ಸುಳ್ಯ: ಕನಕಪುರಕ್ಕೆ ಬಾಡಿಗೆಗೆ ಗೊತ್ತುಪಡಿಸಿ, ಚಾಲಕರಿಂದಲೇ ಹಣ ಪಡೆದು ವಂಚಿಸಿ ಅಪರಿಚಿತ ವ್ಯಕ್ತಿ ಪರಾರಿಯಾಗಿರುವ ಘಟನೆ ಸುಳ್ಯದಲ್ಲಿ ಸಂಭವಿಸಿದೆ.
ಸುಳ್ಯದ ಗಾಂಧಿನಗರ ಪಾರ್ಕಿಂಗ್‌ನಲ್ಲಿರುವ ಗೂಡ್ಸ್ ಟೆಂಪೊ ಚಾಲಕರೊಬ್ಬರಲ್ಲಿ ಅಪರಿಚಿತನೋರ್ವ ಬೆಂಗಳೂರಿನ ಕನಕಪುರಕ್ಕೆ ಬಾಡಿಗೆ ಇದೆ. ಮೂರು ಗೂಡ್ಸ್ ಗಾಡಿ ಬೇಕು. ಮೆಸ್ಕಾಂ ಇಲಾಖೆಗೆ ಸಂಬಂಧಿಸಿದ ವಿದ್ಯುತ್ ಉಪಕರಣಗಳನ್ನು ಸಾಗಿಸಬೇಕಾಗಿದೆ.
ಮಡಿಕೇರಿಯಿಂದ ಕನಕಪುರಕ್ಕೆ ಹೋಗಿ ಹಿಂದಿರುಗಿ ಬರುವಾಗ ವಿದ್ಯುತ್ ಟ್ರಾನ್ಸ್‌ಫರ್ ತರಲಿದೆ. ಅದಕ್ಕೆ (407) ಗೂಡ್ಸ್ ಟೆಂಪೊ ಬೇಕು. ನನ್ನಲ್ಲಿ ಕೇಂದ್ರ ಸರಕಾರದ ಕಾರ್ಡ್ ಇದೆ ಇದರಲ್ಲಿ ಸಬ್ಸಿಡಿಯಲ್ಲಿ ಡೀಸೆಲ್ ಸಿಗುತ್ತದೆ ನೀವು 1 ಲೀಟರ್ ಡೀಸಲ್‌ಗೆ 55 ರೂ.ನಂತೆ ಪಾವತಿಸಿದರಾಯಿತು. ಉಳಿದ ಬಾಡಿಗೆ ಹಣವನ್ನು ನಿಮಗೆ ಅಲ್ಲಿಗೆ ತಲುಪಿದ ಮೇಲೆ ಕೊಡುತ್ತೇನೆ ಎಂದು ಹೇಳಿ ಅಪರಿಚಿತ ವ್ಯಕ್ತಿ ನಂಬಿಸಿದ್ದಾನೆ.
ಮೂರು ವಾಹನಗಳಿಗೆ ಡೀಸೆಲ್ ತುಂಬಿಸುವಂತೆ ಹೇಳಿ ಬಸ್ ನಿಲ್ದಾಣದ ಎದುರಿನ ಪೆಟ್ರೋಲ್ ಬಂಕಿನಲ್ಲಿ ಡೀಸೆಲ್ ತುಂಬಿಸಲು ಆರ್ಡರ್ ಮಾಡಿ, ಚಾಲಕರ ಕೈಯಿಂದ 55 ರೂ.ನಂತೆ ಮುಂಗಡ 7,600 ರೂ. ಪಡೆದು ನನ್ನ ಬಾಸ್ ಮೆಸ್ಕಾಂ ಇಲಾಖೆಯ ಬಳಿ ಇದ್ದಾರೆ. ಅವರನ್ನು ಕರೆದುಕೊಂಡು ಬಂದು ಪಾವತಿಸುತ್ತೇನೆ ಎಂದು ಹೇಳಿ ಅಟೋ ರಿಕ್ಷಾದಲ್ಲಿ ತೆರಳಿದ್ದಾನೆ.
ಸುಮಾರು 12,600 ರೂ. ಮೌಲ್ಯದ ಡೀಸೆಲ್ ಮೂರು ವಾಹನಗಳಿಗೆ ತುಂಬಿಸಿ ಗಂಟೆ ಕಳೆದರೂ ಕಾರ್ಡ್ ತರುವುದಾಗಿ ಹೇಳಿ ಹೋದ ವ್ಯಕ್ತಿ ಬಾರದೇ ಇದ್ದಾಗ ಸಂಶಯಗೊಂಡ ಚಾಲಕರು ಆತ ಹೋದ ಅಟೋ ಚಾಲಕರಲ್ಲಿ ವಿಚಾರಿಸಿದಾಗ ಆರೋಪಿ ಪರಾರಿಯಾಗಿರುವು ಗೊತ್ತಾಗಿದೆ. ಈ ಕುರಿತು ಚಾಲಕರು ಸುಳ್ಯ ಠಾಣೆಗೆ ಮಾಹಿತಿ ನೀಡಿದ್ದಾರೆ.