ಸುಳ್ಯ: ಆಸಿಯಾ ಧರಣಿ ಸತ್ಯಾಗ್ರಹಕ್ಕೆ ಬೆಂಬಲವಾಗಿ ಧಿಡೀರನೆ ಜನ ಸೇರಿದ ಪರಿಣಾಮ ಆಸಿಯಾ ಧರಣಿ ಕುಳಿತ ಗಾಂಧಿನಗರದ ಕಟ್ಟೆಕಾರ್ ಫೂಟ್ ವೇರ್ ಬಳಿ ನೂಕುನುಗ್ಗಲು ಏರ್ಪಟ್ಟು ಪೋಲೀಸರು ಲಾಠಿ ಬೀಸಿ ಚದುರಿಸಿದ ಘಟನೆ ಡಿ.10 ರಂದು ರಾತ್ರಿ ಸಂಭವಿಸಿದೆ.
ಖಲೀಲ್ ಕಟ್ಟೆಕಾರ್ ಮತ್ತು ಆಸಿಯಾ ಪ್ರಕರಣವನ್ನು ಇತ್ಯರ್ಥ ಮಾಡಲೆಂದು ಜಿಲ್ಲಾ ಮುಸ್ಲಿಂ ಒಕ್ಕೂಟ ಹಾಗೂ ಗಾಂಧಿನಗರ ಜಮಾತ್ ಕಮಿಟಿ ನೇತೃತ್ವದಲ್ಲಿ ಡಿ.9 ರಂದು ನಡೆದ ಸಭೆಗೆ ಖಲೀಲ್ ಬಾರದಿದ್ದುದರಿಂದ ಸಮಸ್ಯೆ ಬಗೆಹರಿಯದೆ ಧರಣಿಗೆ ತಿರುವು ಪಡೆದಿತ್ತು. ಆಸಿಯಾರನ್ನು ಮುಸ್ಲಿಂ ಒಕ್ಕೂಟದವರು ಕಟ್ಟೆಕಾರ್ ಫೂಟ್ ವೇರ್ ಅಂಗಡಿಯಲ್ಲಿ ಬಿಟ್ಟು ಹೋಗಿದ್ದರು. ರಾತ್ರಿ ಇಡೀ ಆಕೆ ಅಂಗಡಿಯಲ್ಲೇ ಕುಳಿತಿದ್ದುದರಿಂದ ಅಂಗಡಿ ಬಾಗಿಲು ಹಾಕಲಾಗಿರಲಿಲ್ಲ. ರಾತ್ರಿ ನ.ಪಂ.ಸದಸ್ಯೆಯೊಬ್ಬರೂ ಸೇರಿದಂತೆ ಕೆಲವರು ಆಕೆಗೆ ರಕ್ಷಣೆಗಾಗಿ ಬಂದು ಅಂಗಡಿಯಲ್ಲಿ ನಿಂತಿದ್ದರೆನ್ನಲಾಗಿದೆ.
ಡಿ.10 ರಂದು ಸಂಜೆಯ ವೇಳೆಗೆ ವಾಟ್ಸಾಪ್ ಗ್ರೂಪ್ ಗಳಲ್ಲಿ 7 ಗಂಟೆಗೆ ಆಸಿಯಾಗೆ ಬೆಂಬಲವಾಗಿ ಕಟ್ಟೆಕಾರ್ ಫೂಟ್ ವೇರ್ ಎದುರು ಪ್ರತಿಭಟನೆ ನಡೆಯಲಿದೆ ಎಂಬ ಸಂದೇಶ ರವಾನೆಯಾಗಿತ್ತು. ಆದರೆ ಯಾರು ಪ್ರತಿಭಟನೆ ಮಾಡುವವರೆಂಬ ಬಗ್ಗೆ ಅದರಲ್ಲಿ ಉಲ್ಲೇಖವಿರಲಿಲ್ಲ.ಇದರಿಂದ ಸಂಜೆ ಏಳು ಗಂಟೆ ವೇಳೆಗೆ ಅಂಗಡಿಯೆದುರಿನ ರಸ್ತೆಯ ಇನ್ನೊಂದು ಮಗ್ಗುಲಲ್ಲಿ ಕುತೂಹಲಿಗಳು ಸೇರಿ ಕಾಯತೊಡಗಿದ್ದರು.
7.30 ಆದರೂ ಪ್ರತಿಭಟನೆ ನಡೆಯಲಿಲ್ಲ. 7.40 ರ ಹೊತ್ತಿಗೆ ಯುವಕರ ಗುಂಪೊಂದು ಆಕೆಯ ಬಳಿ ಮಾತನಾಡಲು ತೆರಳಿದ ವೇಳೆ ಜನರು ಕುತೂಹಲದಿಂದ ಸ್ಥಳದಲ್ಲಿ ಜಮಾಯಿಸಿದ್ದರು. ಬಳಿಕ 8.45 ರ ಹೊತ್ತಿಗೆ ಪೊಲೀಸರು ಲಾಠಿ ಬೀಸಿ ಜನರನ್ನು ದೂರ ಸರಿಸಲು ಮುಂದಾದರು.
ಆಸಿಯಾರೊಡನೆ ಮಾತನಾಡಲು ಬಂದವರಲ್ಲಿ 6 ಮಂದಿ ಸ್ಥಳದಲ್ಲೇ ಇದ್ದು ಅವರನ್ನೂ ಹೊರ ಕಳಿಸಲು ಪೊಲೀಸರು ಯತ್ನಿಸಿದಾಗ ಆಸಿಯಾ ವಿರೋಧಿಸಿದ್ದು, ಜನ ಸೇರಿಸಿ ಶಾಂತಿಭಂಗಕ್ಕೆ ಯತ್ನಿಸಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.