Advertisement

ಮರಳು ತೆಗೆಯುವುದು ಬಿಡಿ, ಹೊಳೆಗೆ ಇಳಿಯಬಾರದೇ?

01:12 PM Sep 26, 2018 | |

ಸುಳ್ಯ : ಹೊಳೆ, ತೋಡುಗಳಲ್ಲಿ ಮರಳು ತೆಗೆಯುವ ವಿಚಾರದಲ್ಲಿ ಪೊಲೀಸ್‌ ಅಧಿಕಾರಿ ಮತ್ತು ಸ್ಥಾಯೀ ಸಮಿತಿ ಅಧ್ಯಕ್ಷರ ನಡುವೆ ಕೆಲ ಕಾಲ ‘ಪ್ರಶ್ನೋತ್ತರ’ ನಡೆದ ಘಟನೆ ತಾ.ಪಂ. ಮಾಸಿಕ ಕೆಡಿಪಿ ಸಭೆಯಲ್ಲಿ ನಡೆಯಿತು.

Advertisement

ತಾ.ಪಂ. ಮಾಸಿಕ ಕೆಡಿಪಿ ಸಭೆ ಅಧ್ಯಕ್ಷ ಚನಿಯ ಕಲ್ತಡ್ಕ ಅವರ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ವಿಷಯ ಪ್ರಸ್ತಾವಿಸಿದ ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಮನೆ, ಕಟ್ಟಡ ನಿರ್ಮಾಣಕ್ಕೆ ಮರಳಿನ ಅಭಾವ ಇದೆ. ಗ್ರಾಮಾಂತರ ಪ್ರದೇಶದ ಸಣ್ಣ ತೋಡು, ಹೊಳೆಯಿಂದ ಸ್ಥಳೀಯರು ಮರಳು ಬಳಸುವಂತಾಗಲು ಏನು ಮಾಡಬೇಕು ಎಂದು ಪೊಲೀಸ್‌ ಅಧಿಕಾರಿಯನ್ನು ಪ್ರಶ್ನಿಸಿದರು. ಉತ್ತರಿಸಿದ ನಗರ ಠಾಣೆ ಇನ್‌ಸ್ಪೆಕ್ಟರ್‌ ಮಂಜುನಾಥ, ಅನುಮತಿ ರಹಿತವಾಗಿ ಮರಳು ತೆಗೆಯಲು ಅವಕಾಶ ಇಲ್ಲ. ಇಲ್ಲಿ ನಾವು ಕಾನೂನು ಬಿಟ್ಟು ಹೋಗುವಂತಿಲ್ಲ ಎಂದರು.

ಮರಳು ತೆಗೆಯದಿದ್ದರೂ ಹೊಳೆಗೆ ಇಳಿಯುವುದೇ ಅಪರಾಧ ಎಂಬಂತೆ ವರ್ತಿಸಲಾಗುತ್ತಿದೆ. ಇಂತಹ ನಿಯಮ ಕಾನೂನಿನಲ್ಲಿ ಇದೆಯೇ ಎಂದು ಬೊಳ್ಳೂರು ಪ್ರಶ್ನಿಸಿದರು. ಹೊಳೆಗೆ ಇಳಿಯುವುದು ತಪ್ಪಲ್ಲ. ಆದರೆ ಅಲ್ಲಿನ ಸಂಪತ್ತು ಒಯ್ಯುವುದು ತಪ್ಪು ಎಂದು ಎಸ್‌ಐ ಉತ್ತರಿಸಿದರು.

ಎಲ್ಲವು ಕಾನೂನಿನ ಪ್ರಕಾರ ನಡೆಯುತ್ತದೆಯೇ? ಕಾನೂನು ಬದಲಾಯಿಸಿ ಅವಕಾಶ ನೀಡಿದ ಉದಾಹರಣೆ ಇಲ್ಲವೇ ಎಂದು ಬೊಳ್ಳೂರು ಮರು ಪ್ರಶ್ನಿಸಿದರು. ಅನುಮತಿ ನೀಡುವ ಅಥವಾ ರದ್ದುಗೊಳಿಸುವ ಅಧಿಕಾರ ನಮಗೆ ಸೇರಿದ್ದಲ್ಲ. ಕಾನೂನು ರಕ್ಷಣೆ ಪೊಲೀಸ್‌ ಇಲಾಖೆ ಕರ್ತವ್ಯ. ಅದರಲ್ಲಿ ರಾಜಿ ಇಲ್ಲ ಎಂದು ಎಸ್‌.ಐ. ಹೇಳಿದರು.

ನಿಯಮ ನಾನೂ ಓದಿದ್ದೇನೆ!
ತಾ.ಪಂ. ಉಪಾಧ್ಯಕ್ಷೆ ಶುಭದಾ ಎಸ್‌. ರೈ, ಹೊಳೆ ಬದಿಗಳಲ್ಲಿ ಪಂಪ್‌ ಇರಿಸಿದವರಿಗೆ ಮರಳು ತುಂಬಿ ನೀರೆತ್ತಲುಸಾಧ್ಯವಾಗುತ್ತಿಲ್ಲ. ಅಲ್ಲಿನ ಮರಳು ತೆರವುಗೊಳಿಸುವುದು ಯಾರು? ಗ್ರಾ.ಪಂ. ಮುಖೇನ ಸ್ಪಂದಿಸಲು ಅವಕಾಶ ನೀಡುತ್ತಿಲ್ಲ ಎಂದರು. ಎಸ್‌.ಐ. ಉತ್ತ ರಿಸಿ, ಮರಳು ತೆಗೆಯಲು ಸ್ಥಳೀಯಾಡಳಿತಕ್ಕೆ ಅಧಿಕಾರ ಕೊಟ್ಟಿಲ್ಲ. ನೀವಾಗಿಯೇ ನಿಯಮ ರೂಪಿಸಿದರೆ ಹೇಗೆ ಎಂದು ಪ್ರಶ್ನಿಸಿದರು. 

Advertisement

ಸ್ಥಳೀಯಾಡಳಿತದ ಅಧಿಕಾರದ ಬಗ್ಗೆ ಪಂಚಾಯತ್‌ರಾಜ್‌ ಕಾಯ್ದೆಯಲ್ಲಿ ಇದೆ ಎಂದು ಬೊಳ್ಳೂರು ಹೇಳಿದಾಗ, ನಾನೂ ಕಾಯ್ದೆ ಓದಿದ್ದೇನೆ ಎಂದು ಎಸ್‌.ಐ. ಮರುತ್ತರ ನೀಡಿದರು. ಇದೇ ವಿಚಾರ ಕೆಲ ಕಾಲ ಚರ್ಚೆ ನಡೆಯಿತು. ಕಾನೂನು ಮೀರಿ ಅವಕಾಶ ಇಲ್ಲ ಎಂಬ ಎಸ್‌ಐ ಹೇಳಿಕೆ ನೀಡಿದ ಮೇಲೆ ಚರ್ಚೆ ಕೊನೆಯಾಯಿತು. ಉಜ್ವಲ ಯೋಜನೆ ಗ್ಯಾಸ್‌ ಸಂಪರ್ಕ ಒದಗಿಸಿದ ಕುರಿತು ಆಹಾರ ಇಲಾಖೆ ನೀಡಿದ ಉತ್ತರಕ್ಕೆಅತೃಪ್ತಿ ವ್ಯಕ್ತಪಡಿಸಿದರು.

ಸೆಕ್ಷನ್‌ ಕೇಂದ್ರ ಸ್ಥಳಾಂತರವಿಲ್ಲ 
ಸುಳ್ಯ ಮೆಸ್ಕಾಂ ಸೆಕ್ಷನ್‌ ಕಚೇರಿಯನ್ನು ಜಾಲ್ಸೂರಿಗೆ ವರ್ಗಾಯಿಸುವ ಪ್ರಸ್ತಾವನೆ ಕೈಬಿಟ್ಟು, ಇಲ್ಲಿಯೇ ಉಳಿಸಿಕೊಳ್ಳಲಾಗುತ್ತದೆ ಎಂದು ಮೆಸ್ಕಾಂ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಕೆಲ ಗ್ರಾಮಗಳಿಗೆ ತೊಂದರೆ ಆಗುತ್ತದೆ ಎಂಬ ಅಭಿಪ್ರಾಯ ಬಂದಿದೆ. ಅದರ ಬದಲಾಗಿ ಜಾಲ್ಸೂರಿನ ಬೇಡಿಕೆಗೆ ಸ್ಪಂದಿಸಿ ಅಲ್ಲಿ ಗ್ರಾಹಕರಿಗೆ ಬಿಲ್‌ ಪಾವತಿಗೆ ಅನುಕೂಲಕ್ಕೆ ಸರ್ವಿಸ್‌ ಸ್ಟೇಷನ್‌ ತೆರೆಯುವ ಪ್ರಸ್ತಾವ ಇದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next