Advertisement
ಸುಳ್ಯ ಕಸಬಾ ಗ್ರಾಮ ಆಡಳಿತಾಧಿಕಾರಿ (ವಿಎಒ) ಹಾಗೂ ಜನನ ಮರಣ ನೋಂದಣಾಧಿಕಾರಿಗಳ ಕಚೇರಿ ಸುಳ್ಯದ ಜ್ಯೋತಿ ಸರ್ಕಲ್ ಸಮೀಪದ ಬೀರಮಂಗಲದ 14 ಸೆಂಟ್ಸ್ ಜಾಗದಲ್ಲಿ ಸ್ವಂತ ಕಟ್ಟಡವಿತ್ತು. ಈ ಕಟ್ಟಡ ಶಿಥಿಲವಾಗಿ ಬೀಳುವ ಸ್ಥಿತಿಗೆ ತಲುಪಿದ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಎರಡೂವರೆ ವರ್ಷದ ಹಿಂದೆ ಕಚೇರಿಯನ್ನು ವಿವೇಕಾನಂದ ಸರ್ಕಲ್ ಬಳಿಯ ಸುಳ್ಯ ನಗರ ಪಂಚಾಯತ್‌ನ ಡಾ.ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಿಸಲಾಗಿದೆ.
ಕಟ್ಟಡ ಶಿಥಿಲಗೊಂಡ ಸಂದರ್ಭದಲ್ಲೇ ಹೊಸ ಕಟ್ಟಡಕ್ಕೆ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಬಳಿಕವೂ ಈ ಬಗ್ಗೆ ಪ್ರಸ್ತಾವನೆ ಸಲ್ಲಿಕೆಯಾದರೂ ಅನುದಾನ ದೊರಕಿಲ್ಲ. ಈಗ ಕಚೇರಿ ಇರುವ ಕಟ್ಟಡ ಅಷ್ಟೇನೂ ಪೂರಕವಾಗಿಲ್ಲ. ಆದರೆ, ಇದ್ದುದರಲ್ಲೇ ಹೊಂದಿಕೊಂಡು ಕೆಲಸ ನಿರ್ವಹಿಸಲಾಗುತ್ತಿದೆ, ಮೇಲ್ಛಾವಣಿ ಸಿಮೆಂಟ್ ಶೀಟ್‌ನದ್ದಾಗಿದ್ದು, ಬೇಸಗೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲದಂತಹ ಸ್ಥಿತಿ ಇಲ್ಲಿದೆ. ಸುಳ್ಯಕ್ಕೆ ಬರುವ ಮೇಲಾಧಿಕಾರಿಗಳು ಹೊಸ ಕಟ್ಟಡಕ್ಕೆ ಅನುದಾನ ಬಿಡುಗಡೆಗೆ ಕ್ರಮ ವಹಿಸುತ್ತೇವೆ ಎಂದು ತಿಳಿಸಿದ್ದರೂ ಹಣ ಮಾತ್ರ ಬಿಡುಗಡೆಯಾಗುತ್ತಿಲ್ಲ. ಸರಕಾರ, ಜನಪ್ರತಿನಿಧಿಗಳ ಹಂತದಲ್ಲಿ ಒತ್ತಡ ಬೀಳು ತ್ತಿಲ್ಲವೇ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.
Related Articles
Advertisement
ಹೊಸತೂ ಆಗಿಲ್ಲ, ಇರುವುದೂ ಬಳಸುವಂತಿಲ್ಲ!ಸುಳ್ಯಕ್ಕೆ ಸಂಬಂಧಿಸಿದಂತೆ ಕೋಟಿ ವೆಚ್ಚದಲ್ಲಿ ಸುಳ್ಯದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಹಂತದಲ್ಲಿದೆ. 12 ವರ್ಷಗಳ ಹಿಂದೆ ಅಂಬೇಡ್ಕರ್ ಭವನ ಕಾಮಗಾರಿ ಆರಂಭಿಸಲಾಗಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಇದ್ದ ಹಳೆಯ ನಗರ ಪಂಚಾಯತ್‌ನ ಅಂಬೇಡ್ಕರ್ ಭವನವನ್ನು ಇದೀಗ ಗ್ರಾಮ ಆಡಳಿತಾಧಿಕಾರಿ ಕಛೇರಿಗಾಗಿ ನೀಡಿರುವುದರಿಂದ, ಅಂಬೇಡ್ಕರ್ ಭವನದಲ್ಲಿ ನಡೆಸಬಹುದಾಗಿದ್ದ ಕಾರ್ಯಕ್ರಮಗಳಿಗೆ ಜಾಗವಿಲ್ಲ. ಹೊಸ ಅಂಬೇಡ್ಕರ್ ಭವನ ಇನ್ನೂ ಪೂರ್ಣಗೊಂಡಿಲ್ಲ, ಹಳೆಯದು ಬಳಸುವಂತಿಲ್ಲ ಎಂಬಂತಾಗಿದೆ ಎಂದು ಸುಳ್ಯದ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಸುಳ್ಯದ ಬೀರಮಂಗದಲ್ಲಿ ಗ್ರಾಮ ಆಡಳಿತಾಧಿಕಾರಿ ಕಛೇರಿಗೆ 0.14 ಎಕ್ರೆ ಜಾಗವಿದೆ. ಹಳೆ ಕಟ್ಟಡ ಶಿಥಿಲಗೊಂಡ ಹಿನ್ನಲೆಯಲ್ಲಿ ಕಚೇರಿಯನ್ನು ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಿಸಿ, ಕಾರ್ಯಚರಿಸಲಾಗುತ್ತಿದೆ. ಹೊಸ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಗೊಂಡಿಲ್ಲ.
-ತಿಪ್ಪೇಶ್, ಗ್ರಾಮ ಆಡಳಿತಾಧಿಕಾರಿ, ಸುಳ್ಯ ಕಸಬಾ -ದಯಾನಂದ ಕಲ್ನಾರ್