Advertisement

Sullia: ಪರ್ಲಿಕಜೆ-ಮಾವಿನಕಟ್ಟೆ ರಸ್ತೆ ಅಭಿವೃದ್ಧಿ ಮರೀಚಿಕೆ !

03:07 PM Dec 12, 2024 | Team Udayavani |

ಸುಳ್ಯ: ಸುಳ್ಯ ಹಾಗೂ ಪುತ್ತೂರು ತಾಲೂಕುಗಳನ್ನು ಬೆಸೆಯುವ ಪರ್ಲಿಕಜೆ-ಮಾವಿನಕಟ್ಟೆ ಸಂಪರ್ಕ ರಸ್ತೆ ಅಭಿವೃದ್ಧಿ ಮಾಡಬೇಕೆಂಬ ಬೇಡಿಕೆ ಸಾರ್ವಜನಿಕರಿಂದ ಕಳೆದ ಎರಡು ದಶಕಗಳಿಗಿಂದ ವ್ಯಕ್ತಪಡಿಸಲಾಗಿದ್ದರೂ ಇನ್ನೂ ಅಭಿವೃದ್ಧಿಯಾಗಿಲ್ಲ. ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರಸ್ತೆ ಅಭಿವೃದ್ಧಿ ಕಂಡಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Advertisement

ಸುಳ್ಯ ತಾಲೂಕಿನ ಪರ್ಲಿಕಜೆ, ಜಬಳೆ, ನಿಡುಬೆ, ಕೊಚ್ಚಿ ಮುಖಾಂತರ ಪುತ್ತೂರು ತಾಲೂಕಿನ ದುಗ್ಗಲ, ಮಾವಿನಕಟ್ಟೆ, ಕಲ್ಲರ್ಪೆ ಭಾಗಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಸುಳ್ಯ ತಾಲೂಕು ವ್ಯಾಪ್ತಿಗೆ ಸೇರುವ ರಸ್ತೆ ಐವರ್ನಾಡು ಗ್ರಾಪಂ ವ್ಯಾಪ್ತಿಗೆ ಒಳಪಟ್ಟಿದ್ದು, ಪುತ್ತೂರು ಭಾಗದ ರಸ್ತೆ ಕೊಳ್ತಿಗೆ ಗ್ರಾಪಂ ವ್ಯಾಪ್ತಿಗೆ ಸೇರುತ್ತದೆ. ಎರಡೂ ಪಂಚಾಯತ್‌ ವ್ಯಾಪ್ತಿಗೆ ಸೇರುವ ಸುಮಾರು ಐದು ಕಿ.ಮೀ. ರಸ್ತೆ ಕಚ್ಚಾ ರಸ್ತೆಯಾಗಿದ್ದು ರಸ್ತೆ ಅಭಿವೃದ್ಧಿ ಮಾಡುವಂತೆ ಬೇಡಿಕೆ ಇಟ್ಟಿದ್ದರೂ, ರಸ್ತೆ ಅಭಿವೃದ್ಧಿ ಮಾತ್ರ ಇಲ್ಲಿ ಇನ್ನೂ ಮರೀಚಿಕೆಯಾಗಿದೆ.

ಎರಡು ದಶ ಕದ ಬೇಡಿಕೆ!
ಕಳೆದೆರಡು ದಶಕಗಳಿಂದ ಎರಡು ತಾಲೂಕುಗಳನ್ನು ಬೆಸೆಯುವ ಈ ರಸ್ತೆಯ ಅಭಿವೃದ್ಧಿಯಾಗಬೇಕೆಂದು ಬೇಡಿಕೆ ಇಟ್ಟಿದ್ದರೂ ಸ್ಪಂದನೆ ಸಿಕ್ಕಿಲ್ಲ. ಅಂದಿನಿಂದ ಇಂದಿನವರೆಗೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ರಸ್ತೆ ಅಭಿವೃದ್ಧಿಗೆ ಅನುದಾನ ನೀಡುವಂತೆ ಮನವಿ ಸಲ್ಲಿಸುತ್ತಾ ಬರಲಾಗಿದ್ದರೂ ಫಲಿತಾಂಶ ಮಾತ್ರ ಶೂನ್ಯವಾಗಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.

ಪ್ರಧಾನಿ ಕಾರ್ಯಲಯಕ್ಕೂ ಪತ್ರ !
ಕೆಲವು ವರ್ಷಗಳ ಹಿಂದೆ ಇದೇ ರಸ್ತೆಯ ಅಭಿವೃದ್ಧಿಗಾಗಿ ಇಲ್ಲಿನ ನಾಗರಿಕರೊಬ್ಬರು ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದರು. ಆದರೂ ಕೂಡ ರಸ್ತೆಯ ಮಧ್ಯಭಾಗದಲ್ಲಿರುವ ಮಣ್ಣಿನ ರಸ್ತೆಗೆ ಡಾಮರು ಅಥವಾ ಕಾಂಕ್ರೀಟ್‌ನ ಮುಂಬಡ್ತಿ ದೊರೆತಿಲ್ಲ. ಈ ಭಾಗದಲ್ಲಿ ಸಿ.ಆರ್‌.ಸಿ. ಕಾಲನಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದೂಳಿದ ವರ್ಗಗಳ ಸುಮಾರು ಇನ್ನೂರಕ್ಕಿಂತ ಹೆಚ್ಚು ಮನೆಗಳಿದ್ದು, ಸಾವಿರಕ್ಕೂ ಅಧಿಕ ನಿವಾಸಿಗಳು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ರಸ್ತೆಯ ಈ ದುಸ್ಥಿತಿಯಿಂದಾಗಿ ಬಾಡಿಗೆ ವಾಹನಗಳ ಚಾಲಕರೂ ಬರಲು ನಿರಾಕರಿಸುವ ಕಾರಣ ಇಲ್ಲಿನ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ.

ಪೂರ್ಣ ಅಭಿವೃದ್ಧಿಗೆ ಆಗ್ರಹ
ಈ ರಸ್ತೆಯು ಅಭಿವೃದ್ಧಿ ಹೊಂದಿದರೆ ಎರಡು ತಾಲೂಕಿನ ಭಾಗದ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಬಹಳಷ್ಟು ಪ್ರಯೋಜನಕಾರಿಯಾಗುತ್ತದೆ. 11 ಕಿ.ಮೀ.ನ ಈ ರಸ್ತೆಯಲ್ಲಿ ಸುಮಾರು 22 ವರ್ಷಗಳ ಹಿಂದೆ ಗ್ರಾಮ ಸಡಕ್‌ ಯೋಜನೆಯಲ್ಲಿ ಈ ರಸ್ತೆಯ ಸ್ವಲ್ಪ ಭಾಗ ಡಾಮರೀಕರಣಗೊಂಡಿತ್ತು. ಆದರೀಗ ಹಾಕಿದ ಡಾಮರು ಎದ್ದು ಹೋಗಿ ಸಂಚರಿಸಲು ಸಾಧ್ಯವಾಗದಷ್ಟು ಕೆಟ್ಟು ಹೋಗಿದೆ. ರಸ್ತೆಯನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಈ ರಸ್ತೆಯ ಮಧ್ಯಭಾಗ ಕಚ್ಚಾ ರಸ್ತೆಯಾಗಿದ್ದು ಡಾಮರೀಕರಣ ಆಗಿಲ್ಲ. ಗ್ರಾಮ ಪಂಚಾಯತ್‌ನ ಅನುದಾನ ಅತ್ಯಲ್ಪವಾಗಿರುವ ಕಾರಣ ಗ್ರಾಪಂ ಅನುದಾನದಲ್ಲಿ ರಸ್ತೆಯ ಸಂಪೂರ್ಣ ಅಭಿವೃದ್ಧಿ ಅಸಾಧ್ಯ. ಪೂರಕ ಕ್ರಮ ಕೈಗೊಳ್ಳಲಾಗುವುದು.
– ಶ್ಯಾಮ್‌ ಪ್ರಸಾದ್‌, ಪಿಡಿಒ, ಐವರ್ನಾಡು ಗ್ರಾಪಂ

ಪರ್ಲಿಕಜೆ – ನಿಡುಬೆ – ಕೊಚ್ಚಿಯವರೆಗಿನ ರಸ್ತೆ ತೀರಾ ಕೆಟ್ಟುಹೋಗಿದ್ದು ಮಳೆಗಾಲದಲ್ಲಂತೂ ಸಂಚಾರಕ್ಕೆ ಕೇವಲ ಜೀಪನ್ನು ಮಾತ್ರ ಆಶ್ರಯಿಸಬೇಕಾಗಿದೆ. ಈ ಭಾಗದ ಜನರು ಉದ್ಯೋಗ, ವಿದ್ಯಾಭ್ಯಾಸ ಹಾಗೂ ವ್ಯಾವಹಾರಿಕವಾಗಿ ಪುತ್ತೂರು ಹಾಗೂ ಸುಳ್ಯ ತಾಲೂಕುಗಳೆರೆಡರನ್ನೂ ಆಶ್ರಯಿಸಿದ್ದು, ಈ ರಸ್ತೆಯ ಅಭಿವೃದ್ಧಿ ಅತ್ಯಗತ್ಯ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರಸ್ತೆಯ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸಲಿ.
-ಮುರಳೀಧರ ಕೊಚ್ಚಿ, ರಸ್ತೆ ಫಲಾನುಭವಿ

Advertisement

Udayavani is now on Telegram. Click here to join our channel and stay updated with the latest news.

Next