Advertisement

ಸುಳ್ಯ: ಕುಕ್ಕುಜಡ್ಕ ಮನೆಯಲ್ಲಿ  ಮಳೆಕೊಯಿಲಿಗೆ ಸಿದ್ಧತೆ 

11:15 AM Feb 14, 2018 | |

ಸುಳ್ಯ : ಅಂತರ್ಜಲ ಸಂರಕ್ಷಣೆಯನ್ನು ಇನ್ನಾದರೂ ಮಾಡದಿದ್ದರೆ ಮುಂದಿನ ದಿನಗಳಲ್ಲಿ ದಾಹ ತೀರುವುದು ಕಷ್ಟವಾಗಲಿದೆ. ಭವಿಷ್ಯದಲ್ಲಿ ನೀರು ಸಿಗುವುದೋ ಎಂಬ ಆತಂಕದಿಂದ ಎಚ್ಚೆತ್ತಿರುವ ರೈತರೊಬ್ಬರು ಬೇಸಗೆಯ ಈ ದಿನಗಳಲ್ಲೇ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.

Advertisement

ವೃತ್ತಿಯಲ್ಲಿ ಇಲೆಕ್ಟ್ರಿಶಿಯನ್‌ ಆಗಿರುವ ಸುಳ್ಯ ತಾ| ಕುಕ್ಕುಜಡ್ಕದ ಕೃಷಿಕ ಮಾಯಿಲಪ್ಪ ಸಂಕೇಶ ಅವರು ಇತ್ತೀಚೆಗೆ ಕಟ್ಟಿಸಿದ ಹೊಸ ಮನೆಯಲ್ಲಿ ಮಳೆ ಜಲಮರುಪೂರಣ ವ್ಯವಸ್ಥೆಯನ್ನು ಅಳವಡಿಸಿದ್ದಾರೆ. ಬೇಸಗೆಯ ಆರಂಭದಲ್ಲೇ ಈ ಕ್ರಮ ಕೈಗೊಂಡಿದ್ದು ಅಂತರ್ಜಲ ಸಂರಕ್ಷಣೆಗೆ ಅವರು ಪಣ ತೊಟ್ಟಿರುವುದನ್ನು ಪ್ರತಿನಿಧಿಸುತ್ತದೆ. ಮನೆಯ ಛಾವಣಿ ಸುತ್ತಲೂ ಪಿವಿಸಿ ಪೈಪ್‌ ಅಳವಡಿಸಿ ನೀರು ಕೆಳಗೆ ಹರಿಯದಂತೆ ತಡೆದಿದ್ದಾರೆ. ಮಳೆಗಾಲದಲ್ಲಿ ಛಾವಣಿ ಮೇಲೆ ಬೀಳುವ ನೀರೆಲ್ಲ ಪಿವಿಸಿ ಪೈಪ್‌ನ ಮೂಲಕ ಹರಿದು ಒಂದೇ ಕಡೆ ಬೀಳುವಂತೆ, ಒಂದು ಹನಿಯೂ ವ್ಯರ್ಥವಾಗದಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಸರಳ, ಮಿತವ್ಯಯಕಾರಿ
ಮನೆಯಲ್ಲಿ ಜಲ ಮರುಪೂರಣ ವ್ಯವಸ್ಥೆ ಅಳವಡಿಸುವುದು ಸರಳ ಎನ್ನುವ ಮಾಯಿಲಪ್ಪ ಅವರು, ಇದನ್ನು ಪ್ರಯೋಗ
ಮಾಡಿ ಯಶಸ್ವಿಯಾಗಿದ್ದಾರೆ. ಇದರ ಕೆಲಸಗಳನ್ನು ಬಹುತೇಕ ತಾವೇ ಮಾಡಿ, ಖರ್ಚನ್ನೂ ಉಳಿಸಿದ್ದಾರೆ. ಜಲ ಮರುಪೂರಣ ವ್ಯವಸ್ಥೆಗಾಗಿ ಅವರು 25 ಸಾವಿರ ರೂ. ಖರ್ಚು ಮಾಡಿದ್ದಾರಂತೆ. ಸ್ಥಳೀಯಾಡಳಿತ ಉದ್ಯೋಗ ಖಾತರಿ ಯೋಜನೆಯಲ್ಲಿ 15 ಸಾವಿರ ರೂ. ಸಹಾಯ ಧನ ನೀಡುತ್ತದೆ. ಅದನ್ನು ಬಳಸಿಕೊಂಡಿದ್ದೇನೆ. ಎಲ್ಲರೂ ತಮ್ಮ ಮನೆಗಳಲ್ಲಿ ಇಂಥ ವ್ಯವಸ್ಥೆ ಮಾಡಿಕೊಂಡರೆ ಬೇಸಗೆಯಲ್ಲಿ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಬಹುದು ಎಂದು ಹೇಳುತ್ತಾರೆ.

ಕಳೆದ ವರ್ಷ ಬಾವಿಗಳಲ್ಲಿ ಬೇಗನೆ ನೀರು ಆರಿದ್ದರಿಂದ ಜನ ಸಹಜವಾಗಿಯೇ ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ, ಮಾಯಿಲಪ್ಪ ಅವರ ಮನೆಗೆ ಭೇಟಿ ನೀಡಿರುವ ಹಲವರು, ಜಲ ಮರುಪೂರಣ ವ್ಯವಸ್ಥೆಯನ್ನು ಗಮನಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಸಕ್ತಿ ಇದ್ದವರು ಅವರ ಸಲಹೆಗಳನ್ನು ಪಡೆದು ಅನುಷ್ಠಾನಕ್ಕೆ ಮುಂದಾಗಿದ್ದಾರೆ.

ಛಾವಣಿಯಿಂದ ಗುಂಡಿಗೆ 
ಛಾವಣಿಯಿಂದ ಪೈಪ್‌ ಮೂಲಕ ಇಳಿಯುವ ನೀರು ಹರಿಯುವುದು ಮನೆ ಅಂಗಳದ ಮುಂದಿರುವ ಇಂಗುಗುಂಡಿಗೆ! ಬಾವಿ ಮತ್ತು ಕೊಳವೆ ಬಾವಿಗಳ ಮಧ್ಯೆ ಅವರು ಈ ಇಂಗುಗುಂಡಿ ತೆಗೆದಿದ್ದಾರೆ. 10 ಸಿಮೆಂಟ್‌ ರಿಂಗ್‌ಗಳನ್ನು ಬಳಸಿ, 4.5 ಅಡಿಯಲ್ಲಿ ರಿಂಗ್‌ ಅಳವಡಿಸಿದ್ದಾರೆ. ರಿಂಗ್‌ನ ಹೊರಗೆ ಮೇಲ್ಪದರದಲ್ಲಿ ದೊಡ್ಡ ಗಾತ್ರದ ಜಲ್ಲಿ ಕಲ್ಲುಗಳನ್ನು
(ಬೋಲ್ಡರ್ಸ್‌), ಅದರ ಮೇಲೆ ಮರಳನ್ನು ಹರಡಿದ್ದಾರೆ. ರಿಂಗ್‌ನ ಒಳಭಾಗ ತೆರೆದುಕೊಂಡಿದ್ದು, ಅದಕ್ಕೆ ನೀರು ಹರಿಯಲು ವ್ಯವಸ್ಥೆ ಕಲ್ಪಿಸಿದ್ದಾರೆ. ಅಂಗಳದಲ್ಲಿ ಬೀಳುವ ಮಳೆ ನೀರು ಕೂಡ ಇಂಗು ಗುಂಡಿಗೇ ಸೇರುತ್ತದೆ.

Advertisement

ಎಲ್ಲರೂ ಜೋಡಿಸಿಕೊಳ್ಳಿ
ಕಳೆದ ವರ್ಷ ನೀರಿನ ಸಮಸ್ಯೆ ಎದುರಾದಾಗ ಆತಂಕಗೊಂಡೆ. ಸಮಸ್ಯೆ ಆಗಿತ್ತು. ಅದಕ್ಕೆ ಈ ಬಾರಿ ಮುಂಜಾಗ್ರತೆ ವಹಿಸಿ ಮನೆಯಲ್ಲಿ ಜಲಮರುಪೂರಣ ವ್ಯವಸ್ಥೆ ಮಾಡಿಕೊಂಡಿದ್ದೇನೆ. ಗ್ರಾ.ಪಂ.ನ ಉದ್ಯೋಗ ಖಾತರಿಯಲ್ಲಿ 15 ಸಾವಿರ ರೂ. ಅನುದಾನ ನೀಡುತ್ತಿದೆ. ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಂಡಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಮನೆಗಳಲ್ಲಿ ಮಾತ್ರವಲ್ಲ, ಸರಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗಳೂ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ ಉತ್ತಮ.
– ಮಾಯಿಲಪ್ಪ ಸಂಕೇಶ,
ಕುಕ್ಕುಜಡ್ಕ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next