Advertisement

ಸುಳ್ಯ: ನಗರದಂಚಿನ ಪಯಸ್ವಿನಿ ತಟದಲ್ಲಿ ಆನೆ ಹಿಂಡು !

06:00 AM Apr 08, 2018 | Team Udayavani |

ಸುಳ್ಯ: ನಗರದಂಚಿನ ಭಸ್ಮಡ್ಕ ಪಯಸ್ವಿನಿ ನದಿ ತಟದಲ್ಲಿ ಆನೆಗಳ ಹಿಂಡು ಬೀಡುಬಿಟ್ಟಿದ್ದು, ನಗರಕ್ಕೆ ಲಗ್ಗಯಿಟ್ಟರೆ ಎಂಬ ಭೀತಿ ಸ್ಥಳೀಯರಲ್ಲಿ ಆವರಿಸಿದೆ. ಮೇದಿನಡ್ಕ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ಕಾಡಿನಿಂದ ಪಯಸ್ವಿನಿ ನದಿಗೆ ಇಳಿದಿರುವ ಆನೆಗಳು ಅಲ್ಲೇ ಅಡ್ಡಾಡುತ್ತಿವೆ. ಒಂದು ವೇಳೆ ಅವು ನದಿ ದಾಟಿದಲ್ಲಿ ನಗರದ ಭಸ್ಮಡ್ಕ, ದೇವರಕಳಿಯ, ಕುಂತಿನಡ್ಕ, ಕೇರ್ಪಳದ ಕಡೆಗೆ ಪ್ರವೇಶಿಸುವ ಸಾಧ್ಯತೆ ಇರುವ ಕಾರಣ ಅರಣ್ಯ ಇಲಾಖೆ ಸಿಬಂದಿ ಆನೆಗಳನ್ನು ಮರಳಿ ಕಾಡಿಗೆ ಅಟ್ಟುವ ಪ್ರಯತ್ನ ಮುಂದುವರಿಸಿದ್ದಾರೆ.

Advertisement

ಆನೆಗಳ ಜಲಕ್ರೀಡೆ
ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ ಮೂರು ದಿನಗಳಿಂದ ಈ ಆನೆಗಳ ಹಿಂಡು ನದಿ ಪರಿಸರದಲ್ಲಿ ಅಡ್ಡಾಡುತ್ತಿವೆ. ಸ್ಥಳೀಯರು ಕೂಡ ಇದನ್ನು ದೃಢ ಪಡಿಸಿದ್ದಾರೆ. ಶನಿವಾರ ಬೆಳಗ್ಗೆ ಆನೆಗಳು ಪಯಸ್ವಿನ ನದಿಯಲ್ಲಿ ನೀರಾಟ ನಿರತವಾಗಿದ್ದವು. ಐದು ಮರಿಯಾನೆ ಸಹಿತ ಎಂಟು ಆನೆಗಳು ಗುಂಪಿನಲ್ಲಿವೆ. ಕಳೆದ ಕೆಲ ದಿನಗಳಿಂದ ಆಲೆಟ್ಟಿ ಗ್ರಾಮದ ನಾರ್ಕೋಡು, ಏನಾವರ, ಅಜ್ಜಾವರ ಗ್ರಾಮದ ತುದಿಯಡ್ಕ, ಮಂಡೆಕೋಲು ಗ್ರಾಮದ ಕೆಲ ಪ್ರದೇಶಗಳಲ್ಲಿ ಕಾಡಾನೆಗಳು ಕಂಡು ಬಂದಿದ್ದವು. ನಾರ್ಕೋಡು, ಏನಾವರದಲ್ಲಿ ಕೃಷಿ ತೋಟಕ್ಕೆ ನುಗ್ಗಿ ಬೆಳೆ ನಷ್ಟವಾಗಿತ್ತು. ಆ ಪರಿಸರದಲ್ಲಿ ಇದೇ ಆನೆಗಳು ಕೃಷಿ ನಾಶ ಮಾಡಿರುವ ಸಾಧ್ಯತೆ ಇದೆ. ಅಲ್ಲಿಂದ ಭಸ್ಮಡ್ಕ ಕಡೆಗೆ ಮುಖ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.2 ವರ್ಷಗಳ ಬಳಿಕ ಎರಡು ವರ್ಷಗಳ ಹಿಂದೆ ಭಸ್ಮಡ್ಕ
ಪರಿಸರದಲ್ಲಿ ಆನೆ ಹಿಂಡು ಕಾಣಿಸಿಕೊಂಡಿತ್ತು. ಅವು ಪಯಸ್ವಿನಿ ನದಿ ದಾಟಿ ನಗರದ ಭಸ್ಮಡ್ಕ, ಕುಂತಿನಡ್ಕ, ದೇವರ
ಕಳಿಯಕ್ಕೆ ನುಗ್ಗಿದ್ದವು.  ಎರಡು ದಿನಗಳ ಕಾಲ ಆನೆ ಅವಾಂತರಕ್ಕೆ ಸ್ಥಳೀಯ ನಿವಾಸಿಗಳು  ಮನೆಯಿಂದ ಹೊರ ಬರಲಾರದ ಸ್ಥಿತಿ ನಿರ್ಮಾಣವಾಗಿತ್ತು ಅನಂತರ ಇಲಾಖೆ ಸಿಬಂದಿ, ಸಾರ್ವಜನಿಕರು ಆನೆಗಳನ್ನು ಕಾಡಿಗೆ ಅಟ್ಟುವಲ್ಲಿ ಯಶಸ್ವಿ ಯಾಗಿದ್ದರು. ಯಾವುದೇ ಅಪಾಯ ಮಾಡದೆ ಮರಳಿದ್ದವು. ಕಳೆದ ವರ್ಷವೂ 2 ಆನೆಗಳು ಪಯಸ್ವಿನಿ ನದಿ ತೀರದಲ್ಲಿ ಕಾಣಿಸಿಕೊಂಡಿದ್ದವು ಇದೀಗಮತ್ತೂಮ್ಮೆ ಆನೆ ಹಿಂಡು ಕಾಣಿಸಿಕೊಂಡಿರುವುದು  ಜನರ ನಿದ್ದೆಗೆಡಿಸಿದೆ.

ಅರಣ್ಯ ಸಿಬಂದಿ ದೌಡು
ನದಿಯ ಇನ್ನೊಂದು ತಟದಲ್ಲಿ (ನಗರದ ಬದಿ) ಅರಣ್ಯ ಇಲಾಖೆ ಸಿಬಂದಿ ಬೀಡು ಬಿಟ್ಟಿದ್ದು, ಆನೆಗಳು ಇತ್ತ ಬಾರದಂತೆ ಎಚ್ಚರಿಕೆ ವಹಿಸಿದ್ದಾರೆ. ಅರಣ್ಯ ಸಿಬಂದಿ ಹೇಳುವ ಪ್ರಕಾರ, ಆನೆಗಳು ಇರುವ ಜಾಗ ಅರಣ್ಯದಿಂದ ತಗ್ಗಿನಲ್ಲಿದ್ದು, ಕೆಳಗೆ ಇಳಿದಿರುವ ಮರಿಯಾನೆಗಳಿಗೆ ಮೇಲಕ್ಕೆ ಏರಲು ಸಾಧ್ಯವಾಗುತ್ತಿಲ್ಲ. ಆದ ಕಾರಣ ಅವುಗಳು ಅಲ್ಲೇ ಉಳಿದುಕೊಂಡಿವೆ. ಮರಿಯಾನೆ ಮೇಲೇರಿದ ತತ್‌ಕ್ಷಣ ಉಳಿದ ಆನೆಗಳೂ ಹಿಂಬಾಲಿಸಬಹುದು ಎಂದು ತಿಳಿಸಿದ್ದಾರೆ.

ಭೀತಿ ಬೇಡ; ಹಿಮ್ಮೆಟ್ಟಿಸುತ್ತೇವೆ
ಭಸ್ಮಡ್ಕದ ಪಯಸ್ವಿನಿ ನದಿಭಾಗದಲ್ಲಿ ಆನೆ ಹಿಂಡು ಕಂಡುಬಂದಿದೆ. ನೀರು ಕುಡಿಯುವ ಸಲುವಾಗಿ ನದಿಗೆ ಇಳಿದಿರಬಹುದು. ಅವು
ಗಳನ್ನು ಮತ್ತೆ ಕಾಡಿಗೆ ಅಟ್ಟಲು ಕಾರ್ಯಾಚರಣೆ ನಡೆದಿದೆ. ನಗರಕ್ಕೆ ನುಗ್ಗುವ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ. ಮಂಜುನಾಥ ಎನ್‌., ವಲಯ ಅರಣ್ಯಾಧಿಕಾರಿ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next