Advertisement

Sullia: ಡಾಮರು ರಸ್ತೆಯನ್ನು ಆವರಿಸುತ್ತಿರುವ ಪೊದೆಗಳು

12:49 PM Nov 12, 2024 | Team Udayavani |

ಸುಳ್ಯ: ಅಲ್ಲಲ್ಲಿ ಅಪಾಯಕಾರಿ ತಿರುವುಗಳು, ಡಾಮಾರು ರಸ್ತೆಯನ್ನೇ ಆವರಿಸಿಕೊಂಡ ಬೆಳೆದ ಪೊದೆಗಳು, ಸೂಚನ ಫಲಕಗಳನ್ನು ನುಂಗಿದ ಬಳ್ಳಿಗಳು, ರಸ್ತೆಯ ಕೆಲವು ಭಾಗಗಳಲ್ಲಿ ಉಂಟಾಗಿರುವ ಗುಂಡಿಗಳು … ಹೀಗೆ ಪರಿವಾರಕಾನ-ಉಬರಡ್ಕ-ಕಂದಡ್ಕ ರಸ್ತೆ ಸಂಚಾರವೇ ಅಪಾಯಕಾರಿ ಎನ್ನುವಂತಾಗಿದೆ. ಕೆಲವೆಡೆ ಇಕ್ಕಟ್ಟಾದ ರಸ್ತೆಯಿಂದಾಗಿ ವಾಹನ ಸಂಚಾರಕ್ಕೂ ತೊಂದರೆಯಾಗಿ ಅಪಘಾತಕ್ಕೂ ಕಾರಣವಾಗಿದೆ.

Advertisement

ಪರಿವಾರಕಾನದಿಂದ ಕಂದಡ್ಕವರೆಗೆ ಸುಮಾರು 10 ಕಿ.ಮೀ. ದೂರ ಇರುವ ಈ ಲೋಕೋಪಯೋಗಿ ರಸ್ತೆ ಕೆಲವು ವರ್ಷಗಳ ಹಿಂದೆ ಅಭಿವೃದ್ಧಿಗೊಂಡಿತ್ತಾದರೂ ಎಲ್ಲ ಸಮಸ್ಯೆಗಳಿಗೆ ಪರಿಹಾರ ಇನ್ನೂ ಆಗಿಲ್ಲ.

ಅಪಘಾತಕ್ಕೆ ಆಹ್ವಾನ
ಪರಿವಾರಕಾನದಿಂದ ಉಬರಡ್ಕ-ಕಂದಡ್ಕದ ವರೆಗೂ ಹಲವೆಡೆ ಕಾಡು ಪೊದೆಗಳು ಬೆಳೆದು ಡಾಮರು ರಸ್ತೆ ವರೆಗೂ ಆವರಿಸಿಕೊಂಡಿದ್ದು ತೆರವು ಮಾಡದೇ ಇವುಗಳು ಕೂಡ ವಾಹನ ಸವಾರರು, ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಕೆಲವು ಕಡೆ ರಸ್ತೆ ಇಕ್ಕಟ್ಟಾಗಿದ್ದು, ಎದುರಿನಿಂದ ಬರುವ ವಾಹನಗಳಿಂದ ಸೈಡ್‌ ಕೊಡಲು ಆಗದಂತಹ ಸ್ಥಿತಿ ಇಲ್ಲಿದೆ. ರಸ್ತೆಯ ತಿರುಗಳಲ್ಲಿ ಅಳವಡಿಸಲಾಗಿರುವ ಸೂಚನ ಫಲಕಗಳಿಗೆ ಬಳ್ಳಿಗಳು ಸುತ್ತಿಕೊಂಡಿದು ಅವುಗಳು ವಾಹನ ಸವಾರರಿಗೆ ಸರಿಯಾಗಿ ಕಾಣಿಸದೆ ಇದ್ದೂ ಪ್ರಯೋಜನ ಇಲ್ಲದಂತಾಗಿದೆ. ಒಟ್ಟಿನಲ್ಲಿ ನಿರ್ವಹಣೆ ಕೊರೆತೆಯಿಂದ ಈ ರಸ್ತೆ ಅಪಾಯವನ್ನು ಆಹ್ವಾನಿಸುತ್ತಿದ್ದು, ಅಪಘಾತಗಳಿಗೆ ಕಾರಣವಾಗುತ್ತಿದೆ. ಈ ರಸ್ತೆಯಲ್ಲಿ ಬಸ್‌, ಲಾರಿ ಸಹಿತ ದಿನಂಪ್ರತಿ ನೂರಾರು ವಾಹನಗಳು ಸಂಚರಿಸುತ್ತವೆ.

ಇಲಾಖೆ ವತಿಯಿಂದ ರಸ್ತೆ ಬದಿಯ ಪೊದೆಗಳ ತೆರವು, ಸೂಚನ ಫಲಕಗಳನ್ನು ಸುತ್ತಿದ ಬಳ್ಳಿಗಳನ್ನು ತೆರವು ಮಾಡಬೇಕಾಗಿದ್ದರೂ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿರುವ ದೂರು ವ್ಯಕ್ತವಾಗಿದೆ. ಇನ್ನಾದರೂ ರಸ್ತೆ ಬದಿಯ ಪೊದೆ, ಸೂಚನ ಫಲಕಗಳ ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದೇ ರಸ್ತೆಯ ಬಹುತೇಕ ಕಡೆಗಳಲ್ಲಿ ವಿದ್ಯುತ್‌ ಕಂಬಗಳೂ ಡಾಮರು ರಸ್ತೆಯ ಅಂಚಿನಲ್ಲೇ ಇದ್ದು ಇದೂ ಕೂಡ ಅಪಾಯಕಾರಿಯಾಗಿ ಪರಿಣಮಿಸುವ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

Advertisement

ಅಪಘಾತಕ್ಕೆ ವಿದ್ಯಾರ್ಥಿನಿ ಸಾವು
ಇದೇ ರಸ್ತೆಯಲ್ಲಿ ಕೆಲವು ದಿನಗಳ ಹಿಂದೆ ಬಸ್‌, ಸ್ಕೂಟಿ ನಡುವಿನ ಅಪಘಾತಕ್ಕೆ ಸ್ಥಳೀಯ ನಿವಾಸಿ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ. ಈ ಅಪಘಾತ ಕೂಡ ಇಕ್ಕಟ್ಟಾದ ರಸ್ತೆಯಿಂದ ಸಂಭವಿಸಿದೆ ಎಂಬ ದೂರುಗಳು ಸ್ಥಳಿಯರಿಂದ ವ್ಯಕ್ತವಾಗಿದೆ. ಇದೇ ರಸ್ತೆಯ ಸೂಂತೋಡು ಸೇರಿದಂತೆ ಹಲವೆಡೆ 10ಕ್ಕೂ ಅಧಿಕ ಅಪಘಾತಗಳು ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇನ್ನಾದರೂ ಈ ರಸ್ತೆಯ ಅವ್ಯವಸ್ಥೆಯನ್ನು ಇಲಾಖೆ ಸರಿಪಡಿಸಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮನವಿ ಮಾಡಿದ್ದೇವೆ
ಉಬರಡ್ಕ-ಸುಳ್ಯ ರಸ್ತೆಯ ನಮ್ಮ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿನ ಅಪಾಯಕಾರಿ ತಿರುವಿನ ಬಗ್ಗೆ, ರಸ್ತೆಗೆ ಆವರಿಸಿಕೊಂಡಿರುವ ಪೊದೆಗಳನ್ನು ತೆರವು ಮಾಡುವಂತೆ ಗ್ರಾಮ ಪಂಚಾಯತ್‌ ವತಿಯಿಂದ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದ್ದೇವೆ. ಕ್ರಮಕೈಗೊಳ್ಳುವ ಭರವಸೆ ನೀಡಿದ್ದರು.
-ಪೂರ್ಣಿಮಾ ಸೂಂತೋಡು, ಅಧ್ಯಕ್ಷರು, ಉಬರಡ್ಕ ಮಿತ್ತೂರು ಗ್ರಾ.ಪಂ.

-ದಯಾನಂದ ಕಲ್ನಾರ್

Advertisement

Udayavani is now on Telegram. Click here to join our channel and stay updated with the latest news.

Next