Advertisement
ಬೆಳಗ್ಗೆ 10 ಗಂಟೆಯ ಸುಮಾರಿಗೆ ಮಳೆ ಆರಂಭ ಗೊಂಡಿತ್ತು. ಸುಮಾರು ಒಂದು ತಾಸು ಕಾಲ ಮಳೆಯಾಯಿತು. ಈ ವೇಳೆ ಬೀಸಿದ ಭಾರೀ ಗಾಳಿಗೆ ಹಲವು ಮರಗಳು, ಕೊಂಬೆಗಳು ಧರಾಶಾಯಿ ಯಾಗಿದ್ದು, ಮನೆ, ವಿದ್ಯುತ್ ಕಂಬ ಹಾಗೂ ಕೃಷಿ ತೋಟಗಳಿಗೆ ವ್ಯಾಪಕ ಹಾನಿಯುಂಟಾಗಿದೆ.
ಪಂಜ ಹೋಬಳಿಯ ಎಣ್ಮೂರು ಮತ್ತು ಬಳ್ಪ ದಲ್ಲಿ 2 ಮನೆಗಳು ಭಾಗಶಃ ಹಾನಿಗೊಂಡಿವೆ. ಈ ಪೈಕಿ ಸುಳ್ಯ ಹೋಬಳಿ ವ್ಯಾಪ್ತಿಯಲ್ಲಿ ಮನೆಗಳು, ಮೆಸ್ಕಾಂ ಹಾಗೂ ಕೃಷಿಸೊತ್ತುಗಳಿಗೆ ಹೆಚ್ಚಿನ ಹಾನಿಯಾಗಿದೆ. ಜಾಲೂÕರು ಗ್ರಾಮದಲ್ಲಿ 6, ಸುಳ್ಯ ನಗರ ವ್ಯಾಪ್ತಿಯಲ್ಲಿ 3 ಮನೆಗಳು, ಮಂಡೆಕೋಲು ಗ್ರಾಮದಲ್ಲಿ 1 ಮನೆ ಹಾನಿಯಾಗಿದ್ದರೆ ಜಾಲೂÕರಿ ನಲ್ಲಿ ಮಸೀದಿಯೊಂದು ಹಾಗೂ ಪಂಚಾ ಯತ್ ವಸತಿ ಗೃಹದ ಕಟ್ಟಡವೊಂದಕ್ಕೆ ಮರದ ಕೊಂಬೆ ಬಿದ್ದು ಹಾನಿಯಾಗಿದೆ. ರಸ್ತೆ ಸಂಪರ್ಕ ಕಡಿತ
ಪೈಚಾರು ಸಮೀಪದ ಬೊಳುಬೈಲಿನಲ್ಲಿ ರಸ್ತೆಗೆ ಮರ ಉರುಳಿಬಿದ್ದಿದೆ. ಜಾಲೂÕರು ಸುಬ್ರಹ್ಮಣ್ಯ ಹೆದ್ದಾರಿಯ ನಡುವೆ ಉಬರಡ್ಕಕ್ಕೆ ತೆರಳುವ ಕಂದಡ್ಕಸೇತುವೆ ಸಮೀಪ ಮರ ಉರುಳಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು.
Related Articles
ದುಗ್ಗಲಡ್ಕ ಪೇಟೆ ಹತ್ತಿರ ಹಾಗೂ ಗೋಂಟಡ್ಕ ಸಮೀಪ ವಿದ್ಯುತ್ ಲೈನ್‌ಗೆ ಮರದ ಕೊಂಬೆ ಬಿದ್ದು ತಂತಿಯಲ್ಲೇ ಜೋತುಬಿದ್ದಿರುವುದು ಕಂಡು ಬಂದಿದೆ. ಪೈಚಾರು ಸಮೀಪ ತಿರುವೊಂದರ ಬಳಿ ಬೃಹತ್ ಕೊಂಬೆ ಬಿದ್ದು ವಿದ್ಯುತ್ ಕಂಬ ಹೆದ್ದಾರಿಗೆ ವಾಲಿ ಅಪಾಯಕಾರಿ ಸ್ಥಿತಿಯಲ್ಲಿ ಕಂಡುಬಂದಿತು.
Advertisement
ತಾಲೂಕಿನಲ್ಲಿ ಪುತ್ತೂರು- ಸುಳ್ಯ 33 ಕೆ.ವಿ. ವಿದ್ಯುತ್ ಮಾರ್ಗದ ಬೊಳುಬೈಲು, ಜಾಲೂÕರು ಸಮೀಪ ಮರ ಉರುಳಿ ಮುಖ್ಯ ವಿದ್ಯುತ್ ವಿತರಣೆ ಮಾರ್ಗಕ್ಕೆ ಹಾನಿ ಯಾ ಗಿದೆ. ಇಲಾಖೆ ಸಿಬಂದಿ ತುರ್ತಾಗಿ ದುರಸ್ತಿ ಕಾರ್ಯಕೈಗೊಂಡಿದ್ದಾರೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.**
ಈಶ್ವರಮಂಗಲ : ಸುಳ್ಯಪದವು, ಈಶ್ವರಮಂಗಲ ಮುಂತಾದೆಡೆ ಬುಧವಾರ ಬೀಸಿದ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಧರೆಗುರುಳಿ ವಿದ್ಯುತ್ ಮತ್ತು ಸಂಚಾರದಲ್ಲಿ ತೊಂದರೆ ಉಂಟಾಗಿದೆ. ಕೇರಳ-ಕರ್ನಾಟಕವನ್ನು ಸಂಪರ್ಕಿಸುವ ಪಳ್ಳತ್ತೂರು ಸೇತುವೆ ಗುರುವಾರ ಬೆಳಗ್ಗೆ ಮುಳುಗಡೆಗೊಂಡಿರುವುದರಿಂದ ಎರಡು ರಾಜ್ಯಗಳ ನಡುವೆ ಸಂಪರ್ಕ ಕಡಿತಗೊಂಡು ಪ್ರಯಾಣಿಕರು ಸುತ್ತಬಳಸಿ ಪ್ರಯಾಣಿಸಿದರು. ಈಶ್ವರಮಂಗಲ-ಮೇನಾಲ-ದೇಲಂಪಾಡಿಯ ಜಿಲ್ಲಾ ಮುಖ್ಯ ರಸ್ತೆಯ ಮೆಣಸಿನಕಾನದಲ್ಲಿ ಎಚ್ ಟಿ ಲೈನ್ ಮೇಲೆ ಮರವೊಂದು ಬಿದ್ದು ಎರಡು ವಿದ್ಯುತ್ ಕಂಬ ಧರೆಗುಳಿಯುವುದರಿಂದ ಕೇರಳ ಕರ್ನಾಟಕ ಸಂಪರ್ಕಿಸುವ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಖಾಸಗಿ ಬಸ್ ಕೂದಳೆಲೆ ಅಂತರದಲ್ಲಿ ಅಪಾಯದಿಂದ ಪಾರಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಎರಡು ಗಂಟೆ ವಾಹನ ಸಂಚಾರಕ್ಕೆ ಆಡಚಣೆಯಾಗಿತ್ತು. ಈಶ್ವರಮಂಗಲ ಹೊರಠಾಣೆಯ ಠಾಣಾಧಿಕಾರಿ ಸಿ.ಟಿ. ಸುರೇಶ್ ಅವರ ಮಾರ್ಗದರ್ಶನದಲ್ಲಿ ಅಬ್ದುಲ್ ಮೆಣಸಿನಕಾನ, ಮಹಾಲಿಂಗ ನಾಯ್ಕ, ಈಶ್ವರ, ಗೋಪಾಲ, ಸತೀಶ್, ಸುನೀಲ್ ಕೊಂಬೆಟ್ಟು, ನಾಗರಿಕರು ತೆರವು ಕಾರ್ಯದಲ್ಲಿ ಸಹಕರಿಸಿದರು. ಸುಳ್ಯಪದವು ಬಳಿ ಕನ್ನಡ್ಕ ಎಂಬಲ್ಲಿ ಹಲಸಿನ ಮರವೊಂದು ಎಚ್‌ಟಿ ಲೈನ್ ಗಳ ಮೇಲೆ ಬಿದ್ದು 6 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಇದರಿಂದ ಬುಧವಾರ ರಾತ್ರಿಯಿಂದಲೇ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಸಾಂತ್ಯದಲ್ಲಿ ಮರವೊಂದು ಉರುಳಿ ಬಿದ್ದು ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಸ್ಥಳೀಯರು ಮರವನ್ನು ತೆರವುಗೊಳಿಸಿದರು. ಮೆಸ್ಕಾಂಗೆ ಲಕ್ಷಾಂತರ ರೂ. ನಷ್ಟ
ಸುಮಾರು 8 ವಿದ್ಯುತ್ ಕಂಬಗಳು ಧರೆಗೆ ಬಿದ್ದಿರುವುದರಿಂದ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಮೆಣಸಿನಕಾನದಲ್ಲಿ ವಿದ್ಯುತ್ ಸಂಪರ್ಕ ಮಾಡುವ ಕೆಲಸ ಭರದಿಂದ ಸಾಗುತ್ತಿದೆ. ಸುಮಾರು ಲಕ್ಷ ರೂಪಾಯಿಯಷ್ಟು ಮೆಸ್ಕಾಂಗೆ ನಷ್ಟ ಉಂಟಾಗಿದೆ ಎಂದು ಈಶ್ವರಮಂಗಲ ಮೆಸ್ಕಾಂ ಕಚೇರಿಯ ಎಂಜಿನಿ ಯರ್ ತನಿಯ ನಾಯ್ಕ ತಿಳಿಸಿದ್ದಾರೆ. ಪಳ್ಳತ್ತೂರು ಸೇತುವೆ ಮುಳುಗಡೆ
ಪಳ್ಳತ್ತೂರು ಸೇತುವೆ ಗುರುವಾರ ಬೆಳಗಿನವರೆಗೆ ಮುಳುಗಡೆಯಾಗಿದ್ದು, ಸಂಚಾರಕ್ಕೆ ಆಡಚಣೆ ಯಾಗಿದೆ. ಬೆಳಗ್ಗೆ 10 ರ ಬಳಿಕ ಸೇತುವೆ ಮೇಲೆ ಸಂಚಾರ ಪ್ರಾರಂಭಗೊಂಡಿತ್ತು. ಪುತ್ತೂರು: 72.6 ಮಿ.ಮೀ. ಮಳೆ
ಪುತ್ತೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನ ತನಕ ಉತ್ತಮ ಮಳೆ ಸುರಿದಿದೆ. ಕಳೆದ 24 ತಾಸುಗಳಲ್ಲಿ 72.6 ಮಿ.ಮೀ. ಮಳೆ ದಾಖಲಾಗಿದೆ. ಬುಧವಾರ ರಾತ್ರಿ ಸುರಿದ ಮಳೆಯ ಪರಿಣಾಮ, ಕೇರಳ ಮತ್ತು ಕರ್ನಾಟಕ ಗಡಿಭಾಗದ ಈಶ್ವರಮಂಗಲ ಸಮೀಪದ ಪಳ್ಳತ್ತೂರು ಸೇತುವೆ ಗುರುವಾರ 3ನೇ ಬಾರಿ ಮುಳುಗಡೆಯಾಗಿದೆ. ಧಾರಾಕಾರ ಮಳೆ ಸುರಿದ ಪರಿಣಾಮ ಗುರುವಾರ ಬೆಳಗ್ಗೆ ನೇತ್ರಾವತಿ, ಕುಮಾರಧಾರಾ ನದಿಗಳ ನೀರಿನ ಮಟ್ಟ ಹೆಚ್ಚಾಗಿತ್ತು. ಹೊಳೆ, ತೋಡುಗಳು ತುಂಬಿ ಹರಿದಿವೆ. ಬಿರು ಬಿಸಿಲು
ಮಳೆ ಗುರುವಾರ ಇಳಿಮುಖ ಕಂಡಿತ್ತು. ಬೆಳಗ್ಗೆ 11 ಗಂಟೆ ಅನಂತರ ಹಲವೆಡೆ ಬಿರು ಬಿಸಿಲಿನ ವಾತಾವರಣ ಇತ್ತು. ಆಗೊಮ್ಮೆ-ಈಗೊಮ್ಮೆ ಮೋಡ ಮುಸುಕಿದ ವಾತಾವರಣವಿದ್ದರೂ ಸಂಜೆ ತನಕ ಮಳೆ ಸುರಿದಿಲ್ಲ. ಕೊಡಗು, ಸಕಲೇಶಪುರ ಮೊದಲಾದೆಡೆ ಉತ್ತಮ ಮಳೆ ಆದ ಕಾರಣ, ಇಲ್ಲಿನ ನದಿ ನೀರಿನ ಮಟ್ಟದಲ್ಲಿ ಏರಿಕೆ ಕಂಡಿತ್ತು.