Advertisement
ಸುಳ್ಯದ ಉಬರಡ್ಕ ಮಿತ್ತೂರಿನ ಎಂ.ಎಸ್. ಸುಬ್ರಹ್ಮಣ್ಯ ಅವರ ಪುತ್ರಿ ಬೆಂಗಳೂರಿನ ವಿಜಯನಗರ ನಿವಾಸಿ ಐಶ್ವರ್ಯಾ (26) ಆತ್ಮಹತ್ಯೆ ಮಾಡಿಕೊಂಡವರು. ಐಶ್ವರ್ಯಾ ತಾಯಿ, ಶಿಕ್ಷಕಿ ಉಷಾ ಸುಬ್ರಹ್ಮಣ್ಯ ಅವರು ಕೊಟ್ಟ ದೂರಿನ ಆಧಾರದ ಮೇಲೆ ಸೀತಾ ಡೈರಿ ರಿಚ್ ಐಸ್ಕ್ರೀಮ್ ಕಂಪೆನಿ ಮಾಲಕ, ಚಂದ್ರಲೇಔಟ್ ನಿವಾಸಿ ಐಶ್ವರ್ಯಾ ಪತಿ ರಾಜೇಶ್, ಮಾವ ಗಿರಿಯಪ್ಪ, ಅತ್ತೆ ಸೀತಮ್ಮ, ಮೈದುನ ವಿಜಯ ಹಾಗೂ ಆತನ ಪತ್ನಿ ತಸ್ಮಯ್ ಅವರನ್ನು ಬಂಧಿಸಿದ್ದಾರೆ.
ರಾಜೇಶ್ ಕುಟುಂಬಸ್ಥರು ಸಣ್ಣಪುಟ್ಟ ವಿಚಾರಕ್ಕೆ ಐಶ್ವರ್ಯಾ ಜತೆಗೆ ಜಗಳ ಮಾಡುತ್ತಿದ್ದರು. ಕಿರುಕುಳ ತಾಳಲಾರದೆ ಆತ್ಮಹತ್ಯೆಗೂ 20 ದಿನಗಳ ಹಿಂದೆ ಐಶ್ವರ್ಯಾ ತವರು ಮನೆಗೆ ಬಂದು ನೆಲೆಸಿದ್ದಳು. ಅ. 26ರಂದು ಸಂಜೆ ಐಶ್ವರ್ಯಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸ್ಥಳದಲ್ಲಿ ಒಂದು ಡೆತ್‌ನೋಟ್ ಪತ್ತೆಯಾಗಿತ್ತು. ಡೆತ್‌ನೋಟ್‌ನಲ್ಲಿ ಪತಿಯ ಕುಟುಂಬಸ್ಥರು ನೀಡಿದ್ದ ಕಿರುಕುಳದ ಕುರಿತು ಎಳೆ-ಎಳೆಯಾಗಿ ಐಶ್ವರ್ಯಾ ಬರೆದಿದ್ದರು. ಈ ಮೂಲಕ ಪೊಲೀಸರು ಆರೋಪಿಗಳ ಬಂಧನಕ್ಕೆ ಕಾರ್ಯೋನ್ಮುಖರಾಗಿದ್ದರು.
Related Articles
ತಮ್ಮ ವಿರುದ್ಧ ಎಫ್ಐಆರ್ ದಾಖಲಾಗಿರುವ ಸಂಗತಿ ತಿಳಿಯುತ್ತಿದ್ದಂತೆ ರಾಜೇಶ್ ಹಾಗೂ ಆತನ ಕುಟುಂಬ ತುಮಕೂರಿಗೆ ತೆರಳಿತ್ತು. ಅಲ್ಲಿಂದ ಗೋವಾಕ್ಕೆ ಹೋಗಿ ರೆಸಾರ್ಟ್ ವೊಂದರಲ್ಲಿ ತಂಗಿದ್ದರು. ಗೋವಾದ ಕ್ಯಾಸಿನೋದಲ್ಲಿ ಪಾರ್ಟಿ ಮಾಡಿದ್ದರು. ಪೊಲೀಸರಿಗೆ ಸುಳಿವು ಸಿಗದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು. ಇತ್ತ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು ಆರೋಪಿಗಳ ಮೊಬೈಲ್‌ನ ಜಾಡು ಹಿಡಿದಾಗ ಗೋವಾದಲ್ಲಿರುವ ಸುಳಿವು ಸಿಕ್ಕಿತ್ತು. ಬೆಂಗಳೂರಿನಿಂದ ಪೊಲೀಸರ ತಂಡ ಗೋವಾಕ್ಕೆ ತೆರಳಿ ಹುಡುಕಾಡುತ್ತಿದ್ದಾಗ ಈ ವಿಚಾರ ಆರೋಪಿಗಳ ಗಮನಕ್ಕೆ ಬಂದಿತ್ತು. ಕೂಡಲೇ ಗೋವಾದಿಂದ ಜಾಗ ಖಾಲಿ ಮಾಡಿ ಮುಂಬಯಿಗೆ ತೆರಳಿದ್ದರು.
Advertisement
ಮುಂಬಯಿಗೆ ತೆರಳಿದ ಸಂಗತಿ ಪೊಲೀಸರಿಗೆ ಗೊತ್ತಾಗಿ ಪೊಲೀಸರು ಗೋವಾದಿಂದ ವಿಮಾನದಲ್ಲಿ ಮುಂಬಯಿಗೆ ತೆರಳಿ ಆರೋಪಿಗಳನ್ನು ಗುರುವಾರ ಪತ್ತೆ ಮಾಡಿ ವಶಕ್ಕೆ ಪಡೆದಿದ್ದರು. ಅದೇ ದಿನ ವಿಮಾನದಲ್ಲಿ ಮುಂಬಯಿಯಿಂದ ಬೆಂಗಳೂರಿಗೆ ಆರೋಪಿಗಳನ್ನು ಕರೆ ತಂದಿದ್ದಾರೆ. ಇನ್ನೂ ಐವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಯುಎಸ್‌ನಲ್ಲಿರುವ ಶಾಲಿನಿ, ಓಂಪ್ರಕಾಶ್ ಅವರ ಬಂಧನಕ್ಕೆ ಪೊಲೀಸರು ಕಾರ್ಯೋ ನ್ಮುಖರಾಗಿದ್ದಾರೆ. ಡಿಜಿ- ಐಜಿಪಿ ಗಮನಕ್ಕೆ ತಂದು ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಪೊಲೀಸರು ಚಿಂತಿಸಿದ್ದಾರೆ.