Advertisement
ಅಚ್ಚರಿಯ ಸಂಗತಿಯೆಂದರೆ, ಸೇತುವೆಯ ನಿರ್ವಹಣೆ ಹೊಣೆ ಹೊತ್ತಿರುವ ಕೆಆರ್‌ಡಿಸಿಎಲ್‌ಗೆ ಸಮಸ್ಯೆ ಗೊತ್ತಿದ್ದರೂ ಸ್ಪಂದಿಸಲು ಮೀನ- ಮೇಷ ಎಣಿಸುತ್ತಿದೆ. ಪ್ರತಿ ತಾ.ಪಂ. ಸಭೆಗೆ ಇದೇ ಸೇತುವೆ ದಾಟಿ ಬರುವ ಅಧಿಕಾರಿಗಳು, ಜನಪ್ರತಿನಿಧಿಗಳು ದುರಸ್ತಿ ಬಗ್ಗೆ ಆಸಕ್ತಿಯೇ ವಹಿಸದಿರುವುದು ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ.
ಮಾಣಿ-ಮೈಸೂರು ಹೆದ್ದಾರಿಯಲ್ಲಿ ಈ ಸೇತುವೆ ಇದ್ದು, ಸುಳ್ಯ ನ.ಪಂ. ವ್ಯಾಪ್ತಿಗೆ ಒಳಪಟ್ಟ ಪ್ರದೇಶದಲ್ಲಿದೆ. ಪಯಸ್ವಿನಿ ನದಿಗೆ ಜೋಡಣೆಗೊಳ್ಳುವ ಕಂದಡ್ಕ ಹೊಳೆಗೆ ಈ ಸೇತುವೆ ನಿರ್ಮಿಸಲಾಗಿದೆ. ಹೊಸ ಸೇತುವೆ ಕಾಮಗಾರಿ ಸಂದರ್ಭ ಗುಣಮಟ್ಟಕ್ಕೆ ಆಕ್ಷೇಪ ಕೇಳಿ ಬಂದಿತ್ತು. ಅನಂತರ ಹೇಗೋ ಕಾಮಗಾರಿ ಮುಗಿದು ಸಂಚಾರಕ್ಕೆ ಮುಕ್ತವಾಗಿತ್ತು. ಕೆಲ ಸಮಯಗಳ ಹಿಂದೆ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಹಸ್ತಾಂತರ ಆಗುವ ಹಂತದಲ್ಲಿದೆ. ಹೊಸ ಸೇತುವೆ ನಿರ್ಮಾಣದ ಆರಂಭದಲ್ಲಿ ಕಾಮಗಾರಿ ಬಗ್ಗೆ ಮೂಡಿದ ಅನುಮಾನ ಈಗಿನ ದುಃಸ್ಥಿತಿ ದೃಢೀಕರಿಸಿದೆ. ಸೇತುವೆ ಮೇಲ್ಪದರ ಕಳಚಿ, ತಳ ಭಾಗದತ್ತ ಮುಖ ಮಾಡುವ ಮೊದಲು ದುರಸ್ತಿಗೆ ಅವಕಾಶ ಇದ್ದರೂ ಕಾಮಗಾರಿ ಅನುಷ್ಠಾನದ ಬಗ್ಗೆ ಅನುಮಾನ ಮೂಡಿದೆ.
Related Articles
ಸೇತುವೆ ಅವ್ಯವಸ್ಥೆ ಬಗ್ಗೆ ಜು. 2ರಂದು ‘ಉದಯವಾಣಿ ಸುದಿನ’ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಇಲಾಖೆ ಜು. 3ರಂದು ಮೇಲ್ಪದರ ಶಿಥಿಲ ಸ್ಥಳಕ್ಕೆ ಜಲ್ಲಿಮಿಶ್ರಿತ ಪರಿಕರ ತುಂಬಿಸಿ ತೇಪೆ ಕಾಮಗಾರಿ ಮಾಡಿತ್ತು. ಅದು ಒಂದೇ ವಾರದಲ್ಲಿ ಕಿತ್ತು ಹೋಗಿ, ಅದರ ಗಟ್ಟಿತನ ಬಹಿರಂಗಗೊಂಡಿತ್ತು. ಅದಾದ ಬಳಿಕ ತೇಪೆ ಹಾಕುವ ಪ್ರಯತ್ನ ನಡೆಯಿತಾದರೂ ಅದು ನಿಲ್ಲಲಿಲ್ಲ. ವಿಪರೀತ ಮಳೆ ಕಾರಣ ಕಾಮಗಾರಿ ಸಾಧ್ಯವಾಗುತ್ತಿಲ್ಲ ಎಂಬ ಕಾರಣ ನೀಡಿ ಇಲಾಖೆ ದುರಸ್ತಿಯನ್ನು ಬೇಸಗೆ ಕಾಲಕ್ಕೆ ಮುಂದೂಡಿತ್ತು. ಈಗ ಮಳೆ ನಿಂತು ತಿಂಗಳೇ ಕಳೆದಿದೆ. ಆದರೆ ಕೆಆರ್‌ಡಿಸಿಎಲ್‌ಗೆ ಮಳೆ ನಿಂತಿಲ್ಲ. ಬೇಸಗೆಯ ದರ್ಶನವಾಗಿಲ್ಲ. ಪರಿಣಾಮ ಕಾಮಗಾರಿ ಆರಂಭಗೊಳ್ಳದೇ ಶಿಥಿಲವೇ ಹೆಚ್ಚಾಗುತ್ತಿದೆ.
Advertisement
ಸರಳು ಮೇಲೆದ್ದಿವೆ..!ಸೇತುವೆ ಮೇಲ್ಭಾಗದಲ್ಲಿ 6 ಕಡೆಗಳಲ್ಲಿ ಮೇಲ್ಪದರ ಕಿತ್ತು ಹೋಗಿ, ಕಬ್ಬಿಣದ ಸರಳುಗಳು ಕಾಣುತ್ತಿವೆ. ದಿನಂಪ್ರತಿ ನೂರಾರು ವಾಹನಗಳು ಸಂಚರಿಸುವ ಕಾರಣ ಮೇಲ್ಪದರಕ್ಕೆ ಮತ್ತಷ್ಟು ಹಾನಿ ಉಂಟಾಗಿ, ಸಮಸ್ಯೆ ಬಿಗಡಾಯಿಸಿದೆ. ಸೇತುವೆ ಒಳ ಭಾಗದಲ್ಲಿರುವ ಎರಡು ಬದಿಗಳಲ್ಲಿನ ಫುಟ್‌ಪಾತ್‌ನಲ್ಲಿ ಸ್ಲಾಬ್‌ಗಳು ಮುರಿದು ಬಿದ್ದು ವರ್ಷಗಳೇ ಕಳೆದಿವೆ. ನಿರ್ವಹಣೆ ಕೊರತೆಯ ಕಾರಣದಿಂದ ಕೋಟ್ಯಂತರ ರೂ. ವೆಚ್ಚದ ಸೇತುವೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ದುರಸ್ತಿಗೆ ಸೂಚನೆ
ಮೊಗರ್ಪಣೆ ಸೇತುವೆ ಮೇಲ್ಪದರ ಹಾನಿಗೊಂಡಿರುವ ಬಗ್ಗೆ ಗಮನಕ್ಕೆ ಬಂದಿದೆ. ಅದರ ದುರಸ್ತಿಗೆ ತತ್‌ಕ್ಷಣ ಎಂಜಿನಿಯರ್ ಗಳಿಗೆ ಸೂಚಿಸಲಾಗುವುದು.
-ಗಣೇಶ್, ಚೀಫ್ ಎಂಜಿನಿಯರ್,
ರಾ.ಹೆ. ಪ್ರಾಧಿಕಾರ, ಬೆಂಗಳೂರು ಸಂಚಾರ ಕಷ್ಟ
ಶಿಥಿಲಗೊಂಡು ಹಲವು ತಿಂಗಳು ಕಳೆದರೂ ದುರಸ್ತಿ ಆಗಿಲ್ಲ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಕೊಡುವ ಅಗತ್ಯವಿಲ್ಲ. ಪ್ರತಿ ನಿತ್ಯ ಇದೇ ಸೇತುವೆ ದಾಟಿ ಅವೆರಲ್ಲರೂ ಸಂಚರಿಸುತ್ತಾರೆ. ಆದರೂ, ಸ್ಪಂದಿಸಿಲ್ಲ. ಮೇಲ್ಪದರ ಬಿರುಕು ಬಿಟ್ಟಿರುವ ಕಾರಣ ದ್ವಿಚಕ್ರ ವಾಹನ ಸಂಚಾರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.
– ನಾಗೇಶ ಸುಳ್ಯ ವಾಹನ ಸವಾರ