Advertisement
ಇದು ಕೇವಲ ಸುತ್ತಾಟದ ಪ್ರಶ್ನೆಯಲ್ಲ. ಬಯೋಮೆಟ್ರಿಕ್ ಸಿಸ್ಟಮ್‌ಗೆ ಇಂರ್ಟನೆಟ್ ಇಲ್ಲದ ಕಾರಣ ಉಚಿತ ಅಕ್ಕಿ ಪಡೆಯಲು ಬಡ ಕುಟುಂಬ ವೆಚ್ಚ ಮಾಡಬೇಕಾದ ಮೊತ್ತವೇ ದುಬಾರಿ. ಕೂಲಿ ಕೆಲಸ ಬಿಟ್ಟು ಕೂಪನ್ ಪಡೆಯಲೆಂದು ಒಂದು ದಿನ, ಜತೆಗೆ ಸಾಮಗ್ರಿ ಪಡೆಯಲು ಇನ್ನೊಂದು ದಿನ ವ್ಯಯ ಮಾಡುವ ಅನಿವಾರ್ಯತೆ.
ಪಡಿತರ ಸಾಮಗ್ರಿ ಪಡೆಯುವ ಕುಟುಂಬಗಳಿಗೆ ಸಮರ್ಪಕ ಸೌಲಭ್ಯ ಒದಗಿಸುವ ಸಲುವಾಗಿ ಹಿಂದಿನ ಸರಕಾರದ ಅವಧಿಯಲ್ಲಿ ಪಾಯಿಂಟ್ ಆಫ್ ಸೇಲ್ ಯಂತ್ರ ಬಳಸುವ ಪ್ರಕ್ರಿಯೆ ಆರಂಭಗೊಂಡಿತ್ತು. ಇದು ಇಂಟರ್‌ನೆಟ್, ಬಯೋಮೆಟ್ರಿಕ್ ಆಧಾರಿತ ಯಂತ್ರ. ಇಲ್ಲಿ ಫಲಾನುಭವಿ ಸಾಮಗ್ರಿ ಪಡೆಯುವ ಮೊದಲು ಬೆರಳಚ್ಚು ದಾಖಲಿಸಬೇಕು. ರೇಷನ್ ಕಾರ್ಡ್ ಸಂಖ್ಯೆ ದಾಖಲಿಸಿದ ಸಂದರ್ಭ, ಆ ಕುಟುಂಬದ ಪೂರ್ತಿ ವಿವರ ಆನ್‌ಲೈನ್ ಮೂಲಕ ಪ್ರಕಟಗೊಳ್ಳುತ್ತದೆ. ಅನಂತರ ಫಲಾನುಭವಿಗೆ ಸಾಮಗ್ರಿ ಪಡೆಯಲು ಅರ್ಹತೆ ಹೊಂದಿರುತ್ತಾನೆ. ಇದರಿಂದ ದುರ್ಬಳಕೆ ತಪ್ಪುತ್ತದೆ ಎನ್ನುವುದು ಸರಕಾರದ ಉದ್ದೇಶ.
Related Articles
ನೆಟ್‌ವರ್ಕ್ ಇಲ್ಲದೆ ಬಯೋಮೆಟ್ರಿಕ್ ವ್ಯವಸ್ಥೆ ಇಲ್ಲದಿರುವ ಕಡೆಗಳಲ್ಲಿ ಕೂಪನ್ ನೀಡಿ ಸಾಮಗ್ರಿ ಪಡೆಯಬಹುದಾಗಿದೆ. ಬೆರಳಚ್ಚು ಅಥವಾ ಕೂಪನ್ ಎರಡು ಇಲ್ಲದಿದ್ದರೆ ಪಡಿತರ ಸಿಗದು. ಆದರೆ ಈ ಕೂಪನ್ ಪಡಿತರ ಅಂಗಡಿಯಲ್ಲಿ ದೊರೆಯುವುದಿಲ್ಲ. ಅದನ್ನು ಪಡೆಯಲು ಗ್ರಾ.ಪಂ.ಗೆ ತೆರಳಬೇಕು. ಕೂಪನ್ ಸಿಗಬೇಕಾದರೆ ಅದಕ್ಕೆ ಇಂರ್ಟನೆಟ್ ಬೇಕು. ಹೀಗಾಗಿ ಗ್ರಾ.ಪಂ.ಗೆ ತೆರಳಿ ಅಲ್ಲಿಂದ ಪಡೆದುಕೊಳ್ಳುವುದು ಅನಿವಾರ್ಯವಾಯಿತು. ಈ ನಿಯಮವೇ ಫಲಾನುಭವಿಗೆ ಹೊರೆ ಆಗಿದೆ. ಪ್ರತಿ ತಿಂಗಳ ಒಂದು ದಿನ ಪಂಚಾಯತ್‌ಗೆ ತೆರಳಬೇಕು. ಅಲ್ಲಿ ಇಂಟರ್‌ನೆಟ್ ಕೈ ಕೊಟ್ಟರೆ ಮರುದಿನ ಬರಬೇಕು. ಕೆಲವೆಡೆ ಆರೇಳು ಕಿ.ಮೀ. ದೂರದಲ್ಲಿ ಗ್ರಾ.ಪಂ. ಕಚೇರಿ ಇದೆ. ವಾಹನ ಸಂಚಾರ ಇಲ್ಲದಿದ್ದರೆ ಬಾಡಿಗೆ ಮಾಡಿಕೊಂಡು ತೆರಳಬೇಕು. ಇಂತಹ ಸಂದರ್ಭದಲ್ಲಿ 100 ರೂ.ಗೆ ಸಿಗುವ ಪಡಿತರ ಸಾಮಗ್ರಿಯ ಕೂಪನ್‌ಗೆ 200 ರೂ. ಖರ್ಚು ಮಾಡಬೇಕಾದ ಸ್ಥಿತಿ ಇದೆ.
Advertisement
ಎಲ್ಲೆಲ್ಲಿ ಇಲ್ಲ?ಸುಳ್ಯ ತಾಲೂಕಿನಲ್ಲಿ 59ರಲ್ಲಿ 16 ಪಡಿತರ ಅಂಗಡಿಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಇಲ್ಲ. ಇವುಗಳಲ್ಲಿ ಕೋಲ್ಚಾರು, ದುಗಲಡ್ಕ-2 ಕೇಂದ್ರಗಳಲ್ಲಿ ನೆಟ್‌ವರ್ಕ್ ದೊರೆಯುತ್ತದೆ ಎಂದು ಬಿಎಸ್ಸೆನ್ನೆಲ್ ವರದಿ ನೀಡಿದೆ. ಉಳಿದೆಡೆ ರೇಂಜ್ ಸಿಗುವುದಿಲ್ಲ. ಇಲ್ಲಿ ಬಿಎಸ್ಸೆನ್ನೆಲ್ ಬದಲಾಗಿ ಬೇರೆ ನೆಟ್‌ವರ್ಕ್ ಕಲ್ಪಿಸುವುದು ಅಥವಾ ಆ ಪರಿಸರದಲ್ಲಿ ಹೊಸ ಟವರ್ ನಿರ್ಮಾಣ ಮಾಡಿದರೆ ಮಾತ್ರ ಪರಿಹಾರ ಸಾಧ್ಯ. ಸಚಿವರೇ ಮನಸ್ಸು ಮಾಡಿ!
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಅ. 3ರಂದು ಸುಳ್ಯ ಪ್ರವಾಸ ಕೈಗೊಂಡಿದ್ದಾರೆ. ಅವರ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಇದು. ಇಲ್ಲಿ ಕೂಪನ್ ಅನ್ನು ಪಡಿತರ ಅಂಗಡಿಯಲ್ಲೇ ನೀಡುವುದು ಅಥವಾ ಬೇರೆ ನೆಟ್‌ವರ್ಕ್ ಬಳಸಿ ಬಯೋಮೆಟ್ರಿಕ್ ವ್ಯವಸ್ಥೆ ಕಲ್ಪಿಸುವುದು ಅಥವಾ ಸಮಸ್ಯೆ ಬಗೆಹರಿಯುವ ತನಕ ಹಳೆ ಮಾದರಿ ಬಳಸಿ ಪಡಿತರ ಸೌಲಭ್ಯ ನೀಡುವುದಾಗಿದೆ. ಸಚಿವರು ಸ್ಪಂದಿಸುವ ಬಗ್ಗೆ ನಿರೀಕ್ಷೆ ಇದೆ. ಕಿರಣ್ ಪ್ರಸಾದ್ ಕುಂಡಡ್ಕ