Advertisement

ಫೋನ್‌ ಮಾಡುವೆ ಎಂದಿದ್ದ  ಅಕ್ಕ  ಸಿಕ್ಕಿದ್ದು ಶವವಾಗಿ

09:54 AM Aug 20, 2018 | Team Udayavani |

ಸುಳ್ಯ: ನಾವು ಅವಳಿಗಳು. ಗುರುವಾರ ಬೆಳಗ್ಗೆ ಅಕ್ಕ ಮೋನಿಶಾ ಫೋನ್‌ ಮಾಡಿ ಯೋಗಕ್ಷೇಮ ವಿಚಾರಿಸಿದ್ದಳು. ನಾನು ಮನೆ ಮಂದಿಯ ಬಗ್ಗೆ ಕೇಳಿದ್ದೆ. ಮಳೆ ಅವಾಂತರದ ಬಗ್ಗೆ ಆಕೆ ಹೇಳಿರಲಿಲ್ಲ. ನಾನೇ ಎಚ್ಚರದಿಂದಿರಿ ಅಂದಿದ್ದೆ. “ಆಯ್ತು, ಮೊಬೈಲ್‌ನಲ್ಲಿ ಚಾರ್ಜ್‌ ಇಲ್ಲ, ಆಮೇಲೆ ಕರೆ ಮಾಡುತ್ತೇನೆ’ ಎಂದವಳು ಕಾಣಲು ಸಿಕ್ಕಿದ್ದು ಶವವಾಗಿ…

Advertisement

ಕಣ್ಣೀರಿಡುತ್ತಲೇ 23 ವರ್ಷ ವಯಸ್ಸಿನ ಮೋಹಿತ್‌ ದುಃಖ ಬಿಚ್ಚಿಟ್ಟರು. “ಸ್ವಲ್ಪ ಸಮಯದ ಹಿಂದೆ ಮನೆಗೆ ಬಂದಿದ್ದೆ. ಹೀಗೊಂದು ಘಟನೆ ನಡೆಯಬಹುದೆಂಬ ಊಹೆಯೂ ಇರಲಿಲ್ಲ’ ಎನ್ನುತ್ತ ಬಿಕ್ಕಳಿಸಿದರು. ಈಗ ಬಂದೆರಗಿದ ದುರ್ಘ‌ಟನೆಯಿಂದ ಆತ ಮನೆ ಮಂದಿಯನ್ನೆಲ್ಲ ಕಳೆದುಕೊಂಡು ಏಕಾಕಿಯಾಗಿದ್ದಾನೆ.

ಘಟನೆ ತಿಳಿದು ಸುಳ್ಯಕ್ಕೆ ಬಂದಿರುವ ಮೋಹಿತ್‌ ಚಿಕ್ಕಪ್ಪನ ರೂಮಿನಲ್ಲಿ ಇದ್ದಾರೆ. ಮನೆ ಕಡೆಗೆ ಹೋಗಲು ಸಾಧ್ಯವೇ ಇಲ್ಲ. ಸಂಬಂಧಿಕರು, ಸ್ನೇಹಿತರು ಜತೆಗಿದ್ದು ಧೈರ್ಯ ತುಂಬುತ್ತಿದ್ದಾರೆ. ತಂದೆ ಬಸಪ್ಪ ಮತ್ತು ಅಕ್ಕ ಮೋನಿಶಾ ಶವ ದೊರೆತಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸುಳ್ಯದ ಕೇರ್ಪಳ ಶ್ಮಶಾನದಲ್ಲಿ ರವಿವಾರ ಸಂಜೆ ಅಂತ್ಯಕ್ರಿಯೆ ನಡೆಯಿತು. 

ಉದ್ಯೋಗದ ಕಾರಣ ಪಾರು
ಸೆಲ್ಕೊ ಸೋಲಾರ್‌ ಕಂಪೆನಿಯ ತಿಪಟೂರು ಶಾಖೆಯಲ್ಲಿ ಉದ್ಯೋಗಿಯಾಗಿರುವ ಮೋಹಿತ್‌ ಘಟನೆಯ ದಿನ ಮನೆಯಿಂದ ದೂರ ಇದ್ದ ಕಾರಣ ಬಚಾವಾಗಿದ್ದರು. ತಾಯಿ ಗೌರಮ್ಮ ಮತ್ತು ವಿದ್ಯಾಭ್ಯಾಸಕ್ಕಾಗಿ ಈ ಮನೆಯಲ್ಲಿದ್ದ ಸೋದರ ಮಾವನ ಮಗಳು ಮಂಜುಳಾ ಕಣ್ಮರೆ ಆಗಿದ್ದು, ಇನ್ನೂ ಪತ್ತೆಯಾಗಿಲ್ಲ.

ಶಾಲೆಗೆ ಅನುಕೂಲ ಎಂದು..
ಕಣ್ಮರೆಯಾಗಿರುವ ಮಂಜುಳಾ, ಬಸಪ್ಪ ಅವರ ಪತ್ನಿ ಗೌರಮ್ಮ ಅವರ ಸೋದರನ ಮಗಳು. ಮದೆ ಗ್ರಾಮದ ಬೆಟ್ಟತ್ತೂರು ನಿವಾಸಿ. ಈ ಶೈಕ್ಷಣಿಕ ಸಾಲಿನಿಂದ ಮಾವನ ಮನೆಯಿಂದ ಶಾಲೆಗೆ ಹೋಗುತ್ತಿದ್ದಳು. 9ನೇ ತರಗತಿ ತನಕ ಊರಿನಲ್ಲಿ ವಿದ್ಯಾಭ್ಯಾಸ ಮಾಡಿ, 3 ತಿಂಗಳ ಹಿಂದೆ ಜೋಡುಪಾಲದ ಮದೆನಾಡು ಪ್ರೌಢಶಾಲೆ ಸೇರಿದ್ದಳು. ಊರಿನಲ್ಲಿ ಬಸ್‌, ರಸ್ತೆ ಸಮಸ್ಯೆಯಿತ್ತು. ಮದೆನಾಡು ಶಾಲೆ ರಸ್ತೆ ಬದಿಯೇ ಇರುವ ಕಾರಣ ಅನುಕೂಲ ಎಂದು ಪೋಷಕರು ಇಲ್ಲಿ ಸೇರಿಸಿದ್ದರು. ಈಕೆಯೂ ಕಣ್ಮರೆ ಆಗಿದ್ದು, ರವಿವಾರದ ತನಕವೂ ಸುಳಿವು ಪತ್ತೆಯಾಗಿಲ್ಲ. ಈಕೆಗೆ ತಂದೆ, ತಾಯಿ, ಇಬ್ಬರು ಸಹೋದರರು, ಸಹೋದರಿ ಇದ್ದಾರೆ.

Advertisement

ಉದ್ಯೋಗದ ನಿರೀಕ್ಷೆಯಲ್ಲಿದ್ದರು
ಮೃತ ಮೋನಿಶಾ (23) ಮಡಿಕೇರಿ ಎಫ್‌ಎಂಸಿ ಕಾಲೇಜಿನಿಂದ ಪದವಿ ಪಡೆದು, ಮೈಸೂರಿನಲ್ಲಿ ಎಂಸಿಎ ಕಲಿತಿದ್ದರು. ಬೆಂಗಳೂರಿನಲ್ಲಿ ಉದ್ಯೋಗ ತರಬೇತಿ ಪಡೆದು ಸ್ವಲ್ಪ ಸಮಯದ ಹಿಂದೆ ಮನೆಗೆ ಮರಳಿದ್ದರು. ಆದರೆ ವಿಧಿ ಅವರ ಉದ್ಯೋಗದ ಕನಸನ್ನು ಕಮರಿಸಿದೆ. ಶನಿವಾರ ಮನೆಯಿಂದ ತುಸುದೂರ, ತೋಡಿನಲ್ಲಿಆಕೆಯ ಶವ ಪತ್ತೆಯಾಗಿತ್ತು.

ಅವಳಿ ಮಕ್ಕಳು
ಬಸಪ್ಪ ಸುಳ್ಯದ ಸರಕಾರಿ ಆಸ್ಪತ್ರೆಯ ಡಿ ಗ್ರೂಪ್‌ ನೌಕರ. ಅವರ ಪತ್ನಿ ಗೌರಮ್ಮ ಆಶಾ ಕಾರ್ಯಕರ್ತೆ. ಮೋನಿಶಾ, ಮೋಹಿತ್‌ ಅವಳಿ ಮಕ್ಕಳು. ಶೀಟು ಹಾಸಿದ ಮನೆ, ಸ್ವಲ್ಪ ಕೃಷಿ ಭೂಮಿ ಇದ್ದ ಕುಟುಂಬ ಇದು. ಈಗ ಉಳಿದಿರುವುದು  ಮೋಹಿತ್‌ ಮಾತ್ರ.

* ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next