Advertisement

ಚಾಕೊಲೇಟ್‌ ಚತುರೆ

01:42 PM Oct 22, 2018 | |

ಇವರು ಸುಳ್ಯದ ರಾಜರಾಜೇಶ್ವರಿ ಕೈಂತಜೆ. ಫಾರಿನ್‌ ಗುಣಮಟ್ಟದ ಚಾಕೊಲೇಟ್‌ ತಯಾರಿಕೆಗೆ, ಬೀರಮಲೆ ಎಂಬ ಹಳ್ಳಿಯಲ್ಲಿ ಫ್ಯಾಕ್ಟರಿಯನ್ನು ತೆರೆದ ಮಹಿಳೆ. ಈಗ ಇವರು ತಯಾರಿಸುವ ಚಾಕೊಲೇಟ್‌ಗಳು ದೇಶವ್ಯಾಪಿ ಮಾರಾಟವಾಗುತ್ತಿವೆ.

Advertisement

ಕುಟುಂಬ, ಸ್ನೇಹಿತವರ್ಗದಲ್ಲಿ ಯಾರೇ ಫಾರಿನ್‌ಗೆ ಹೋಗಿರಲಿ. ಬರುವಾಗ ಖಾಲಿ ಕೈಯಲ್ಲಂತೂ ಬರುವುದಿಲ್ಲ. ಬ್ಯಾಗ್‌ನ ತುಂಬಾ ಫಾರಿನ್‌ ಚಾಕೊಲೇಟ್‌ಗಳನ್ನು ತುಂಬಿಸಿ ತರುತ್ತಾರೆ. ಮಕ್ಕಳಾದಿಯಾಗಿ ಎಲ್ಲರಿಗೂ ಆ ಚಾಕೊಲೇಟ್‌ಗಳು ಇಷ್ಟವಾಗುತ್ತವೆ. ಈ ಫಾರಿನ್‌ ಚಾಕೊಲೇಟ್‌ಗಳ ಮೋಹಕ್ಕೆ ಸಿಲುಕಿದ ಮಹಿಳೆಯೊಬ್ಬರು, ಅಂಥ ಚಾಕೊಲೇಟ್‌ ಅನ್ನು ನಮ್ಮಲ್ಲಿಯೂ ತಯಾರಿಸಬೇಕೆಂದು ಛಲ ತೊಟ್ಟು ಫ್ಯಾಕ್ಟರಿಯನ್ನು ತೆರೆದಿದ್ದಾರೆ.

ಸುಳ್ಯದ ರಾಜರಾಜೇಶ್ವರಿ ಕೈಂತಜೆ ರಾಜರಾಜೇಶ್ವರಿ ಅವರ ಅಣ್ಣ ಕ್ಯಾಲಿಫೋರ್ನಿಯಾದಲ್ಲಿ ಉದ್ಯೋಗಿ. ಅವರು ಊರಿಗೆ ಬರುತ್ತಾರೆಂದರೆ, ರಾಜರಾಜೇಶ್ವರಿಗೆ ಭಾರೀ ಖುಷಿ. ಅಣ್ಣ ಉಡುಗೊರೆಯಾಗಿ ತರುತ್ತಿದ್ದ ಯುರೋಪ್‌ ಚಾಕೊಲೇಟ್‌ ಇವರಿಗೆ ಬಹಳ ಇಷ್ಟ. ಅದರ ಸ್ವಾದ, ಪರಿಮಳ, ಬಾಯಲ್ಲಿ ಕರಗುವ ಗುಣಕ್ಕೆ ಫಿದಾ ಆಗಿದ್ದ ರಾಜರಾಜೇಶ್ವರಿಗೆ, ನಮ್ಮಲ್ಲಿ ಸಿಗುವ ಯಾವ ಚಾಕೊಲೇಟ್‌ ರುಚಿಸುತ್ತಿರಲಿಲ್ಲ. ಅಂಥ ಚಾಕೊಲೇಟ್‌ ತಿನ್ನಲು ಮತ್ತೆ ಒಂದು ವರ್ಷ ಕಾಯಬೇಕಲ್ಲ ಅಂತ ಬೇಜಾರಾಗುತ್ತಿದ್ದರು. ಆಗ ಹೊಳೆದಿದ್ದು, ಚಾಕೊಲೇಟ್‌ ಫ್ಯಾಕ್ಟರಿ ತೆರೆಯುವ ಯೋಚನೆ. 

ವಿದೇಶಗಳಲ್ಲಿ ತರಬೇತಿ
ಅವರ ಈ ಸಾಹಸಕ್ಕೆ ಪತಿ ರಾಮಕೃಷ್ಣ ಭಟ್ಟರ ಪ್ರೋತ್ಸಾಹವೂ ಸಿಕ್ಕಿತು. ಬಿಎಸ್ಸಿ ಓದಿದ್ದ ಇವರು, ಮದುವೆಯಾಗಿ 15 ವರ್ಷಗಳ ನಂತರ ಚಾಕೊಲೇಟ್‌ ತಯಾರಿಕೆಯ ಮಾಯಾಜಾಲ ಬೇಧಿಸಲು ಎರಡು ತಿಂಗಳು ಕೆನಡಾಕ್ಕೆ ಹೋದರು. ನಂತರ ಅಮೆರಿಕ ಮತ್ತು ಇಟಲಿಗೂ ಹೋಗಿ, ಉತ್ಪಾದನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಪಡೆದರು. 


ಒಂದು ಕೋಟಿ ರೂ. ಬಂಡವಾಳ

ಚಾಕೊಲೇಟ್‌ ತಯಾರಿಕೆಯ ಯಂತ್ರ ಬಂದಿದ್ದು ಬೆಲ್ಜಿಯಂನಿಂದ. 9 ವರ್ಷಗಳ ಹಿಂದೆ ಬೀರಮಲೆಯ ಅವರ ಮನೆಯ ಹತ್ತು ಅಡಿ ಉದ್ದ, ಅಷ್ಟೇ ಅಗಲದ ಕೋಣೆಯಲ್ಲಿ ಇಬ್ಬರು ಸಹಾಯಕರ ಜೊತೆಗೆ ತಾವೂ ಒಬ್ಬ ಕೆಲಸಗಾರರಾಗಿ ರಾಜರಾಜೇಶ್ವರಿ ಉದ್ಯಮ ಆರಂಭಿಸುವಾಗ, ಹೂಡಿದ ಬಂಡವಾಳ ಒಂದು ಕೋಟಿ ರೂ. ದಾಟಿತ್ತು. ತಮ್ಮ ತಾಯಿಗೆ ಇಷ್ಟವಾದ ಚಾಕೊಲೇಟ್‌ ಅನ್ನು ಅವರ ನೆನಪಿಗಾಗಿ, “ನಾನಿ’ ಎಂಬ ಹೆಸರಿನಲ್ಲಿ ತಯಾರಿಸಿದರು. 

ಕರಗಿದ ಚಾಕೊಲೇಟ್‌
ತಯಾರಿಕೆಯಲ್ಲೇನೋ ಯಶಸ್ವಿಯಾದರು. ಆದರೆ, ರ್ಯಾಪರ್‌ ಒಳಗೆ ಚಾಕೊಲೇಟ್‌ ಗಟ್ಟಿಯಾಗಿ ಉಳಿಯದೆ, ತೇವವಾಗುತ್ತಾ ಕರಗಿ, ಮುದ್ದೆಯಾಗುವ ಸಮಸ್ಯೆ ತಲೆದೋರಿತು. ಕೆಲವು ಚಾಕೊಲೇಟ್‌ ಕಂಪನಿಗಳನ್ನು ಸಂಪರ್ಕಿಸಿ ಸಲಹೆ ಕೇಳಿದರೆ, ಯಾವ ಉದ್ಯಮಿಯೂ ಅದರ ಗುಟ್ಟನ್ನು ಬಿಟ್ಟುಕೊಡಲಿಲ್ಲ. ಛಲಬಿಡದ ತ್ರಿವಿಕ್ರಮನಂತೆ, ರಾಜರಾಜೇಶ್ವರಿ ಅಮೆರಿಕದ ಹ್ಯಾರಿಸ್‌ಬರ್ಗ್‌ಗೆ ಹೋದರು. ಅಲ್ಲಿ ತಮ್ಮ ಉದ್ಯಮದಲ್ಲಿ ತಲೆದೋರಿದ್ದ ಸಮಸ್ಯೆಗೆ ಪರಿಹಾರ ಕಂಡುಕೊಂಡರು. ಈಗ ಅವರಲ್ಲಿ ತಯಾರಾಗುವ ಚಾಕೊಲೇಟ್‌ಗಳು 6 ತಿಂಗಳು ಕೆಡದೆ, ಕರಗದೆ ಉಳಿಯುತ್ತವೆ. 

Advertisement

18 ವೆರೈಟಿ..!
ಕೆಲಸಗಾರರ ಜೊತೆಗೆ ರಾಜರಾಜೇಶ್ವರಿ ತಾವೂ ಒಬ್ಬರಾಗಿ ದುಡಿಯುತ್ತಾರೆ. ಕೆಮಿಕಲ್‌ ಎಂಜಿನಿಯರಿಂಗ್‌ ಓದಿರುವ ಮಗ ಅವ್ಯಕ್ತ, ಉದ್ಯಮಕ್ಕೆ ಹೆಗಲು ಕೊಟ್ಟಿದ್ದಾರೆ. ಹೆಸರಾಂತ ಕಂಪೆನಿಗಳಿಗೂ ಸಡ್ಡು ಹೊಡೆದು, ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಸರಿಸಾಟಿಯಾದ 18 ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ.

ಒಂದು ರೂ. ಕ್ಯಾಂಡಿಯಿಂದ ಹಿಡಿದು, 250 ರೂ. ಬೆಲೆಯ ಚಾಕೊಲೇಟ್‌ ಬಾರ್‌ ತನಕ ಎಲ್ಲವೂ ಇಲ್ಲಿ ಲಭ್ಯ. 4 ವಿಧದ ಬಾರ್‌, ಗೋಡಂಬಿ ಇರುವ ನಟ್‌ಬೈಟ್‌, ಮಾಲ್ಟ್ ಬಾಲ್‌, ಲಿಚ್ಚಿ, ಮಾವು, ಸ್ಟ್ರಾಬೆರಿ ಸ್ವಾದದ ಉತ್ಪನ್ನಗಳು, ಡ್ರೈಫ್ರುಟ್ಸ್‌ ಚಾಕೊಲೇಟ್‌, ಮೊಳಕೆ ಬಂದ ಧಾನ್ಯಗಳು, ಹಾಲು, ಸಕ್ಕರೆ ಬೆರೆಸಿ ತಯಾರಾಗುವ ಗೋಲಿಗಳು.. ಹೀಗೆ ಒಂದಕ್ಕಿಂತ ಒಂದು ಗುಣಮಟ್ಟದಲ್ಲಿ ಉತ್ಕೃಷ್ಟವಾಗಿವೆ. ಉಡುಗೊರೆ ಕೊಡಲು, ಎಲ್ಲ ಮಾದರಿಗಳನ್ನು ಒಳಗೊಂಡ ಪ್ಯಾಕ್‌ಗಳೂ ಲಭ್ಯ. ಗೋಡಂಬಿ, ಬಾದಾಮಿ, ಧಾನ್ಯಗಳು ಮುಂತಾದ ಸಾಮಗ್ರಿಗಳನ್ನು ಅದರ ಮೂಲ ಉತ್ಪಾದನೆಯ ಜಾಗದಿಂದಲೇ ತರುವುದು ಅವರ ಪದ್ಧತಿ. ಇದರಿಂದ ಕಡಿಮೆ ದರದಲ್ಲಿ ಉತ್ಪಾದನೆಯೂ ಸಾಧ್ಯವಾಗಿದೆ. 

ಗುಣಮಟ್ಟದಲ್ಲಿ ರಾಜಿ ಇಲ್ಲ.
ಮೂರು ಮಹಡಿಗಳ ಕಟ್ಟಡದಲ್ಲಿ ಉತ್ಪಾದನೆ ನಡೆಯುತ್ತಿದ್ದು, 4 ಕೋಟಿ ರೂ.ಗೂ ಹೆಚ್ಚು ಬಂಡವಾಳ ಹೂಡಲಾಗಿದೆ. ಎಷ್ಟೇ ದೊಡ್ಡ ಮಟ್ಟದ ಉತ್ಪಾದನೆಯಾದರೂ, ಗುಣಮಟ್ಟದಲ್ಲಿ ರಾಜರಾಜೇಶ್ವರಿ ರಾಜಿಯಾಗುವುದಿಲ್ಲ. ಸ್ವತಃ ಕ್ವಾಲಿಟಿ ಕಂಟ್ರೋಲ್‌ ಮಾಡುತ್ತಾರೆ. ಉದ್ಯೋಗದಲ್ಲಿ ಮಹಿಳೆಯರಿಗೇ ಆದ್ಯತೆ. ಫ್ಯಾಕ್ಟರಿಯಲ್ಲಿ ಇಪ್ಪತ್ತು ಮಂದಿ ದುಡಿಯುತ್ತಿದ್ದು, 3 ತಿಂಗಳ ತರಬೇತಿಯನ್ನೂ ನೀಡಲಾಗುತ್ತದೆ. ಕೆಲಸಗಾರರಿರಲಿ, ಪ್ರವಾಸಿಗರಿರಲಿ ತಲೆಗೆ ಟೋಪಿ ಧರಿಸಿ, ಕಟ್ಟುನಿಟ್ಟಿನ ಶುಚಿತ್ವ ಪಾಲಿಸಿದ ಬಳಿಕವೇ ಒಳಗೆ ಪ್ರವೇಶ. 

ಅತ್ಯಾಧುನಿಕ ವ್ಯವಸ್ಥೆ
ಕಾರ್ಖಾನೆಯ ಒಳಗೆ ಹವಾ ನಿಯಂತ್ರಣ ವ್ಯವಸ್ಥೆಯಿದೆ. ಉತ್ಪನ್ನಗಳನ್ನಿಡಲು ಬೇಕಾದ ಫ್ರೀಜರ್‌ ಸೇರಿದಂತೆ, ಎಲ್ಲದಕ್ಕೂ ಪರ್ಯಾಯ ವಿದ್ಯುತ್‌ ಸೌಲಭ್ಯವೂ ಇದೆ. ಚಾಕೊಲೆಟ್‌ ಬಾರ್‌ಗಳನ್ನು ಕರಗಿಸಲು ಅತ್ಯಾಧುನಿಕವಾದ ಮೆಲ್ಟಿಂಗ್‌ ಟ್ಯಾಂಕ್‌, ಬಾದಾಮಿ, ಗೋಡಂಬಿಗಳನ್ನು ಹುರಿಯಲು ವ್ಯವಸ್ಥಿತವಾದ ರೋಸ್ಟರ್‌, ಚಾಕೊಲೇಟ್‌ ತಯಾರಿಕೆಗೆ ಪ್ಯಾನಿಂಗ್‌ ಯಂತ್ರಗಳಿವೆ. ಪ್ಯಾಕ್‌ ಆಗುವುದೂ ಯಾಂತ್ರಿಕವಾಗಿಯೇ. ವಿವಿಧ ಅಳತೆಗಳ ಪೆಟ್ಟಿಗೆಗಳಿಗೆ ತುಂಬುವುದು ಮಾತ್ರ, ಕೆಲಸಗಾರರ ಕೆಲಸ. ಪೆಟ್ಟಿಗೆಗಳನ್ನು ಭದ್ರವಾಗಿ ಮುಚ್ಚಿ, ಅಂಟು ಹಾಕುವುದೂ ಯಂತ್ರವೇ. ಈ ಯಂತ್ರಗಳೆಲ್ಲ ವಿದೇಶಗಳಿಂದಲೇ ಬರಬೇಕು. “ಸಣ್ಣ ಉದ್ಯಮಿಗಳ ಬೆಂಬಲಕ್ಕಾಗಿ ಸರಕಾರ ಆಮದು ಸುಂಕವನ್ನಾದರೂ ಕಡಿಮೆ ಮಾಡಬೇಕಿತ್ತು’ ಅಂತಾರೆ ರಾಜರಾಜೇಶ್ವರಿ. 

ದೇಶಾದ್ಯಂತ ಬೇಡಿಕೆ    
ಪುಟ್ಟ ಊರಿನ ತಯಾರಿಕೆಯಾದ ಈ “ಬಿಗ್ರೋಸ್‌’ ಚಾಕೊಲೇಟ್‌, ದೆಹಲಿ, ಕೋಲ್ಕತ್ತ, ಚೆನ್ನೈ, ಗೋವಾ, ಹೈದರಾಬಾದ್‌, ಮುಂಬೈ ಮಾರುಕಟ್ಟೆಗಳಲ್ಲೂ ಸ್ಥಾನ ಕಾಯ್ದುಕೊಂಡಿದೆ. ಎರಡು ಹೆಸರಾಂತ ಕಂಪನಿಗಳ ಉತ್ಪನ್ನಗಳೂ ಈ ಫ್ಯಾಕ್ಟರಿಯಲ್ಲೇ ತಯಾರಾಗುತ್ತವೆ. 6 ತಿಂಗಳ ಅವಧಿಯ ಉದ್ಯಮ ಅಭಿವೃದ್ಧಿಯ ವಿಶೇಷ ವಾಣಿಜ್ಯೋದ್ಯಮ ಶೈಕ್ಷಣಿಕ ತರಬೇತಿಗಾಗಿ, ಗೋಲ್ಡ್‌ಮನ್‌ ಸ್ಯಾಶ್‌ ಕಂಪನಿ ಆಯ್ಕೆ ಮಾಡಿದ 28 ಭಾರತೀಯ ಮಹಿಳೆಯರಲ್ಲಿ ರಾಜರಾಜೇಶ್ವರಿ ಕೂಡ ಒಬ್ಬರು ಎಂಬುದು ನಮ್ಮ ಹೆಮ್ಮೆ. ಹಾರ್ವರ್ಡ್‌ ವಿ.ವಿ.ಯಲ್ಲಿ ನೀಡುವ ತರಬೇತಿಯ ಅಂತಿಮ ಹಂತದಲ್ಲಿ ಉಳಿದ ಐವರಲ್ಲಿ ಇವರೂ ಇದ್ದರು. ಹೆಚ್ಚಿನ ಮಾಹಿತಿಗೆ: 99720 54672.

ಪ. ರಾಮಕೃಷ್ಣ ಶಾಸ್ತ್ರೀ

Advertisement

Udayavani is now on Telegram. Click here to join our channel and stay updated with the latest news.

Next