ಸುಳ್ಯ : ರಸ್ತೆ ಸಮಸ್ಯೆ ಹಿನ್ನೆಲೆಯಲ್ಲಿ ಮತದಾನದ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದ ನ.ಪಂ. ವ್ಯಾಪ್ತಿಯ ಕುದ್ಪಾಜೆ ಕಾಲನಿಗೆ ತಹಶೀಲ್ದಾರ್ ಅವರು ಭೇಟಿ ನೀಡಿ ರಸ್ತೆ ನಿರ್ಮಾಣದ ಆಶ್ವಾಸನೆ ನೀಡಿದ ಮರು ದಿನವೇ ಸಮಸ್ಯೆ ಬಗೆಹರಿದಿದೆ. 40 ವರ್ಷದಿಂದ ಆಗದೆ ನನೆಗುದಿಗೆಯಲ್ಲಿದ್ದ ರಸ್ತೆ ಒಂದೇ ದಿನದಲ್ಲಿ ನಿರ್ಮಾಣಗೊಂಡಿದೆ!
ಮೂಲಸೌಕರ್ಯ ಕೊರತೆ ಹಿನ್ನೆಲೆಯಲ್ಲಿ ಕುದ್ಪಾಜೆ ಕಾಲನಿ ನಿವಾಸಿಗಳ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದರು. ಈ ಹಿನ್ನೆಲೆಯಲ್ಲಿ ಮಾ. 27ರಂದು ತಹಶೀಲ್ದಾರ್ ಕುಂಞಿ ಅಹ್ಮದ್ ಅವರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದರು. ಅಲ್ಲಿನ ರಸ್ತೆ ಮತ್ತು ಕುಡಿಯುವ ನೀರಿನ ಸಮಸ್ಯೆ ಅರಿತು ನ.ಪಂ. ಎಂಜಿನಿಯರ್‌ಗೆ ರಸ್ತೆ ಅಗಲಕ್ಕೆ ಕ್ರಮ, ಕುಡಿಯುವ ನೀರಿನ ಸಮಸ್ಯೆಗೆ ಪರ್ಯಾಯ ವ್ಯವಸ್ಥೆಯನ್ನು ತತ್‌ಕ್ಷಣ ಕೈಗೊಳ್ಳಲು ಸೂಚಿಸಿದ್ದರು.
ತಹಶೀಲ್ದಾರ್ ಸೂಚನೆ ಮೇರೆಗೆ ಮಾ. 28ರಂದು ರಸ್ತೆ ಅಗಲ ಕಾಮಗಾರಿ ನಡೆದು ಕಾಲನಿಯ 4 ದಶಕಗಳ ಸಮಸ್ಯೆ ಪರಿಹಾರ ಕಂಡಿದೆ. ತಹಶೀಲ್ದಾರ್ ಸ್ವ ಆಸಕ್ತಿ ವಹಿಸಿ ರಸ್ತೆ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳೀಯರು ಬಹಿಷ್ಕಾರ ಹಿಂಪಡೆದು ಮತ ದಾನದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.
ರಸ್ತೆ ನಿರ್ಮಿಸುವಂತೆ ಅಂಬೇಡ್ಕರ್ ತತ್ತ್ವ ರಕ್ಷಣ ವೇದಿಕೆ ತಾಲೂಕು ಘಟಕದ ವತಿಯಿಂದ ಆಗ್ರಹಿಸಲಾಗಿತ್ತು. ಸಂಘಟನೆ ಮತ್ತು ಸ್ಥಳೀಯರ ಹೋರಾಟಕ್ಕೆ ಗೆಲುವು ಸಿಕ್ಕಿದೆ. ರಸ್ತೆ ನಿರ್ಮಾಣ ಸ್ಥಳಕ್ಕೆ ಗುರುವಾರ ಸಂಘಟನೆ ರಾಜ್ಯ ಅಧ್ಯಕ್ಷ ಗಿರಿಧರ ನಾಯ್ಕ, ತಾಲೂಕು ಅಧ್ಯಕ್ಷ ಸುಂದರ ಪಾಟಾಜೆ, ಸಂಚಾಲಕ ಪರಮೇಶ್ವರ ಭೇಟಿ ನೀಡಿದ್ದರು.