್ಟರು ಎನ್ನುವಾಗ, ಕಡೆಯ ಕೆಲವು ನಿಮಿಷಗಳ ಒತ್ತಡ ನಿಭಾಯಿಸಲಾಗದೆ ಭಾರತ ಬಸವಳಿಯುತ್ತದೆ. ಸತತವಾಗಿ ತರಬೇತುದಾರರನ್ನು ಬದಲಿಸಿದರೂ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇದ್ದುದರಲ್ಲಿ ಟೆರ್ರಿ ವಾಲ್ಶ್ ಕೋಚ್‌ ಆಗಿದ್ದಾಗ ತಂಡದ ಪರಿಸ್ಥಿತಿ ಅತ್ಯುತ್ತಮ ಮಟ್ಟಕ್ಕೆ ಹೋಗುವ ಎಲ್ಲ ಭರವಸೆ ಸಿಕ್ಕಿತ್ತು. ಅಷ್ಟರಲ್ಲಿ ಆಗಿನ ಹಾಕಿ ಇಂಡಿಯಾ ಮುಖ್ಯಸ್ಥ ನರೇಂದ್ರ ಬಾತ್ರಾ ಮತ್ತು ಟೆರ್ರಿ ನಡುವೆ ಭಿನ್ನಮತ ಜೋರಾಗಿ ಅವರು ಸ್ಥಾನದಿಂದ ಹೊರಹೋದರು. ಮುಂದೆ ಇನ್ನಿಬ್ಬರು ತರಬೇತುದಾರರೂ ಬಾತ್ರಾ ಜತೆ ಗೊಂದಲ ಮಾಡಿಕೊಂಡೇ ಸ್ಥಾನ ಬಿಟ್ಟರು. ಅಲ್ಲಿಂದ ಭಾರತದ ಪ್ರದರ್ಶನ ಸರಾಸರಿ ಮಟ್ಟ ಬಿಟ್ಟು ಮೇಲೇಳಲಿಲ್ಲ. ಕಳೆದ ಬಾರಿ ನಡೆದ ಕೂಟದಲ್ಲಿ ಪೂರ್ಣ ಹೊಸ ತಂಡ ಇಟ್ಟುಕೊಂಡು ಹೋಗಿತ್ತು. ಅದಕ್ಕೆ ಅನುಭವಿ ಸರ್ದಾರ್‌ ಸಿಂಗ್‌ ಅವರನ್ನು ಅನಿರೀಕ್ಷಿತವಾಗಿ ನಾಯಕನನ್ನಾಗಿ ನೇಮಿಸಲಾಯಿತು. ಅನನುಭವಿ ತಂಡವಾಗಿದ್ದರೂ ಅತ್ಯುತ್ತಮ ಪ್ರದರ್ಶನವನ್ನೇ ನೀಡಿತು. ಈ ಬಾರಿ ಮನ್‌ಪ್ರೀತ್‌ ಸಿಂಗ್‌ ನಾಯಕರಾಗಿದ್ದಾರೆ. ಕಳೆದ ಬಾರಿಯ ವೈಫ‌ಲ್ಯವನ್ನು ಮರೆಸುವ ನಿರೀಕ್ಷೆ ಹಾಕಿ ಪ್ರೇಮಿಗಳದ್ದು.

ಗುರ್ಜಂತ್‌ಗೆ ಗಾಯ
ಇತ್ತೀಚೆಗಷ್ಟೇ ಅಭ್ಯಾಸ ಪಂದ್ಯದಲ್ಲಿ ಗುರ್ಜಂತ್‌ ಸಿಂಗ್‌ ಮೂಗಿಗೆ ಹೊಡೆತ ತಿಂದು ಭಾರತಕ್ಕೆ ಮರಳಿದ್ದಾರೆ. ಈ ಆಘಾತವನ್ನು ಭಾರತ ಹೇಗೆ ನಿಭಾಯಿಸಲಿದೆ ಎಂದು ಕಾದು ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next