Advertisement

ದೇವರಗುಂಡಿ ಜಲಪಾತ: ನೀರಿಗಿಳಿದರೆ ಅಪಾಯ

11:17 AM Dec 28, 2018 | |

ಅರಂತೋಡು : ತೊಡಿಕಾನ ದೇವರ ಗುಂಡಿ ಜಲಪಾತ ನೋಡಲು ಬಲು ಸುಂದರವಾಗಿದ್ದು, ಪ್ರವಾಸಿ ಪ್ರೇಮಿಗಳನ್ನು ತನ್ನತ್ತ ಸೆಳೆಯುತ್ತಿದೆ. ಆದರೆ ಪ್ರವಾಸಿಗರು ಇಲ್ಲಿ ನೀರಿಗಳಿದರೆ ಮಾತ್ರ ಜೀವಕ್ಕೆ ಅಪಾಯ ಎದುರಾಗಬಹುದು. ಈ ಜಲಪಾತದ ಸೊಬಗನ್ನು ಸವಿಯಲು ಬಂದು ನೀರಿಗಳಿದ ಹಲವಾರು ಮಂದಿ ನೀರಿನ ಸೆಳೆತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಕಾರಣದಿಂದ ಇಲ್ಲಿ ಜಲಪಾತದ ತಳಭಾಗಕ್ಕೆ ಇಳಿಯುವುದನ್ನು ನಿಷೇಧಿಲಾಗಿದೆ.

Advertisement

ತೊಡಿಕಾನದಲ್ಲಿ ಸುಳ್ಯ ಸೀಮೆ ದೇಗುಲವಾದ ಅತೀ ಪುರಾತನ ಶ್ರೀ ಮಲ್ಲಿಕಾರ್ಜುನ ದೇವಾಲಯ ಇದೆ. ಇಲ್ಲಿಗೆ ದಿನ ನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ. ದೇಗುಲಕ್ಕೆ ಬರುವ ಕೆಲ ಪರಿಸರ ಪ್ರೇಮಿಗಳು, ಚಾರಣ ಪ್ರಿಯರು ದೇವರ ಗುಂಡಿ ಜಲಪಾತದ ಸೊಬಗು ನೋಡಲು ಹೋಗುತ್ತಾರೆ. ಜಲಪಾರದ ಸೊಬಗು ನೋಡಿ ಜಲಪಾತಕ್ಕೆ ತಲೆಯೊಡ್ಡಿ, ನೀರಿನ ಹೊಂಡಕ್ಕೆ ಇಳಿದು ಸ್ನಾನ ಮಾಡಲು ಇಳಿಯುತ್ತಾರೆ. ಈ ಸಂದರ್ಭ ಸ್ವಲ್ಪ ಎಡವಟ್ಟಾದರೆ ಅಪಾಯ ಎದುರಾಗುತ್ತದೆ.

ಜೀವತೆತ್ತರು ನಾಲ್ಕು ಬಂದಿ
ಜಲಪಾತದ ನೋಡಲು ಬಂದ ನಾಲ್ಕು ಮಂದಿ ನೀರಿಗೆ ಇಳಿದು ಪ್ರಾಣ ಕಳಕೊಂಡಿದ್ದಾರೆ. ನಾಲ್ಕೂ ಮಂದಿ ವಿದ್ಯಾರ್ಥಿಗಳಾಗಿದ್ದು, ಇಬ್ಬರು ಮೆಡಿಕಲ್‌ ವಿದ್ಯಾರ್ಥಿಗಳು. ತೊಡಿಕಾನ ಗ್ರಾಮದ ದ.ಕ. ಮತ್ತು ಕೊಡಗು ಜಿಲ್ಲೆಯ ಗಡಿಭಾಗದಲ್ಲಿರುವ ದೇವರ ಗುಂಡಿ ಜಲಪಾತ ವರ್ಷ ಪೂರ್ತಿ ಹರಿಯುತ್ತಾ, ಪ್ರಕೃತಿ ಪ್ರೇಮಿಗಳನ್ನು ಸಂತೋಷಗೊಳಿಸುತ್ತದೆ. ಬೇಸಗೆ ಕಾಲದಲ್ಲಿ ಇದರಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ.

ಜಲಪಾತಕ್ಕೆ ಹೀಗೆ ಸಾಗಬೇಕು
ದೇವರ ಗುಂಡಿ ಜಲಪಾತದ ಸೊಬಗು ಸವಿಯಲು ಅಲ್ಲಿಗೆ ಧಾವಿಸಲು ಹಾದಿ ಬಲು ಸುಲಭವಿದೆ. ಸುಳ್ಯದಿಂದ ತೊಡಿಕಾನಕ್ಕೆ ಖಾಸಗಿ ಬಸ್ಸು ಸಂಚಾರವಿದೆ. ಇಲ್ಲಿಗೆ ಬಸ್ಸಲ್ಲಿ ಬರುವುದಾದರೆ 40 ನಿಮಿಷದ ಪ್ರಯಾಣವಿದೆ. ಸ್ವಂತ ವಾಹನವಿದ್ದರೆ ಕೇವಲ 30 ನಿಮಿಷ ಪ್ರಯಾಣ ಮಾಡಬೇಕು . ಸುಳ್ಯದಿಂದ 11 ಕಿ.ಮೀ. ಸುಳ್ಯ-ಮಡಿಕೇರಿ ರಾಜ್ಯ ರಸ್ತೆಯಲ್ಲಿ ಸಾಗಿದರೆ ಅರಂತೋಡಿಗೆ ತಲುಪಿದಾಗ ರಸ್ತೆಯ ಬಲ ಭಾಗದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಾಲಯದ ದ್ವಾರವಿದೆ. ಈ ದ್ವಾರದ ಮೂಲಕ 6 ಕಿ.ಮೀ. ಪ್ರಯಾಣಿಸಿದರೆ ತೊಡಿಕಾನದ ಮಲ್ಲಿಕಾರ್ಜುನ ದೇವಾಲಯ ಸಿಗುತ್ತದೆ. ದೇವಾಲಯದ ಬಳಿಯಿಂದ ತೊಡಿಕಾನ-ಪಟ್ಟಿ-ಭಾಗಮಂಡಲ ಕಚ್ಚಾ ರಸ್ತೆಯಲ್ಲಿ ಸುಮಾರು 1,800 ಮೀ. ಸಾಗಿದ್ದಾಗ ಜಲಪಾತ ಕಾಣ ಸಿಗುತ್ತದೆ. ಮುಂದೆ ಸಾಗುತ್ತಿದಂತೆ ಹೊಳೆಯ ಚಿಕ್ಕ ಪುಟ್ಟ ತೊರೆಗಳು ಮನಸ್ಸನ್ನು ಪುಳಕಗೊಳಿಸುತ್ತದೆ.

ಎಚ್ಚರಿಕೆ ಫ‌ಲಕ ಅಳವಡಿಸಲಾಗಿದೆ 
ಜಲಪಾತದ ತಳಭಾಗದ ಸಣ್ಣ ತೊರೆಯು ನೋಡಲು ಗುಂಡಿಯಂತೆ ಭಾಸವಾಗುತ್ತದೆ. ತುಂಬಾ ಕಿರಿದಾಗಿದೆ. ಆದರೆ ಇದರ ಆಳ ಮಾತ್ರ ಅಳತೆಗೆ ನಿಲುಕದ್ದಷ್ಟು ಇದೆ ಎಂದು ಸ್ಥಳೀಯರು ಹೇಳುತ್ತಾರೆ. ಇಲ್ಲಿ ಆಳಕ್ಕೆ ನೀರಿನ ಸೆಳೆತ ಇದೆ. ಈ ಕಾರಣದಿಂದಲೇ ಇದಕ್ಕೆ ಇಳಿದವರು ನೀರಿನ ಸೆಳೆತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿ ಪ್ರಾಣ ಕಳೆದುಕೊಂಡವರ ವಿವರ ಸಹಿತ ಕನ್ನಡ ಹಾಗೂ ಆಂಗ್ಲ ಭಾಷೆಯ ಎಚ್ಚರಿಕೆ ಫ‌ಲಕ ಅಳವಡಿಸಲಾಗಿದೆ. ಆದರೂ ಇದನ್ನು ಲೆಕ್ಕಿಸದೆ ಕೆಲವರು ನೀರಿಗೆ ಇಳಿಯುತ್ತಿದ್ದಾರೆ.

Advertisement

ತಂಪಾದ ವಾತಾವರಣ
ನಾನು ದೇವರ ಗುಂಡಿ ಜಲಪಾತ ನೋಡಿದೆ. ಜಲಪಾತ ತುಂಬಾ ಸುಂದರವಾಗಿದೆ. ಇಲ್ಲಿಯ ತಂಪಾದ ವಾತಾವರಣ ಮನಸ್ಸಿಗೆ ಖುಷಿ ಕೊಡುತ್ತದೆ. ಅಲ್ಲಿ ನೀರಿಗಿಳಿಯಲು ನಾನು ಧಾವಿಸಿದೆ. ನೀರಿಗೆ ಇಳಿದರೆ ಅಪಾಯವಿದೆ ಎನ್ನುವ ಎಚ್ಚರಿಕೆ ಫ‌ಲಕ ನೋಡಿ ನೀರಿಗೆ ಇಳಿಯಲಿಲ್ಲ. ಎಚ್ಚರಿಕೆ ಫ‌ಲಕಗಳನ್ನು ಓದಿಕೊಂಡು ಅದನ್ನು ಪ್ರವಾಸಿಗರು ಪಾಲಿಸಬೇಕು.
– ನಿತಿನ್‌,
 ಜಲಪಾತ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗ

ನೀರಿಗಿಳಿಯಬೇಡಿ
ದೇವರಗುಂಡಿ ಜಲಪಾತದ ಗುಂಡಿಗೆ ಇಳಿದರೆ ಅಪಾಯ ಇದೆ. ಇಲ್ಲಿ ನೀರಿನ ಒಳ ಹರಿವು ಇದೆ. ನೀರಿಗಿಳಿದ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಅಪಾಯ ಮನ್ಸೂಚನೆಯ ಬಗ್ಗೆ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಜಲಪಾತದ ಬಳಿ ಫ‌ಲಕ ಅಳವಡಿಸಲಾಗಿದೆ. ದೇವರ ಗುಂಡಿ ಜಲಪಾತ ನೋಡಲು ತೆರಳುವ ಭಕ್ತರು ಯಾರೂ ಜಲಪಾತದ ಬಳಿಯ ಗುಂಡಿಗೆ ಇಳಿಯಬಾರದು ಎನ್ನುವುದು ದೇಗುಲದ ಮನವಿಯಾಗಿದೆ.
 - ಆನಂದ ಕಲ್ಲಗದ್ದೆ,
    ತೊಡಿಕಾನ ದೇಗುಲದ ವ್ಯವಸ್ಥಾಪಕರು

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next