ಸುಳ್ಯ : ಶ್ರೀ ಚೆನ್ನಕೇಶವ ದೇವಾಲಯದ ವಾರ್ಷಿಕ ಜಾತ್ರೆಯ ಪ್ರಯುಕ್ತ ಶುಕ್ರವಾರ ಮಧ್ಯರಾತ್ರಿ ವೈಭವದ ರಥೋತ್ಸವ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ತೇರನ್ನು ಎಳೆದು, ದೇವರ ದರ್ಶನ ಪಡೆದು, ಪುನೀತರಾದರು.
ಕಲ್ಕುಡ ದೈವಗಳ ಭಂಡಾರ ಆಗಮಿಸಿತು. ದೇವಸ್ಥಾನದ ವತಿಯಿಂದ ದೈವವನ್ನು ಸ್ವಾಗತಿಸಲಾಯಿತು. ರಥಬೀದಿಯಲ್ಲಿ ದೈವ – ದೇವರು ಮುಖಾಮುಖೀ ನಡೆಯಿತು. ರಥದಲ್ಲಿ ದೇವರನ್ನು ಕುಳ್ಳಿರಿಸಿ, ಪೂಜೆ ವಿಧಾನ ನೆರವೇರಿಸಲಾಯಿತು. ಮಧ್ಯರಾತ್ರಿ ರಥೋತ್ಸವ ಆರಂಭಗೊಂಡಿತು. ಕಲ್ಕುಡ ಮತ್ತು ಉದ್ರಾಂಡಿ ದೈವಗಳು ರಥದ ಜತೆಗೆ ಸಂಚರಿಸಿದವು. ರಥೋತ್ಸವ ಮುಖ್ಯ ರಸ್ತೆಯ ಸಮೀಪದ ದೇವರ ಕಟ್ಟೆ ತನಕ ಸಂಚರಿಸಿ, ದೇವಾಲಯಕ್ಕೆ ಮರಳಿತು.
ಆನುವಂಶಿಕ ಆಡಳಿತ ಮೊಕ್ತೇಸರ ಡಾ| ಹರಪ್ರಸಾದ್ ತುದಿಯಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ, ಸದಸ್ಯರಾದ ಕೆ. ಉಪೇಂದ್ರ ಕಾಮತ್, ಎಂ. ಮೀನಾಕ್ಷಿ ಗೌಡ, ಪಡ್ಡಂಬೈಲು ವೆಂಕಟ್ರಮಣ ಗೌಡ, ಎನ್. ಜಯಪ್ರಕಾಶ್ ರೈ, ಲಿಂಗಪ್ಪ ಗೌಡ, ರಮೇಶ್ ಬೈಪಾಡಿತ್ತಾಯ, ಎನ್.ಎ. ರಾಮಚಂದ್ರ, ಸುಳ್ಯ ತಹಶೀಲ್ದಾರ್ ಸಂತೋಷ್‌ಕುಮಾರ್ ಭಾಗವಹಿಸಿದ್ದರು.
ಅವಭೃಥ ಸ್ನಾನ: ಶನಿವಾರ ಬೆಳಗ್ಗೆ ಅರಂಬೂರಿನ ಶ್ರೀ ಕಂಚಿ ಕಾಮಕೋಟಿ ವೇದ ವಿದ್ಯಾಲಯ ಭಾರದ್ವಾಜಾಶ್ರಮದ ವಿದ್ಯಾರ್ಥಿಗಳಿಂದ ವೇದ ಪಾರಾಯಣ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಬಜಪ್ಪಿಲ ದೈವಗಳ ಭಂಡಾರ ಬಂದು, ಉತ್ಸವ ಬಲಿ ಹೊರಟು ಆರಕ್ಷಕ ಠಾಣೆ ಕಟ್ಟೆ, ಅರಣ್ಯ ಇಲಾಖೆ ಕಟ್ಟೆ, ಕೇರ್ಪಳ, ತಾಲೂಕು ಕಚೇರಿ, ಪಯಸ್ವಿನಿ ಬಳಿ ಕಟ್ಟೆ ಪೂಜೆ ನಡೆಯಿತು. ಬಳಿಕ ಪಯಸ್ವಿನಿ ನದಿಯಲ್ಲಿ ಅವಭೃಥ ಸ್ನಾನವಾಗಿ ಬಂದು ದರ್ಶನ ಬಲಿ, ಬಟ್ಟಲು ಕಾಣಿಕೆ ಧ್ವಜಾವರೋಹಣ ಮಾಡಲಾಯಿತು.
ಮಹಾ ಅನ್ನಸಂತರ್ಪಣೆ:
ಶನಿವಾರ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಉಳಿದ ದಿನಗಳಲ್ಲಿಯೂ ಅನ್ನಪ್ರಸಾದ ವ್ಯವಸ್ಥೆ ಇದ್ದರೂ ಗುರುವಾರ ಸಾಮೂಹಿಕ ಅನ್ನಪ್ರಸಾದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಭಕ್ತರ ಸಂಖ್ಯೆ ಹೆಚ್ಚಾಗಿತ್ತು.
ಬಂದೋಬಸ್ತ್
ದೇವಾಲಯವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಜಾತ್ರೆ ನಡೆಸುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿತ್ತು.