Advertisement

ಸುಲಫಲ ಶ್ರೀ-ಡಾ|ಗಣೇಶ ದೇವಿಗೆ ಪ್ರಶಸ್ತಿ ಪ್ರದಾನ

11:58 AM Nov 26, 2017 | Team Udayavani |

ಬಸವಕಲ್ಯಾಣ: ಬಸವಕಲ್ಯಾಣದ ಅನುಭವ ಮಂಟಪ ಪರಿಸರದಲ್ಲಿ ಶನಿವಾರ ನಡೆದ ಶರಣ ಕಮ್ಮಟ- ಅನುಭವ
ಮಂಟಪ ಉತ್ಸವದ ಸಮಾರಂಭದಲ್ಲಿ ಡಾ| ಚನ್ನಬಸವ ಪಟ್ಟದ್ದೇವರ ಅನುಭವ ಮಂಟಪ ಪ್ರಶಸ್ತಿಯನ್ನು ಕಲಬುರ್ಗಿ
ಸುಲಫಲ ಮಠದ ಡಾ| ಸಾರಂಗಧರ ದೇಶಿಕೇಂದ್ರ ಸ್ವಾಮೀಜಿಗೆ ಪ್ರದಾನ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಗದಗ ತೋಂಟದಾರ್ಯ ಮಠದ ಡಾ| ಸಿದ್ದಲಿಂಗ ಸ್ವಾಮೀಜಿ ಮತ್ತು ಡಾ| ಬಸವಲಿಂಗ ಪಟ್ಟದ್ದೇವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ 50 ಸಾವಿರ ರೂ. ನಗದು, ಫಲಕ ಒಳಗೊಂಡಿದ್ದು, ಭಾಲ್ಕಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಪ್ರಶಸ್ತಿ ದಾಸೋಹಿ ಆಗಿದೆ. 

Advertisement

ಸುಲಫಲ ಮಠ ಬಸವ ತತ್ವದ ಮಠ. ಇದು ಯಾರ ಶಾಖೆ ಮಠವೂ ಅಲ್ಲ. ಬಸವಣ್ಣನೇ ಧರ್ಮಗುರು, ವಚನ ಸಾಹಿತ್ಯವೇ ಧರ್ಮಗ್ರಂಥ ಎಂದು ಎದೆ ತಟ್ಟಿ ಸಾರುವ ಮಠ. ನಾವು ವೀರಶೈವರಲ್ಲ, ಲಿಂಗಾಯತರು. ನಮ್ಮ ಧರ್ಮ
ಲಿಂಗಾಯತ ಎಂದು ಜನಮನದಲ್ಲಿ ಶ್ರೀಮಠ ತುಂಬುತ್ತಿದೆ. ಶೈಕ್ಷಣಿಕ, ಸಾಮಾಜಿಕವಾಗಿ ನಿರಂತರ ದಾಸೋಹ ಮಾಡುತ್ತ ಲಿಂಗಾಯತ ಧರ್ಮದ ಪ್ರಚಾರ ಮಾಡುತ್ತಿರುವ ಸ್ವಾಮೀಜಿ ಸೇವೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕಲಬುರ್ಗಿ ಸಂಶೋಧನ ಪ್ರಶಸ್ತಿ: ಬುಡಕಟ್ಟು ಜನಾಂಗದ ಸಂರಕ್ಷಣೆ ಮತ್ತು ಭಾಷಾ ಸಂಶೋಧನೆಗಾಗಿ ದುಡಿಯುತ್ತಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾರಾಷ್ಟ್ರ ಪುಣೆಯ ಡಾ| ಗಣೇಶ ದೇವಿ ಅವರಿಗೆ ಡಾ| ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಸಾಹಿತ್ಯ ಸಂಶೋಧನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ದಿ| ಡಾ| ಕಲಬುರ್ಗಿ ಅವರ ಪತ್ನಿ ಉಮಾದೇವಿ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರು ಡಾ| ಗಣೇಶ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ 25 ಸಾವಿರ ರೂ. ನಗದು, ಫಲಕ ಹೊಂದಿದ್ದು, ಬೀದರ ಗಾಂಧಿಗಂಜ್‌ ವ್ಯಾಪಾರಸ್ಥರ ಒಕ್ಕೂಟದ ಅಧ್ಯಕ್ಷ ಬಸವರಾಜ ಧನ್ನೂರ ಪ್ರಶಸ್ತಿ ದಾಸೋಹಿಗಳಾಗಿದ್ದಾರೆ.

ಆದಿವಾಸಿ-ಬುಡಕಟ್ಟು ಜನಾಂಗದ ಭಾಷಿಕ ಸಂರಕ್ಷಣೆ ಜತೆಗೆ ಅವರ ಆಹಾರ, ಶಿಕ್ಷಣ, ವಿಶೇಷವಾಗಿ ಮಹಿಳಾ
ಅಭಿವೃದ್ಧಿ ಸೇರಿದಂತೆ ಸಮಗ್ರ ವಿಕಾಸಕ್ಕಾಗಿ ಡಾ| ಗಣೇಶ ದೇವಿ ಶ್ರಮಿಸುತ್ತಿದ್ದಾರೆ. ಭಾಷಾ ಅಧ್ಯಯನಕ್ಕಾಗಿ ತೇಜಗಡದಲ್ಲಿ ಆದಿವಾಸಿ ಅಕಾಡೆಮಿ ಸ್ಥಾಪಿಸಿ, ಭಾಷಾಧ್ಯಯನಕ್ಕಾಗಿ ಬದುಕನ್ನು ಮುಡುಪಾಗಿಟ್ಟಿದ್ದಾರೆ. ಡಾ| ಎಂ.ಎಂ. ಕಲಬುರ್ಗಿ ಅವರ ಹತ್ಯೆ ವಿರುದ್ಧ ಹೋರಾಡಲು ಜನಾಂದೋಲನ ರೂಪಿಸಿರುವ ಡಾ| ದೇವಿ ಅವರ ಸೇವೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next