Advertisement

ಇಂದು ಶ್ರೀ ಚೆನ್ನಕೇಶವ ವೈಭವದ ರಥೋತ್ಸವ

05:54 AM Jan 11, 2019 | |

ಸುಳ್ಯ : ಶ್ರೀ ಚೆನ್ನಕೇಶವ ದೇವರ ಸನ್ನಿಧಿಯಲ್ಲಿ ಪೂರ್ವಶಿಷ್ಟ ಸಂಪ್ರದಾಯ ದಂತೆ ವರ್ಷಾವಧಿ ಜಾತ್ರೆಯ ವೈಭವದ ರಥೋತ್ಸವ ಜ. 11ರಂದು ನಡೆಯಲಿದೆ. ಸಾವಿವಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಗುರುವಾರ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಿದ್ದು, ಸಂತೆ ಮಳಿಗೆಗಳಲ್ಲೂ ಜನಸಂಖ್ಯೆ ಅಧಿಕವಾಗಿತ್ತು. ರಥೋತ್ಸವದ ಹಿನ್ನೆಲೆಯಲ್ಲಿ ರಥಬೀದಿಯಿಂದ ಎಪಿಎಂಸಿ ತನಕದ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿ, ಪಾದಚಾರಿ ಸಂಚಾರಕ್ಕೆ ಸೀಮಿತಗೊಳಿಸಲಾಗಿದೆ.

Advertisement

ಜ. 11ರ ಶುಕ್ರವಾರ ಬೆಳಗ್ಗೆ ದೊಡ್ಡ ದರ್ಶನ ಬಲಿ, ಬಟ್ಟಲು ಕಾಣಿಕೆ ಸಮರ್ಪಣೆ ಆಗುತ್ತದೆ. ರಾತ್ರಿ ಕಲ್ಕುಡ ದೈವಗಳ ಭಂಡಾರ ಬಂದ ಬಳಿಕ ರಥಬೀದಿಯಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ರಾತ್ರಿ 12ಕ್ಕೆ ದೇಗುಲದ ಪ್ರಾಂಗಣದಿಂದ ತೇರು ಎಳೆಯುವ ಕಾರ್ಯ ಆರಂಭ ವಾಗುತ್ತದೆ. ದೇವರನ್ನು ಹೊತ್ತ ರಥ ರಥಬೀದಿ ದೇವರ ಕಟ್ಟೆ ತನಕ ಸಂಚರಿಸಿ, ಪುನಃ ದೇವಾಲಯಕ್ಕೆ ಮರಳುತ್ತದೆ. ಸಾವಿರಾರು ಭಕ್ತರು ರಥ ಎಳೆಯುವ ಕಾರ್ಯ ದಲ್ಲಿ ಕೈ ಜೋಡಿಸುತ್ತಾರೆ.

ಸುರಕ್ಷತೆಯ ದೃಷ್ಟಿಯಿಂದ ಮುಖ್ಯ ರಸ್ತೆಯಿಂದ ರಥಬೀದಿ ಸಂಪರ್ಕ ರಸ್ತೆ ಯನ್ನು ಎಪಿಎಂಸಿ ತನಕ ವಾಹನ ಸಂಚಾ ರಕ್ಕೆ ಅವಕಾಶ ಇರುವುದಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಸಂತೆ ಮಾರುಕಟ್ಟೆ ಇದ್ದು, ಜನಜಂಗುಳಿ ತುಂಬಿರುತ್ತದೆ. ಜತೆಗೆ ರಥ ಸಂಚಾರವೂ ಇದೇ ರಸ್ತೆಯಲ್ಲಿ ಸಾಗುವ ಕಾರಣ ವಾಹನ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿಲ್ಲ.

ತಾಲೂಕು ಹಾಗೂ ಹೊರ ಜಿಲ್ಲೆಗ ಳಿಂದ ಆಗಮಿಸುವ ಭಕ್ತರು, ಮುಖ್ಯ ರಸ್ತೆಯ ಒಂದು ಬದಿಯಲ್ಲಿ ಮಾತ್ರ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಬೈಕ್‌ ಹೊರತು ಪಡಿಸಿ ಉಳಿದ ವಾಹನಗಳನ್ನು ಪ್ರತ್ಯೇಕ ಸ್ಥಳದಲ್ಲಿ ನಿಲ್ಲಿಸಬೇಕು ಎಂದು ನಗರ ಠಾಣಾ ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ನಿಯೋಜನೆ, ಕೆಮರಾ ಕಣ್ಗಾವಲು
ಪುತ್ತೂರು ಉಪ ವಿಭಾಗದ ವ್ಯಾಪ್ತಿ ಯಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಗೃಹರಕ್ಷಕ ದಳ, ಪೊಲೀಸರು ಸಹಿತ ಒಟ್ಟು 150ಕ್ಕೂ ಅಧಿಕ ಮಂದಿ ಭದ್ರತಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಜಾತ್ರೆಯಲ್ಲಿ ಭಕ್ತರ ಸುರಕ್ಷತೆಗೆ ಅತ್ಯಾಧುನಿಕ ಸಿಸಿ ಕೆಮರಾಗಳು ಸಾಥ್‌ ನೀಡಲಿವೆ. ಕಳೆದ ವರ್ಷ ಆಯಕಟ್ಟಿನ ನಾಲ್ಕು ಸ್ಥಳಗಳಲ್ಲಿ ಹದಿನಾರು ಸಿಸಿ ಕೆಮರಾ ಅಳವಡಿಸಿದ್ದು, ಠಾಣೆಯಿಂದಲೇ ಸಂಚಾರ, ಇನ್ನಿತರ ಕಾನೂನು ಸಂಬಂಧಿ ಚಟುವಟಿಕೆಗಳನ್ನು ಗಮನಿಸುವ ವ್ಯವಸ್ಥೆ ಇದೆ. ಜತೆಗೆ ಪೂರ್ವಭಾವಿ ಸಭೆಯಲ್ಲಿ ದೇವಸ್ಥಾನದ ವತಿಯಿಂದಲು ಅಗತ್ಯ ಇರುವ ಕಡೆಗಳಲ್ಲಿ ಸಿಸಿ ಕೆಮಾರ ಅಳವಡಿಸಬೇಕು ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

Advertisement

ವಾಲಸಿರಿ ಉತ್ಸವ
ಜ. 10ರಂದು ಬೆಳಗ್ಗೆ ಜಾತ್ರೆಯ ಹಿನ್ನೆಲೆ ಯಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಿತು. ಅಜ್ಜಾವರ ಶ್ರೀ ಶಂಕರ ಭಾರತೀ ವೇದ ಪಾಠ ಶಾಲಾ ವಿದ್ಯಾರ್ಥಿಗಳಿಂದ ವೇದ ಪಾರಾಯಣ ನಡೆಯಿತು. ರಾತ್ರಿ ಮಿತ್ತೂರು ದೈವಗಳ ಭಂಡಾರ ಮತ್ತು ಕಾನತ್ತಿಲ ದೈವಗಳ ಭಂಡಾರ ಆಗಮಿಸಿ, ಅನಂತರ ವಾಲಸಿರಿ ಉತ್ಸವ ನಡೆಯಿತು. ಈ ಸಂದರ್ಭ ಆಡಳಿತ ಮೊಕ್ತೇಸರ ಡಾ| ಹರಪ್ರಸಾದ್‌ ತುದಿಯಡ್ಕ ಸಹಿತ ಸಮಿತಿ ಸದಸ್ಯರು, ನೂರಾರು ಭಕ್ತರು ಉಪಸ್ಥಿತರಿದ್ದರು.

ಮಿತ್ತೂರು ಕಟ್ಟೆಯ ವಿಶೇಷ
ಗಾಂಧಿನಗರದಲ್ಲಿ ಮಿತ್ತೂರು ನಾಯರ್‌ ಭಂಡಾರ ತಂಗುವ ಕಟ್ಟೆಯಿದೆ. ಜಾತ್ರೆಯಂದು ಮಿತ್ತೂರು ನಾಯರ್‌ ದೈವಗಳ ಭಂಡಾರ ದೇವಸ್ಥಾನಕ್ಕೆ ಬರುವುದು. ಈ ಕಟ್ಟೆಯಲ್ಲಿ ಭಂಡಾರ ಇಟ್ಟು, ಕಟ್ಟೆಪೂಜೆ ಅನಂತರ ಭಂಡಾರ ಬಂದ ಬಗ್ಗೆ ದೇವಸ್ಥಾನಕ್ಕೆ ಸುದ್ದಿ ಮುಟ್ಟಿಸಲಾಗುತ್ತದೆ. ದೇಗುಲದ ವತಿಯಿಂದ ಭಂಡಾರವನ್ನು ಸ್ವಾಗತಿಸಲಾಗುತ್ತದೆ. ಮರುದಿನ ದೊಡ್ಡ ದರ್ಶನ ಬಲಿ ಅನಂತರ ಗಾಂಧಿನಗರದಲ್ಲಿರುವ ಮಿತ್ತೂರು ನಾಯರ್‌ ಕಟ್ಟೆಗೆ ಭಂಡಾರ ತೆರಳುತ್ತದೆ. ಕಟ್ಟೆಯಲ್ಲಿ ಭಕ್ತರಿಗೆ ಪ್ರಸಾದ ವಿತರಿಸಲಾಗುತ್ತದೆ. ಬಳಿಕ ಭಂಡಾರ ಮಿತ್ತೂರು ಚಾವಡಿಗೆ ತೆರಳುವುದು. ರಥೋತ್ಸವದ ಮರುದಿನ ಚೆನ್ನಕೇಶವ ದೇವರ ಉತ್ಸವ ಬಲಿ ಹೊರಟು ಈ ಕಟ್ಟೆಯಲ್ಲಿ ಪೂಜೆ ಸ್ವೀಕರಿಸುತ್ತದೆ. ಹಾಗಾಗಿ ದೈವ ಮತ್ತು ದೇವರ ಆರಾಧನೆ ನಡೆಯವ ಈ ಕಟ್ಟೆ ಧಾರ್ಮಿಕ ನೆಲೆಯಲ್ಲಿ ಮಹತ್ವ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next